ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೋಕ ಅದಾಲತ್: 95 ಸಾವಿರ ಪ್ರಕರಣ ಇತ್ಯರ್ಥ’

Last Updated 2 ಡಿಸೆಂಬರ್ 2013, 8:42 IST
ಅಕ್ಷರ ಗಾತ್ರ

ಹಾಸನ: ‘ರಾಜ್ಯದಾದ್ಯಂತ ಹಮ್ಮಿಕೊಂಡಿದ್ದ ‘ಮೆಗಾ ಲೋಕ ಅದಾಲತ್’ ಮೂಲಕ 95 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಿ ನೊಂದವರಿಗೆ ಪರಿಹಾರ ಒದಗಿಸಲಾಗಿದ್ದು, ಇದೊಂದು ಸಾರ್ಥಕ ಕೆಲಸ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಕೆ.ಎಲ್‌. ಮಂಜುನಾಥ್‌ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಜಿಲ್ಲಾ ಘಟಕಗಳ ವತಿಯಿಂದ ಶನಿವಾರ ಸಂಜೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಮೆಗಾ ಲೋಕ ಅದಾಲತ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮೆಗಾ ಲೋಕ ಅದಾಲತ್‌ ಮೂಲಕ  ಜಿಲ್ಲೆಯಲ್ಲಿ 6,176 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ರಾಜ್ಯದಲ್ಲೇ ಹಾಸನ ಮೊದಲ ಸ್ಥಾನ ಗಳಿಸಿದೆ’ ಎಂದರು.

‘ಸಂಕಷ್ಟದ  ಕಾಲದಲ್ಲಿ ದೊರೆಯಬೇಕಾದ ನೆರವು ಎಷ್ಟೋ ವರ್ಷಗಳ ನಂತರ ಸಿಕ್ಕರೆ ಅದಕ್ಕೆ ಮಹತ್ವ ಇರುವುದಿಲ್ಲ. ಈ ನಿಟ್ಟಿನಲ್ಲಿ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಪ್ರಯತ್ನಿಸಬೇಕು’ ಎಂದರು.

ಹಾಸನ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ಬಿ.ಎಸ್. ಪಾಟೀಲ್ ಮಾತನಾಡಿ, ‘ಜಿಲ್ಲೆಯಲ್ಲಿ ಬಾಕಿ ಉಳಿದಿದ್ದ 43ಸಾವಿರ ಪ್ರಕರಣಗಳಲ್ಲಿ ಶೇ. 12ರಷ್ಟನ್ನು ಮೆಗಾ ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲಾಗಿದೆ. ಈ ಜವಾಬ್ದಾರಿಯನ್ನು ಮುಂದುವರಿಸ ಬೇಕಾದ ಹೊಣೆಗಾರಿಕೆ ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರ ಮೇಲಿದೆ’ ಎಂದರು.

ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ‘ಮೆಗಾ ಲೋಕ ಅದಾಲತ್‌ನಂತೆ ಕಂದಾಯ ಇಲಾಖೆಯಲ್ಲಿರುವ ಪ್ರಕರಣಗಳನ್ನು ಅದಾಲತ್ ಮೂಲಕ ಇತ್ಯರ್ಥ ಪಡಿಸುವಂತೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಅದನ್ನು ಪಾಲಿಸಲಾಗುವುದು. ಶೀಘ್ರವೇ ಇಂಥ ಚಟುವಟಿಕೆ ನಡೆಸಿ ಜನರಿಗೆ ತ್ವರಿತ ಸೇವೆ ಒದಗಿಸಲಾಗುವುದು’ ಎಂದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜೆ.ಎಸ್. ಸೋಮಶೇಖರ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸಿ.ಜೆ.ಎಂ. ಮುಸ್ತಫಾ ಹುಸೇನ್, ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ, ಕಾರ್ಯದರ್ಶಿ ವಸಂತಕುಮಾರ್ ಇದ್ದರು. ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ್, ಎ.ವಿ.ಚಂದ್ರಶೇಖರ್ ಅಶೋಕ್ ಜಿ. ನಿಜಗಣ್ಣನವರ ಮಾತನಾಡಿದರು.

ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳಲ್ಲಿ ಕಕ್ಷಿದಾರರಿಗೆ ದೊರೆಯಬೇಕಾದ ಪರಿಹಾರ ಧನದ ಚೆಕ್ ವಿತರಿಸಲಾಯಿತು.

ಪ್ರತಿಭಾ ಪುರಸ್ಕಾರ: ಅರ್ಜಿ ಆಹ್ವಾನ
ಹಾಸನ: ಜಿಲ್ಲಾ ಕನಕ ನೌಕರರ ಸಂಘದ ವತಿಯಿಂದ ಡಿಸೆಂಬರ್‌ 5 ರಂದು ಕನಕದಾಸರ 526ನೇ ಜಯಂತ್ಯುತ್ಸವದ  ಅಂಗವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

2012–13ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ  80ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು ಡಿ. 5ರೊಳಗೆ ಅರ್ಜಿ ಸಲ್ಲಿಬಹುದು.

ಹೆಚ್ಚಿನ ಮಾಹಿತಿಗೆ ಮೊಬೈಲ್‌ 98449 12792, 95387 28676 ಅಥವಾ 98446 42652 ಸಂಪರ್ಕಿಸುವಂತೆ ಕೊರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT