ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇ’ ಆಡಳಿತದ ಮಾಹಿತಿಯಲ್ಲಿ ಗೊಂದಲ!

ಜಿಲ್ಲಾಡಳಿತದ ವೆಬ್‌ಸೈಟ್‌: ಕನ್ನಡಕ್ಕೆ ಇಲ್ಲದ ಸ್ಥಾನ
Last Updated 3 ಜನವರಿ 2014, 8:58 IST
ಅಕ್ಷರ ಗಾತ್ರ

ಕಾರವಾರ: ಸಾರ್ವಜನಿಕ ಆಡಳಿತ ವ್ಯವಸ್ಥೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ‘ರಾಷ್ಟ್ರೀಯ ಸೂಚನಾ ವಿಜ್ಞಾನ’ (ಎನ್‌ಐಸಿ)ದ ಸಹಕಾರದೊಂದಿಗೆ ರಾಜ್ಯದಲ್ಲಿ ಆರಂಭಿಸಿರುವ ‘ಇ’ ಆಡಳಿತ ವ್ಯವಸ್ಥೆ ಜಿಲ್ಲೆಯ ಮಟ್ಟಿಗೆ ಗೊಂದಲದ ಗೂಡಾಗಿದೆ. ಉತ್ತರ ಕನ್ನಡ ಜಿಲ್ಲೆಯ ಆಡಳಿತ ವ್ಯವಸ್ಥೆಯ ಅಧೀಕೃತ ವೆಬ್‌ ಸೈಟ್‌ http://uttarakannada.nic.in ನ್ನು ತೆರೆದರೆ ಜಿಲ್ಲಾಡಳಿತದ ಎಲ್ಲಾ ಇಲಾಖೆಯ ಮಾಹಿತಿಗಳು ಸಿಗುತ್ತವೆ. ಆದರೆ, ಇಲ್ಲಿರುವ ಮಾಹಿತಿಯೊಂದಿಗೆ ಇಲಾಖೆಗಳಲ್ಲಿರುವ ವಾಸ್ತವದ ಸ್ಥಿತಿಯನ್ನು ಹೋಲಿಕೆ ಮಾಡಿದರೆ ಯಾವುದನ್ನು ನಂಬಬೇಕು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.

ಆರೋಗ್ಯ ಇಲಾಖೆಯ ಅವಾಂತರ: ಜಿಲ್ಲೆಯ ಯಾವುದೇ ಆಸ್ಪತ್ರೆಗೆ ಹೋದರೂ ಅಲ್ಲಿ ವೈದ್ಯರ ಕೊರತೆ ಇದೆ. ಆದರೆ, ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಇಲಾಖೆಗಳ ಪಟ್ಟಿಯಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿಯೇ ಬೇರೆ ಇದೆ. ಜಿಲ್ಲೆಗೆ ಮಂಜೂರಾಗಿರುವ 195 ವೈದ್ಯರ ಪೈಕಿ 194 ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಒಂದೇ ಒಂದು ವೈದ್ಯರ ಹುದ್ದೆ ಮಾತ್ರ ಖಾಲಿ ಇದೆ. ಈ ಮಾಹಿತಿ ಸಾರ್ವಜನಿಕರಲ್ಲಿ ಆಶ್ಚರ್ಯ ಹುಟ್ಟಿಸಿದೆ.

ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ ಅಂಕೋಲಾ ತಾಲ್ಲೂಕಿನಲ್ಲಿ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಒಂದು ಕೇಂದ್ರಿಯ ಆರೋಗ್ಯ ಕೇಂದ್ರ ಇದೆ. ಇಲ್ಲಿಗೆ ಮಂಜೂರಾಗಿರುವ ವೈದ್ಯರ ಸಂಖ್ಯೆ 17. ಆದರೆ, ಕಾರ್ಯನಿರ್ವಹಿಸುತ್ತಿರುವ ವೈದ್ಯರ ಸಂಖ್ಯೆ 23. ಇದರೊಂದಿಗೆ ಜಿಲ್ಲೆಯ ಭಟ್ಕಳ, ಹಳಿಯಾಳ, ಹೊನ್ನಾವರ, ಕುಮಟಾ ತಾಲ್ಲೂಕುಗಳ ಮಾಹಿತಿ ಯಲ್ಲಿಯೂ ಇದೇ ಗೊಂದಲ ಮೂಡುವಂತಿದೆ.

ಕನ್ನಡಕ್ಕಿಲ್ಲ ಸ್ಥಾನ: ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಕನ್ನಡಕ್ಕೆ ಸ್ಥಾನ ನೀಡಲು ಜಿಪಣತನ ಮಾಡಲಾಗಿದೆ. ಜಿಲ್ಲೆಯ ಹೆಸರಿನಿಂದ ಹಿಡಿದು ಪ್ರತಿಯೊಂದು ಮಾಹಿತಿಯನ್ನು ಇಂಗ್ಲಿಷ್‌ನಲ್ಲಿಯೇ ನೀಡಲಾಗಿದೆ. ರಾಜ್ಯದ ಅನೇಕ ಜಿಲ್ಲೆಯ ವೆಬ್‌ಸೈಟ್‌ಗಳಲ್ಲಿ ಕನ್ನಡದಲ್ಲಿಯೇ ಮಾಹಿತಿ ನೀಡಲಾಗುತ್ತಿದೆ. ಆದರೆ, ಈ ಭಾಗ್ಯ ಜಿಲ್ಲೆಯ ಜನರ ಪಾಲಿಗೆ ಸಿಗದೇ ಇರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಸೂಚನಾ ವಿಜ್ಞಾನ (ಎನ್‌ಐಸಿ) ಸಹಕಾರದಿಂದ ವೆಬ್‌ಸೈಟ್‌ನ ತಂತ್ರಾಂಶವನ್ನು ಸಿದ್ದಪಡಿಸಲಾಗಿದೆ.

ಕನ್ನಡಕ್ಕೆ ಆದ್ಯತೆ ನೀಡಿ
‘ಜಿಲ್ಲೆಯ ವೆಬ್‌ಸೈಟ್‌ನಲ್ಲಿ ಕನ್ನಡದಲ್ಲಿ ಮಾಹಿತಿ ನೀಡದೇ ಇರುವುದು ಸರಿಯಲ್ಲ. ಇದು ಗಡಿ ಜಿಲ್ಲೆಯಾದ್ದರಿಂದ ಇಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಾಹಿತಿ ಇಂಗ್ಲೀಷ್‌ ಭಾಷೆಯಲ್ಲಿದ್ದರೆ, ಜನಸಾಮಾನ್ಯರಿಗೆ ಅರ್ಥೈಸಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಜಿಲ್ಲಾಡಳಿತ ಶೀಘ್ರದಲ್ಲಿ ವೆಬ್‌ಸೈಟ್‌ನಲ್ಲಿ ಕನ್ನಡದಲ್ಲಿ ಮಾಹಿತಿ ನೀಡಬೇಕು. ಇಲ್ಲವಾದರೆ ಕನ್ನಡದ ಹಿರಿಯರೊಂದಿಗೆ ಸೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ’.
–ಎನ್‌.ದತ್ತಾ, ಜಿಲ್ಲಾ ಘಟಕದ ಅಧ್ಯಕ್ಷರು, ಕರುನಾಡು ರಕ್ಷಣಾ ವೇದಿಕೆ

ತಾಲ್ಲೂಕು ಆಸ್ಪತ್ರೆ ಮಂಜೂರು ಕಾರ್ಯನಿರ್ವಹಿಸುತ್ತಿರುವವರು
ವೆಬ್‌ಸೈಟ್‌ನಲ್ಲಿರುವ ಆರೋಗ್ಯ ಇಲಾಖೆ ಮಾಹಿತಿಯಂತೆ...
ಅಂಕೋಲಾ 5 17 23

ಭಟ್ಕಳ 5 15 25
ಹಳಿಯಾಳ 9 20 22
ಹೊನ್ನಾವರ 9 18 26
ಕಾರವಾರ 5 29 21
ಕುಮಟಾ 6 20 21
ಮುಂಡಗೋಡ 5 10 10
ಸಿದ್ದಾಪುರ 6 13 12
ಶಿರಸಿ 8 13 12
ಜೋಯಿಡಾ 5 13 10
ಯಲ್ಲಾಪುರ 6 18 15
ಒಟ್ಟು  69 186 197

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT