ಕಚೇರಿಯಲ್ಲೇ ₹15 ಲಕ್ಷ ಕದ್ದ ಬೆಸ್ಕಾಂ ನೌಕರ

7
ಅಶೋಕನಗರ ಪೊಲೀಸರಿಂದ ಇಬ್ಬರ ಬಂಧನ

ಕಚೇರಿಯಲ್ಲೇ ₹15 ಲಕ್ಷ ಕದ್ದ ಬೆಸ್ಕಾಂ ನೌಕರ

Published:
Updated:
ರಾಘವೇಂದ್ರ

ಬೆಂಗಳೂರು: ಹೊಸೂರು ರಸ್ತೆಯ ಬೆಸ್ಕಾಂ ಉಪವಿಭಾಗದ ಕಚೇರಿಯಿಂದ ₹ 15 ಲಕ್ಷ ಕಳವಾಗಿದ್ದ ಪ್ರಕರಣವನ್ನು ಭೇದಿಸಿರುವ ಅಶೋಕ ನಗರ ಪೊಲೀಸರು, ಅಲ್ಲಿನ ನೌಕರ ಸಲೀಂ ಅಲಿ (28) ಹಾಗೂ ಆತನ ಸ್ನೇಹಿತ ರಾಘವೇಂದ್ರ ರಾಥೋಡ್‌ನನ್ನು (27) ಬಂಧಿಸಿದ್ದಾರೆ.

ಇಬ್ಬರೂ ರಾಯಚೂರು ಜಿಲ್ಲೆ ಸಿಂಧನೂರಿನವರಾಗಿದ್ದು, 2013ರಿಂದ ನಗರದಲ್ಲಿ ನೆಲೆಸಿದ್ದಾರೆ. ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಜೂಜಾಟದಲ್ಲಿ ಹಣ ಕಳೆದುಕೊಂಡಿದ್ದ ಸಲೀಂ, ಸ್ನೇಹಿತರ ಬಳಿ ಸಾಲ ಮಾಡಿಕೊಂಡಿದ್ದ. ‘ಸಾಲ ತೀರಿಸುವ ಸಲುವಾಗಿ ಕಳ್ಳತನ ಮಾಡಿದೆ’ ಎಂದು ಆತ ಹೇಳಿಕೆ ಕೊಟ್ಟಿದ್ದಾನೆ. ಬಂಧಿತರಿಂದ ₹ 11 ಲಕ್ಷ ಜಪ್ತಿ ಮಾಡಿದ್ದೇವೆ. ಇನ್ನುಳಿದ ₹ 4 ಲಕ್ಷವನ್ನೂ ಜೂಜಾಟದಲ್ಲೇ ಕಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಬೆಸ್ಕಾಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಲೀಂನ ತಂದೆ, 2013ರಲ್ಲಿ ಅನಾರೋಗ್ಯದಿಂದ ನಿಧನರಾದರು. ಆಗ ಅನುಕಂಪದ ಆಧಾರದಲ್ಲಿ ಆ ಕೆಲಸ ಸಲೀಂಗೆ ದಕ್ಕಿತ್ತು. ಅದೇ ಅವಧಿಯಲ್ಲಿ ರಾಘವೇಂದ್ರ ಕೂಡ ನಗರಕ್ಕೆ ಬಂದು ಕ್ಯಾಬ್ ಓಡಿಸುತ್ತಿದ್ದ. ಇಬ್ಬರೂ ಲಾಲ್‌ಬಾಗ್ ಸಮೀಪದ ಸಿದ್ಧಾಪುರದಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದರು.

ಸ್ನೇಹಿತರ ಜತೆ ನಿತ್ಯವೂ ಇಸ್ಪೀಟ್ ಆಡುತ್ತಿದ್ದ ಸಲೀಂಗೆ, ಕ್ರಮೇಣ ಕ್ರಿಕೆಟ್ ಬೆಟ್ಟಿಂಗ್‌ನ ಹುಚ್ಚೂ ಹಿಡಿಯಿತು. ತಿಂಗಳಿಗೆ ₹ 30 ಸಾವಿರ ಸಂಬಳ ಬಂದರೂ, ಎಲ್ಲ ಹಣವನ್ನೂ ಜೂಜಾಟಕ್ಕೇ ಸುರಿಯುತ್ತಿದ್ದ. ಆರ್ಥಿಕ ಸಂಕಷ್ಟದಿಂದ ಹೊರಬರಲು ತನ್ನ ಕಚೇರಿಯಿಂದಲೇ ಹಣ ದೋಚಲು ಸಂಚು ರೂಪಿಸಿಕೊಂಡ. ಅದಕ್ಕೆ ಗೆಳೆಯನ ಸಾಥ್ ಕೂಡ ಸಿಕ್ಕಿತು.

ಕಾಕ್ಸ್‌ಟೌನ್‌ನಲ್ಲಿರುವ ‘ಲಾಗಿ ಕ್ಯಾಷ್’ ಏಜೆನ್ಸಿಯು ವಿವಿಧ ಸಂಸ್ಥೆಗಳ ವಹಿವಾಟಿನ ಹಣ ಸಂಗ್ರಹಿಸಿಕೊಂಡು ಬ್ಯಾಂಕ್ ಖಾತೆಗೆ ಜಮೆ ಮಾಡುವ ಗುತ್ತಿಗೆ ಪಡೆದಿದೆ. ಅಂತೆಯೇ ಬೆಸ್ಕಾಂ ಸಹ, ಲಾಗಿ ಕ್ಯಾಷ್‌ಗೇ ಗುತ್ತಿಗೆ ನೀಡಿದೆ. ಇಡೀ ದಿನ ಗ್ರಾಹಕರಿಂದ ಸಂಗ್ರಹಿಸುವ ವಿದ್ಯುತ್‌ ಶುಲ್ಕವನ್ನು, ಸಂಜೆ ಏಜೆನ್ಸಿಯ ನೌಕರರ ಸುಪರ್ದಿಗೆ ನೀಡಲಾಗುತ್ತದೆ. ಅವರು ಹಣವನ್ನು ಬ್ಯಾಂಕ್ ಖಾತೆಗೆ ಹಾಕುತ್ತಾರೆ. ಈ ಕೆಲಸಕ್ಕೆ ಏಜೆನ್ಸಿಗೆ ಕಮಿಷನ್ ಸಂದಾಯ ಆಗುತ್ತದೆ.

ಈ ಪ್ರಕ್ರಿಯೆ ತಿಳಿದುಕೊಂಡಿದ್ದ ಸಲೀಂ, ಏಜೆನ್ಸಿ ನೌಕರರ ಗಮನ ಬೇರೆಡೆ ಸೆಳೆದು ಹಣ ದೋಚಲು ನಿರ್ಧರಿಸಿದ್ದ. ಜೂನ್ 12ರಂದು ಕಚೇರಿಗೆ ಬಂದು ₹ 15 ಲಕ್ಷ ಸಂಗ್ರಹಿಸಿಕೊಂಡ ನೌಕರರು, ಆ ಬ್ಯಾಗನ್ನು ಕ್ಯಾಬಿನ್‌ನಲ್ಲಿಟ್ಟು ಬೆಸ್ಕಾಂ ಅಧಿಕಾರಿಗಳ ಜತೆ ಟೀ ಕುಡಿಯಲು ಹೊರ ಹೋಗಿದ್ದರು. ಈ ಸಂದರ್ಭದಲ್ಲಿ ಬ್ಯಾಗ್ ಎಗರಿಸಿದ ಆತ, ಪಕ್ಕದ ರಸ್ತೆಯಲ್ಲೇ ಇದ್ದ ರಾಘವೇಂದ್ರನನ್ನು ಕರೆಸಿಕೊಂಡು ಬ್ಯಾಗ್ ಕೊಟ್ಟು ಕಳುಹಿಸಿದ್ದ.

ಅರ್ಧ ತಾಸಿನ ಬಳಿಕ ಕಚೇರಿಗೆ ವಾಪಸಾದ ನೌಕರರು, ಬ್ಯಾಗ್ ಇಲ್ಲದಿದ್ದುನ್ನು ಕಂಡು ಗಾಬರಿಗೊಂಡಿದ್ದರು. ಸಲೀಂ ಸೇರಿ ಎಲ್ಲರನ್ನೂ ವಿಚಾರಿಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಅಶೋಕ ನಗರ ಠಾಣೆಯ ಮೆಟ್ಟಿಲೇರಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !