ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಈಗಲೇ ಪರಿಶೀಲಿಸಿ

7
ಬಿಬಿಎಂಪಿ: ಮತದಾರರ ಕರಡು ಪಟ್ಟಿ ಪ್ರಕಟ

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಈಗಲೇ ಪರಿಶೀಲಿಸಿ

Published:
Updated:

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಹೆಸರಿನಲ್ಲಿ ತಿದ್ದುಪಡಿ ಮಾಡಬೇಕೆ? ಬಿಬಿಎಂಪಿ ಈಗ ಅದಕ್ಕೆ ಅವಕಾಶ ಕಲ್ಪಿಸಿದೆ.

ಪಾಲಿಕೆ ವ್ಯಾಪ್ತಿಯ ಮತದಾರರ ಪಟ್ಟಿಯ ಪರಿಷ್ಕೃತ ಕರಡನ್ನು (www.ceokarnataka.gov.in). ಬುಧವಾರ ಪ್ರಕಟಿಸಲಾಗಿದೆ.

ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್, 'ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಪಾಲಿಕೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯನ್ನು ನೋಡಿಕೊಂಡು ತಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ತಿದ್ದುಪಡಿಗಳಿದ್ದರೆ, ಮಾರ್ಪಾಡು ಮಾಡುವುದಕ್ಕೆ ಅರ್ಜಿ ಸಲ್ಲಿಸಬಹುದು. ಹೊಸ ಸೇರ್ಪಡೆಗೂ ಅವಕಾಶವಿದೆ' ಎಂದರು.

’ಮತದಾರರ ಪಟ್ಟಿ ಪರಿಷ್ಕರಣೆಗೆ ಅಕ್ಟೋಬರ್ 10 ರಿಂದ ನವೆಂಬರ್ 10 ರವರೆಗೆ ಅರ್ಜಿ ಸ್ವೀಕರಿಸಲಾಗುತ್ತದೆ. ಈ ಅರ್ಜಿಗಳನ್ನು ಪರಿಶೀಲಿಸಿ ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತೇವೆ' ಎಂದರು.

‘ನವೆಂಬರ್ 10ರ ನಂತರವೂ ಪರಿಷ್ಕರಣೆಗೆ ಅರ್ಜಿ ಸಲ್ಲಿಸಬಹುದು . ಆದರೆ ಈ ಅರ್ಜಿದಾರರ ಹೆಸರನ್ನು ಮತದಾರರ ಮೂಲ ಪಟ್ಟಿಯಲ್ಲಿ ಪರಿಗಣಿಸುವುದಿಲ್ಲ' ಎಂದು ವಿವರಿಸಿದರು.

'ನವೆಂಬರ್ 10ರ ನಂತರ ಒಂದು ತಿಂಗಳ ಕಾಲ ಅರ್ಜಿಗಳ ಪರಿಶೀಲನೆ ನಡೆಯಲಿದೆ. ಇದನ್ನಾಧರಿಸಿ 2019ರ ಜನವರಿ 4 ರಂದು ಪರಿಷ್ಕೃತ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ' ಎಂದು ತಿಳಿಸಿದರು.

‘ಹೆಸರು ಸೇರ್ಪಡೆಗೆ ಅಥವಾ ತಿದ್ದುಪಡಿಗೆ ಮತದಾರರು ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿ ಅಥವಾ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಕಚೇರಿ, ಮತದಾರರ ನೋಂದಣಾಧಿಕಾರಿಗಳ ಕಚೇರಿ ಅಥವಾ ಸಹಾಯಕ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಮೂನೆ 6 ನಮೂನೆ 7 ನಮೂನೆ 8 ಅಥವಾ ನಮೂನೆ 8 ಅನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬಹುದು. ಸಂಬಂಧಪಟ್ಟ ನಮೂನೆಗಳನ್ನು ಚುನಾವಣಾ ಆಯೋಗದ ವೆಬ್ ಸೈಟ್ ನಿಂದ (www.ceokarnataka.kar.nic.in ) ಡೌನ್ಲೋಡ್ ಮಾಡಿಕೊಳ್ಳಬಹುದು.’

‘ಆಕ್ಷೇಪಣೆಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ನೇರವಾಗಿ ಅಥವಾ ಮತದಾರರ ಸಲಹಾ ಕೇಂದ್ರಗಳಲ್ಲಿ ವಾರ್ಡ್ ಕಚೇರಿಗಳಲ್ಲಿ, ಬೆಂಗಳೂರು ಒನ್ ಕೇಂದ್ರಗಳಲ್ಲಿ, ಸಕಾಲ ಕೇಂದ್ರಗಳಲ್ಲಿ ಅಥವಾ ನಾಗರಿಕ ಸೇವಾ ಕೇಂದ್ರಗಳಲ್ಲಿ ಸಲ್ಲಿಸಬಹುದು’ ಎಂದು ಮಾಹಿತಿ ನೀಡಿದರು.

ಮತಗಟ್ಟೆ ಸಂಖ್ಯೆ ಹೆಚ್ಚಳ: ‘ವಿಧಾನಸಭಾ ಚುನಾವಣೆ ವೇಳೆಗೆ ನಗರದಲ್ಲಿದ್ದ ಮತಗಟ್ಟೆಗಳ ಸಂಖ್ಯೆ ಹೆಚ್ಚಳವಾಗಿದೆ. 227 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ’ ಎಂದು ತಿಳಿಸಿದರು.

ಮತದಾರರ ಸಂಖ್ಯೆ ಇಳಿಕೆ: ’ವಿಧಾನಸಭಾ ಚುನಾವಣೆ ವೇಳೆಗೆ ಇತ್ತ ಮತದಾರರ ಸಂಖ್ಯೆಯಲ್ಲಿ ಇಳಿಕೆ ಆಗಿದೆ. ವಿಧಾನಸಭಾ ಚುನಾವಣೆ ವೇಳೆಗೆ 91.13 ಲಕ್ಷ ಮತದಾರರಿದ್ದರು. ಪರಿಷ್ಕರಣೆ ಬಳಿಕ ಕೆಲವೊಂದು ಮತದಾರರ ಹೆಸರನ್ನು ರದ್ದುಪಡಿಸಲಾಗಿದೆ. ಕೆಲವು ಹೊಸ ಹೆಸರುಗಳನ್ನು ಸೇರಿಸಲಾಗಿದೆ. ಪ್ರಸ್ತುತ ಕರಡು ಮತದಾರರ ಪಟ್ಟಿಯಲ್ಲಿ 89.57 ಲಕ್ಷ ಹೆಸರುಗಳಿವೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇಲ್ಲಿ ಸುಮಾರು 16,145 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ’ ಎಂದರು.

89.57 ಲಕ್ಷ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಒಟ್ಟು ಮತದಾರರು

 

42.80 ಲಕ್ಷ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮಹಿಳಾ ಮತದಾರರು

 

46.77 ಲಕ್ಷ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪುರುಷ ಮತದಾರರು

 

65.24 %

ವಿಧಾನ ಸಭಾ ಕ್ಷೇತ್ರದ ಒಟ್ಟು ಜನಸಂಖ್ಯೆಯಲ್ಲಿ ಮತದಾರರ ಸರಾಸರಿ ಪ್ರಮಾಣ

 

1000:924

ಪುರುಷ ಮತ್ತು ಮಹಿಳಾ ಮತದಾರರ ಅನುಪಾತ

8,514

ಒಟ್ಟು ಮತಗಟ್ಟೆಗಳ ಸಂಖ್ಯೆ

ವಿಧಾನಸಭೆ ಚುನಾವಣೆ ಬಳಿಕ ಅತಿ ಹೆಚ್ಚು ಮತದಾರರನ್ನು ಕೈಬಿಡಲಾದ ಕ್ಷೇತ್ರಗಳು

ಕ್ಷೇತ್ರ ಸಂಖ್ಯೆ

ರಾಜರಾಜೇಶ್ವರಿನಗರ; 16145

ಬಸವನಗುಡಿ; 16301

ವಿಜಯನಗರ; 12808

ಬಿಟಿಎಂ ಲೇಔಟ್‌; 11696

ಪದ್ಮನಾಭನಗರ; 9498

ವಿಧಾನಸಭೆ ಚುನಾವಣೆ ಬಳಿಕ ಅತಿ ಹೆಚ್ಚು ಮತದಾರರು ಸೇರ್ಪಡೆಯಾದ ಕ್ಷೇತ್ರಗಳು

ಕೆ.ಆರ್‌.ಪುರ; 1061

ಮಹದೇವಪುರ; 919

ದಾಸರಹಳ್ಳಿ; 793

ಪುಲಕೇಶಿನಗರ; 749

ಆನೇಕಲ್‌; 658

ಜನಸಂಖ್ಯೆ ಮತ್ತು ಮತದಾರರ ಅನುಪಾತ ಹೆಚ್ಚು ಇರುವ ಕ್ಷೇತ್ರಗಳು

ಕ್ಷೇತ್ರ; ಶೇಕಡ

ಯಶವಂತಪುರ; 73.99

ಕೆ.ಆರ್‌.ಪುರ; 72.47

ಯಲಹಂಕ; 71.78

ರಾಜರಾಜೇಶ್ವರಿನಗರ; 69.67

ಆನೇಕಲ್‌ 66.56

ಜನಸಂಖ್ಯೆ ಮತ್ತು ಮತದಾರರ ಅನುಪಾತ ಕಡಿಮೆ ಇರುವ ಕ್ಷೇತ್ರಗಳು

ಬಿಟಿಎಂ ಬಡಾವಣೆ; 56.59

ಗಾಂಧಿನಗರ; 61.24

ಜಯನಗರ; 61.27

ರಾಜಾಜಿನಗರ; 61.34

ಪದ್ಮನಾಭನಗರ; 61.52

ಮಹಾಲಕ್ಷ್ಮಿ ಬಡಾವಣೆ; 62.50

ವಯಸ್ಸಿನ ಆಧಾರದಲ್ಲಿ ಮತದಾರರ ವರ್ಗೀಕರಣ

ವಯೋಮಿತಿ; ಸಂಖ್ಯೆ; ಶೇಕಡವಾರು

18–19; 49,920; 0.36

20–29; 15.18 ಲಕ್ಷ; 10.91

30–39; 28.31 ಲಕ್ಷ; 20.35

40–49; 20.62 ಲಕ್ಷ; 14.82

50–59; 12.17 ಲಕ್ಷ; 8.75

60–69; 7.49 ಲಕ್ಷ; 5.38

70–79; 3.84 ಲಕ್ಷ; 2.76

80 ಮೇಲ್ಪಟ್ಟು; 1.47 ಲಕ್ಷ; 1.05

ಮಹಿಳಾ ಮತದಾರರ ಅನುಪಾತ (ಪ್ರತಿ 1000 ಪುರುಷರಿಗೆ) ಹೆಚ್ಚು ಇರುವ ಕ್ಷೇತ್ರಗಳು

ಕ್ಷೇತ್ರ; ಅನುಪಾತ

ಮಲ್ಲೇಶ್ವರ; 984

ಜಯನಗರ; 980

ಸರ್ವಜ್ಞನಗರ; 975

ಶಿವಾಜಿನಗರ; 970

ರಾಜಾಜಿನಗರ; 967

ಮಹಿಳಾ ಮತದಾರರ ಅನುಪಾತ (ಪ್ರತಿ 1000 ಪುರುಷರಿಗೆ) ಕಡಿಮೆ ಇರುವ ಕ್ಷೇತ್ರಗಳು

ಮಹದೇವಪುರ; 843

ಬೊಮ್ಮನಹಳ್ಳಿ; 850

ದಾಸರಹಳ್ಳಿ; 852

ಬೆಂಗಳೂರು ದಕ್ಷಿಣ; 872

ಆನೇಕಲ್‌; 888

ಆಕ್ಷೇಪಣೆ ಸಲ್ಲಿಸುವುದೆಲ್ಲಿ: ಮತದಾರರ ಸಲಹಾ ಕೇಂದ್ರ, ವಾರ್ಡ್ ಕಚೇರಿ, ಬೆಂಗಳೂರು ಒನ್ ಕೇಂದ್ರ, ಸಕಾಲ ಕೇಂದ್ರ ಅಥವಾ ನಾಗರಿಕ ಸೇವಾ ಕೇಂದ್ರ. ಮತಗಟ್ಟೆ ಅಧಿಕಾರಿಗೂ ದೂರು ನೀಡಬಹುದು

* ಮತದಾರರ ಪಟ್ಟಿ ಪರಿಷ್ಕರಣೆಗೆ ಅಕ್ಟೋಬರ್ 10ರಿಂದ ನವೆಂಬರ್‌ 20ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ

* ನವೆಂಬರ್ 20ರಿಂದ ಡಿಸೆಂಬರ್‌ 20 ಅರ್ಜಿ ಪರಿಶೀಲನೆ 

* 2019ರ ಜನವರಿ 04  ಭಾವಚಿತ್ರಸಹಿತ ಪರಿಷ್ಕೃತ ಮತದಾರರ ಪಟ್ಟಿ ಪ್ರಕಟಣೆ 

ಹೆಸರು ಸೇರ್ಪಡೆ ಏನು ಬೇಕು: ಭರ್ತಿ ಮಾಡಿದ ನಮೂನೆ 6, ಭಾವಚಿತ್ರ, ವಿಳಾಸ ಧೃಡೀಕರಣದ ದಾಖಲೆ. 18 ವರ್ಷ ತುಂಬಿರುವ ಬಗ್ಗೆ ದಾಖಲೆ (ಎಸ್ಸೆಸ್ಸೆಲ್ಸಿ ಅಂಕಪಟ್ಟಿ)

ಹೆಸರು ರದ್ದುಪಡಿಸಲು: ನಮೂನೆ 7

ಹೆಸರು ತಿದ್ದುಪಡಿಗೆ: ನಮೂನೆ 8

ಹೆಸರು ಸೇರ್ಪಡೆ:ನಮೂನೆ 8ಎ (ಕ್ಷೇತ್ರದೊಳಗೆ ವಿಳಾಸ ಬದಲಾವಣೆಯಾದಾಗ ಮಾತ್ರ)

ಅರ್ಜಿ ನಮೂನೆ ಎಲ್ಲಿ ಲಭ್ಯ: ಎಲ್ಲ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿ. ಚುನಾವಣಾ ಆಯೋಗದ ವೆಬ್ ಸೈಟ್ ನಿಂದ (www.ceokarnataka.kar.nic.in ) ಡೌನ್‌ಲೋಡ್ ಮಾಡಿಕೊಳ್ಳಬಹುದು.

‘ಹೆಸರು ತೆಗೆಸುವ ಜವಾಬ್ದಾರಿ ಅಧಿಕಾರಿಗಳದ್ದು’

‘ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವಾಗ ಯಾವುದೇ ಅಧಿಕಾರಿ ನಮೂನೆ 7ಅನ್ನು ಹಾಜರುಪಡಿಸುವಂತೆ ಒತ್ತಾಯಪಡಿಸುವಂತಿಲ್ಲ. ಮತದಾರರು ಈ ಹಿಂದೆ ಬೇರೆ ವಿಳಾಸದಲ್ಲಿ ಮತದಾನದ ಹಕ್ಕು ಹೊಂದಿದ್ದರೆ ಅದನ್ನು ಸೇರ್ಪಡೆ ವೇಳೆ ಅಧಿಕಾರಿಯ ಗಮನಕ್ಕೆ ತಂದರೆ ಸಾಕು. ಹಿಂದಿನ ವಿಳಾಸದಲ್ಲಿರುವ ಮತದಾರರ ಪಟ್ಟಿಯಿಂದ ಹೆಸರು ತೆಗೆಸುವ ಜವಾಬ್ದಾರಿ ಸಂಬಂಧಪಟ್ಟ ಅಧಿಕಾರಿಯದ್ದೇ ಆಗಿರುತ್ತದೆ’ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

‘ಅರ್ಜಿ ಸಲ್ಲಿಸಿದ ಬಳಿಕವೂ ಹೆಸರು ಸೇರ್ಪಡೆ ಆಗದಿದ್ದರೆ ಕಂದಾಯ ಅಧಿಕಾರಿಗೆ, ವಲಯದ ಜಂಟಿ ಆಯುಕ್ತರಿಗೆ ಅಥವಾ ನನಗೆ ದೂರು ಕೊಡಬಹುದು. ಚುನಾವಣಾ ಆಯೋಗದ ಪೋರ್ಟಲ್‌ನಲ್ಲೂ ದೂರು ನೀಡಬಹುದು’ ಎಂದು ಅವರು ತಿಳಿಸಿದರು.
’ಅಕ್ರಮ ವಲಸಿಗರನ್ನು ಗುರುತಿಸುವ ಹೊಣೆ ಪೊಲೀಸರದು’

ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ ಎಂಬ ದೂರುಗಳ ಕುರಿತು ಪ್ರತಿಕ್ರಿಯಿಸಿದ ಅವರು, ‘ರಾಷ್ಟ್ರೀಯತೆಗೆ ಸಂಬಂಧಿಸಿ ತನಿಖೆ ನಡೆಸುವ ಹೊಣೆ ಪೊಲೀಸ್‌ ಇಲಾಖೆಯದು. ವಾಸದ ದೃಢೀಕರಣದ ಆಧಾರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುತ್ತೇವೆ. ಇಂತಹ ದೂರು ಬಂದರೆ ಪೊಲೀಸ್‌ ಇಲಾಖೆಗೆ ವರ್ಗಾಯಿಸುತ್ತೇವೆ’ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

‘ರಾಜರಾಜೇಶ್ವರಿನಗರ– ಅತಿ ಹೆಚ್ಚು ಹೆಸರು ರದ್ದು’

ವಿಧಾನಸಭಾ ಚುನಾವಣೆ ಬಳಿಕ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಅತಿ ಹೆಚ್ಚು (16,145 ಮಂದಿ) ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ವಿಧಾನಸಭಾ ಚುನಾವಣೆ ಸಂದರ್ಭ ಈ ಕ್ಷೇತ್ರದ ವ್ಯಾಪ್ತಿಯ ಫ್ಲ್ಯಾಟ್‌ವೊಂದರಲ್ಲಿ 9 ಸಾವಿರಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ಕಾರಣ ಚುನಾವಣಾ ಆಯೋಗವು ಮತದಾನವನ್ನು ಮುಂದೂಡಿತ್ತು.

‘ಈ ಪ್ರಕರಣದ ವಿವರಗಳು ಲಭ್ಯ ಇಲ್ಲ. ಚುನಾವಣಾ ಆಯೋಗವೇ ಈ ಬಗ್ಗೆ ತನಿಖೆ ನಡೆಸಿದೆ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ’ ಎಂದು ಪಾಲಿಕೆ ಆಯುಕ್ತ ತಿಳಿಸಿದರು.

 

 

 

 

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !