ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಡಿಕೆ ಬೆಳೆಗಾರರ ರಕ್ಷಣೆಗೆ ಸರ್ಕಾರ ಬದ್ಧ’

Last Updated 20 ಡಿಸೆಂಬರ್ 2013, 6:16 IST
ಅಕ್ಷರ ಗಾತ್ರ

ಕಾರವಾರ: ಅಡಿಕೆ ನಿಷೇಧದ ಕುರಿತು ವಿರೋಧ ಪಕ್ಷಗಳು ಸೃಷ್ಟಿಸುತ್ತಿರುವ ಊಹಾಪೋಹಗಳಿಗೆ ಜನತೆ ಕಿವಿಗೊಡ ಬಾರದು. ಅಡಿಕೆ ಬೆಳೆಗಾರರ ರಕ್ಷಣೆಗೆ ಸರ್ಕಾರ ಸದಾ ಬದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಅಧಿಕ ಮಳೆಯಿಂದ ಹಾನಿಗೀಡಾದ ಅಡಿಕೆ ಬೆಳೆಗಾರರಿಗೆ ಪರಿಹಾರವನ್ನು ವಿತರಿಸಿದೆ. ಜಿಲ್ಲೆಗೆ ಇದಕ್ಕಾಗಿರೂ 12.11 ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ವಿತರಣೆ ಕಾರ್ಯ ನಡೆಯುತ್ತಿದೆ. ಹಾನಿ ಸಂಭವಿಸಿರುವ ಪ್ರತಿಯೊಬ್ಬ ಅಡಿಕೆ ಬೆಳೆಗಾರರಿಗೆ ಪರಿಹಾರ ಒದಗಿಸಲು ಸರ್ಕಾರ ಮುಂದಾಗಿದೆ’ ಎಂದು ಹೇಳಿದರು.

‘ಇದನ್ನು ಹೊರತುಪಡಿಸಿ ರೋಗದಿಂದ ಹಾನಿಗೀಡಾಗಿರುವ ಅಡಿಕೆ ಮರಗಳಿಗೆ ಪುನಃಶ್ಚೇತನ ಒದಗಿಸಲು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿ ಹೆಚ್ಚಿನ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದ್ದು, ನೆರವು ಒದಗಿಸುವ ಭರವಸೆ ದೊರೆತಿದೆ’ ಎಂದು ತಿಳಿಸಿದರು.

ಸಮುದ್ರ ಕೊರೆತ ತಡೆಗೆ ಹೆಚ್ಚಿನ ಅನುದಾನ: ಜಿಲ್ಲೆಯಲ್ಲಿ ಕಡಲು ಕೊರೆತ ತಡೆ ಕಾಮಗಾರಿಗಳಿಗಾಗಿ ಈಗಾಗಲೇರೂ 2 ಕೋಟಿ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ನಡೆಯುತ್ತಿವೆ. ಇನ್ನೂರೂ 2 ಕೋಟಿ ಜಿಲ್ಲೆಗೆ ಬಿಡುಗಡೆ ಮಾಡಲು ರಾಜ್ಯ ಸಕಾರ ಒಪ್ಪಿಕೊಂಡಿದೆ ಎಂದು ಹೇಳಿದರು.

ಆಡಳಿತಾಧಿಕಾರಿ ನೇಮಕ ತಡೆಯಾಜ್ಞೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ಅಡಿ ಬರುವ 5 ‘ಬಿ’ ವರ್ಗದ ಹಾಗೂ 541 ‘ಸಿ’ ವರ್ಗದ ಅಧಿಸೂಚಿತ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಿರುವುದನ್ನು ಮುಜರಾಯಿ ಸಚಿವರು ಸದ್ಯಕ್ಕೆ ತಡೆಹಿಡಿದಿದ್ದಾರೆ ಎಂದು ಸ್ಪಷ್ಟಪಡಿಸಿದರು.

‘ಆಡಳಿತಾಧಿಕಾರಿ ನೇಮಕಗೊಳಿಸಿ ಆದೇಶ ಹೊರಡಿಸುವ ಮೊದಲು ಜಿಲ್ಲಾ ಧಾರ್ಮಿಕ ಪರಿಷತ್ತಿನ ಮುಂದೆ ವಿಷಯವನ್ನು ಮಂಡಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ನೇಮಕ ತಡೆಹಿಡಿಯಲಾಗಿದೆ. ಸರ್ಕಾರ ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ’ ಎಂದು ತಿಳಿಸಿದರು.

‘ಸೀಬರ್ಡ್‌ ಯೋಜನೆಯಡಿ ನಾಗರಿಕ ವಿಮಾನಯಾನಕ್ಕೆ ಅವಕಾಶ ಕಲ್ಪಿಸುವ ಪ್ರಸ್ತಾವವನ್ನು ಕೈಬಿಟ್ಟಿಲ್ಲ. ಈ ಪ್ರಸ್ತಾವಕ್ಕೆ ತಾತ್ವಿಕ ಒಪ್ಪಿಗೆ ಪಡೆಯಲಾಗಿದ್ದು, ವಿವಿಧ ಅಂಶಗಳ ಪರಿಶೀಲನೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಅಡುಗೆ ಅನಿಲ ಸಬ್ಸಿಡಿ ಪಡೆಯಲು ಆಧಾರ್‌ ಕಾರ್ಡ್‌ ಅಗತ್ಯವಿದೆ ಎಂದು ಸ್ಪಷ್ಟಪಡಿಸಲಾಗಿದ್ದು, 2.04 ಲಕ್ಷ ಅಡುಗೆ ಅನಿಲ ಗ್ರಾಹಕರ ಪೈಕಿ ಈಗಾಗಲೇ 60 ಸಾವಿರ ಮಂದಿ ಆಧಾರ ಕಾರ್ಡ್‌ ಹೊಂದಿದ್ದಾರೆ. ಎಲ್ಲರಿಗೂ ಆಧಾರ್ ಕಾರ್ಡ್‌ ದೊರಕಿಸಲು ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT