ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯನ ಭಾವ ಅರ್ಥ ಮಾಡಿಕೊಳ್ಳುವ ನೂತನ ತಂತ್ರಜ್ಞಾನ

Last Updated 18 ಜುಲೈ 2018, 19:30 IST
ಅಕ್ಷರ ಗಾತ್ರ

ಆಧುನಿಕ ಜೀವನ ಶೈಲಿಯಲ್ಲಿ ಎಲ್ಲರೂ ಸಿಕ್ಕಾಪಟ್ಟೆ ಬ್ಯುಸಿ. ಕೆಲವರಂತೂ ಅವರ ವೈಯಕ್ತಿಕ ಕೆಲಸ ಮಾಡಿಕೊಳ್ಳಲು ಸಾಧ್ಯವಾಗದೆ ಸದಾ ಸಮಯವನ್ನೇ ನಿಂದಿಸುತ್ತಾ, ‘ಸರಿಯಾದ ಸಮಯಕ್ಕೆ ಏನು ಸಿಗೋದಿಲ್ಲ’ ಅಂತ ಗೋಣಗುತ್ತಾ..‘ಈ ಕಾಲವೇ ಮೋಸಗಾರ’ಎಂದು ಹಾಡುತ್ತಿರುತ್ತಾರೆ.

ಹೀಗಿರುವವರಲ್ಲಿ ಕೆಲವರು ಆಪ್ತ ಸಹಾಯಕರನ್ನು ನಿಯೋಜಿಸಿಕೊಳ್ಳುತ್ತಾರೆ. ಅಂಥ ಸಾಮರ್ಥ್ಯವಿಲ್ಲದವರು, ಅಸಹಾಯಕತೆಯಿಂದ ಗೊಣಗುವಿಕೆ ಮುಂದುವರಿಸಿರುತ್ತಾರೆ.ಇಂಥ ಕೆಲಸಗಳಿಗೆ ಸಹಾಯಕನ ಬದಲಿಗೆ, ಆಪ್ತ ಸಹಾಯಕನಂತೆ ಕಾರ್ಯನಿರ್ವಹಿಸುವ ಒಂದು ತಂತ್ರಜ್ಞಾನವಿದ್ದರೇ ಎಷ್ಟು ಚೆನ್ನಾಗಿರುತ್ತದೆ, ಅಲ್ವಾ ?

ನಿಜ, ಈ ಪ್ರಶ್ನೆಗೆ ಉತ್ತರವಾಗಿ ಗೂಗಲ್‌ ಸಂಸ್ಥೆ ಒಂದು ನವೀನ ತಂತ್ರಜ್ಞಾನವನ್ನು ಈ ವರ್ಷದ ಮೇ ತಿಂಗಳಿನಲ್ಲಿ ಪರಿಚಯಿಸಿದೆ. ಅದೇ ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌) ತಂತ್ರಜ್ಞಾನಕ್ಕೆ ‘ಗೂಗಲ್‌ ಡುಪ್ಲೆಕ್ಸ್‌’ ಎಂದು ಹೆಸರಿಟ್ಟಿದೆ.

ಈ ತಂತ್ರಾಂಶ ಗೂಗಲ್‌ ಅಸಿಸ್ಟೆಂಟ್‌ನ ಸುಧಾರಿತ ಭಾಗ. ‘ಅಸಿಸ್ಟೆಂಟ್‌’ನಲ್ಲಿರುವ ಎಲ್ಲ ಆಯ್ಕೆಗಳು ಇದರಲ್ಲಿ ಇರುತ್ತವೆ. ಮೊಬೈಲ್‌ ಫೋನಿನಲ್ಲಿ ಈ ಆ್ಯಪ್‌ ಇದ್ದರೆ ಸಾಕು. ನೀವು ಯಾರಿಗೆ ಕರೆ ಮಾಡಿ ಅಂತ ಹೇಳುತ್ತಿರೋ ಅವರಿಗೆ ಕ್ಷಣ ಮಾತ್ರದಲ್ಲೇ ಕಾಲ್ ಹೋಗುತ್ತೆ. ‘ಹೀಗೆ ಮೆಸೇಜ್‌ ಮಾಡು’ ಎಂದೊಡನೆ ಸ್ವಯಂ ಚಾಲಿತವಾಗಿ ಮೆಸೇಜ್‌ ಟೈಪಿಸಿ ರವಾನಿಸುತ್ತದೆ. ನಾವಿರುವ ಜಾಗದಿಂದ ಎಲ್ಲಾದರೂ ಹೋಗಬೇಕಾದ್ದಲ್ಲಿ, ಯಾವ ಯಾವ ಮಾರ್ಗದಿಂದ ಹೋಗಬಹುದೆಂಬ ಮಾಹಿತಿ ನೀಡುತ್ತದೆ.

‘ಅಸಿಸ್ಟೆಂಟ್‌ ಆ್ಯಪ್‌’ ಒಬ್ಬ ಸ್ನೇಹಿತನಂತೆ ಅಥವಾ ಮನುಷ್ಯನಂತೆ ವರ್ತಿಸುವುದಿಲ್ಲ. ಆದರೆ, ಡುಪ್ಲೆಕ್ಸ್‌ ಮನುಷ್ಯನ ಭಾವನೆ ಅರ್ಥ ಮಾಡಿಕೊಳ್ಳುತ್ತದೆ. ಬಳಕೆದಾರರ ನಿರ್ದೇಶನದ ಮೇರೆಗೆ ಇತರರಿಗೂ ಕರೆ ಮಾಡಿ ಮಾತನಾಡುವುದು ಇದರ ವಿಶೇಷ.

ಒಬ್ಬ ಆಪ್ತ ಸಹಾಯಕ ರೀತಿ ಕಾರ್ಯನಿರ್ವಹಿಸುವ ಡುಪ್ಲೆಕ್ಸ್‌, ನಿಮ್ಮ ಪರವಾಗಿ ಹೋಟೆಲ್‌ಗೋ, ಸಲೂನ್‌ಗೋ ಕರೆ ಮಾಡಿ ಅಪಾಯಿಂಟ್ಮೆಂಟ್‌ ನಿಗದಿಪಡಿಸುತ್ತದೆ. ಡುಪ್ಲೆಕ್ಸ್‌ ಕರೆ ಮಾಡಿದಾಗ ಇದೊಂದು ಕೃತಕ ತಂತ್ರಜ್ಞಾನ ಎಂದು ಯಾರಿಗೂ ಅನುಮಾನ ಬರುವುದಿಲ್ಲ. ಏಕೆಂದರೆ; ಒಬ್ಬ ಮನುಷ್ಯ ಹೇಗೆ ಮಾತನಾಡುತ್ತಾನೋ ಅದೇ ರೀತಿ ಅದೇ ಸ್ವರದಲ್ಲಿ ಡುಪ್ಲೆಕ್ಸ್‌ ಮಾತನಾಡುತ್ತದೆ!

ಮನುಷ್ಯನಂತೆಯೇ ಮಾತನಾಡುವ ಈ ತಂತ್ರಜ್ಞಾನ ಗ್ರಾಹಕರು ಕೋಪದಿಂದ ಇದ್ದರೆ ಅಥವಾ ಅಸಮಾಧಾನಗೊಂಡಿದ್ದರೆ ಅವರನ್ನು ಅರ್ಥ ಮಾಡಿಕೊಂಡು ಮನಸ್ಸಿಗೆ ಘಾಸಿಯಾಗದ ರೀತಿಯಲ್ಲಿ ಉತ್ತರ ನೀಡುತ್ತದೆ. ವಿಶ್ವದ ಬೃಹತ್‌ ಕಾರ್ಪೊರೇಟ್‌ ಸಂಸ್ಥೆಯವರು ಇದನ್ನು ಕಾಲ್‌ ಸೆಂಟರ್ ಉದ್ದಿಮೆಗೆ ತರಲು ದೊಡ್ಡ ತಯಾರಿ ನಡೆಸುತ್ತಿದ್ದಾರೆ ಎನ್ನುವ ಅಂಶ ಸದ್ಯಕ್ಕೆ ವೈರಲ್‌ ಆಗಿದೆ.

ಒಂದೊಮ್ಮೆ ಡುಪ್ಲೆಕ್ಸ್‌ ತಂತ್ರಜ್ಞಾನ ಕಾಲ್‌ಸೆಂಟರ್‌ ಕ್ಷೇತ್ರಕ್ಕೆ ಕಾಲಿಟ್ಟರೆ ಲಕ್ಷಾಂತರ ಉದ್ಯೋಗಿಗಳ ಕೆಲಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಆಂತಕದ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪರ–ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದಕ್ಕೆಲ್ಲಾ ಕಾರಣ 2022ರ ವೇಳೆ ಕಾಲ್‌ ಸೆಂಟರ್‌ ಉದ್ಯಮ 22 ದಶಲಕ್ಷ ಡಾಲರ್‌ನಷ್ಟು ಬೃಹತ್‌ ಆಗಿ ಬೆಳೆಯಲಿದೆ. ಈ ಕ್ಷೇತ್ರದಲ್ಲಿ ಮತ್ತಷ್ಟು ಲಾಭ ಪಡೆಯಲು ಡುಪ್ಲೆಕ್ಸ್‌ನಂತಹ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅಮೆಜಾನ್‌, ಐಬಿಎಂ, ಮೈಕೋಸಾಫ್ಟ್‌, ಸಿಸ್ಕೋದಂತಹ ಬೃಹತ್‌ ಕಂಪನಿಗಳು ತುದಿಗಾಲಲ್ಲಿ ನಿಂತಿವೆ.

ಮನುಷ್ಯನಿಗೆ ಪರ್ಯಾಯವಾಗಿ ಈ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಉಪಯೋಗಿಸಲು ಸಾಧ್ಯವಾಗದಿದ್ದರೂ, ಪದೇ ಪದೇ ಗ್ರಾಹಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಬಳಸಿಕೊಳ್ಳಬಹುದೆಂಬ ಲೆಕ್ಕಾಚಾರದಲ್ಲಿ ತೊಡಗಿವೆ ಕಾರ್ಪೊರೇಟ್‌ ಕಂಪನಿಗಳು.

‘ಪ್ರಸ್ತುತ ಗೂಗಲ್‌ ಡುಪ್ಲೆಕ್ಸ್‌ ತಂತ್ರಜ್ಞಾನವನ್ನು ಬಳಕೆದಾರರು ಯಾವ ರೀತಿ ಉಪಯೋಗಿಸಬಹುದು ಎಂಬ ಅಂಶವನ್ನು ಪರೀಕ್ಷೆ ಮಾಡುತ್ತಿದ್ದೇವೆ. ಅದರ ಸಾಧಕ ಬಾಧಕ ಪರಿಶೀಲನಾ ಹಂತದಲ್ಲಿ ಇದೆ. ಇದನ್ನು ಇತರ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳುವಂತಹ ಯೋಜನೆ ಕಂಪನಿ ಬಳಿ ಇಲ್ಲ. ಆದರೆ, ಭವಿಷ್ಯದಲ್ಲಿ ವಾಣಿಜ್ಯ ಉದ್ದೇಶಗಳಿಗೂ ಉಪಯೋಗಿಸಿಕೊಳ್ಳಬಹುದು. ಈ ಬಗ್ಗೆ ಸ್ಪಷ್ಟತೆ ಇಲ್ಲ’ ಎಂದು ಗೂಗಲ್‌ನ ವಕ್ತಾರರು ತಿಳಿಸಿದ್ದಾರೆ ಎಂದು ‘ದಿ ಇನ್ಫರ್ಮೇಷನ್’ ಸಂಸ್ಥೆ ವರದಿ ಮಾಡಿದೆ.

ವಿವಾದಕ್ಕೀಡಾಗಿದ್ದ ಡುಪ್ಲೆಕ್ಸ್‌
ಮೇನಲ್ಲಿ ನಡೆದ 2018ರ ಗೂಗಲ್‌ ಐಒ ಡೆವಲಪರ್ಸ್‌ ಕಾನ್ಫರೆನ್ಸ್‌ನಲ್ಲಿ ‘ಗೂಗಲ್‌ ಡುಪ್ಲೆಕ್ಸ್‌’ ಪರಿಚಯವಾದ ಕೆಲವೇ ದಿನಗಳಲ್ಲಿ, ಸಾಕಷ್ಟು ವಿವಾದಕ್ಕೀಡಾಗಿತ್ತು. ಮನುಷ್ಯನಂತೆಯೇ ಮಾತನಾಡುವ ಈ ತಂತ್ರಜ್ಞಾನದಿಂದ ಭವಿಷ್ಯದಲ್ಲಿ ಅಪಾಯವಿದೆ ಎಂದು ತಂತ್ರಜ್ಞಾನ ತಜ್ಞರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮಾಲೀಕನ ಪರವಾಗಿ ಕರೆ ಮಾಡುವ ಈ ತಂತ್ರಾಂಶದಿಂದ ವಂಚಿಸುವುದಿಲ್ಲ ಎಂಬುದಕ್ಕೆ ಖಾತರಿ ಏನು ಎಂದು ಪ್ರಶ್ನಸಿದ್ದರು.

ಇದನ್ನು ಸರಿಪಡಿಸುವ ದೃಷ್ಟಿಯಿಂದ ಪ್ರತಿಬಾರಿ ಡುಪ್ಲೆಕ್ಸ್‌ ಕರೆ ಮಾಡಿದಾಗಲು ‘ನಾನು ಗೂಗಲ್‌ ಡುಪ್ಲೆಕ್ಸ್‌ ನನ್ನ ಮಾಲೀಕನ ಪರವಾಗಿ ನಿಮ್ಮೊಂದಿಗೆ ಮಾತನಾಡುತ್ತಿದ್ದೀನಿ’ ಎಂದು ಹೇಳುತ್ತದೆಂದು ಗೂಗಲ್‌ ವಿವರಣೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT