ಸೋಮವಾರ, ಮಾರ್ಚ್ 30, 2020
19 °C

‘ದಿ ಲಾಸ್ಟ್ ಬಾಸ್ಟ್’ ಆಹಾರ ಉತ್ಸವ

ಶಶಿಕುಮಾರ್ ಸಿ. Updated:

ಅಕ್ಷರ ಗಾತ್ರ : | |

Prajavani

ಲಿಡೊ ಮಾಲ್‌ ಬಳಿ ಇರುವ ‘ಬಾರ್ಬೆಕ್ಯೂ ನೇಷನ್‌’ ಹೋಟೆಲ್‌ನಲ್ಲಿ ವಿವಿಧ ಖಾದ್ಯಗಳ ‘ದಿ ಲಾಸ್ಟ್‌ ಬ್ಲಾಸ್ಟ್’ ಆಹಾರ ಮೇಳ ಆರಂಭವಾಗಿದ್ದು ಜನವರಿ 6ರ ವರೆಗೆ ನಡೆಯಲಿದೆ. ಸಸ್ಯಾಹಾರಿಗಳಿಗೆ ಹಾಗೂ ಮಾಂಸಾಹಾರಿಗಳಿಗೆ ಇಷ್ಟವಾಗುವ ವಿವಿಧ ಖಾದ್ಯಗಳನ್ನು ಇಲ್ಲಿ ಪರಿಚಯಿಸಲಾಗಿದೆ.

ಹೋಟೆಲ್‌ಗೆ ಕಾಲಿಟ್ಟೊಡನೆ ಸಾಂತಾ ಕ್ಲಾಸ್ ವೇಷ ತೊಟ್ಟ ಸಿಬ್ಬಂದಿಯ ಆತ್ಮೀಯ ಸ್ವಾಗತ, ಕ್ರಿಸ್‌ಮಸ್ ಪ್ರಯುಕ್ತ ಮಾಡಿದ್ದ ವಿವಿಧ ಅಲಂಕಾರ ಮನಸಿಗೆ ಇಷ್ಟವಾಗುತ್ತದೆ. ಕಾಂಬೊಗೆ ‘ಬಾರ್ಬೆಕ್ಯೂ ನೇಷನ್ಸ್’ ಪ್ರಸಿದ್ಧಿ. ಹೋಟೆಲ್‌ನಲ್ಲಿ ಲಭ್ಯವಾಗುವ ಬಹುತೇಕ ಖಾದ್ಯಗಳನ್ನು ನಾಲಿಗೆಗೆ ಪರಿಚಯಿಸಲು ಕಾಂಬೊ ಸೂಕ್ತವಾದದ್ದು. ಟೇಬಲ್ ಮೇಲೆ ಕೂತರೆ, ತರಹೇವಾರಿ ಸ್ಟಾರ್ಟರ್‌ಗಳು ತಟ್ಟೆಗೆ ಬಂದು ಬೀಳುತ್ತವೆ.

ಸ್ಟಾರ್ಟರ್‌ಗಳನ್ನು ಬಿಸಿ ಬಿಸಿಯಾಗಿಯೇ ಸವಿಯಲೆಂದು ಟೇಬಲ್ ಮಧ್ಯದಲ್ಲಿ ಕೆಂಡದ ಕುಂಡ ಇಡಲಾಗುತ್ತದೆ. ಇದು ಹೋಟೆಲ್‌ನ ಯುನಿಕ್ ಸ್ಟೈಲ್ ಎಂದೇ ಹೇಳಬಹುದು. ಕಬ್ಬಿಣ ಸರಳಿನಲ್ಲಿ ಸಿಲುಕಿ ಬೆಂಕಿಯಲ್ಲಿ ಸುಟ್ಟಿದ್ದ ತಂದೂರಿ ಪನೀರ್ ಟಿಕ್ಕಾ ಹಾಗೂ ಚೀಸ್ ಮಶ್ರೂಮ್  ಸ್ಟಾರ್ಟರ್‌ಗಳಾಗಿ ಕೆಂಡದ ಕುಂಡದ ಮೇಲೆ ಬಿಸಿಯಾಗುತ್ತಿದ್ದವು. ಕೆಂಡದ ಬಿಸಿಯು ಪನೀರ್ ಹಾಗೂ ಮಶ್ರೂಮ್ ತುಂಡುಗಳಿಗೆ ತಾಗುತ್ತಿತ್ತು.

ಬಾಯಿಗೆ ಬಂದ ತಂದೂರಿ ಪನೀರ್, ನಾಲಿಗೆ ಸುಡುವಷ್ಟು ಬಿಸಿಯಿತ್ತು. ಬೇಕಿದ್ದಷ್ಟು ಉಪ್ಪುಖಾರ ಹಾಗೂ ಮಸಾಲೆ ಪದಾರ್ಥಗಳೊಂದಿಗೆ ಮಿಂದೆದ್ದಿದ್ದ ಪನೀರ್ ಹದವಾಗಿ ಬೆಂದಿತ್ತು. ನಾಲಿಗೆಗೆ ಹಿತವಾದ ಅನುಭವ ನೀಡಿತು. ಕೊಡೆಯಾಕಾರದ ಮಶ್ರೂಮ್ ತುಂಡಿನ ಒಳಗೆ ಇಟ್ಟಿದ್ದ ಹೂರಣವೂ ಸ್ವಾದಿಷ್ಟಕರವಾಗಿತ್ತು. ‌

ಅವಿಷ್ಟನ್ನು ತಿಂದು ಮುಗಿಸುವಷ್ಟರಲ್ಲಿ ತಟ್ಟೆಗೆ ಬಂದದ್ದು ಸುರಳಿಯಾಕಾರದ ಕಾಶ್ಮೀರಿ ಮಟನ್ ಶೀಕ್. ಮೂಳೆ ರಹಿತ ಮಾಂಸವನ್ನು ಚೆನ್ನಾಗಿ ಕೈಮಾ ಮಾಡಿ, ಅದಕ್ಕೆ ಉಪ್ಪು ಹುಳಿ ಖಾರ ಹಾಗೂ ಮಸಾಲೆ ಪದಾರ್ಥಗಳನ್ನು ಹದವಾಗಿ ಬೆರೆಸಿ ದಮ್ ಕಟ್ಟಲಾಗಿತ್ತು. ಆ ಮಿಶ್ರಣವನ್ನು ಸುರುಳಿ ಆಕಾರಕ್ಕೆ ತಂದು ಕಬ್ಬಿಣದ ಸರಳಿನಲ್ಲಿ ಸಿಲುಕಿಸಿ, ಎಣ್ಣೆಯಲ್ಲಿ ಕರೆಯಲಾಗಿತ್ತು. ಅದನ್ನು ಬಾಯಿಗಿಟ್ಟೊಡನೆ ಹೆಚ್ಚು ಶ್ರಮ ಪಡದೆ ಸಲೀಸಾಗಿ ಒಳಸೇರುತ್ತಿತ್ತು.

ಸುಟ್ಟಿದ್ದ ರೋಗನಿ ತಂಗಡಿ (ಚಿಕನ್ ಲೆಗ್‌ಪೀಸ್) ಬಾಯಲ್ಲಿ ನೀರೂರಿಸುತ್ತಿತ್ತು. ಒಂದರ ಹಿಂದೆ ಒಂದರಂತೆ ವಿವಿಧ ಸ್ಟಾರ್ಟರ್‌ಗಳು ತಟ್ಟೆಗೆ ಬರುತ್ತಿದ್ದವು. ಅವುಗಳಲ್ಲಿ ಹಿತವೆನಿಸಿದ್ದು, ಎಣ್ಣೆಯಲ್ಲಿ ಕರೆದಿದ್ದ ಜೋಳದ ಕಾಳುಗಳು ರುಚಿಯು ಬಲು ಚೆನ್ನಾಗಿತ್ತು.

ಖಾರ ತಿಂದ ನಾಲಿಗೆಗೆ ಸಿಹಿಯ ಹಿತ ಬೇಕಲ್ಲವೇ. ಅದಕ್ಕಾಗಿಯೇ ವಿಶೇಷವಾಗಿ ‘ಗಜರ್ ಕಾ ಡಿಲೈಟ್’ (ವಿಶೇಷ ಹಲ್ವಾ) ತಯಾರಿಸಲಾಗಿತ್ತು. ಬಿಸಿ ಬಿಸಿ ಇದ್ದ ಅದು ಅದ್ಭುತ ರುಚಿ ನೀಡಿತು. ಹೋಟೆಲ್‌ಗೆ ಎಂಟ್ರಿ ಕೊಟ್ಟಾಗಿನಿಂದಲೂ ಪಾಶ್ಚಿಮಾತ್ಯ ಸಂಗೀತ ಸೊಗಸಾಗಿ ಕಿವಿಗಿಂಪು ನೀಡುತ್ತಿತ್ತು. ಅದರ ಜೊತೆಗೆ ಸಾಂತಾ ಕ್ಲಾಸ್ ವೇಷಧಾರಿ ಹೋಟೆಲ್‌ನ ಪ್ರತಿಯೊಬ್ಬ ಗ್ರಾಹಕನ ಬಳಿಗೆ ಹೋಗಿ ಕ್ರಿಸ್‌ಮಸ್ ಶುಭಕೋರುತ್ತಿದ್ದದ್ದು ವಿಶೇಷವಾಗಿತ್ತು. ಕೆಲವರು ಸಾಂತಾನೊಡನೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

‘ಬಾರ್ಬೆಕ್ಯೂ ನೇಷನ್ಸ್‌’ನ ಎಲ್ಲ ಶಾಖೆಗಳಲ್ಲೂ ಈ ಆಹಾರ ಮೇಳ ನಡೆಯುತ್ತಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ವಿಶೇಷ ತಿನಿಸುಗಳು ಇಲ್ಲಿ ಲಭ್ಯ’ ಎಂದು ಹೋಟೆಲ್‌ನ ಮ್ಯಾನೇಜರ್ ಕೃಷ್ಣ ಮಾಹಿತಿ ನೀಡಿದರು.

ವಿಶೇಷ ಖಾದ್ಯಗಳು

ಆಲ್ಕೋಹಾಲ್ ರಹಿತ ಪಾನೀಯಗಳು, ಹರಿಯಾಲಿ ಕುಂಬ್, ಪೈನಾಪಲ್ ಚಾಟ್, ಕಜುನ್ ಸ್ಪೈಸ್ ಬೇಬಿ ಪೊಟಾಟೊ, ಪಂಜಾಬಿ ಪನೀರ್ ಟಿಕ್ಕಾ. ಮಾಂಸಾಹಾರದಲ್ಲಿ ಖಡಕ್ ಶೀಕ್, ಚಿಲ್ಲಿ ಗಾರ್ಲಿಕ್ ಪ್ರಾವ್‌ನ್ಸ್ (ಸೀಗಡಿ), ಅಜ್ವೈನಿ ಫಿಶ್ ಟಿಕ್ಕಾ, ಮುರ್ಗ್ ಬೋಟಿ, ರೋಗನಿ ತಂಗಡಿ, ಟರ್ಕಿ ವಿತ್ ರೋಸ್ ಮೆರಿ ಸಾಸ್, ಮಟನ್ ರೋನ್, ಡರುಕ್, ಪೆರಿ ಪೆರಿ ಚಿಕನ್, ತಂದೂರಿ ಫಿಶ್ ಗುಲ್ನಾರ್. ಡೆಸರ್ಟ್‌ನಲ್ಲಿ ವಾಲ್‌ನಟ್ ಬ್ರೌನಿ, ಅಂಗೋರಿ ಗುಲಾಬ್ ಜಾಮೂನ್, ಗಾಜರ್‌ಕ ಹಲ್ವಾ ಮಾರ್ವೆಲ್ ಕೇಕ್ ಮತ್ತು ಕೇಸರಿ ಫಿರ್ನಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು