ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ಕುರಿ ಕಣ್ಮರೆ, ಗ್ರಾಮಸ್ಥರಲ್ಲಿ ಆತಂಕ

Last Updated 4 ಜೂನ್ 2011, 6:20 IST
ಅಕ್ಷರ ಗಾತ್ರ

ಹೊಳಲ್ಕೆರೆ: ಅಗೋಚರ ಕಾಡು ಪ್ರಾಣಿಗಳು ದಾಳಿ ಮಾಡಿದ ಪರಿಣಾಮ 20 ಕುರಿಗಳು ಸಾವನ್ನಪ್ಪಿ, ಸುಮಾರು 100 ಕುರಿಗಳು ಕಾಣೆಯಾದ ಘಟನೆ ತಾಲ್ಲೂಕಿನ ಗುಡ್ಡದ ಸಾಂತೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

`ನಮ್ಮಲ್ಲಿ ಸುಮಾರು 2,500 ಕುರಿಗಳಿವೆ. ನಾವು ಮೇವಿಗಾಗಿ ವಲಸೆ ಹೋಗುತ್ತೇವೆ. ರೈತರ ಹೊಲಗಳಲ್ಲಿ ಕುರಿ ಮಂದೆ ನಿಲ್ಲಿಸಿದರೆ ಹಣ ಮತ್ತು ರಾಗಿ ಕೊಡುತ್ತಾರೆ. ಈ ಭಾಗದಲ್ಲಿ ಅರಣ್ಯ ಇರುವುದರಿಂದ ಇಲ್ಲಿನ ಹೊಲವೊಂದರಲ್ಲಿ ಮಂದೆ ಬಿಟ್ಟಿದ್ದೆವು. ಗುರುವಾರ ಎಂದಿನಂತೆ ಕುರಿಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದೆವು. ಸಂಜೆ ಮೋಡ ಕವಿದು ಕತ್ತಲು ಆವರಿಸಿತ್ತು. ಜೋರಾಗಿ ಮಳೆಯೂ ಬರುತ್ತಿತ್ತು. ಆಗ ನಾವು ಮರದ ಕೆಳಗೆ ನಿಂತಿದ್ದೆವು.

ಮರ, ಗಿಡ, ಪೊದೆಗಳು ಹೆಚ್ಚಿರುವುದರಿಂದ ಕುರಿಗಳು ಕಾಣುತ್ತಿರಲಿಲ್ಲ. ಮಳೆ ಬಿಟ್ಟ ಮೇಲೆ ಸತ್ತು ಬಿದ್ದಿರುವ ಕುರಿಯೊಂದನ್ನು ನೋಡಿದಾಗಲೇ ನಮಗೆ ಕಾಡುಪ್ರಾಣಿ ದಾಳಿ ನಡೆಸಿದ್ದು, ಗೊತ್ತಾಗಿದ್ದು. ಸುತ್ತಮುತ್ತ ಹುಡುಕಿದಾಗ 20 ಕುರಿಗಳು ಸತ್ತು ಬಿದ್ದಿದ್ದವು. ತೋಟಕ್ಕೆ ಬಂದು ಕುರಿಗಳನ್ನು ಎಣಿಸಿದಾಗ ಇನ್ನೂ ಸುಮಾರು 100 ಕುರಿಗಳು ಕಾಣಿಸಲಿಲ್ಲ. ಹಿಂದಿನ ದಿನ ಕತ್ತೆಯೊಂದನ್ನೂ ಕಾಡುಪ್ರಾಣಿ ತಿಂದಿತ್ತು~ ಎಂದು ಕುರಿಗಾಹಿ ಸೀನಪ್ಪ ತಿಳಿಸಿದರು.

ಆತಂಕದಲ್ಲಿ ಜನತೆ: ಈ ಅರಣ್ಯ ಪ್ರದೇಶದ ಸಮೀಪ ಇರುವ ಗುಡ್ಡದ ಸಾಂತೇನಹಳ್ಳಿ, ತಿರುಮಲಾಪುರ, ಆವಿನಹಟ್ಟಿ, ಲೋಕದೊಳಲು, ಬೊಮ್ಮನಕಟ್ಟೆ ಮತ್ತಿತರ ಗ್ರಾಮಗಳ ಜನ ಘಟನೆಯಿಂದ ಭಯಭೀತರಾಗಿದ್ದಾರೆ.
 
ಇವರು ದನ, ಎಮ್ಮೆ, ಕುರಿ, ಮೇಕೆ ಮೇಯಿಸಲು, ಸೌದೆ, ಕೃಷಿ ಉಪಕರಣಗಳಿಗಾಗಿ ಈ ಕಾಡನ್ನೇ ಅವಲಂಬಿಸಿದ್ದಾರೆ. ಅಲ್ಲದೇ, ಬೆಟ್ಟದಲ್ಲಿ ದೊಡ್ಡಹೊಟ್ಟೆ ರಂಗನಾಥ ಸ್ವಾಮಿಯ ಪುಣ್ಯ ಕ್ಷೇತ್ರವಿದ್ದು, ಪ್ರತೀ ಶನಿವಾರ ಮತ್ತು ಭಾನುವಾರ ನೂರಾರು ಭಕ್ತರು ಹೋಗುತ್ತಾರೆ.

`ಕಿರುಬಗಳು ಒಂದು ಅಥವಾ ಎರಡು ಕುರಿ, ಮೇಕೆ, ಎಮ್ಮೆಗಳನ್ನು ಹಿಡಿಯುತ್ತಿದ್ದವು. ಆದರೆ ಈಗ ಒಂದೇ ಸಲ 20 ಕುರಿಗಳು ಸತ್ತಿರುವುದರಿಂದ ಹುಲಿ ಇಲ್ಲವೇ ಚಿರತೆ ದಾಳಿ ನಡೆಸಿದೆ ಎನಿಸುತ್ತದೆ. ಕುರಿಗಳು ಇನ್ನೂ ಕಣ್ಮರೆ ಆಗಿರುವುದರಿಂದ ಹುಲಿ, ಚಿರತೆಗಳ ದೊಡ್ಡ ಗುಂಪೇ ಇರಬಹುದು~ ಎಂದು ಸುತ್ತಲಿನ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಈ ಬಗ್ಗೆ ಶೋಧ ಕಾರ್ಯ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT