ಪೌರಕಾರ್ಮಿಕರು ನಗರದ ಸ್ವಚ್ಛತಾ ಸೈನಿಕರು: ಮೇಯರ್

7

ಪೌರಕಾರ್ಮಿಕರು ನಗರದ ಸ್ವಚ್ಛತಾ ಸೈನಿಕರು: ಮೇಯರ್

Published:
Updated:
Prajavani

ಬೆಂಗಳೂರು: ಪೌರಕಾರ್ಮಿಕರು ನಿಜವಾದ ಅರ್ಥದಲ್ಲಿ ನಗರದ ಸ್ವಚ್ಛತಾ ಸೈನಿಕರು ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಬಣ್ಣಿಸಿದರು.

ಕೆಂಗೇರಿ ಉಪನಗರದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ರಾಜರಾಜೇಶ್ವರಿ ನಗರ ವಲಯದ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛತಾ ಅಭಿಯಾನ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೌರಕಾರ್ಮಿಕರು ಕಸ ಸಂಗ್ರಹಣೆ ಮಾಡುವುದರೊಂದಿಗೆ ಜನರಲ್ಲಿ ಅರಿವು ಮೂಡಿಸುವ ನೈತಿಕ ಹೊಣೆಗಾರಿಕೆ ಹೊತ್ತರೆ ಕಸದ ಸಮಸ್ಯೆ ಪರಿಹಾರಕ್ಕೆ ಮತ್ತಷ್ಟು ವೇಗ ದೊರಕಲಿದೆ ಎಂದರು.

‘ಪ್ರೀತಿಯಿಂದ ಹಣ ನೀಡಿದರೆ ಹಣ ಸ್ವೀಕರಿಸಿ. ಒತ್ತಾಯ ಮಾಡಿ ಪಡೆದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಕಾರ್ಮಿಕರಿಗೆ ಎಚ್ಚರಿಕೆ ನೀಡಿದರು.

ನಗರವನ್ನು ಸುಂದರವಾಗಿಡಬೇಕೆಂಬ ನೈತಿಕ ಜವಾಬ್ದಾರಿ ಜನರಲ್ಲೇ ಮೂಡಬೇಕು. ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿರುವ ವಲಸಿಗರಲ್ಲೂ ಇದು ನನ್ನ ಊರು ಎಂಬ ಭಾವನೆ ಮೂಡಬೇಕು. ಆಗ ಮಾತ್ರ ತ್ಯಾಜ್ಯ ಸಮಸ್ಯೆಗೆ ಪರಿಹಾರ ದೊರಕುತ್ತದೆ ಎಂದು ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಉಪನಿರ್ದೇಶಕಿ ಡಾ.ಟಿ.ಸಿ ಪೂರ್ಣಿಮಾ ತಿಳಿಸಿದರು. ಪುನರ್ ಬಳಕೆ ಹಾಗೂ ಮರುಬಳಕೆ ಪದ್ಧತಿಯಿಂದ ಕಸದ ಸಮಸ್ಯೆಗೆ ಕೊಂಚ ಮಟ್ಟಿಗೆ ಇತಿಶ್ರೀ ಹಾಡಬಹುದು ಎಂದು ಹೇಳಿದರು.

ಬೆಂಗಳೂರು ಸ್ವಚ್ಛತಾ ರ‍್ಯಾಂಕ್‌ ಪಟ್ಟಿಯಲ್ಲಿ ಬೆಂಗಳೂರು 216ನೇ ಸ್ಥಾನ ಪಡೆದಿದೆ. ಪ್ರಸಕ್ತ ಸಾಲಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಪಟ್ಟಿಯಲ್ಲಿ ಹತ್ತರ ಒಳಗಿನ ಸ್ಥಾನವನ್ನು ಪಡೆಯಲಿದ್ದೇವೆ ಎಂದು ರಾಜರಾಜೇಶ್ವರಿನಗರ ವಲಯ ಜಂಟಿ ಆಯುಕ್ತ ಎಚ್.ಬಾಲಶೇಖರ್ ಭರವಸೆ ವ್ಯಕ್ತಪಡಿಸಿದರು.

ಕಾರ್ಮಿಕರಿಗೆ ನಿಯಮಿತವಾಗಿ ವೈದ್ಯಕೀಯ ಶಿಬಿರ ಆಯೋಜಿಸಬೇಕು ಎಂದು ಬಿಬಿಎಂಪಿ ಸದಸ್ಯ ವಿ.ವಿ.ಸತ್ಯನಾರಾಯಣ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !