ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಂಗ’ – ಎಷ್ಟೊಂದು ಸೋಜಿಗ

Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

1) ‘ಮಂಗ’ – ಅದೆಂಥ ಪ್ರಾಣಿ?
ಮಂಗ – ಅದು ಸ್ತನಿವರ್ಗದ ‘ಪ್ರೈಮೇಟ್‌’ಗಳ ಗುಂಪಿಗೆ ಸೇರಿದ ಪ್ರಾಣಿ. ಈ ಗುಂಪಿನ ಎಲ್ಲ ಪ್ರಾಣಿಗಳೂ ಎರಡು ವಿಶಿಷ್ಟ ಲಕ್ಷಣಗಳನ್ನು ಹೊಂದಿವೆ: ‘ಮುಖದ ಮುಂಬದಿಯಲ್ಲಿ ಎರಡು ಕಣ್ಣುಗಳು ಮತ್ತು ಬಿಗಿ ಹಿಡಿಯಬಲ್ಲ ಹಸ್ತಗಳು’. ಪ್ರೈಮೇಟ್‌ಗಳಲ್ಲಿ ಪ್ರೊಸಿಮಿಯನ್‌ಗಳು ಮತ್ತು ಸಿಮಿಯನ್‌ಗಳು ಎಂಬ ದ್ವಿವಿಧ ಉಪವರ್ಗಗಳಿವೆ. ‘ಬುಷ್‌ ಬೇಬಿ, ಲೀಮರ್‌, ಸಿಫಾಕಾ, ಇಂದ್ರಿ, ಲೋರಿಸ್‌ ಆಯ್‌ – ಆಯ್‌’ ಇವೆಲ್ಲ ಪ್ರೊಸಿಮಿಯನ್‌ಗಳು. ಮನುಷ್ಯ, ವಾನರರು, ಮಾರ್ಮಾನೆಟ್‌ಗಳು, ಟಮರಿನ್‌ಗಳು ಮತ್ತು ಮಂಗಗಳು ಸಿಮಿಯನ್‌ ವರ್ಗಕ್ಕೆ ಸೇರಿವೆ. ಹಾಗೆಂದರೆ ಸ್ತನಿವರ್ಗದ, ಪ್ರೈಮೇಟ್‌ ಉಪವರ್ಗದ, ಸಿಮಿಯನ್‌ ಗುಂಪಿನ ಪ್ರಾಣಿಯೇ ಮಂಗ ಎಂಬುದು ಸ್ಪಷ್ಟವಾಯಿತಲ್ಲ?

2) ಮಂಗಗಳಲ್ಲಿ ಎಷ್ಟು ಪ್ರಭೇದಗಳಿವೆ?
ವಿಸ್ಮಯ ಏನೆಂದರೆ ಪ್ರೈಮೇಟ್‌ಗಳ ಗುಂಪಿನಲ್ಲಿ ಮಂಗಗಳದೇ ಗರಿಷ್ಠ ಪ್ರಭೇದ, ಗರಿಷ್ಠ ವೈವಿಧ್ಯ, ಪ್ರೊಸಿಮಿಯನ್‌ಗಳು ಮತ್ತು ಸಿಮಿಯನ್‌ಗಳನ್ನೊಳಗೊಂಡ ಇಡೀ ಪ್ರೈಮೇಟ್‌ ವರ್ಗದಲ್ಲಿ ಒಟ್ಟು ಇನ್ನೂರು ಪ್ರಭೇದಗಳಿವೆ. ಆ ಪೈಕಿ ಮಂಗಪ್ರಭೇದಗಳೇ ಒಂದು ನೂರ ಅರವತ್ತು (ಸಂಪೂರ್ಣ ವಿಭಿನ್ನ ರೂಪಗಳ ಆಯ್ದ ಕೆಲ ಮಂಗ ಪ್ರಭೇದಗಳನ್ನು ಚಿತ್ರಗಳಲ್ಲಿ ಗಮನಿಸಿ).

ಇಲ್ಲೊಂದು ಸೋಜಿಗದ ಅಂಶ: ಪ್ರೈಮೇಟ್‌ ವರ್ಗದಲ್ಲಿ ಸದ್ಯದಲ್ಲಿರುವ ಮನುಷ್ಯ ಪ್ರಭೇದ ಒಂದೇ ಒಂದು: ‘ಹೋಮೋ ಸೇಪಿಯನ್‌್ಸ’ (ನಮ್ಮ ಪ್ರಭೇದ). ಪ್ರಭೇದ ಸಂಖ್ಯೆ ಕನಿಷ್ಟವಾಗಿದ್ದರೂ ಒಟ್ಟು ಸಂಖ್ಯೆಯಲ್ಲಿ ನಮ್ಮ ಪ್ರಭೇದವೇ ಗರಿಷ್ಠ; ಸಾಮರ್ಥ್ಯದಲ್ಲಂತೂ ಇನ್ನಾವ ಜೀವಿ ಪ್ರಭೇದವೂ ನಮಗೆ ನಾಟಿ ಇಲ್ಲ.

3) ಮಂಗಗಳು ಎಷ್ಟು ಕಾಲದಿಂದ ಧರೆಯಲ್ಲಿವೆ?
ಧರೆಯಲ್ಲಿ ಪ್ರೈಮೇಟ್‌ಗಳು ಮೂಲತಃ ಅವತರಿಸಿದ್ದು ಈಗ್ಗೆ ಸುಮಾರು ಏಳು ಕೋಟಿ ವರ್ಷ ಹಿಂದೆ. ಹಾಗೆ ಮೊದಲು ಅಸ್ತಿತ್ವಕ್ಕೆ ಬಂದ ಪ್ರೈಮೇಟ್‌ಗಳು ಪ್ರೊಸಿಮಿಯನ್‌ಗಳು. ಪ್ರೊಸಿಮಿಯನ್‌ಗಳಲ್ಲಿ ನಿಧಾನವಾಗಿ ಒಡಮೂಡಿದ ಜೈವಿಕ ಮಾರ್ಪಾಡುಗಳು ಮಂಗಗಳ ಹುಟ್ಟಿಗೆ ದಾರಿತೆರೆದವು. ಮಂಗಗಳು ಐದು ಕೋಟಿ ವರ್ಷಗಳಿಂದ ಧರೆಯಲ್ಲಿ ನೆಲೆಸಿವೆ. ವಾನರರಿಗಿಂತ ಹಿಂದಿನಿಂದಲೇ, ಮನುಷ್ಯರಿಗಿಂತ ಬಹಳ ಪೂರ್ವದಿಂದಲೇ ಬಾಳು ನಡೆಸುತ್ತಿವೆ.

4) ‘ಮಂಗ – ವಾನರ’ – ಏನು ಅಂತರ?
ಮೇಲ್ನೋಟಕ್ಕೆ ಮಂಗಗಳೂ ವಾನರರೂ ವಿಪರೀತ ಭಿನ್ನತೆಯನ್ನೇನೂ ತೋರದಿದ್ದರೂ ವಾಸ್ತವವಾಗಿ ಅವುಗಳ ನಡುವೆ ಸ್ಪಷ್ಟವಾದ ಅಂತರಗಳು ಹಲವಾರಿವೆ. ವಾನರರಿಗಿಂತ (ಗೊರಿಲ್ಲ, ಚಿಂಪಾಂಜಿ, ಒರಾಂಗೊಟಾನ್‌, ಗಿಬ್ಬನ್‌, ಬೋನೋಬೋ) ಮಂಗಗಳದು ಸಾಮಾನ್ಯವಾಗಿ ಚಿಕ್ಕ ಗಾತ್ರ. ವಾನರರಿಗೆ ಬಾಲ ಇಲ್ಲ. ವಾನರರ ತೋಳುಗಳು ತುಂಬ ಉದ್ದ. ಮಂಗಗಳಿಗಿಂತ ವಾನರರದು ಅಧಿಕ ಬೌದ್ಧಿಕ ಸಾಮರ್ಥ್ಯ. ಮಂಗಗಳಷ್ಟು ವೈವಿಧ್ಯ ವಾನರರಲ್ಲಿಲ್ಲ. ವಾನರರ ವಾಸ ಆಫ್ರಿಕ ಮತ್ತು ಏಷಿಯದ ವೃಷ್ಟಿ ವನಗಳ ಕೆಲ ಪ್ರದೇಶಗಳಿಗಷ್ಟೇ ಸೀಮಿತ.

5) ಮಂಗಗಳ ನೈಸರ್ಗಿಕ ವಾಸಕ್ಷೇತ್ರ ಯಾವುದು?
ಮಂಗಗಳದು ಅತ್ಯಂತ ವಿಸ್ತಾರ ವಾಸ ಕ್ಷೇತ್ರ. ಅಡವಿ, ಹುಲ್ಲು ಬಯಲು, ಮರುಭೂಮಿ, ಪರ್ವತ ಪ್ರದೇಶ, ಶೀತಲ ನೆಲೆ, ಕಡಲ ತೀರ... ಹಾಗೆ ಎಲ್ಲೆಡೆಗೂ ಹೊಂದಿಕೊಂಡು ಅವು ವಾಸಿಸುತ್ತಿವೆ. ಮನುಷ್ಯರ ಜೊತೆ ಜೊತೆಗೇ ಹಳ್ಳಿ ನಗರಗಳಲ್ಲಿ ಅವರನ್ನೇ ದೋಚುತ್ತಲೂ ನೆಲೆಗೊಂಡಿವೆ. ಅದೇನೇ ಆದರೂ ಉಷ್ಣವಲಯ ಪ್ರದೇಶಗಳಲ್ಲಿ, ಅಲ್ಲೂ ನಿಬಿಡ ಅರಣ್ಯಗಳಲ್ಲಿ ಮಂಗಗಳದು ಗರಿಷ್ಠ ವಾಸ್ತವ್ಯ.

6) ಮಂಗಗಳ ಆಹಾರ ಏನು?
ಮಂಗಗಳು ಮಿಶ್ರಾಹಾರೀ ಪ್ರಾಣಿಗಳು. ಹಣ್ಣು – ಕಾಯಿ, ಬೀಜ, ಗೆಡ್ಡೆ, ಹೂಗಳು, ಚಿಗುರೆಲೆ, ಕಾಳು ಧಾನ್ಯ ಇತ್ಯಾದಿ ಸರ್ವವಿಧ ಸಸ್ಯಾಹಾರ ಸೇವಿಸುವ ಜೊತೆ ಜೊತೆಗೇ ಕೀಟಗಳನ್ನು, ಹಕ್ಕಿ ಮೊಟ್ಟೆ – ಮರಿಗಳನ್ನೂ ಮಂಗಗಳು ಬೇಟೆಯಾಡುತ್ತವೆ. ಕಡಲಂಚಿನಲ್ಲಿ ಏಡಿ – ನಳ್ಳಿಗಳನ್ನು ಹಿಡಿವ, ಚಿಗರೆ ಮರಿಗಳಂತಹ ಪುಟ್ಟ ಪ್ರಾಣಿಗಳನ್ನು ಸಿಗಿದು ತಿನ್ನುವ ಮಂಗ ಪ್ರಭೇದಗಳೂ ಇವೆ. ಊರು – ಶಹರಗಳಲ್ಲಿನ ‘ಕಳ್ಳಮಂಗ’ಗಳಂತೂ ಮನುಷ್ಯರು ಸೇವಿಸುವ ಸರ್ವವಿಧ ತಿಂಡಿಗಳನ್ನು ಪಾನೀಯಗಳನ್ನೂ ತಿಂದು – ಕುಡಿದು ಬದುಕಲು ಕಲಿತಿವೆ.

7) ಮಂಗಗಳ ವರ್ಗೀಕರಣ ಹೇಗೆ?
ಧರೆಯಲ್ಲಿರುವ ಸಕಲ ಮಂಗ ಪ್ರಭೇದಗಳನ್ನೂ ಸ್ಪಷ್ಟವಾಗಿ ಎರಡು ಬಗೆಗಳನ್ನಾಗಿ ವರ್ಗೀಕರಿಸಲಾಗಿದೆ: ‘ಹಳೆಯ ಜಗತ್ತಿನ ಮಂಗಗಳು ಮತ್ತು ಹೊಸ ಜಗತ್ತಿನ ಮಂಗಗಳು’. ಮಧ್ಯ ಅಮೆರಿಕದ ವೃಷ್ಟಿವನಗಳಲ್ಲಿ ನೆಲೆಸಿರುವ ಮಂಗಗಳೆಲ್ಲ ಹೊಸ ಜಗತ್ತಿನ ಮಂಗಗಳು. ಈ ಗುಂಪಿನ ಮಂಗಗಳೆಲ್ಲ ದುಂಡು ತಲೆ, ಚಪ್ಪಟೆ ಮೂಗು, ದನಗಳಿಗಿರುವಂತೆ ಪಾರ್ಶ್ವ ಮುಖನಾದ ಮೂಗಿನ ಹೊಳ್ಳೆಗಳು. ವೂಲೀ ಮಂಗ (ಚಿತ್ರ– 5), ಹೌಲರ್‌ ಮಂಗ (ಚಿತ್ರ– 7), ಉಪಕಾರೀ (ಚಿತ್ರ– 8), ಅಳಿಲು ಮಂಗ (ಚಿತ್ರ– 12), ಗೂಬೆ ಮಂಗ, ಜೇಡ ಕೋತಿ, ಕಪೂಚಿನ್‌... ಇಂಥವೆಲ್ಲ ಈ ಗುಂಪಿಗೆ ಸೇರಿವೆ.

ಅವುಗಳಿಂದ ಭಿನ್ನವಾಗಿ ಹಳೆಯ ಜಗತ್ತಿನ ಮಂಗಗಳದೆಲ್ಲ ಚಾಚಿದ ಮುಖ; ಮುಂದೆರೆದ ಮೂಗಿನ ಹೊಳ್ಳೆಗಳು ಮತ್ತು ಸಾಮಾನ್ಯವಾಗಿ ಚಿಕ್ಕ ಬಾಲ. ಮೆಕಾಕ್‌ಗಳು (ಚಿತ್ರ1, 2), ಬಬೂನ್‌ಗಳು (ಚಿತ್ರ– 4), ಮ್ಯಾಂಡ್ರಿಲ್‌ (ಚಿತ್ರ– 3), ಲಂಗೂರ್‌ (ಚಿತ್ರ– 9), ಮುಂಗಾಬೇ (ಚಿತ್ರ– 13) ಇತ್ಯಾದಿ ಎಲ್ಲ ಮಂಗಗಳೂ ‘ಹಳೆಯ ಜಗತ್ತಿನ ಮಂಗಗಳು’. ಸ್ಪಷ್ಟವಾಗಿಯೇ ಹಳೆಯ ಜಗತ್ತಿನ ವಿಸ್ತಾರ ಅಧಿಕವಾಗಿರುವುದಕ್ಕೆ ತಕ್ಕಂತೆ ಅಲ್ಲಿನ ಮಂಗ ಪ್ರಭೇದಗಳ ಸಂಖ್ಯೆ ಕೂಡ ಅಧಿಕ.

8) ಅತ್ಯಂತ ವಿಸ್ಮಯದ ವಿಶಿಷ್ಟ ದಾಖಲೆಗಳ ಮಂಗಗಳು ಯಾವುವು?
ಅಂತಹ ಪ್ರಭೇದಗಳು ಬೇಕಾದಷ್ಟಿವೆ. ಆಯ್ದ ಕೆಲ ನಿದರ್ಶನಗಳು:
* ಅತ್ಯಂತ ಅಧಿಕ ಗಾತ್ರದ ತೂಕದ ಮಂಗ ‘ಮ್ಯಾಂಡ್ರಿಲ್‌’ (ಚಿತ್ರ– 3). ಈ ಪ್ರಭೇದದ ವಯಸ್ಕ ಗಂಡುಗಳು ಐವತ್ತು ಕಿಲೋ ಮೀರುತ್ತವೆ. ಆಫ್ರಿಕದಲ್ಲಿ ಇದರ ವಾಸ.
*  ಅಮೆಜೋನಿಯಾದ ‘ಪಿಗ್ಮಿ ಮಾರ್ಮಾಸೆಟ್‌’ ಅತ್ಯಂತ ಕುಬ್ಜ ಮಂಗ. ಹತ್ತು ಸೆಂ.ಮೀ. ಉದ್ದದ ದೇಹ, ಅಷ್ಟೇ ಉದ್ದದ ಬಾಲ. 50ರಿಂದ 75 ಗ್ರಾಂ ಗಳಷ್ಟೇ ತೂಕ.
*  ಅಲ್ಲಿನದೇ ‘ಹೌಲರ್‌ ಮಂಗ’ದ್ದು (ಚಿತ್ರ– 7) ‘ದೊಡ್ಡ ಧ್ವನಿ’ಯ ವಿಶ್ವದಾಖಲೆ. ಈ ಮಂಗದ ಕಿರುಚಾಟ ಹದಿನಾರು ಕಿ.ಮೀ. ದೂರಕ್ಕೂ ಕೇಳಿಸುತ್ತದೆ.
* ಹುಲ್ಲು ಮೇಯುವ ಬಬೂನ್‌ (ಚಿತ್ರ– 4) ಅವಕಾಶ ಸಿಕ್ಕಾಗಲೆಲ್ಲ ಜಿಂಕೆಗಳನ್ನು ಹಿಡಿದು ಹಲ್ಲುಗಳಿಂದ ಸಿಗಿದು ತಿಂದು ಹಾಕುವ ಬಲಿಷ್ಠ ಬೇಟೆಗಾರ.
*  ‘ಗೂಬೆ ಮಂಗ’– ಅದು ಏಕೈಕ ನಿಶಾಚರ ಮಂಗ.
* ಇಪ್ಪತ್ತೈದೇ ಸೆಂ.ಮೀ. ಉದ್ದದ ಶರೀರದ ‘ಅಳಿಲು ಮಂಗ’ (ಚಿತ್ರ– 12) ಗರಿಷ್ಠ ಸಂಖ್ಯೆಯ ಸದಸ್ಯರ (500ಕ್ಕೂ ಅಧಿಕ) ಹಿಂಡುಗಳಲ್ಲಿ ಬದುಕುವ ಮಂಗ ಪ್ರಭೇದ.
– ಎನ್‌. ವಾಸುದೇವ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT