‘ಬಸವ ವಚನ ಪ್ರೌಢಶಾಲಾ ಪಠ್ಯವಾಗಲಿ’

ಬುಧವಾರ, ಜೂನ್ 19, 2019
32 °C
ಬಸವ ಕ್ರಾಂತಿ–ಒಂದು ಚಿಂತನೆ ಕಾರ್ಯಕ್ರಮದಲ್ಲಿ ಡಾ.ಮಳಲಿ ವಸಂತಕುಮಾರ್ ಅಭಿಮತ

‘ಬಸವ ವಚನ ಪ್ರೌಢಶಾಲಾ ಪಠ್ಯವಾಗಲಿ’

Published:
Updated:
Prajavani

ಮೈಸೂರು: ‘ಬಸವೇಶ್ವರರ ಆಯ್ದ 20 ವಚನಗಳು ಪ್ರೌಢಶಾಲಾ ವಿದ್ಯಾರ್ಥಿಗಳ ಪಠ್ಯವಾಗಲಿ. ಇದಾದರೆ ಸಮಾಜದಲ್ಲಿ ವೃದ್ಧಾಶ್ರಮ ನಿರ್ಮಾಣಗೊಳ್ಳುವುದು ತಗ್ಗಲಿದೆ’ ಎಂದು ಸಾಹಿತಿ ಡಾ.ಮಳಲಿ ವಸಂತಕುಮಾರ್ ಅಭಿಪ್ರಾಯಪಟ್ಟರು.

ಕರ್ನಾಟಕ ವಿಚಾರ ವೇದಿಕೆ, ಹಿರಿಮರಳಿ ಸಾಂಸ್ಕೃತಿಕ ಸಿರಿ ಸಂಘಟನೆ ವತಿಯಿಂದ, ಶುಕ್ರವಾರ ನಗರದ ಮನೆಯಂಗಳದಲ್ಲಿ ನಡೆದ ‘ಬಸವ ಕ್ರಾಂತಿ’ ಒಂದು ಚಿಂತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ವಚನ ಸಾಹಿತ್ಯದಿಂದ ಪ್ರೇರೇಪಿತನಾಗಿ 14 ವರ್ಷಗಳಿಂದ ಸಸ್ಯಹಾರಿಯಾಗಿ ಬದಲಾಗಿರುವೆ’ ಎಂದು ಹೇಳಿದರು.

‘ಅರಮನೆ–ಗುರುಮನೆಯ ಕ್ಲಿಷ್ಟ ಸಾಹಿತ್ಯಕ್ಕೆ ಇತಿಶ್ರೀ ಹಾಕಿದವರು ಬಸವೇಶ್ವರರು. ಶ್ರೀಸಾಮಾನ್ಯನ ಭಾಷೆಯಲ್ಲಿ ಸಾಹಿತ್ಯ ರಚಿಸಿ, ಜನರ ಹೃದಯಕ್ಕೆ ವಚನ ಕೊಂಡೊಯ್ದು, ಎಲ್ಲರಿಗೂ ಸಾಹಿತ್ಯದ ಸವಿ ಉಣಬಡಿಸಿದವರು. ಶರಣರು ಬಸವಣ್ಣನವರ ಈ ಆಶಯಕ್ಕೆ ಸಾಥ್‌ ನೀಡಿ ವ್ಯಾಪಕ ಪ್ರಮಾಣದಲ್ಲಿ ವಚನ ಸಾಹಿತ್ಯ ಸೃಷ್ಟಿಸಿದರು’ ಎಂದರು.

‘ಜಗತ್ತಿನಲ್ಲೇ ಬಸವೇಶ್ವರರಂಥಹ ಸಮಾಜ ಸುಧಾರಕ ಮತ್ತೊಬ್ಬರಿಲ್ಲ. ಒಂಬತ್ತು ವರ್ಷದ ಬಾಲಕನಿದ್ದಾಗಲೇ ಬ್ರಾಹ್ಮಣ್ಯದ ಪ್ರತೀಕ ಜನಿವಾರವನ್ನು ಯಜ್ಞಕುಂಡಕ್ಕೆ ಕಿತ್ತೆಸೆದ ಧೀರ. ಮನೆ ತೊರೆದು ಕೂಡಲಸಂಗಮದಲ್ಲಿ ಜಾತವೇದ ಮುನಿಗಳ ಶಿಷ್ಯನಾಗಿ ವೇದೋಪನಿಷತ್ತು, ವೇದ, ಆಗಮ, ಪುರಾಣ ಕಲಿತು ಅವುಗಳಲ್ಲಿನ ಸಾರ ಸಂಗ್ರಹಿಸಿ, ಕ್ರಾಂತಿ ಯೋಗಿಯಾದ.’

‘ಹನ್ನೆರಡನೇ ಶತಮಾನದಲ್ಲಿ ಒಂದೆಡೆ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಭಂಡಾರದ ಕರಣಿಕನಾದರೆ, ಇನ್ನೊಂದೆಡೆ ವಚನ ಸಾಹಿತ್ಯ ಚಳವಳಿ ಸಂಘಟಿಸಿದ. ಶರಣರನ್ನೆಲ್ಲಾ ಒಂದೆಡೆ ಕೂಡಿಸಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ. ದಲಿತ ಗಂಡಿನ ಜತೆ ಬ್ರಾಹ್ಮಣ ಕನ್ಯೆಯ ವಿವಾಹ ನೆರವೇರಿಸಿ ಋತ್ವಿಜರ ಕೆಂಗಣ್ಣಿಗೆ ಗುರಿಯಾಗಿ ತನ್ನ ಅಧಿಕಾರದ ಪದವಿಗಳನ್ನು ತೊರೆದು, ಮರಳಿ ಕೂಡಲಸಂಗಮಕ್ಕೆ ಬಂದು ಐಕ್ಯನಾದ’ ಎಂದರು.

ಪ್ರಾಚ್ಯವಿದ್ಯಾ ನಿರ್ದೇಶನಾಲಯದ ನಿರ್ದೇಶಕ ಡಾ.ಎಸ್.ಶಿವರಾಜಪ್ಪ, ಲೋಕಾಯುಕ್ತ ನಿವೃತ್ತ ಡಿವೈಎಸ್‌ಪಿ ಡಾ.ಎಚ್‌.ಎಲ್‌.ಶಿವಬಸಪ್ಪ ‘ಬಸವ ಕ್ರಾಂತಿ’ ಕುರಿತು ಮಾತನಾಡಿದರು.

ಸಮಾಜ ಸೇವಕ ಕೆ.ರಘುರಾಮಯ್ಯ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಪ್ರಾಂಶುಪಾಲ ಹಿರಿಮರಳಿ ಧರ್ಮರಾಜು ಉಪಸ್ಥಿತರಿದ್ದರು.

ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಕಂಠೇಶ್‌ ಪ್ರಾರ್ಥಿಸಿದರು. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !