ಭಾನುವಾರ, ಮೇ 29, 2022
30 °C

ಭೂತಾನ್‌‌ನಲ್ಲಿ ಈ ವೈದ್ಯನೆಂದರೆ ಇಡೀ ದೇಶಕ್ಕೆ ಅಚ್ಚುಮೆಚ್ಚು

Agency Updated:

ಅಕ್ಷರ ಗಾತ್ರ : | |

Prajavani

ಭೂತಾನ್: ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ವೈದ್ಯ ವೃತ್ತಿ ಮಾಡುವವರು ವೀಕೆಂಡ್ ಬಂತೆಂದರೆ, ತಮ್ಮ ಕುಟುಂಬದ ಜೊತೆ ಹೊರಗೆ ಸುತ್ತಾಡಲೋ ಅಥವಾ ಒಬ್ಬಂಟಿಯಾಗಿ, ಇಲ್ಲವೇ ಸ್ನೇಹಿತರ ಜೊತೆ ರೆಸಾರ್ಟ್‌‌ಗೆ ತೆರಳುವುದನ್ನು ನೋಡಿದ್ದೀರಿ.

ಆದರೆ, ಭೂತಾನ್‌ನ ವೈದ್ಯರೊಬ್ಬರು ಮಾತ್ರ ಇದಕ್ಕೆ ತದ್ವಿರುದ್ಧ. ಈ ವೈದ್ಯ ಇಡೀ ಭೂತಾನ್ ದೇಶಕ್ಕೆ ಗೊತ್ತು. ಈ ವೈದ್ಯನ ಬಳಿ ಚಿಕಿತ್ಸೆ ಪಡೆಯಲು ನಮಗೆ ತುಂಬಾ ಖುಷಿಯಾಗುತ್ತೆ ಎನ್ನುತ್ತಾರೆ ಅಲ್ಲಿನ ರೋಗಿಗಳು. ಇದೇನು ಅಷ್ಟೊಂದು ಫೇಮಸ್ಸಾ ಆ ವೈದ್ಯ ಅಂತ ಕೇಳಿದರೆ, ಹೌದು ಎನ್ನುತ್ತಾರೆ ಅಲ್ಲಿನ ಜನ.

ಏಕೆಂದರೆ, ಈ ವೈದ್ಯ ಕೇವಲ ವೈದ್ಯನಷ್ಟೇ ಅಲ್ಲ. ಈ ದೇಶದ ಪ್ರಧಾನಮಂತ್ರಿ. ಹೌದು, ಭೂತಾನ್ ಪ್ರಧಾನಿ ಲೊತಯ್ ಶೆರಿಂಗ್ ವೃತ್ತಿಯಲ್ಲಿ ವೈದ್ಯರಾಗಿದ್ದರು. ರಾಜಕೀಯ ಸೇವೆ ಮಾಡುವ ಇರಾದೆಯಿಂದ ಚುನಾವಣೆಗೆ ಸ್ಪರ್ಧಿಸಿದರು. 2018ರಲ್ಲಿ 7.5 ಲಕ್ಷ ಜನಸಂಖ್ಯೆ ಉಳ್ಳ ಭೂತಾನ್ ರಾಷ್ಟ್ರಕ್ಕೆ ಪ್ರಧಾನಿಯಾಗಿ ಆಯ್ಕೆಯಾದರು. ತಾನು ಪ್ರಧಾನಿಯಾದೆ ಎಂದು ಲೊತಯ್ ಶೆರಿಂಗ್ ವೈದ್ಯ ವೃತ್ತಿಯನ್ನು ಮರೆಯಲಿಲ್ಲ. 'ಕೆಲವರು ಗಾಲ್ಫ್ ಆಡುತ್ತಾರೆ, ಕೆಲವರು ಬಿಲ್ಲುಗಾರಿಕೆ ಇಷ್ಟಪಡುತ್ತಾರೆ, ಆದರೆ, ನನಗೆ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಇಷ್ಟ'ಎಂದು ಹೇಳುತ್ತಾರೆ.

ಭೂತಾನ್ ದೇಶದ ರಾಜಧಾನಿ ಥಿಂಫು. ಇಲ್ಲಿನ ಜಿಗ್ಮೆ ದೋರ್ಜಿ ವಂಗ್ ಚಕ್ ರಾಷ್ಟ್ರೀಯ ಆಸ್ಪತ್ರೆಯಲ್ಲಿ ಪ್ರತಿ ಶನಿವಾರ ನಿಗದಿಯಾಗಿರುವ ರೋಗಿಗಳಿಗೆ ಪ್ರಧಾನಮಂತ್ರಿಯೇ ಶಸ್ತ್ರ ಚಿಕಿತ್ಸೆ ನಡೆಸುತ್ತಾರೆ. ಈ ಆಸ್ಪತ್ರೆಯಲ್ಲಿ ಪ್ರಧಾನಿ ಲೊತಯ್ ಚಿಕಿತ್ಸೆ ನಡೆಸುವಾಗ ಯಾವುದೇ ವಿಶೇಷ ಭದ್ರತೆಯಾಗಲೀ, ಸಹಾಯಕರಾಗಲಿ ಇರುವುದಿಲ್ಲ. ನರ್ಸ್‌‌ಗಳು ಎಂದಿನಂತೆ ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಆಸ್ಪತ್ರೆಯ ಸಿಬ್ಬಂದಿಯೂ ಯಾವುದೇ ಆತಂಕವಿಲ್ಲದೆ, ಶಾಂತಯುತವಾಗಿ ಆಸ್ಪತ್ರೆಯಲ್ಲಿ ಇರುತ್ತಾರೆ.

ಇಲ್ಲಿ ಟ್ರಾಫಿಕ್ ಲೈಟ್ಸ್ ಇಲ್ಲ

ಶೇ.60 ರಷ್ಟು ಅರಣ್ಯ ಪ್ರದೇಶವುಳ್ಳ ಭೂತಾನ್‌‌ನಲ್ಲಿ ಎಕೋ ಟೂರಿಸಂಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯವೂ ಬರುತ್ತಿದೆ. ವಿದೇಶಿಯರಿಗೆ $ 250ರವರೆಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ. ಇಲ್ಲಿ ಹೊಗೆಸೊಪ್ಪು ಬಳಸುವುದು ನಿಷೇಧ. ಜಗತ್ತಿನ ಎಲ್ಲಾ ನಗರಗಳಲ್ಲಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುವ ಟ್ರಾಫಿಕ್ ಲೈಟ್‌‌ಗಳು ಇಲ್ಲಿಲ್ಲ. ಬೌದ್ಧ ಧರ್ಮ ಪಾಲಕರಾದ ಇಲ್ಲಿನ ಜನ ಶಾಂತಿಪ್ರಿಯರು. 

ಬಿಲ್ಲುಗಾರಿಕೆ ಸ್ಪರ್ಧೆ ಸೇರಿದಂತೆ ಹಲವು ಬಗೆಯ ಸ್ಥಳೀಯ ಆಟೋಟ ಸ್ಪರ್ಧೆಗಳು ವಿದೇಶಿಯರನ್ನು ಸೆಳೆಯುತ್ತವೆ.  ಎಲ್ಲಾ ದೇಶಗಳಂತೆ ಇಲ್ಲಿಯೂ ಭ್ರಷ್ಟಾಚಾರ, ಬಡತನ, ನಿರುದ್ಯೋಗ, ಕ್ರಿಮಿನಲ್ ಗ್ಯಾಂಗ್‌‌ಗಳು ಇವೆ. ಇವೆಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ಪ್ರಧಾನಿ ಲೊತಯ್ ಹೇಳುತ್ತಾರೆ.

ಪ್ರಧಾನಿ ಲೊತಯ್, ಬಾಂಗ್ಲಾ, ಜಪಾನ್, ಆಸ್ಟ್ರೇಲಿಯಾದಲ್ಲಿ ತರಬೇತಿ ಪಡೆದಿದ್ದು, 2013 ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಆ ವರ್ಷದಲ್ಲಿ ಲೊತಯ್ ಪಕ್ಷ ಬಹುಮತ ಪಡೆಯಲಿಲ್ಲ ಸೋಲು ಅನುಭವಿಸಿತು. 2018ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾಗಿ ಹೇಳುತ್ತಾರೆ. 2013ರಲ್ಲಿ ಚುನಾವಣೆಯಲ್ಲಿ ಸೋತಾಗ ರಾಜ ಜಿಗ್ಮೆ ಕೇಶರ್ ಅವರು ಕರೆದು, ವೈದ್ಯರ ಒಂದು ತಂಡದೊಂದಿಗೆ ಇಡೀ ಭೂತಾನ್ ಸುತ್ತಿ ಗ್ರಾಮೀಣ ಭಾಗದ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುವಂತೆ ತಿಳಿಸಿದರು. ಅದರಂತೆ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಜನರಿಗೆ ಉಚಿತ ಆರೋಗ್ಯ ಸೇವೆ ನೀಡಲಾಯಿತು ಎನ್ನುತ್ತಾರೆ ಲೊತಯ್.

 ಈಗ ಪ್ರಧಾನಿಯಾಗಿದ್ದೇನೆ, ನನಗೆ ನಿಗದಿಯಾದ ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಿದ್ದೇನೆ. ಶನಿವಾರ ಇದಕ್ಕೆ ಮೀಸಲು. ಭಾನುವಾರ ನಮ್ಮ ಕುಟುಂಬದ ಜೊತೆ ಇರಲು ಇಷ್ಟ. ಪ್ರಧಾನಿ ಕಚೇರಿಗೆ ಆಗಮಿಸುತ್ತಿದ್ದಂತೆ ನನ್ನ ವೈದ್ಯ ಕೋಟನ್ನು ಕುರ್ಚಿಗೆ ನೇತುಹಾಕಿ ಪ್ರಧಾನಿ ಕೆಲಸ ನೋಡುತ್ತೇನೆ. ನನಗೆ ಯಾವಾಗಲೂ ಪ್ರಧಾನಿಯಾಗಿದ್ದರೂ ಬಡವರಿಗೆ ಆರೋಗ್ಯ ಸೇವೆ ನೀಡುವುದೇ ಪ್ರಮುಖ ವಿಷಯ ಎನ್ನುತ್ತಾರೆ.

ಆರೋಗ್ಯದ ವಿಚಾರದಲ್ಲಿ ಭೂತಾನ್‌‌ನ ಜನರು ನೇರವಾಗಿ ಹಣ ಪಾವತಿ ಮಾಡಲು ಸಾಧ್ಯವಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳ ಅಗತ್ಯವಿದೆ. ದೇಶದ ಜನರ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಶಿಶುಮರಣ, ಸಾಂಕ್ರಾಮಿಕ ರೋಗಗಳು, ಮಧುಮೇಹ, ಮದ್ಯವ್ಯಸನಗಳನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಆರೋಗ್ಯದ ವಿಷಯದಲ್ಲಿ ನಾವು ನಿಧಾನವಾಗಿಯಾದರೂ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ ಎಂದು ಲೊತಯ್ ಶೆರಿಂಗ್ ಹೇಳುತ್ತಾರೆ.

ಪ್ರಧಾನಿಯಿಂದ ಶಸ್ತ್ರಚಿಕಿತ್ಸೆಗೆ ಒಳಗಾದ 40 ವರ್ಷದ ವ್ಯಕ್ತಿ ಭೂಂತಾಪ್‌ರನ್ನು ಮಾತನಾಡಿಸಿದಾಗ '5 ಗಂಟೆಗಳ ಕಾಲ ನನಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ನಾನು ಪ್ರಧಾನಿಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಅನ್ನೋ ಖುಷಿ ಇದೆ. ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ 'ಎಂದು ಹೇಳುತ್ತಾರೆ.

ನಾನು ವೈದ್ಯ. ಆಸ್ಪತ್ರೆಯಲ್ಲಿ ನಾನು ರೋಗಿಗಳಿಗೆ ಸ್ಕ್ಯಾನ್ ಮಾಡುತ್ತೇನೆ. ರೋಗಿಗಳಿಗೆ ಚಿಕಿತ್ಸೆ ನೀಡುತ್ತೇನೆ. ಅದೇ ರೀತಿ ಆಡಳಿತದಲ್ಲಿಯೂ ಎಲ್ಲಾ ರೀತಿಯ ಸ್ಕ್ಯಾನ್ ಮಾಡಿ ಉತ್ತಮ ಆಡಳಿತ ನೀಡಲು ಪ್ರಯತ್ನಿಸುತ್ತೇನೆ. ನಾನು ಸಾಯುವವರೆಗೂ ವೈದ್ಯ ವೃತ್ತಿಯಲ್ಲಿರಲು ಇಷ್ಟಪಡುತ್ತೇನೆ ಎನ್ನುತ್ತಾರೆ ಪ್ರಧಾನಿ ಲೊತಯ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು