ಬಿಬಿಎಂಪಿ ‘ಕೈ’ಸೇರದ ₹4,816 ಕೋಟಿ

7
ಸರ್ಕಾರದ ಅನುದಾನ ಘೋಷಣೆಗಷ್ಟೇ ಸೀಮಿತ l ಹಣಕ್ಕಾಗಿ ಸ್ಥಳೀಯಾಡಳಿತದ ಮೊರೆತ

ಬಿಬಿಎಂಪಿ ‘ಕೈ’ಸೇರದ ₹4,816 ಕೋಟಿ

Published:
Updated:
Deccan Herald

ಬೆಂಗಳೂರು: ರಾಜ್ಯ ಸರ್ಕಾರದಿಂದ ಎರಡು ವರ್ಷಗಳಲ್ಲಿ ಪಾಲಿಕೆಗೆ ಮಂಜೂರಾದ ಅನುದಾನದ ಪೈಕಿ ₹4,816 ಕೋಟಿ ಇನ್ನೂ ಬಿಡುಗಡೆಯಾಗಿಲ್ಲ. ಇದರಿಂದಾಗಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಹಣ ಹಿಡಿದಿದೆ.

ರಾಜ್ಯ ಸರ್ಕಾರ 2018–19ನೇ ಸಾಲಿನ ಬಜೆಟ್‌ನಲ್ಲಿ ನಗರಕ್ಕೆ ₹2,500 ಕೋಟಿ ಪ್ರಕಟಿಸಿತ್ತು. ಈ ಕಡತ ನಗರಾಭಿವೃದ್ಧಿ ಇಲಾಖೆ ಹಾಗೂ ಆರ್ಥಿಕ ಇಲಾಖೆ ನಡುವೆ ತಿಂಗಳುಗಳಿಂದ ಓಡಾಡುತ್ತಿದೆ. ಅನುದಾನ ಮಂಜೂರು ಮಾಡಲು ಆರ್ಥಿಕ ಇಲಾಖೆ ಅಧಿಕಾರಿಗಳು ನಾನಾ ನೆಪ ಹೇಳುತ್ತಿದ್ದಾರೆ.

‘ರೈತರ ಬೆಳೆ ಸಾಲ ₹44 ಸಾವಿರ ಕೋಟಿ ಮನ್ನಾ ಮಾಡಲಾಗಿದೆ. ಇದಕ್ಕೆ ಸಂಪನ್ಮೂಲ ಕ್ರೋಡೀಕರಣ ಮಾಡಬೇಕಿದೆ. ಪಾಲಿಕೆಗೆ ಈ ಹಿಂದೆ ಘೋಷಿಸಿದಷ್ಟು ಅನುದಾನ ನೀಡುವುದು ಕಷ್ಟ’ ಎಂಬುದು ಆರ್ಥಿಕ ಇಲಾಖೆ ಅಧಿಕಾರಿಗಳ ವಾದ. ‘ರಾಜ್ಯ ಸರ್ಕಾರದ ಅನುದಾನವನ್ನೇ ನೆಚ್ಚಿಕೊಂಡು ಪಾಲಿಕೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿದೆ. ಅನುದಾನದ ಘೋಷಣೆಗೆ ಅನುಗುಣವಾಗಿ ಕ್ರಿಯಾ ಯೋಜನೆಗಳನ್ನು ಸಲ್ಲಿಸಲಾಗಿದೆ. ಜತೆಗೆ, ಈ ವರ್ಷ ಆರ್ಥಿಕ ವರ್ಷದಲ್ಲಿ ಐದು ತಿಂಗಳುಗಳು ಕಳೆದಿವೆ. ಅನುದಾನವನ್ನೇ ಬಿಡುಗಡೆ ಮಾಡದಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ’ ಎಂಬುದು ಪಾಲಿಕೆ ಅಧಿಕಾರಿಗಳ ಅಳಲು.

ಬಿಬಿಎಂಪಿಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಎರಡು ವರ್ಷಗಳಲ್ಲಿ ₹9,791 ಕೋಟಿ ನೀಡಿದೆ ಎಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಪಕ್ಷದ ಮುಖಂಡರು ಹತ್ತಾರು ವೇದಿಕೆಗಳಲ್ಲಿ ಸಾರುತ್ತಾ ಬಂದಿದ್ದರು.

ಚುನಾವಣೆ ವೇಳೆಯಲ್ಲಿ ರಸ್ತೆ ಅಭಿವೃದ್ಧಿ ಹಾಗೂ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿ ಸಮರೋಪಾದಿಯಲ್ಲಿ ನಡೆದಿತ್ತು. ಈ ಎರಡು ವಿಭಾಗಗಳಿಗಷ್ಟೇ ಹಣದ ಹೊಳೆ ಹರಿದಿದೆ. ಉಳಿದೆಲ್ಲ ವಿಭಾಗಗಳಿಗೆ ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಅಲ್ಪ ಪ್ರಮಾಣದ ಅನುದಾನ ಬಿಡುಗಡೆಯಾಗಿದೆ. ಇದರಿಂದಾಗಿ, ಈ ವಿಭಾಗಗಳಲ್ಲಿ ಕಾಮಗಾರಿ ಶೇ 10–15ರಷ್ಟು ಮಾತ್ರ ಪ್ರಗತಿಯಾಗಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿ ಆಮೆಗತಿ ಕಾಮಗಾರಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ವೈಟ್‌ ಟಾಪಿಂಗ್‌, ಟೆಂಡರ್‌ಶ್ಯೂರ್‌, ಗ್ರೇಡ್‌ ಸಪರೇಟರ್, ಕೆರೆ ಅಭಿವೃದ್ಧಿ ಹಾಗೂ 100 ಹಳ್ಳಿಗಳ ಅಭಿವೃದ್ಧಿ ಕಾಮಗಾರಿಗೆ ಹಣ ಹೊಂದಿಸಲು ಪಾಲಿಕೆ ಹೆಣಗಾಡುತ್ತಿದೆ.

***

ಸರ್ಕಾರದಿಂದ ಪಾಲಿಕೆಗೆ ಅನುದಾನ (₹ಕೋಟಿಗಳಲ್ಲಿ)

ವರ್ಷ; ಯೋಜನೆ; ಘೋಷಣೆ; ಬಿಡುಗಡೆ; ಬಾಕಿ

2016–17;ಮೂಲಸೌಕರ್ಯ ಯೋಜನೆ; 7300; 4975; 2325

2017–18; ಮೂಲಸೌಕರ್ಯ ಯೋಜನೆ; 2491; –;2491

2017–18; ಕೆರೆ ಅಭಿವೃದ್ಧಿ; 50; 50;–

2017–18; ಇಂದಿರಾ ಕ್ಯಾಂಟೀನ್‌; 100; 100; –

2018–19; ಮೂಲಸೌಕರ್ಯ ಯೋಜನೆ; 2500; –;–

–;ಒಟ್ಟು; 12441; 9941; 4816

****

ಮುಂದೆ ಸಾಗದು ಅಭಿವೃದ್ಧಿ ಕೆಲಸ.....

ಕಾಮಗಾರಿ; ಅನುದಾನ (₹ಕೋಟಿಗಳಲ್ಲಿ); ಭೌತಿಕ ಪ್ರಗತಿ (ಶೇ); ಆರ್ಥಿಕ ಪ್ರಗತಿ (₹ಕೋಟಿಗಳಲ್ಲಿ)

ವೈಟ್‌ಟಾ‍ಪಿಂಗ್‌; 800; 14; 114

ಟೆಂಡರ್‌ಶ್ಯೂರ್‌; 200; 21.4; 21.28

ರಾಜಕಾಲುವೆ; 800; 65.6; 641

ಘನತ್ಯಾಜ್ಯ; 600; 24.3; 215

110 ಹಳ್ಳಿಗಳು; 250; 25; 0

ಈಜೀಪುರ ಮೇಲ್ಸೇತುವೆ; 204; 10; 10.16

ಕೆರೆಗಳು; 106; 28; 22

ಗ್ರೇಡ್ ಸಪರೇಟರ್; 153; 7.9; 2.34

ವೈಟ್‌ಫೀಲ್ಡ್‌/ಪೀಣ್ಯ; 156; 51.7; 25.28

ರಸ್ತೆಗಳು; 1400; 68; 767

***

ಬಜೆಟ್‌ನಲ್ಲಿ ನಗರದ ಅಭಿವೃದ್ಧಿಗೆ ₹2500 ಕೋಟಿ ಘೋಷಿಸಲಾಗಿದೆ. ಕ್ರಿಯಾ ಯೋಜನೆ ತಯಾರಿಸಿ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿದೆ. ಶೀಘ್ರ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ
- ಬಿಬಿಎಂ‍ಪಿ ಆಯುಕ್ತ

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !