ವಿಜಯಪುರ ಜಿಲ್ಲೆಯ ಬಾಗೇವಾಡಿ ಬಯಲು ಬಹಿರ್ದೆಸೆ ಮುಕ್ತ

7

ವಿಜಯಪುರ ಜಿಲ್ಲೆಯ ಬಾಗೇವಾಡಿ ಬಯಲು ಬಹಿರ್ದೆಸೆ ಮುಕ್ತ

Published:
Updated:
Deccan Herald

ಬಸವನಬಾಗೇವಾಡಿ: ಬಸವ ಜನ್ಮಭೂಮಿ ಬಸವನಬಾಗೇವಾಡಿ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನದಂದು ಬಯಲು ಬಹಿರ್ದೆಸೆ ಮುಕ್ತ ತಾಲ್ಲೂಕಾಗಿ ಹೊರಹೊಮ್ಮಲಿದೆ.

ವಿಜಯಪುರ ಜಿಲ್ಲೆಯ ಹಾಲಿ 12 ತಾಲ್ಲೂಕುಗಳ ಪಟ್ಟಿಯಲ್ಲಿ ತನ್ನೊಡಲಲ್ಲಿ ಮೂರು ತಾಲ್ಲೂಕುಗಳನ್ನಿಟ್ಟುಕೊಂಡಿರುವ, ಬಾಗೇವಾಡಿ ಜಿಲ್ಲೆಯ ಮೊದಲ ಬಯಲು ಬಹಿರ್ದೆಸೆ ಮುಕ್ತ ತಾಲ್ಲೂಕಾಗಿ ಹೊರ ಹೊಮ್ಮಿರುವುದು ವಿಶೇಷ.

ಜಿಲ್ಲಾ ಪಂಚಾಯ್ತಿ ಆಡಳಿತದ ಮಾರ್ಗದರ್ಶನದೊಂದಿಗೆ, ಅವಿರತವಾಗಿ ಶ್ರಮಿಸಿದ ತಾಲ್ಲೂಕು ಪಂಚಾಯ್ತಿ ಆಡಳಿತ ತಾಲ್ಲೂಕಿನ ಜನರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಎಲ್ಲೆಡೆ ವೈಯಕ್ತಿಕ ಶೌಚಾಲಯ, ಸಾಮೂಹಿಕ ಶೌಚಾಲಯಗಳನ್ನು ನಿಗದಿತ ಅವಧಿಯೊಳಗೆ ಕಟ್ಟಿ ಪೂರ್ಣಗೊಳಿಸಿದೆ. ಇದೀಗ ಈ ಶೌಚಾಲಯಗಳನ್ನು ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಜತೆಗೆ ಜನರ ಮನವೊಲಿಸುವ ಕಾರ್ಯವನ್ನು ಮಾಡಬೇಕಿದೆ.

‘ತಾಲ್ಲೂಕಿನಲ್ಲಿ ಶೇ 99.99ರಷ್ಟು ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಗುರಿ ಸಾಧಿಸಲಾಗಿದೆ. 2012ರ ಬೇಸ್‌ಲೈನ್‌ ಸಮೀಕ್ಷೆ ಪ್ರಕಾರ ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲ್ಲೂಕಿನಲ್ಲಿ 44,498 ಕುಟುಂಬಗಳಿದ್ದವು. ಇವುಗಳಲ್ಲಿ ಈಗಾಗಲೇ 44,492 ಕುಟುಂಬಗಳು ಶೌಚಾಲಯ ಹೊಂದಿವೆ. ಇನ್ನುಳಿದ ಆರು ಕುಟುಂಬಗಳು ಸಹ ಶೌಚಾಲಯ ಹೊಂದಿವೆ. ಆದರೆ ತಾಂತ್ರಿಕ ಕಾರಣದಿಂದ ಇವನ್ನು ದಾಖಲಿಸಿಲ್ಲ. ಶೀಘ್ರದಲ್ಲೇ ದಾಖಲಿಸುವ ಪ್ರಕ್ರಿಯೆ ನಡೆಯಲಿದೆ’ ಎಂದು ತಾಲ್ಲೂಕು ಪಂಚಾಯ್ತಿ ಕಚೇರಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಕೆಲ ಗ್ರಾಮದಲ್ಲಿ ಬಯಲು ಬಹಿರ್ದೆಸೆ ಇಂದಿಗೂ ನಡೆದಿದೆ ಎಂಬ ಮಾಹಿತಿಯಿದೆ. ನಾವು 2012ರ ಸಮೀಕ್ಷೆ ಪ್ರಕಾರ ಗುರಿ ಸಾಧನೆ ಮಾಡಿದ್ದೇವೆ. ಇನ್ನುಳಿದ ಕುಟುಂಬಗಳ ಮಾಹಿತಿ ಸಂಗ್ರಹಣೆ ಭರದಿಂದ ಸಾಗಿದೆ. ಮಾಹಿತಿ ಸಂಗ್ರಹಿಸಿದ ತಕ್ಷಣ, ಆ ಮನೆಗಳಿಗೂ ವೈಯಕ್ತಿಕ ಶೌಚಾಲಯ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಸಿ.ಬಿ.ಮೇಗೇರಿ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !