ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರಂತರ ಹೆಸರು ಉಳಿಸುವ ಪೀಠ’

Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ಖ್ಯಾತ ರಂಗಕರ್ಮಿ ಬಿ.ವಿ. ಕಾರಂತರ ಹೆಸರಿನ ಅಧ್ಯಯನ ಪೀಠ ಇಲ್ಲಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಯನಿಲಯ (ಕೆಎಸ್‌ಒಯು) ದಲ್ಲಿ ಆರಂಭಗೊಂಡಿದೆ. ಇದರ ಮೊದಲ ಗೌರವ ನಿರ್ದೇಶಕರಾಗಿ ರಂಗಕರ್ಮಿ, ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ ನೇಮಕಗೊಂಡಿದ್ದಾರೆ.

ಅವರು ‘ಪ್ರಜಾವಾಣಿ’ಯೊಂದಿಗೆ ಭಾನುವಾರ ಮಾತನಾಡಿದ್ದು ಇಲ್ಲಿದೆ.

ಕೇವಲ ಉಪನ್ಯಾಸ, ವಿಚಾರ ಸಂಕಿರಣಗಳಿಗೆ ಸೀಮಿತವಾಗದ ರಂಗ ಭೂಮಿಗೆ ಸಂಬಂಧಿಸಿದ ಚಟುವಟಿಕೆ ಗಳಿಗೇ ಆದ್ಯತೆ ನೀಡಲಾಗುತ್ತದೆ. ದೆಹಲಿ, ಭೋಪಾಲ್‌ ಅಲ್ಲದೇ ರಾಜ್ಯದಲ್ಲಿ ಕಾರಂತರು ನಿರ್ದೇಶಿಸಿದ ನಾಟಕಗಳ ಬ್ರೋಶರ್‌, ಛಾಯಾಚಿತ್ರಗಳನ್ನು ಸಂಗ್ರಹಿಸಲಾಗುತ್ತದೆ. ರಂಗಾಸಕ್ತರಿಗೆ ಹಾಗೂ ಸಂಶೋಧಕರಿಗೆ ನೆರವಾಗು ವಂಥ ರಂಗ ಗ್ರಂಥಾಲಯವನ್ನು ಆರಂಭಿಸಲಾಗುತ್ತದೆ. ಇದರಲ್ಲಿ ಹವ್ಯಾಸಿ, ವೃತ್ತಿ ಎನ್ನದೇ ನಾಟಕಗಳ ಸಂಗ್ರಹ, ರಂಗಭೂಮಿ ಕುರಿತ ಸಂಶೋಧನಾ ಗ್ರಂಥಗಳಿರುತ್ತವೆ.

ಗುಬ್ಬಿ ಕಂಪನಿಯಿಂದ ಬಂದ ಕಾರಂತರು ಹವ್ಯಾಸಿ ಹಾಗೂ ವೃತ್ತಿ ಎನ್ನದೇ ದುಡಿದವರು. ಹೀಗಾಗಿ ಹವ್ಯಾಸಿ  ಹಾಗೂ ವೃತ್ತಿ ರಂಗಭೂಮಿಗೆ ಸಂಬಂಧಿಸಿದ ವರನ್ನು ಒಂದೆಡೆ ಕಲೆ ಹಾಕಿ ತರಬೇತಿ ಶಿಬಿರಗಳನ್ನು ಆಯೋಜಿಸುವ ಉದ್ದೇಶವಿದೆ. ಇದರೊಂದಿಗೆ ಕಾರಂತರ ಎಲ್ಲ ನಾಟಕಗಳಲ್ಲಿ ಎದ್ದು ಕಾಣುತ್ತಿ ದ್ದುದು ಸಂಗೀತ. ರಂಗ ಸಂಗೀತಕ್ಕೆ ಸಂಬಂಧಿಸಿ ಧ್ವನಿಸುರುಳಿ, ಸಿ.ಡಿ ಸಂಗ್ರಹಿ ಸಲಾಗುತ್ತದೆ. ಜತೆಗೆ ರಂಗ ಸಂಗೀತಕ್ಕೆ ಸಂಬಂಧಿಸಿದ ಕಾರ್ಯಾಗಾರಗಳನ್ನು ಹಮ್ಮಿ ಕೊಳ್ಳಲಾಗುತ್ತದೆ. ರಾಜ್ಯದಲ್ಲಿ ರಂಗ ಗೀತೆಗಳನ್ನು ಹಾಡುವವರನ್ನು ಒಂದೆಡೆ ಸೇರಿಸುವ ಯೋಜನೆಯೂ ಇದೆ.

ಕಾರಂತರು ದೇಶದ ಉದ್ದಕ್ಕೂ ಸಂಚರಿಸುವಾಗ ಸಂಗ್ರಹಿಸಿದ ರಂಗ ಪರಿಕರಗಳು ಸದ್ಯ ಅವರ ಹೆಸರಿನ ಟ್ರಸ್ಟ್‌ ಒಡೆತನದಲ್ಲಿವೆ. ಆ ವಸ್ತುಗಳನ್ನು ಇಲ್ಲಿಯ ರಂಗಾಯಣಕ್ಕೆ ಸ್ಥಳಾಂತರಿಸುವ ಉದ್ದೇಶ ಇತ್ತು. ಈ ಕುರಿತು ಪ್ರೇಮಾ ಕಾರಂತರೊಂದಿಗೆ ಚರ್ಚೆಯೂ ಆಗಿತ್ತು. ಆದರೆ ಅವರ ನಿಧನದ ನಂತರ ಸ್ಥಳಾಂತರಗೊಳ್ಳಲಿಲ್ಲ. ಅದನ್ನು ಕಾರಂತ ಪೀಠಕ್ಕೆ ಸ್ಥಳಾಂತರಿಸಲು ಯತ್ನಿಸಲಾಗುತ್ತದೆ.

ರಂಗಭೂಮಿ ಕುರಿತು ಸರ್ಟಿಫಿಕೇಟ್‌ ಕೋರ್ಸ್ ಆರಂಭಿಸುವ ಆಲೋಚನೆ ಯಿದೆ. ಇದಕ್ಕೆ ವಿದ್ಯಾಭ್ಯಾಸ ಅಗತ್ಯವಿಲ್ಲ. ಕಾರಂತರ ಕುರಿತು ಅಧ್ಯಯನ ಪೀಠ ಆರಂಭಿಸಬೇಕೆಂದು ಕಳೆದ ತಿಂಗಳು 19ರಂದು ವಿ.ವಿ.ಯ ವ್ಯವಸ್ಥಾಪನ ಮಂಡಳಿಯ 125ನೇ ಸಾಮಾನ್ಯ ಸಭೆ ತೀರ್ಮಾನಿಸಿತು. ಇದಕ್ಕೆ ಈ ತಿಂಗಳು 4ರಂದು ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್‌ ಅನುಮೋದನೆ ನೀಡಿದರು. ಈಗಾಗಲೇ ಅಲ್ಲಿ ಪೀಠಗಳಿವೆ.

ಎಲ್ಲ ಪೀಠಗಳಿಗೂ ತಲಾ ₨ 15 ಲಕ್ಷ ನೀಡಲಾಗುತ್ತದೆ. ಆ ಮೊತ್ತವನ್ನು ಬ್ಯಾಂಕಿನಲ್ಲಿ ಇಟ್ಟು ಅದರಿಂದ ಬರುವ ಬಡ್ಡಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತದೆ. ಇದು ಕಾರಂತರ ಅಧ್ಯಯನ ಪೀಠಕ್ಕೂ ಅನ್ವಯಿಸುತ್ತದೆ.

ರಂಗ ತಜ್ಞರಿಗೆ ಮಾತ್ರ ಮೀಸಲಾಗದ ಪೀಠ ಮಾಡುವುದು ಮುಖ್ಯ ಉದ್ದೇಶ. ರಾಜ್ಯ, ಅಂತರರಾಜ್ಯ ರಂಗಕರ್ಮಿಗಳು ಇಲ್ಲಿಗೆ ಆಗಮಿಸಿ ಕಾರಂತರ ಒಡನಾಟವನ್ನು ಹಂಚಿಕೊಳ್ಳುವಂತೆ ಮಾಡುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT