ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹೊಸತನದ ಸಿನಿಮಾ ನೀಡುವ ತುಡಿತ'

Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಮಾಸ್ ಮತ್ತು ಕ್ಲಾಸ್ ಎರಡೂ ವರ್ಗದ ಪ್ರೇಕ್ಷಕರನ್ನು ಸೆಳೆಯಬೇಕೆಂದರೆ ಇಂಥ ಸಿನಿಮಾಗಳನ್ನು ಮಾಡಲೇಬೇಕು' ಎಂದರು ನಿರ್ದೇಶಕ ಶಶಾಂಕ್.

ಅವರ ನಿರ್ದೇಶನದ ಬಹುನಿರೀಕ್ಷೆಯ `ಬಚ್ಚನ್' ಯುಗಾದಿ ಹಬ್ಬದ ದಿನ ತೆರೆಕಂಡಿದೆ. ಒಟ್ಟಾರೆ ಸಿನಿಮಾ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದ್ದರೂ, ಗಳಿಕೆಯ ಲೆಕ್ಕ ಇದುವರೆಗೂ ಸಿಹಿಯನ್ನೇ ನೀಡಿದೆ. ಕಥೆ, ಚಿತ್ರಕಥೆಯನ್ನು ನೆಚ್ಚಿಕೊಳ್ಳುವ ಅವರಲ್ಲಿ `ಈಗ' ಚಿತ್ರದ ನಂತರ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದ ಸುದೀಪ್ ಮತ್ತು ಅಮಿತಾಭ್ ಬಚ್ಚನ್‌ರನ್ನು ನೆನಪಿಸುವ `ಬಚ್ಚನ್' ನಾಮಬಲವೂ ಜೊತೆಗಿರುವುದು ವಿಶ್ವಾಸ ಹೆಚ್ಚಿಸಿದೆ.

ಸದ್ಯ `ಬಚ್ಚನ್' ಗುಂಗಿನಲ್ಲಿರುವ ಶಶಾಂಕ್ ತಮ್ಮ ಮುಂದಿನ ಚಿತ್ರದ ಗುಟ್ಟುಬಿಡಲು ಸಿದ್ಧರಿಲ್ಲ. `ಬಚ್ಚನ್' ಅಬ್ಬರ ತಣ್ಣಗಾದ ಬಳಿಕವಷ್ಟೆ ಮುಂದಿನ ಚಿತ್ರದ ಯೋಚನೆ ಎನ್ನುತ್ತಾರೆ ಅವರು. `ಸಿಕ್ಸರ್', `ಮೊಗ್ಗಿನ ಮನಸ್ಸು', `ಕೃಷ್ಣನ್ ಲವ್ ಸ್ಟೋರಿ' ಪ್ರೇಮಕಥೆಯ ಚಿತ್ರಗಳ ಬಳಿಕ ನಿರ್ದೇಶಿಸಿದ `ಜರಾಸಂಧ' ನೆಗಟಿವ್ ವಸ್ತುವುಳ್ಳ ಆ್ಯಕ್ಷನ್ ಚಿತ್ರವಾಗಿತ್ತು. `ಬಚ್ಚನ್' ಈ ಎಲ್ಲಾ ಚಿತ್ರಗಳಿಗಿಂತ ವಿಭಿನ್ನ ಎನ್ನುವುದು ಅವರ ಹೇಳಿಕೆ. ಕ್ಲಾಸ್ ಮತ್ತು ಮಾಸ್ ಎರಡೂ ವರ್ಗದ ಜನರನ್ನು ಸೆಳೆಯುವ ತಂತ್ರವನ್ನು ಅವರು ಅನುಸರಿಸುತ್ತಿದ್ದಾರಂತೆ. ಮಲ್ಟಿಪ್ಲೆಕ್ಸ್ ಪ್ರೇಕ್ಷಕರನ್ನು ತಣಿಸುವ ಇತರ ನಿರ್ದೇಶಕರ ಸಾಲಿಗೆ ಶಶಾಂಕ್ ಕೂಡ ಸೇರಿಕೊಳ್ಳುತ್ತಿದ್ದಾರೆ.

“ಮಲ್ಟಿಪ್ಲೆಕ್ಸ್‌ಗಳು ಆರಂಭವಾದಾಗ `ಕ್ಲಾಸ್' ಚಿತ್ರಗಳು ಮಾತ್ರ ಪ್ರದರ್ಶನವಾಗುತ್ತಿದ್ದವು. ಅವುಗಳಿಗೆ ಬರುವ ಪ್ರೇಕ್ಷಕವರ್ಗವೂ ಅದೇ ರೀತಿಯ ಚಿತ್ರಗಳನ್ನು ಬಯಸುತ್ತಿತ್ತು. ಹೀರೋಯಿಸಂ, ರೋಚಕ ಹೊಡೆದಾಟದ ಚಿತ್ರಗಳು ಅವರಿಗೆ ಪಥ್ಯವಾಗುತ್ತಿರಲಿಲ್ಲ. ಆದರೆ ಕ್ರಮೇಣ ಪ್ರೀತಿ ಪ್ರೇಮದ ಕಥಾಹಂದರದ ಚಿತ್ರಗಳು ಅವರಿಗೆ ಬೇಸರಿಸತೊಡಗಿದಂತೆ ಪ್ರೇಕ್ಷಕರು ಬದಲಾಗತೊಡಗಿದರು.

ವೈಭವೀಕರಿಸಿದ ಅಂಶಗಳುಳ್ಳ ಸಿನಿಮಾ ಅವರಿಗೆ ಹೊಸತು ಎನಿಸಿ ಅವುಗಳನ್ನು ಮೆಚ್ಚಿದರು. ಬದಲಾಗುವ ಪ್ರೇಕ್ಷಕವರ್ಗ ಬಯಸುವ ಚಿತ್ರಗಳನ್ನು ನೀಡಬೇಕಾಗುತ್ತದೆ. ಎಷ್ಟೇ ಉತ್ತಮ ಕ್ಲಾಸ್ ಚಿತ್ರ ಮಾಡಿದರೂ ಮಾಸ್ ಎಂದು ಕರೆಯಲಾಗುವ ವರ್ಗ ಅಂಥ ಚಿತ್ರಗಳನ್ನು ಚಿತ್ರಮಂದಿರಗಳಿಗೆ ಬಂದು ನೋಡುವುದಿಲ್ಲ. ಅದೇ ರೀತಿ ಮಾಸ್ ಚಿತ್ರಗಳು ಕ್ಲಾಸ್ ಪ್ರೇಕ್ಷಕರಿಗೆ ರುಚಿಸುವುದಿಲ್ಲ. ಕೆಲವು ಸಿನಿಮಾಗಳು ಎರಡನ್ನೂ ಸೆಳೆಯುತ್ತವೆ. ಅಂಥ ಯೂನಿರ್ವಸಲ್ ವಿಷಯಗಳನ್ನು ನೀಡುವುದು ಅನಿವಾರ್ಯ” ಎಂದು ವಿಶ್ಲೇಷಿಸುತ್ತಾರೆ ಶಶಾಂಕ್.

ಹಾಗಾದರೆ ಶಶಾಂಕ್ ನಿರ್ದೇಶನದಲ್ಲಿ ಮುಂದೆ `ಮೊಗ್ಗಿನ ಮನಸ್ಸು' ರೀತಿಯ ಸಿನಿಮಾ ಬರುವುದಿಲ್ಲವೇ? ಎಂದು ಪ್ರಶ್ನಿಸಿದರೆ, ಯಾಕಿಲ್ಲ. ಖಂಡಿತಾ ಬರುತ್ತದೆ ಎಂದು ಉತ್ತರಿಸುತ್ತಾರೆ ಅವರು. `ನಿರ್ದೇಶಕನಾಗಿ ಎಲ್ಲಾ ವಿಧದ ಸಿನಿಮಾಗಳನ್ನು ಮಾಡಬೇಕು. ಒಂದೇ ಬಗೆಯ ಸಿನಿಮಾಗಳಿಗೆ ಅಂಟಿಕೊಳ್ಳಬಾರದು. ಒಮ್ಮೆ ಗೆಲುವು ದಕ್ಕಿತೆಂದು ಅದೇ ದಾರಿಯಲ್ಲಿ ಸಾಗುವುದು ತರವಲ್ಲ. ಯಶಸ್ವಿ ನಿರ್ದೇಶಕನಾಗಿ ಈ ಬಗೆಯ ಸಿನಿಮಾ ಮಾಡುತ್ತೇನೆ ಎಂದಾಗ ಮಾರುಕಟ್ಟೆ ವ್ಯವಹಾರದ ದೃಷ್ಟಿಯಿಂದ ಹಿಗ್ಗುತ್ತದೆ. ಆದರೆ ಮಾರುಕಟ್ಟೆಯನ್ನಷ್ಟೇ ಗಮನದಲ್ಲಿಟ್ಟುಕೊಂಡಾಗ ಹೊಸತನ ನೀಡಲು ಸಾಧ್ಯವಿಲ್ಲ. ಕಮರ್ಷಿಯಲ್ ಸಿನಿಮಾಗಳ ವ್ಯವಹಾರದಲ್ಲಿ ಒಂದು ಚೌಕಟ್ಟಿದೆ. ಅದರೊಳಗೇ ಮಿತಿಗಳನ್ನು ಮೀರಿ ಸಾಧಿಸಿದ ಅನೇಕ ನಿರ್ದೇಶಕರಿದ್ದಾರೆ. ನಾನೂ ಆ ಪ್ರಯತ್ನದಲ್ಲಿದ್ದೇನೆ' ಎನ್ನುತ್ತಾರೆ ಅವರು.

ಆಂಧ್ರದಲ್ಲಿ `ಸ್ಟಾರ್'ಗಳಿಲ್ಲದ ಸಿನಿಮಾಗಳಿಗೆ ಚಿತ್ರಮಂದಿರಗಳೇ ದಕ್ಕುವುದಿಲ್ಲ. ಎಷ್ಟೇ ಉತ್ತಮ ಪ್ರತಿಕ್ರಿಯೆ ಇದ್ದರೂ ಖ್ಯಾತನಾಮರ ಚಿತ್ರ ಬಂದಾಗ ಮುಲಾಜಿಲ್ಲದೆ ಕಿತ್ತುಹಾಕುತ್ತಾರೆ. ಅಲ್ಲಿನ ಚಿತ್ರಮಂದಿರಗಳು ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್‌ಗಳ ಸ್ವಾಮ್ಯದಲ್ಲಿರುತ್ತವೆ. ಹೊಸಬರಿಗೆ ಅಲ್ಲಿ ಜಾಗವಿಲ್ಲ. ಅವರಿಗೆ ಹೋಲಿಸಿದರೆ ನಾವು ಸ್ವರ್ಗದಲ್ಲಿದ್ದೇವೆ. ಇಲ್ಲಿ ನಾಲ್ಕೈದು ಹುಡುಗರು ಸೇರಿ ಸಿನಿಮಾ ಮಾಡಿ ಲಾಭವನ್ನೂ ಗಳಿಸಬಹುದು. ಅಲ್ಲಿ ಉತ್ತಮ ಚಿತ್ರ ಎಂಬ ಹೆಸರು ಮಾತ್ರ ಗಳಿಸಲು ಸಾಧ್ಯ ಎಂದರು ಶಶಾಂಕ್. ಅವಕಾಶಗಳು ಸಾಕಷ್ಟಿರುವ ಕನ್ನಡ ಚಿತ್ರರಂಗದಲ್ಲಿ ನಿಂತ ನೀರಾಗದೆ ವೈವಿಧ್ಯಮಯ ಸಿನಿಮಾಗಳನ್ನು ನೀಡುವ ಹಂಬಲ ಅವರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT