ಸಿ.ಎ ನಿವೇಶನ ಮಾರಾಟಕ್ಕೆ ಮುಂದಾದ ಬಿಡಿಎ

7

ಸಿ.ಎ ನಿವೇಶನ ಮಾರಾಟಕ್ಕೆ ಮುಂದಾದ ಬಿಡಿಎ

Published:
Updated:

ಬೆಂಗಳೂರು: ನಾಗರಿಕ ಸೌಕರ್ಯಗಳಿಗಾಗಿ ಮೀಸಲಿಟ್ಟ ನಿವೇಶನಗಳನ್ನು (ಸಿ.ಎ) ಮಾರಾಟ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದೆ.

ಬಿಡಿಎ 1,365 ಸಿ.ಎ ನಿವೇಶನಗಳನ್ನು ಹೊಂದಿದ್ದು, ಇವುಗಳ ಮಾರಾಟದಿಂದ ₹ 30,000 ಕೋಟಿಯಿಂದ ₹ 35,000 ಕೋಟಿ  ವರಮಾನ ಬರುವ ನಿರೀಕ್ಷೆ ಇದೆ. ಪ್ರಾಧಿಕಾರವು ರಾಜ್ಯ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿದೆ.

ಬಿಡಿಎ ಜುಲೈ ತಿಂಗಳಿನಲ್ಲೇ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರಿಗೆ ಈ ಬಗ್ಗೆ ಪ್ರಸ್ತಾವ ಸಲ್ಲಿಸಿತ್ತು. ಆ ನಂತರ ಆಗಸ್ಟ್ ತಿಂಗಳಿನಲ್ಲಿ ಎರಡನೇ ಪ್ರಸ್ತಾವನೆ ಸಲ್ಲಿಸಿದೆ. ನಿವೇಶನಗಳನ್ನು ನಿರ್ದಿಷ್ಟ ಅವಧಿವರೆಗೆ ಭೋಗ್ಯಕ್ಕೆ ಪಡೆದವರು ಅದನ್ನು ಮಾರುಕಟ್ಟೆ ಬೆಲೆ ಪಾವತಿಸಿ ಖರೀದಿಸಲು ಅವಕಾಶ ನೀಡುವ ಪ್ರಸ್ತಾವನ್ನೂ ಪ್ರಾಧಿಕಾರ ಹೊಂದಿದೆ. ಭೋಗ್ಯದ ಅವಧಿ ಮುಗಿದ ನಿವೇಶನಗಳನ್ನು ಹರಾಜು ಹಾಕುವ ಅವಕಾಶವನ್ನು ಪ್ರಾಧಿಕಾರವು ಮುಕ್ತವಾಗಿರಿಸಿಕೊಂಡಿದೆ.

ಸರ್ಕಾರ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿಯೇ ಬಿಡಿಎ ಈ ಪ್ರಸ್ತಾವ ಸಲ್ಲಿಸಿದೆ. ರೈತರ ಸಾಲಮನ್ನಾಕ್ಕಾಗಿ ಸರ್ಕಾರ ₹44,000 ಕೋಟಿ ಖರ್ಚು ಮಾಡಬೇಕಿದೆ. ಈ ಸಲುವಾಗಿ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಜನಪ್ರಿಯ ಕಾರ್ಯಕ್ರಮಗಳಿಗೆ ಅನುದಾನ ಕಡಿತಗೊಳಿಸಬೇಕಾದ ಇಕ್ಕಟ್ಟಿನಲ್ಲಿದೆ.

‘ನಿವೇಶನಗಳನ್ನು ಭೋಗ್ಯಕ್ಕೆ ಪಡೆದ ಅನೇಕರು ಅದರ ಬಾಡಿಗೆ ಮೊತ್ತವನ್ನು ಪಾವತಿಸಿಲ್ಲ. ಹಾಗಾಗಿ ಅವುಗಳನ್ನು ಹರಾಜು ಹಾಕುವ ಪ್ರಸ್ತಾವ ಸಲ್ಲಿಸಿದ್ದೇವೆ. ಒಟ್ಟು 1,365 ನಿವೇಶನಗಳನ್ನು ಗುರುತಿಸಿದ್ದು, ಈ ಪೈಕಿ 70 ನಿವೇಶನಗಳಿಗೆ ಸಂಬಂಧಿಸಿ ಒಪ್ಪಂದಗಳನ್ನು ನವೀಕರಿಸಬೇಕಿದೆ. ಈ ನಿವೇಶನಗಳಿಗೆ 1995ರಿಂದ ನೋಟಿಸ್‌ ಜಾರಿ ಮಾಡುತ್ತಿದ್ದೇವೆ. ಈ ನಿವೇಶನಗಳನ್ನು ನಾವು ಮಾರಾಟ ಮಾಡಿದರೆ ಅಥವಾ ಹರಾಜು ಹಾಕಿದರೆ, ಬಿಡಿಎಗೆ ₹ 1,000 ಕೋಟಿ ಆದಾಯ ಬರಲಿದೆ. ಇಂತಹ ನಿವೇಶನಗಳನ್ನು ಪಡೆದವರಲ್ಲಿ ಹೆಚ್ಚಿನವರು ಸರ್ಕಾರದ ಬೇರೆ ಬೇರೆ ಹುದ್ದೆಗಳಲ್ಲಿ ಇದ್ದಾರೆ. ಕೆಲವರು ರಾಜಕೀಯ ಹಿನ್ನಲೆ ಇರುವವರೂ ಇದ್ದಾರೆ. ಹಾಗಾಗಿ ಅವರನ್ನು ತೆರವುಗೊಳಿಸಲೂ ಸಾಧ್ಯವಾಗುತ್ತಿಲ್ಲ’ ಎಂದು ಬಿಡಿಎ ಅಧಿಕಾರಿಯೊಬ್ಬರು ಹೇಳಿದರು.

ಭೋಗ್ಯದ ಒಪ್ಪಂದ ಮುಗಿದಿರುವ ನಿವೇಶನಗಳನ್ನು ಹುಡುಕಲು ಸಮೀಕ್ಷೆ ಮಾಡಲಾಗುತ್ತಿದೆ. ಖಾಲಿ ಇರುವ ಸಿ.ಎ ನಿವೇಶನಗಳನ್ನೂ ಗುರುತಿಸಲು ಯೋಜನೆ ರೂಪಿಸಲಾಗಿದೆ.

‘ಪ್ರಸ್ತಾವನೆಯ ಕುರಿತು ಇನ್ನೂ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಹೇಳಿದರು.

ನಿಯಮ ಪ್ರಕಾರ ಬಿಡಿಎ ಪ್ರತಿಯೊಂದು ಬಡಾವಣೆಯಲ್ಲಿಯೂ ಶೇ 10ರಷ್ಟು ನಿವೇಶನಗಳನ್ನು ಮೂಲಸೌಕರ್ಯಗಳಿಗಾಗಿ ಕಾಯ್ದಿರಿಸಬೇಕು.

ಮುಖ್ಯಾಂಶಗಳು

* ಕೆಲವು ಸಿ.ಎ ನಿವೇಶನಗಳ ಮೊತ್ತ ಇನ್ನೂ ಪಾವತಿಯೇ ಆಗಿಲ್ಲ

* ಪ್ರಭಾವಿಗಳಿಂದ ಸಿ.ಎ ನಿವೇಶನ ಹಿಂಪಡೆಯಲೂ ಸಾಧ್ಯವಾಗುತ್ತಿಲ್ಲ

* ಭೋಗ್ಯದ ಅವಧಿ ಮುಗಿದ ನಿವೇಶನಗಳ ಸಮೀಕ್ಷೆ ನಡೆಸಲಿದೆ ಬಿಡಿಎ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !