ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳಿಕೆ ದಾಖಲಿಸಲು ವಕೀಲೆಗೆ ಸೂಚನೆ

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ, ಕೋಲ್ಕತ್ತ (ಪಿಟಿಐ): ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಗಂಗೂಲಿ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ  ಆರೋಪಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸುವಂತೆ ದೆಹಲಿ ಪೊಲೀಸರು ಯುವ ವಕೀಲೆಗೆ ಸೂಚಿಸಿದ್ದಾರೆ. ಎ.ಕೆ. ಗಂಗೂಲಿ ವಿರುದ್ಧ ಕ್ರಮ­ಕೈ­ಗೊಳ್ಳುವ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಅಸಹಾಯಕತೆ ವ್ಯಕ್ತಪಡಿಸಿ­ರುವ ಬೆನ್ನಲ್ಲೇ ದೆಹಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

‘ನಾವು ಅವರಿಗೆ ಇ–ಮೇಲ್‌ ಕಳುಹಿಸಿ­ದ್ದೇವೆ. ಪ್ರತಿಕ್ರಿಯೆಯಾಗಿ ಕಾಯು­ತ್ತಿ­ದ್ದೇವೆ. ಹೇಳಿಕೆ ದಾಖಲಿಸಿ­ಕೊಳ್ಳುವ ದಿನ ಮತ್ತು ಸಮಯವನ್ನು ನಿಗದಿ ಪಡಿಸುವಂತೆ ನಾವು ಮನವಿ ಮಾಡಿದ್ದೇವೆ’ ಎಂದು ದೆಹಲಿ ಜಂಟಿ ಪೊಲೀಸ್‌ ಕಮಿಷನರ್‌ ಎಂ.ಕೆ ಮೀನಾ ಹೇಳಿದ್ದಾರೆ. ಇದಕ್ಕೂ ಮುನ್ನ, ದೆಹಲಿ ವಿಶ್ವ­ವಿದ್ಯಾಲ­ಯದ ಕಾನೂನು ವಿಭಾಗದ  ಮಾಜಿ ಪ್ರಾಧ್ಯಾಪಕ ಎಸ್‌.ಎನ್‌. ಸಿಂಗ್‌ ಅವರು  ತಿಲಕ್‌ ಮಾರ್ಗದ ಪೊಲೀಸ್‌ ಠಾಣಾಧಿಕಾರಿಗೆ ಲಿಖಿತ ದೂರು ನೀಡಿ, ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸುವಂತೆ ಮನವಿ ಮಾಡಿದ್ದರು.

‘ಭಾರತೀಯ ದಂಡ ಸಂಹಿತೆಯ ಕಲಂ 345 (ಮಹಿಳೆಯ ಘನತೆಗೆ ಕುಂದು ತರುವ ಉದ್ದೇಶದಿಂದ ಮಾಡಿದ ಹಲ್ಲೆ), 344–ಎ ಮತ್ತು 354–ಬಿ ಹಾಗೂ ಇತರ ನಿಯಮಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ­ವಾ­ಗಿರುವ ಈ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿ­ಸಲು ಈ ದೂರನ್ನು ಪರಿಗಣಿಸಿ’ ಎಂದು ಅವರು ಮನವಿ ಮಾಡಿದ್ದರು.

ರಾಷ್ಟ್ರೀಯ ಮಹಿಳಾ ಆಯೋಗ ಪತ್ರ: ಸುಪ್ರೀಂ ಕೋರ್ಟ್‌ನ ಸಮಿತಿ ನ್ಯಾ. ಗಂಗೂಲಿ ಅವರು ಅಸಭ್ಯವಾಗಿ ವರ್ತಿಸಿದ್ದು ನಿಜ ಎಂದು ಹೇಳಿರುವ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸುವಂತೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಶುಕ್ರವಾರ ದೆಹಲಿ ಪೊಲೀಸರಿಗೆ ಪತ್ರ ಬರೆದಿದೆ. ಘಟನೆಗೆ ಸಂಬಂಧಿಸಿದಂತೆ ಆಯೋಗವು ಗಂಗೂಲಿ ಅವರಿಗೆ ನೋಟಿಸ್‌ ಜಾರಿ ಮಾಡಿದೆ.

ಮಾಧ್ಯಮದ ವಿರುದ್ಧ ಗಂಗೂಲಿ ಕಿಡಿ
ಕೋಲ್ಕತ್ತ (ಐಎಎನ್‌ಎಸ್‌):
ಯುವ ವಕೀಲೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಕ್ಕೆ ಸಂಬಂಧಿಸಿ­ದಂತೆ ಪ್ರತಿಕ್ರಿಯೆ ಕೇಳಿದ ಪತ್ರಕರ್ತರ ವಿರುದ್ಧ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯ ಮೂರ್ತಿ ಎ.ಕೆ ಗಂಗೂಲಿ ತಾಳ್ಮೆ ಕಳೆದುಕೊಂಡು ಕೂಗಾಡಿದ ಘಟನೆ ಶುಕ್ರವಾರ ನಡೆದಿದೆ.

ಕೋಲ್ಕತ್ತದಲ್ಲಿರುವ ಗಂಗೂಲಿ ನಿವಾಸದ ಮುಂದೆ ಸೇರಿದ್ದ ಪತ್ರ­ಕರ್ತರು ಪ್ರತಿಕ್ರಿಯೆಗಾಗಿ ಮನವಿ ಮಾಡಿದಾಗ, ‘ನನಗೆ ತೊಂದರೆ ಕೊಡ­ಬೇಡಿ.. ತೊಂದರೆ ಕೊಡ­ಬೇಡಿ. ಈಗಾಗಲೇ ನಾನು ಸಾಕಷ್ಟು ಸಹಿಸಿ­ಕೊಂಡಿದ್ದೇನೆ’ ಎಂದು  ಕೋಪ­ದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT