ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₨1 ಕೋಟಿ ಪರಿಹಾರಕ್ಕೆ ವಿವಿ ಬೇಡಿಕೆ

ಪರ್ಯಾಯ ಮಾರ್ಗದಲ್ಲಿ ಕೇಬಲ್‌ ಅಳವಡಿಕೆಗೆ ಸಿಂಡಿಕೇಟ್‌ ಒಪ್ಪಿಗೆ
Last Updated 7 ಜನವರಿ 2014, 19:52 IST
ಅಕ್ಷರ ಗಾತ್ರ

ಬೆಂಗಳೂರು: ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿ ಪರ್ಯಾಯ ಮಾರ್ಗದಲ್ಲಿ ಹೊಸ ಕೇಬಲ್‌ ಅಳ­ವಡಿಸಲು ಕೆಪಿಟಿಸಿಎಲ್‌ಗೆ ಬೆಂಗಳೂರು ವಿಶ್ವ­ವಿದ್ಯಾ­ಲಯದ ಸಿಂಡಿಕೇಟ್‌ ಸಭೆ ಅನುಮೋದನೆ ನೀಡಿದ್ದು, ಇದಕ್ಕಾಗಿ ₨1 ಕೋಟಿ ಪರಿಹಾರ ನೀಡುವಂತೆ ಬೇಡಿಕೆ ಮುಂದಿಟ್ಟಿದೆ.

ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅಧ್ಯಕ್ಷತೆಯಲ್ಲಿ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂ­ಗಣದ ಬೋರ್ಡ್‌ ರೂಮಿನಲ್ಲಿ ಮಂಗಳವಾರ ನಡೆದ ವಿಶೇಷ ಸಿಂಡಿಕೇಟ್‌ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.

‘ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಹೊಸ ಕೇಬಲ್‌ ಅಳವಡಿಸಲು ಅನುಮತಿ ನೀಡದ್ದಕ್ಕಾಗಿ ಆರು ದಿನಗಳ ಕಾಲ ವಿಶ್ವವಿದ್ಯಾಲಯದ ವಿದ್ಯುತ್‌ ಸಂಪರ್ಕ­ವನ್ನು ಕೆಪಿಟಿಸಿಎಲ್‌ ಕಡಿತ ಮಾಡಿತ್ತು. ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿ­ದ್ದರು. ಬಳಿಕ ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿದಿತ್ತು. ಪರ್ಯಾಯ ಮಾರ್ಗ­ದಲ್ಲಿ ಕೇಬಲ್ ಅಳವಡಿಸಲು ಸಿಂಡಿಕೇಟ್‌ ಸಭೆಯ ಅನುಮೋದನೆ ಸಿಕ್ಕಿದೆ’ ಎಂದು ಪ್ರೊ.ಬಿ.ತಿಮ್ಮೇಗೌಡ ತಿಳಿಸಿದರು.

‘ಮೈಸೂರು ಮಾರ್ಗದ ಮೂಲಕ ಹೊಸ ಕೇಬಲ್‌ ಕ್ಯಾಂಪಸ್‌ ಪ್ರವೇಶಿಸಿ ಕುಲಪತಿ ನಿವಾಸದ ಬಳಿ ಸಾಗಿ ವಿದ್ಯಾರ್ಥಿನಿ ನಿಲಯ, ದೈಹಿಕ ಶಿಕ್ಷಕ ಶಿಕ್ಷಣ ವಿಭಾಗ, ಪಿ.ಜಿ. ಹಾಸ್ಟೆಲ್‌ ಮೂಲಕ ಸಾಗಲಿದೆ. ಇದಕ್ಕೆ ಅನೇಕ ಮರಗಳನ್ನು ಕತ್ತರಿಸ­ಬೇಕಾಗುತ್ತದೆ. ಕುಡಿಯುವ ನೀರಿನ ಕೊಳವೆ ಜಾಲಕ್ಕೂ ಹಾನಿ ಉಂಟಾಗಲಿದೆ. ಮೊದಲಿನ ಮಾರ್ಗಕ್ಕಿಂತ ಇಲ್ಲಿ ಕಡಿಮೆ ಪ್ರಮಾಣದಲ್ಲಿ ಹಾನಿ ಉಂಟಾಗಲಿದೆ’ ಎಂದು ಅವರು ತಿಳಿಸಿದರು.

‘ಈ ಹಿಂದೆ ಜಲಮಂಡಳಿ ನೀರಿನ ಕಾಮಗಾರಿ ನಡೆಸಿದ್ದಾಗ ವಿವಿಗೆ ₨1 ಕೋಟಿ ಪರಿಹಾರ ನೀಡಿತ್ತು. ವಿವಿಯ 2.1 ಕಿ.ಮೀ. ಜಾಗದಲ್ಲಿ ಹೊಸ ಕೇಬಲ್‌ ಅಳವಡಿಸಬೇಕಿದೆ. ಇದಕ್ಕೆ ಕೆಪಿಟಿಸಿಎಲ್‌ ₨ 50 ಲಕ್ಷ ಪರಿಹಾರ ನೀಡಬೇಕಿದೆ. ಮರಗಳ ನಾಶ ಸೇರಿದಂತೆ ಇತರ ಹಾನಿಗೆ ₨50 ಲಕ್ಷ ಪರಿಹಾರ ನೀಡುವಂತೆ ವಿನಂತಿಸಲಾಗಿದೆ’ ಎಂದು ಅವರು ವಿವರ ನೀಡಿದರು.

‘ವಿಶ್ವವಿದ್ಯಾಲಯ ಪ್ರತಿ ತಿಂಗಳು ₨10 ಲಕ್ಷ ವಿದ್ಯುತ್‌ ಬಿಲ್‌ ಪಾವತಿಸುತ್ತಿದೆ. ಕೇಬಲ್‌ ಹಾಕಲು ಅನುಮತಿ ನೀಡದ್ದಕ್ಕೆ ಬ್ಲಾಕ್‌ಮೇಲ್‌ ಮಾಡುವ ರೂಪದಲ್ಲಿ ಆರು ದಿನಗಳ ಕಾಲ ವಿದ್ಯುತ್‌ ಕಡಿತ ಮಾಡಲಾಗಿತ್ತು. ಇದರಿಂದ ಜೈವಿಕ ತಂತ್ರಜ್ಞಾನ, ಜೀವ ವಿಜ್ಞಾನ ಸೇರಿದಂತೆ ನಾಲ್ಕೈದು ವಿಭಾಗಗಳಲ್ಲಿ ಸಂಶೋಧನಾ ಚಟು­ವಟಿಕೆಗೆ ಹಿನ್ನಡೆಯಾಗಿದೆ. ವಿವಿ ಅಭಿವೃದ್ಧಿಪಡಿಸಿದ ಅನೇಕ ಪ್ರಭೇದಗಳು ನಾಶ ಹೊಂದಿವೆ’ ಎಂದರು.

ಐದು ಕಾಲೇಜುಗಳ ಮಾನ್ಯತೆ ರದ್ದು: ಸಮರ್ಪಕ ಮೂಲ ಸೌಕರ್ಯ ಇಲ್ಲದ ಐದು ಬಿ.ಇಡಿ ಕಾಲೇಜು­ಗಳ ಮಾನ್ಯತೆಯನ್ನು ರದ್ದುಪಡಿಸಲು ಸಿಂಡಿಕೇಟ್‌ ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಯಿತು.

‘ಸಮರ್ಪಕ ಮೂಲ ಸೌಕರ್ಯ ಇಲ್ಲದ ಕಾರಣ ಹಲವು ಕಾಲೇಜುಗಳಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು. ಈ ಪೈಕಿ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿರುವ ಶ್ರೀನಿಧಿ ಬಿ.ಇಡಿ ಕಾಲೇಜು, ದೊಡ್ಡಬಳ್ಳಾಪುರದ ಲಾವಣ್ಯ ಬಿ.ಇಡಿ ಕಾಲೇಜು, ಅರಸಿನಕುಂಟೆಯ ಜಿ.ಎಂ. ಕಾಲೇಜ್‌ ಆಫ್‌ ಎಜು­ಕೇಶನ್‌ನಿಂದ ಉತ್ತರ ಬಂದಿತ್ತು. ಈ ಕಾಲೇಜುಗಳ ಮೂಲ ಸೌಕರ್ಯ ಪರಿಶೀಲನೆಗೆ ಇನ್ನೊಂದು ಸಮಿತಿ ಕಳುಹಿಸಲಾಗುವುದು’ ಎಂದರು.

‘ಜೆ.ಸಿ. ನಗರದ ಫ್ರಾಂಕ್‌ ಕಾಲೇಜ್‌ ಆಫ್‌ ಎಜು­ಕೇಶನ್‌, ಬಂಗಾರಪೇಟೆಯ ಇಂದಿರಾ ಬಿ.ಇಡಿ ಕಾಲೇಜು, ಬಾಗೇಪಲ್ಲಿಯ ಧರ್ಮ­ಗುರು ಕಾಲೇಜು, ಮಾಗಡಿ ರಸ್ತೆಯ ರಾಜಾ­ರಾಮ್‌ ಮೋಹನ್‌ ರಾಯ್‌ ಕಾಲೇಜು, ಮಡಿ­ವಾಳ ಮಾರುತಿನಗರದ ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಎಜುಕೇಶನ್‌ನ ಆಡಳಿತ ಮಂಡಳಿ­ಯಿಂದ ಶೋಕಾಸ್‌ ನೋಟಿಸ್‌ಗೆ ಉತ್ತರ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಈ ಕಾಲೇಜುಗಳ ಮಾನ್ಯತೆ ರದ್ದುಪಡಿಸ-­ಲಾಗುವುದು’ ಎಂದರು.

‘ಶೋಕಾಸ್‌ ನೋಟಿಸ್‌ ವಿರುದ್ಧ 13 ಕಾಲೇಜು­ಗಳು ಕೋರ್ಟ್ ಮೊರೆ ಹೋಗಿವೆ. ತೀರ್ಪು ಬಂದ ಬಳಿಕ ಈ ಕಾಲೇಜುಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಫೆಬ್ರುವರಿಯಲ್ಲಿ ಸುವರ್ಣ ಮಹೋತ್ಸವ: ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವಕ್ಕೆ ಫೆಬ್ರುವರಿಯಲ್ಲಿ ಚಾಲನೆ ನೀಡಲಾಗುವುದು. ಈ ಸಂಬಂಧ ಹಳೆ ವಿದ್ಯಾರ್ಥಿಗಳ ಸಮಿತಿಯೊಂದನ್ನು ರಚಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

‘ಈ ಸಮಿತಿಯಲ್ಲಿ ವಿವಿಯ ಹಳೆ ವಿದ್ಯಾರ್ಥಿ­ಗಳಾಗಿರುವ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ, ಕೇಂದ್ರ ಸಚಿವ ವೀರಪ್ಪ ಮೊಯಿಲಿ, ಕೇಂದ್ರದ ಮಾಜಿ ಸಚಿವ ಎಸ್‌.ಎಂ. ಕೃಷ್ಣ ಮತ್ತಿತರ  ಪ್ರಮುಖರು ಇರುವರು’ ಎಂದರು.

‘ಸುವರ್ಣ ಮಹೋತ್ಸವದ ನೆನಪಿಗಾಗಿ ಕ್ಯಾಂಪಸ್‌ನಲ್ಲಿ ಸುವರ್ಣ ಭವನ ನಿರ್ಮಿಸಲಾಗು­ವುದು. ಇದಕ್ಕೆ ₨10 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯಲಾಗಿದೆ’ ಎಂದು ಅವರು ವಿವರಿಸಿದರು.

‘ನಾಲ್ಕು ವರ್ಷಗಳ ಪದವಿ: ಕರಡು ಸಿದ್ಧ’
‘ಬೆಂಗಳೂರು ವಿವಿಯಲ್ಲಿ ಮುಂದಿನ ವರ್ಷ­ದಿಂದ ಜಾರಿಗೆ ಬರಲಿರುವ ನಾಲ್ಕು ವರ್ಷಗಳ ಬಿ.ಎಸ್‌. ಕೋರ್ಸ್‌ನ ಕರಡು ಕೆಲವೇ ದಿನಗಳಲ್ಲಿ ಸಿದ್ಧವಾಗಲಿದೆ’ ಎಂದು ಕುಲಪತಿ ಪ್ರೊ.ಬಿ.­ತಿಮ್ಮೇಗೌಡ ತಿಳಿಸಿದರು.

‘ಕರಡು ಸಿದ್ಧಗೊಂಡ ಬಳಿಕ ಎಲ್ಲ ಕಾಲೇಜು­ಗಳ ಪ್ರಾಂಶುಪಾಲರ ಸಭೆ ಕರೆದು ಚರ್ಚಿಸ­ಲಾಗು­ವುದು. ಕೋರ್ಸ್‌ ಬಗ್ಗೆ ಡೀನ್‌ಗಳ ಜತೆ ಈಗಾ­ಗಲೇ ಚರ್ಚಿಸಲಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರೊಂದಿಗೆ ಇನ್ನೊಂದು ಸುತ್ತಿನ ಸಭೆ ನಡೆಸಲಾಗುವುದು. ಬಳಿಕ ಅಕಾಡೆಮಿಕ್‌ ಕೌನ್ಸಿಲ್‌ ಸಭೆಯಲ್ಲಿ ಕರಡು ಮಂಡಿಸಲಾಗು­ವುದು’ ಎಂದರು.

‘ನಾಲ್ಕು ವರ್ಷಗಳ ಬಿ.ಎಸ್‌. ಪದವಿ ಈಗ ದೆಹಲಿಯ ಕೇಂದ್ರೀಯ ವಿವಿಯಲ್ಲಿ ಮಾತ್ರ ಇದೆ. ನಾಲ್ಕು ವರ್ಷಗಳ ಬಿ.ಎಸ್ (ವಿಜ್ಞಾನ) ಭಾರ­ತೀಯ ವಿಜ್ಞಾನ ಸಂಸ್ಥೆಯಲ್ಲಿ ಇದೆ. ಮುಂದಿನ ವರ್ಷದಿಂದ ನಾಲ್ಕೈದು ರಾಜ್ಯಗಳು ಈ ಪದವಿ ಆರಂಭಿಸಲು ಆಸಕ್ತಿ ತೋರಿವೆ. ಬೆಂಗಳೂರು ವಿವಿಯಲ್ಲೂ ಮುಂದಿನ ವರ್ಷ­ದಿಂದ ಈ ಪದವಿ ಆರಂಭಿಸಲಾಗುವುದು’ ಎಂದರು.

‘ವಿದ್ಯಾರ್ಥಿಗಳು ಎರಡು ವರ್ಷ ಕಲಿತು ಡಿಪ್ಲೊಮಾ ಪದವಿ ಪಡೆಯಬಹುದು. ಮೂರು ವರ್ಷ ಶಿಕ್ಷಣ ಪಡೆದು ಪದವಿ ಪಡೆಯ­ಬಹುದು. ನಾಲ್ಕು ವರ್ಷ ವ್ಯಾಸಂಗ ಮಾಡಿದರೆ ಬಿ.ಎಸ್‌. ಪದವಿ ದೊರಕ­ಲಿದೆ. ಬಳಿಕ ಸ್ನಾತ­ಕೋತ್ತರ ವಿಭಾ­ಗ­ದಲ್ಲಿ ಒಂದು ವರ್ಷ ವ್ಯಾಸಂಗ ಮಾಡಿದರೆ ಸ್ನಾತಕೋತ್ತರ ಪದವಿ ದೊರಕಲಿದೆ. ವಿದ್ಯಾರ್ಥಿ­ಗಳು ಸಂಶೋ­ಧನಾ ಚಟುವಟಿಕೆ ಮುಂದುವರಿ­ಸಲು ಸಹ ಈ ಪದವಿಯಲ್ಲಿ ಅನುವು ಮಾಡಿಕೊಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT