ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಲಿಕೆ ಕೌತುಕದ ಹಿಂದೆ...

Last Updated 27 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಗ ತಾನೇ ಓ.ಟಿ.ಯಿಂದ ಹೊರಬಂದ ನರ್ಸ್, ತನುಜಾಗೆ ಗಂಡು ಮಗುವಾಗಿದೆ ಎಂದು ಹೇಳಿದಾಗ, ಹೊರಗೆ ಕಾದು ಕುಳಿತಿದ್ದ ಎಲ್ಲರ ಮುಖದಲ್ಲೂ ಮಂದಹಾಸ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನುವುದನ್ನು ತಿಳಿದಾಗ ಕಾರ್ತಿಕ್‌ಗಂತೂ ಎಲ್ಲಿಲ್ಲದ ಸಂತೋಷ. ಮಗುವನ್ನು ಓ.ಟಿ.ಯಿಂದ ಹೊರಗೆ ತಂದು ತೋರಿಸುವ ಮುಂಚೆಯೇ ಎಲ್ಲರ ಮನಸ್ಸಲ್ಲೂ ಮಗು ಯಾರ ಹೋಲಿಕೆಯಲ್ಲಿ ಇರಬಹುದು ಎಂಬ ಸಣ್ಣ ಕುತೂಹಲ.

ಅಂತೂ ಸ್ವಲ್ಪ ಸಮಯದಲ್ಲೇ ನರ್ಸ್ ಮಗುವನ್ನು ತಂದು ಕಾರ್ತಿಕ್ ಕೈಗೆ ಕೊಟ್ಟಾಗ ಅಪ್ಪನ ಪಟ್ಟ ಸಿಕ್ಕ ಹೆಮ್ಮೆ ಒಂದೆಡೆಯಾದರೆ, ಅರೆ ನನ್ನ ಮಗ ನನ್ನ ಹಾಗೆಯೇ ಇದ್ದಾನಲ್ಲ ಎನ್ನುವ ಖುಷಿ ಮತ್ತೊಂದೆಡೆ. ಇತ್ತ ವಾರ್ಡ್‌ನಲ್ಲಿ ಸುಸ್ತಾಗಿ ಮಲಗಿದ್ದ ತನುಜಾಗೆ ಮಗುವನ್ನು ನೋಡುವ ಕಾತರ. ಆದರೆ ಎರಡೂ ಮನೆಯವರ ಕೈಗಳಲ್ಲಿ ಬಿಡುವಿಲ್ಲದೇ ಮಗು ಓಡಾಡುತ್ತಲೇ ಇದೆ. ಸಂತೋಷದ ಅಲೆಯಲ್ಲಿದ್ದ ಕಾರ್ತಿಕ್ ತಂದೆ ತಾಯಿ `ಮಗುವಿಗೆ ಥೇಟ್ ನಮ್ಮ ಕಡೆಯ ಹೋಲಿಕೆಯೇ ಇದೆ' ಎನ್ನುತ್ತಿದ್ದಂತೆಯೇ ತನುಜಾ ತಾಯಿ `ಇರಬಹುದು ಆದರೆ ಕಣ್ಣು ಮಾತ್ರ ನಮ್ಮ ತನುಜಾದ್ದೆ' ಎಂದರು. ಅಷ್ಟರಲ್ಲಾಗಲೇ ಎರಡೂ ಮನೆಗಳವರ ಸಂತೋಷದ ಅಲೆ ನಿಧಾನವಾಗಿ ತನ್ನ ರಭಸವನ್ನು ಕಡಿಮೆ ಮಾಡಿತ್ತು.

ಇದು ತನುಜಾ–- ಕಾರ್ತಿಕ್ ಮನೆಯವರ ವಿಚಾರದಲ್ಲಿ ಮಾತ್ರವಲ್ಲ, ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ನಡೆಯುವ ಘಟನೆಯೇ. ಒಂಬತ್ತು ತಿಂಗಳು ಕಾತರದಿಂದ ಹೊಸ ಸದಸ್ಯ/ಸ್ಯೆಯ ಆಗಮನಕ್ಕಾಗಿ ಕಾದು, ಮಗು ಹುಟ್ಟಿದ ನಂತರ ಅದರಲ್ಲಿ ತಮ್ಮವರ ಅಥವಾ ತನ್ನ ಹೋಲಿಕೆಯನ್ನು ಹುಡುಕುವುದು ಸಾಮಾನ್ಯ. ಮಗುವಿನ ತಂದೆ ತಾಯಿಯಿಂದ ಮೊದಲುಗೊಂಡು ಅದರ ಅಜ್ಜಿ ತಾತ ಎಲ್ಲರೂ ನೋಡುವುದು ಅದಕ್ಕೆ ಯಾರ ಹೋಲಿಕೆ ಇದೆ ಎಂದು.

ಕಣ್ಣುಗಳಿಂದ ಶುರುವಾಗುವ ಹೋಲಿಕೆ ಮೂಗು, ತುಟಿ, ಕಿವಿ, ಬೆರಳು, ಕೂದಲು ಹೀಗೆ ಪಟ್ಟಿ ಸಾಗುತ್ತಲೇ ಇರುತ್ತದೆ. ಇದೆಲ್ಲಕ್ಕೂ ಮುಖ್ಯವಾದದ್ದು ಬಣ್ಣ. ಇನ್ನು ಅಪ್ಪ ಅಮ್ಮನ ಬಣ್ಣದಲ್ಲಿ ಸಾಕಷ್ಟು ವ್ಯತ್ಯಾಸವಿದ್ದರಂತೂ ಮೊದಲು ಕೇಳುವುದು ಮಗು ಅಮ್ಮನ ಬಣ್ಣವೋ ಅಪ್ಪನದ್ದೋ ಎಂದು.

ಮನೆಯವರ ಹೊರತಾಗಿ ಮಗುವನ್ನು ನೋಡಲು ಬರುವ ಸಂಬಂಧಿಕರೂ ಈ ವಿಷಯದಲ್ಲಿ ಹಿಂದೆ ಬೀಳುವುದಿಲ್ಲ. ಒಬ್ಬೊಬ್ಬರು ತಮಗೆ ತೋಚಿದ ರೀತಿಯಲ್ಲಿ ಒಂದೊಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಇನ್ನು ಫೋನಿನಲ್ಲೇ ಕ್ಷೇಮ ಸಮಾಚಾರ ವಿಚಾರಿಸುವ ಸ್ನೇಹಿತರು ಕೇಳುವ ಮೊದಲ ಪ್ರಶ್ನೆ ಕೂಡ `ಮಗು ಯಾವುದು? ಯಾರ ಹಾಗಿದೆ?' ಎಂದು. ಬಹುಶಃ ಅವರು ಅಲ್ಲಿಂದಲೇ ಮಗುವಿನ ಚಿತ್ರವನ್ನು ಕಲ್ಪಿಸಿಕೊಂಡುಬಿಟ್ಟಿರುತ್ತಾರೆ.

ಹೋಲಿಕೆ ಎಂಬುದು ಬರೀ ಊಹೆ ಅಥವಾ ಹೆಮ್ಮೆಯ ವಿಷಯ ಆಗಿರದೆ ಕೆಲವೊಮ್ಮೆ ಸಂಬಂಧಗಳ ಒಡಕಿಗೂ ಕಾರಣವಾಗುತ್ತದೆ. ತಂದೆ ತಾಯಿಯ ಹೋಲಿಕೆ ಇರದ ಮಗುವಿನ ಬಗ್ಗೆ ಕೆಲವೊಮ್ಮೆ ಪ್ರಶ್ನೆಗಳು ಹುಟ್ಟುವುದು ಸಾಮಾನ್ಯ. ಕೆಲವು ಸಂದರ್ಭಗಳಲ್ಲಿ ಇದು ಗಂಡ ಹೆಂಡತಿಯ ಮಧ್ಯೆ ಸಂಶಯದ ಬೀಜವನ್ನೂ ಬಿತ್ತುತ್ತದೆ. ಅದು ಮುಂದೆ ಮೊಳೆತು ಗಿಡವಾಗುವ ಹೊತ್ತಿಗೆ ಸಂಬಂಧಗಳು ಬಹು ದೂರ ಸಾಗಿ ಹೋಗಿರುತ್ತವೆ.

ಹೋಲಿಕೆಯ ವಿಚಾರದಲ್ಲಿ ಇದುವರೆಗೂ ಹಲವಾರು ಸಂಶೋಧನೆಗಳು ನಡೆದಿವೆ, ನಡೆಯುತ್ತಲೂ ಇವೆ. ಇವೆಲ್ಲವುಗಳಿಂದ ತಿಳಿಯುವುದೆಂದರೆ, ಹೋಲಿಕೆ ಒಂದು ವಂಶವಾಹಿ, ಅದು ವರ್ಣತಂತುಗಳ ಮೂಲಕ ಮುಂದಿನ ಪೀಳಿಗೆಗೆ ವರ್ಗಾವಣೆ ಆಗುತ್ತಲೇ ಇರುತ್ತದೆ. ಅದು ತಾಯಿಯ ಕಡೆಯದ್ದಾಗಿರಲೂ ಬಹುದು ಅಥವಾ ತಂದೆಯ ಕಡೆಯದ್ದೂ ಆಗಿರಬಹುದು. ಆದರೆ ಯಾರ ಪಾಲು ಎಷ್ಟು ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ.

ಅದು ಎತ್ತರ, ಬಣ್ಣ ಅಥವಾ ಗುಣದ ವಿಷಯ ಆಗಿರಬಹುದು. ಯಾಕೆಂದರೆ ಪ್ರತಿ ವರ್ಣತಂತು­ವಿನಲ್ಲೂ ವ್ಯತ್ಯಾಸ ಇರುತ್ತದೆ. ತಂದೆ ತಾಯಿ ಇಬ್ಬರ ಬಣ್ಣವೂ ತಿಳಿಯಾಗಿದ್ದು ಮಗು ಕಪ್ಪಾಗಿ ಹುಟ್ಟಿರುವ ಅದೆಷ್ಟೋ ಉದಾಹರಣೆಗಳು ನಮ್ಮ ನಡುವೆಯೇ ಇವೆ. ಸುಮಾರು ನೂರರಲ್ಲಿ ಹದಿನೈದು ಮಂದಿಗೆ ಹೀಗಾಗುವುದುಂಟು.

ಹಾಗೆ ನೋಡಿದರೆ ಎತ್ತರದ ವಿಷಯದಲ್ಲೂ ಇದು ಅನ್ವಯಿಸುತ್ತದೆ. ವಿಜ್ಞಾನದ ಭಾಷೆಯಲ್ಲಿ ಹೇಳುವುದಾದರೆ ಮನುಷ್ಯನ ಬೆಳವಣಿಗೆಯನ್ನು ಸೂಚಿಸಲು ಇಂಗ್ಲಿಷ್‌ನ T ಮತ್ತು t ಅಕ್ಷರಗಳನ್ನ ಬಳಸುತ್ತಾರೆ. ಇದರಲ್ಲಿ ದೊಡ್ಡಕ್ಷರ ಎತ್ತರವನ್ನು ಹಾಗೂ ಸಣ್ಣ ಅಕ್ಷರ ಕುಬ್ಜತೆಯನ್ನು ಪ್ರತಿನಿಧಿಸುತ್ತದೆ. ಉದಾಹರಣೆಗೆ ತಂದೆ ಮತ್ತು ತಾಯಿ ಇಬ್ಬರಿಂದ ಬರುವ ವರ್ಣತಂತುಗಳೂ T ಆಗಿದ್ದರೆ ಅಲ್ಲಿ ಮಗು ಎತ್ತರವಾಗಿ ಬೆಳೆಯುತ್ತದೆ. ಹಾಗೆಯೇ ಇಬ್ಬರಿಂದ t ಮತ್ತು t ಬಂದಿದ್ದಾದರೆ ಅಲ್ಲಿ ಮಗುವಿನ ಎತ್ತರ ಕುಂಠಿತಗೊಳ್ಳುತ್ತದೆ. ಇನ್ನು ವರ್ಣತಂತುಗಳು  Tt ಆಗಿದ್ದರೆ ಅಲ್ಲಿ ಮಗುವಿನ ಬೆಳವಣಿಗೆ ಮಧ್ಯಮದ್ದಾಗಿರುತ್ತದೆ.

ಬರೀ ವಿಜ್ಞಾನವನ್ನು ಓದಿದವರು ಮಾತ್ರ ಹೋಲಿಕೆಯ ಬಗ್ಗೆ ತಿಳಿದಿರಬೇಕೆಂದೇನೂ ಇಲ್ಲ. ಪ್ರತಿ ವಿಷಯಕ್ಕೂ ಅದರದೇ ಆದ ಅರ್ಥ ಇರುತ್ತದೆ. ಅದನ್ನು ತಿಳಿಯುವ ಪ್ರಯತ್ನ ಮಾಡಬೇಕಷ್ಟೆ. ಅದರ ಬದಲು ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಸಂಬಂಧಗಳ ಮೌಲ್ಯವನ್ನು ಹಾಳು ಮಾಡಿಕೊಳ್ಳುವುದು ಎಷ್ಟು ಸರಿ?

ಮಗುವಿನಲ್ಲಿ ತಮ್ಮವರ ಅಥವಾ ತನ್ನ ಹೋಲಿಕೆಯನ್ನು ಹುಡುಕುವುದು ತಪ್ಪಲ್ಲ. ಆದರೆ, ಅದರ ಪಾಲು ತಿಳಿಯಾಗಿರಬೇಕು ಮತ್ತು ಸಕಾರಾತ್ಮಕವಾಗಿ ಇರಬೇಕು ಅಷ್ಟೆ. ಕೆಲವೊಮ್ಮೆ ಇದು ಮಕ್ಕಳು ಸಹ ನಕಾರಾತ್ಮಕ ಚಿಂತನೆಯಲ್ಲಿ ಬೀಳುವಂತೆ ಮಾಡಬಹುದು. ವಾತಾವರಣ ಬೇರೆಯಾದರೆ ಚರ್ಮದ ಬಣ್ಣದಲ್ಲಿ ವ್ಯತ್ಯಾಸ ಆಗಬಹುದು.

ಮಗು ಬೆಳೆಯುತ್ತಾ ಹೋದಂತೆಲ್ಲ ಅದರಲ್ಲಿ ಸಾಕಷ್ಟು ಬದಲಾವಣೆಗಳಾಗುವುದು ಸಹಜ. ಒಟ್ಟಿನಲ್ಲಿ ಮಗು ಯಾರ ಹೋಲಿಕೆಯಲ್ಲಿ ಇದ್ದರೇನು? ಅದು ಎರಡೂ ಕುಟುಂಬಗಳ ಮುದ್ದಿನ ಕುಡಿ ತಾನೇ. ತನಗೆ ಸಿಗಬೇಕಾದ ಪ್ರೀತಿಯನ್ನು ಪಡೆಯುವ ಸಂಪೂರ್ಣ ಹಕ್ಕು ಪ್ರತಿ ಮಗುವಿಗೂ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT