ಭಾರತೀಯ ಸಂಸ್ಕೃತಿ ಉತ್ಸವ-5 ಯಶಸ್ವಿಗೊಳಿಸಿ: ಶಂಕರಗೌಡ ಪಾಟೀಲ

7

ಭಾರತೀಯ ಸಂಸ್ಕೃತಿ ಉತ್ಸವ-5 ಯಶಸ್ವಿಗೊಳಿಸಿ: ಶಂಕರಗೌಡ ಪಾಟೀಲ

Published:
Updated:

ಇಂಡಿ: ‘ಜಿಲ್ಲೆಯ ಕಗ್ಗೋಡ ಗ್ರಾಮದಲ್ಲಿ ಇದೇ 24ರಿಂದ ಭಾರತ ವಿಕಾಸ ಸಂಗಮ ವತಿಯಿಂದ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವವನ್ನು ವೀಕ್ಷಿಸಲು, ಇಂಡಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯ ಜನ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು’ ಎಂದು ಬಿಜೆಪಿ ಜಿಲ್ಲಾ ಮುಖಂಡ ಶಂಕರಗೌಡ ಪಾಟೀಲ ಡೊಮನಾಳ ಮನವಿ ಮಾಡಿದರು.

‘ಉತ್ಸವದಲ್ಲಿ ದೇಸಿ ಸೊಗಡು ಸವಿಯಲು ಒಳ್ಳೆಯ ಅವಕಾಶವಿದೆ. ಭಾರತ ವಿಕಾಸ ಸಂಗಮವು ದೇಶದ ಸಂಸ್ಕೃತಿಯನ್ನು ಪರಿಚಯಿಸುವ ಸದುದ್ದೇಶ ಹೊಂದಿದೆ. ಇಂದಿನ ಯುವ ಜನಾಂಗ ವಿದೇಶಿ ಆಚರಣೆಗೆ ಬಲಿಯಾಗಿ ಭಾರತದ ಸಂಸ್ಕೃತಿ ಹಾಳು ಮಾಡುತ್ತಿದ್ದಾರಲ್ಲದೆ, ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ಬಿಟ್ಟು ದೇಶಿ ಸಂಸ್ಕೃತಿ ಅಳವಡಿಸಿಕೊಳ್ಳಲು, ಈ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದು ಬುಧವಾರ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಉತ್ಸವದಲ್ಲಿ ಮೂರು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಒಟ್ಟು ಏಳು ದಿನ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿ ದಿನ ಒಂದೊಂದು ಸಂಸ್ಕೃತಿಯ ಅನಾವರಣ ನಡೆಯಲಿದೆ. 24ರಂದು ಉದ್ಘಾಟನೆ ಹಾಗೂ ಶೋಭಾಯಾತ್ರೆ, ಮಾತೃದೇವೋಭವ ಎನ್ನುವಂತೆ, ನಮ್ಮ ದೇಶದಲ್ಲಿ ತಾಯಂದಿರಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಅದಕ್ಕೆ ಸಂಬಂಧಿಸಿದಂತೆ, 25ರಂದು ಮಾತೃ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಅಂದು ಹತ್ತು ವರ್ಷದೊಳಗಿನ ಒಂದು ಲಕ್ಷ ಮಕ್ಕಳಿಗೆ ತಾಯಂದಿರಿಂದ ಕೈ ತುತ್ತಿನ ಊಟ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮ ಕಣ್ಣು ತುಂಬಿಕೊಳ್ಳಲು ಸುಮಾರು 5 ಲಕ್ಷ ಜನ ಬರಲಿದ್ದಾರೆ. 26ರಂದು ಜ್ಞಾನ ಸಂಗಮ, ಅದರಂತೆ ರೈತರಿಗೆ ಉಪಯೋಗವಾಗಲೆಂದು 27ರಂದು ಒಂದು ದಿನ ಕೃಷಿ ಸಂಗಮ, 28ರಂದು ಹಾಳಾಗುತ್ತಿರುವ ಯುವ ಜನಾಂಗವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಯುವ ಸಂಗಮ, 29ಕ್ಕೆ ಅಣ್ಣ ಬಸವಣ್ಣನವರ ನಾಣ್ಣುಡಿಯಂತೆ ಕಾಯಕ ಮತ್ತು ಆರೋಗ್ಯ ಸಂಗಮ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಡಿ. 30ರಂದು ಗ್ರಾಮಗಳ ಕುರಿತು ಜಾಗೃತಿ ಮೂಡಿಸಲು ಗ್ರಾಮ ಸಂಗಮ ಸೇರಿದಂತೆ ವಿವಿಧ ಕಾರ್ಯಕ್ರಮ ಹಾಗೂ 31ರಂದು ನಮ್ಮ ಧರ್ಮ ಮತ್ತು ಸಂಸ್ಕೃತಿ ಅನಾವರಣದ ಬಗ್ಗೆ ತಿಳಿಸಲು ಧರ್ಮ ಮತ್ತು ಸಂಸ್ಕೃತಿ ಸಂಗಮ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಬರುವ ನಿರೀಕ್ಷೆ ಇದ್ದು, ಸಮಾರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ. 8 ದಿನಗಳ ಕಾರ್ಯಕ್ರಮದ ನೇತೃತ್ವನ್ನು ಸಿದ್ಧೇಶ್ವರ ಶ್ರೀ ವಹಿಸಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ವೆಂಕಟೇಶ ಕುಲಕರ್ಣಿ ಮತ್ತು ರಾಮಸಿಂಗ್ ಕನ್ನೊಳ್ಳಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !