ಗುರುವಾರ , ಏಪ್ರಿಲ್ 22, 2021
29 °C

ಸ್ಪಿತಿ ಕಣಿವೆಯಲಿ ಬೈಕ್ ಸವಾರಿ

ಪರಿಮಳ ಅನಂತ Updated:

ಅಕ್ಷರ ಗಾತ್ರ : | |

Prajavani

ಬೈಕಿನಲ್ಲಿ ಹಿಮಾಲಯದ ತಪ್ಪಲಿನ ಸ್ಪಿತಿ ನದಿ ಕಣಿವೆ ಸುತ್ತಾಟಕ್ಕೆ ಹೊರಟಾಗ, 12 ವರ್ಷದ ನನ್ನ ಮಗ ಸಮೀರ ಕೂಡ ಬರುತ್ತೇನೆಂದ. ಹಿಮಾಚ್ಛಾದಿತ ಪ್ರದೇಶ, ಭೂಕುಸಿತ, ಹಿಮಪಾತದಂತಹ ಅಪಾಯಗಳ ಸೂಚನೆಯಿರುವ ರಸ್ತೆಗಳಲ್ಲಿ ಮಗನನ್ನು ಹಿಂದೆ ಕೂರಿಸಿಕೊಂಡು ಬೈಕ್ ಓಡಿಸುವುದು ಸಾಹಸ ಎನ್ನಿಸಿತ್ತು. ಆದರೂ ಮನದೊಳಗಿನ ಉತ್ಸಾಹದ ಎದುರು ಅದೆಲ್ಲ ನಗಣ್ಯವಾಯಿತು. ಎರಡನೇ ಯೋಚನೆ ಮಾಡದೇ, ದೆಹಲಿಯ ‘ಡೆವಿಲ್ಸ್‌ ಆನ್‌ ವೀಲ್ಸ್‌’ ಪ್ರವಾಸಿ ಸಂಸ್ಥೆಯಲ್ಲಿ ನೋಂದಣಿ ಮಾಡಿಸಿದೆ. ಮಗನೊಂದಿಗೆ ಬೆಂಗಳೂರಿನಿಂದ ವಿಮಾನ ಏರಿ ದೆಹಲಿ ತಲುಪಿದೆ.

ಪ್ರವಾಸಿ ಸಂಸ್ಥೆಯಿಂದ ಥಂಡರ್‌ಬರ್ಡ್‌ 500 ಸಿಸಿ ಬೈಕ್‌ ತೆಗೆದುಕೊಂಡೆ. ಇಬ್ಬರೂ ರೈಡಿಂಗ್‌ಗೆ ಅಗತ್ಯವಾದ ಸುರಕ್ಷ ಕವಚಗಳನ್ನು ಧರಿಸಿದೆವು. ದೆಹಲಿ ಸಮೀಪದ ಗುರುಗ್ರಾಮದಿಂದ ಬೈಕ್‌ ಪ್ರಯಾಣ ಆರಂಭವಾಯಿತು. ನಮ್ಮೊಂದಿಗೆ ದೆಹಲಿ, ಮುಂಬೈ, ಪುಣೆ, ಚೆನ್ನೈ, ರಾಜಸ್ಥಾನ ಸೇರಿ19 ರೈಡರ್ಸ್ ಇದ್ದರು.

ಬೈಕ್‌ ಪ್ರವಾಸ ಶುರು

ಮೊದಲ ದಿನ ಗುರುಗ್ರಾಮದಿಂದ ತಿಯೋಗ ಹಳ್ಳಿವರೆಗೆ 450 ಕಿ.ಮೀ ಪಯಣ. ಗುರುಗ್ರಾಮ, ಅಂಬಾಲ, ಚಂಡಿಗಡದ ಮೂಲಕ ಶಿಮ್ಲಾ ತಲುಪಿ, ಅಲ್ಲಿಂದ ಕುಫ್ರಿ ಮೂಲಕ ತಿಯೋಗ ಹಳ್ಳಿ ತಲುಪಿದಾಗ ರಾತ್ರಿ 9 ಗಂಟೆ. ಪಯಣದ ದಣಿವು, ದೀರ್ಘ ನಿದ್ದೆಗೆ ಜಾರಿಸಿತು. ಎಚ್ಚರವಾದಾಗ ಗಡಿಯಾರದಲ್ಲಿ ಗಂಟೆ 4.30. ಅಷ್ಟು ಹೊತ್ತಿಗೆ ಸೂರ್ಯ ಹುಟ್ಟಿದ್ದ. ‘ಇಲ್ಲಿ ಬೇಗನೆ ಸೂರ್ಯೋದಯ, ತಡವಾಗಿ ಸೂರ್ಯಾಸ್ತಮಾನ’ ಎಂದು ನಂತರ ಗೊತ್ತಾಯಿತು.

ತಿಯೋಗದಿಂದ ಸಾಂಗ್ಲಾ ಕಣಿವೆಯತ್ತ ಹೊರಟೆವು. ಪಯಣದುದ್ದಕ್ಕೂ ಹರಿಯುವ ನದಿ ಜತೆಗಿರುತ್ತಿತ್ತು. ರಸ್ತೆ ಸರಿ ಇರಲಿಲ್ಲ. ಬೈಕ್‌ ಪಯಣ ಕಠಿಣ ಎನಿಸಿತು. ಆದರೆ, ಹಿಮಾಚ್ಛಾದಿತ ಪರ್ವತಗಳು, ಬೆಟ್ಟದಿಂದ ಮುಗಿಲನ್ನು ಚುಂಬಿಸಲು ಹೊರಟಿದ್ದ ಹಿಮದ ಹೊಗೆ, ಕೆಳಗಡೆ ರಭಸದಿಂದ ಹರಿಯುತ್ತಿದ್ದ ನದಿ.. ಇವೆಲ್ಲವೂ ಕೆಟ್ಟ ರಸ್ತೆಯ ಕಠಿಣ ಪಯಣವನ್ನು ಮರೆಸಿತು. ಕಣಿವೆ ರಸ್ತೆಗಳಲ್ಲಿನ ಪಯಣದ ಅನುಭವ ನಿಜಕ್ಕೂ ರೋಚಕ. ಅದನ್ನು ಅನುಭವಿಸಬೇಕಷ್ಟೇ.

ಸಾಂಗ್ಲದಲ್ಲಿ ಟೆಂಟ್‌ ವಾಸ್ತವ್ಯ

ಮರುದಿನ ಸಾಂಗ್ಲದಿಂದ ಚಾಂಗೊ ಕಡೆಗೆ ಹೊರಟೆವು. ಈ ಪ್ರಯಣದಲ್ಲಿ ಕರ್ಚಮ್‌ ಎಂಬ ಹಳ್ಳಿಯಿಂದ 20 ಕಿ.ಮೀಗಳ ಬೈಕ್‌ ಪ್ರಯಾಣವಿತ್ತಲ್ಲ, ಅದು ನಮ್ಮ ಚಾಲನೆಯ ಕೌಶಲವನ್ನೇ ಪರೀಕ್ಷಿಸುವಂತಿತ್ತು. ಆ ದಿನ ಒಟ್ಟು 220 ಕಿ.ಮೀ ರೈಡ್ ಪೂರ್ಣಗೊಳಿಸಿ, ಸಾಂಗ್ಲದಲ್ಲಿ ಹಾಕಿದ್ದ ಟೆಂಟ್‌ ಹೌಸ್ ಸೇರಿಕೊಂಡ ಮೇಲೆ ಆಯಾಸವೆಲ್ಲ ಮಾಯವಾಯಿತು. ಈ ಟೆಂಟ್‌ ಹಾಕಿದ್ದ ಜಾಗದಲ್ಲಿ 3 ಡಿಗ್ರಿಯಷ್ಟಿತ್ತು ತಾಪಮಾನವಿತ್ತು. ಮಗ್ಗುಲಲ್ಲೇ ರಭಸವಾಗಿ ಹರಿಯುವ ನದಿ, ಸುತ್ತಲೂ ಎಪ್ರಿಕಾಟ್ ಮತ್ತು ಆಪಲ್ ಹಣ್ಣುಗಳ ತೋಟ.. ಇನ್ನೇನು ಬೇಕು ಸುಖನಿದ್ರೆಗೆ?

ಮರುದಿನ ಸಾಂಗ್ಲದಿಂದ ಚಾಂಗೊದತ್ತ ಪಯಣ. ಈ ದಾರಿ ಮೊದಲ ರಸ್ತೆಗಿಂತಲೂ ಕೆಟ್ಟದಾಗಿತ್ತು. ಬೆಟ್ಟಗಳಲ್ಲಿ ನಡೆಯುವ ಬ್ಲಾಸ್ಟಿಂಗ್‌, ಭೂ ಕುಸಿತ ಹಾಗೂ ಹಿಮಪಾತಗಳಿಂದಾಗಿ ರಸ್ತೆ ಈ ಸ್ಥಿತಿ ತಲುಪಿತ್ತು. ಇದನ್ನೆಲ್ಲ ಅರಿತು ಜಾಗ್ರತೆಯಿಂದ ಬೈಕ್‌ ಓಡಿಸುತ್ತಿದ್ದ ನಾವು ದೊಡ್ಡ ಭೂಕುಸಿತಕ್ಕೆ ಸಾಕ್ಷಿಯಾದೆವು. ಇದರಿಂದ ರಸ್ತೆ ಬಂದ್‌ ಆಯಿತು. ಸುಮಾರು ಒಂದು ಗಂಟೆ ಬೈಕ್‌ ನಿಲ್ಲಿಸಿಕೊಂಡು ನಿಂತೆವು. ತಕ್ಷಣ ಕಾರ್ಯಪ್ರವೃತ್ತರಾದ ಗಡಿ ರಸ್ತೆ ಸಾರಿಗೆ ಸಂಸ್ಥೆ ತಂಡದವರು (BRO- Border Road Organisation) ತ್ವರಿತಗತಿಯಲ್ಲಿ ಮಣ್ಣು ಕಲ್ಲುಗಳನ್ನು ಸರಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಆ ತಂಡಕ್ಕೊಂದು ಸಲಾಂ.

ಮುಂದೆ ಚಾಂಗೊದಿಂದ ಕಾಝಾದತ್ತ 140 ಕಿ.ಮೀ ಪ್ರಯಾಣ. ಇಲ್ಲಿ ಈ ದಾರಿ ಉದ್ದಕ್ಕೂ ತುಂಬಾ ಪ್ರೇಕ್ಷಣೀಯ ಸ್ಥಳಗಳಿವೆ. ಆರಂಭದಲ್ಲೇ 550 ವರ್ಷ ಹಳೆಯದಾದ ‘ಮಮ್ಮಿ’ ಸಂಗ್ರಹಿಸಿಟ್ಟಿರುವ ಜಿಯು(Geu) ಹಳ್ಳಿಗೆ ಹೋದೆವು. ಯಾವುದೇ ಪ್ರಿಸರ್ವೇಟಿವ್‌ ಹಾಕದೇ ‘ಮಮ್ಮಿ’ಯನ್ನು ಇಲ್ಲಿ ರಕ್ಷಿಸಲಾಗಿದೆ. ಬಹಳ ಪ್ರಶಾಂತವಾದ ಸ್ಥಳ. ಇದಾದ ನಂತರ ಟಾಬೊ ಎಂಬ ಹಳ್ಳಿಯತ್ತ ಪ್ರಯಾಣ ಮುಂದುವರಿಸಿದೆವು. ಅಲ್ಲಿ ಪ್ರಾಚೀನ ಬೌದ್ಧ ಮಂದಿಗಳಿವೆ. 20 ಅಡಿ ಎತ್ತರದ ಬೋದಿಸತ್ವ ಮೈತ್ರೇಯ ಕೇಂದ್ರವಿದೆ. ಒಂಬತ್ತು ದೇವಸ್ಥಾನಗಳು, ನಾಲ್ಕು ಸ್ತೂಪಗಳು ಹಾಗೂ ಹಲವು ಗುಹೆಗಳಿವೆ. ಮುಂದೆ ಸಿಗುವ ಧಂಕರ್‌ ಹಳ್ಳಿಯಲ್ಲೂ ಬೌದ್ಧ ಮಂದಿರಗಳಿವೆ. ಇದು ಸ್ಪಿತಿ ಹಾಗೂ ಪಿನ್ ನದಿಗಳ ಸಂಗಮ. ಇಲ್ಲಿಂದ ಒಂದು ತಾಸು ಚಾರಣ ಮಾಡಿದರೆ ಧಂಕರ್ ಸರೋವರ ಸಿಗುತ್ತದೆ. ಇವುಗಳನ್ನು ನೋಡಿಕೊಂಡು ಕಾಝಾ ನಗರ ಸೇರಿದೆವು.

ಸುಂದರ ಕಾಝಾದಲ್ಲಿ..

ಕಾಝಾ, ಪ್ರವಾಸಿ ತಾಣಗಳ ಸಂಗಮ ಸ್ಥಳ. ಪಕ್ಕದಲ್ಲೇ ಹಿಕ್ಕಿಮ್ ಎಂಬ ಹಳ್ಳಿ ಇದೆ. ವಿಶ್ವದ ಅತಿ ಎತ್ತರದ ಅಂಚೆ ಕಚೇರಿ ಇರುವ ಸ್ಥಳ ಇದು. ಆ ಕಚೇರಿಗೆ ಭೇಟಿ ನೀಡಿದೆವು. ಆ ನೆನಪಿಗಾಗಿ ಅಲ್ಲಿಂದಲೇ ನಮ್ಮ ಮನೆಗೆ ಹಾಗೂ ಸ್ನೇಹಿತರಿಗೆ ಪತ್ರಗಳನ್ನು ಪೋಸ್ಟ್‌ ಮಾಡಿದೆವು ! ನಂತರದಲ್ಲೇ ಸಿಕ್ಕಿದ್ದು ಕಾಮಿಕ್‌ ಹಳ್ಳಿ. ಇದು ವಿಶ್ವದ ಅತಿ ಎತ್ತರದ ಮೋಟಾರ್‌ ರಸ್ತೆಯ ಜಾಗ.

ನಮ್ಮ ಮುಂದಿನ ಪಯಣ ಕೀಗೊಂಪ ಎಂಬ ಬೌದ್ಧ ಮಂದಿರದತ್ತ. ಇದು ಸ್ಪಿತಿ ನದಿ ಕಣಿವೆಯಲ್ಲಿರುವ ಅತಿ ದೊಡ್ಡ ಬೌದ್ಧ ಮಂದಿರ. ಇವತ್ತಿಗೂ ಇಲ್ಲಿ 200ಕ್ಕೂ ಹೆಚ್ಚು ಬಿಕ್ಕುಗಳು ತರಬೇತಿ ಪಡೆಯುತ್ತಿದ್ದಾರೆ.

ಈ ಹಳ್ಳಿಗಳನ್ನೆಲ್ಲ ಸುತ್ತಾಡಿ ಕಾಝಾಗೆ ವಾಪಸ್ ಆದೆವು. ಬಿಸಿ ಬಿಸಿ ಚೈನೀಸ್ ಆಹಾರ ತಿಂದು, ಸಂಜೆ ಮಾರುಕಟ್ಟೆ ಸುತ್ತಾಟ. ಇಡೀ ಮಾರುಕಟ್ಟೆಯಲ್ಲಿ ವುಲ್ಲನ್ ಬಟ್ಟೆಗಳದ್ದೇ ಕಾರುಬಾರು. ಜತೆಗೆ, ಬೆಳ್ಳಿ ಆಭರಣಗಳು, ಸ್ಥಳೀಯ ಹಣ್ಣುಗಳಿಂದ ಮಾಡಿದ ಜಾಮ್‌ ಮತ್ತು ಜೆಲ್ಲಿ ಉತ್ಪನ್ನಗಳ. ಜತೆಗೆ, ಸ್ಥಳೀಯ ವೈನ್‌ ಕೂಡ ಸಿಗುತ್ತದೆ. ಮಾರುಕಟ್ಟೆ ಸುತ್ತಾಟ, ಸೊಗಸಾದ ಊಟ ಮುಗಿಸಿ ಬಂದು ನಿದ್ರೆಗೆ ಜಾರಿದೆವು. ಮುಂದೆ ಕುಂಜುಂ ಪಾಸ್‌ ಮೂಲಕ ಚಂದ್ರತಾಲ್ ತಲುಪಬೇಕಿತ್ತು. ಆದರೆ, ಹವಾಮಾನ ವೈಪರೀತ್ಯ ಕಾರಣ, ಕಲ್ಪ ಎಂಬ ಗ್ರಾಮದತ್ತ ತೆರಳಿದವು.

ಸೇಬಿನ ತೋಟಗಳ ನಡುವೆ..

ಕಾಝಾದಿಂದ ಶಿಮ್ಲಾದತ್ತ ವಾಪಸ್‌ ಹೋಗುತ್ತಿದ್ದಾಗ, ಸಾಲು ಸಾಲು ಸೇಬಿನ ತೋಟಗಳು ಸಿಕ್ಕವು. ಆ ತೋಟದ ನಡುವಿನ ಪಯಣವೇ ಅದ್ಭುತವಾಗಿತ್ತು. ಬೈಕ್‌ ಓಡಿಸುತ್ತಲೇ ಸೇಬಿನ ತೋಟದಲ್ಲಿದ್ದ ಬಣ್ಣ ಬಣ್ಣದ ಹಕ್ಕಿಗಳನ್ನು ನೋಡಿದೆವು. ದಾರಿಯಲ್ಲಿ ಬೃಹದಾಕಾರವಾದ ಹಿಮಾಲಯನ್ ಹದ್ದು ಕೂಡ ಕಾಣಿಸಿತು. ಚಮರಿ ಮೃಗಗಳು, ಹಿಮಾಲಯದ ಕುರಿಗಳು, ಮೇಕೆಗಳು ಕಂಡವು. ಕಲ್ಪದಲ್ಲಿ ಉಪಹಾರ ಸೇವಿಸಿ ಶಿಮ್ಲಾದತ್ತ ಹೊರಟೆವು. 

ಅಲ್ಲಿಗೆ ಸ್ಪಿತಿ ನದಿ ಕಣಿವೆಯ ಪ್ರವಾಸ ಅದ್ಭುತ ಹಾಗೂ ಸ್ಮರಣೀಯವಾಗಿ ಪೂರ್ಣಗೊಂಡಿತು. ಭಗವಂತನ ಸೃಷ್ಟಿ, ಪ್ರಕೃತಿಯ ಸೊಬಗು, ಮನುಷ್ಯನ ಆಧುನಿಕತೆ, ಎಲ್ಲಾವನ್ನು ಅನುಭವಿಸುವ ಅವಕಾಶ ಸಿಕ್ಕಿತು. ಇದು ಸಮೀರ ಹಾಗೂ ನನಗೂ ಮರೆಯಲಾಗದಂತ ರೋಚಕ ಪ್ರವಾಸವಾಗಿತ್ತು.

ಬೈಕ್‌ ರೈಡಿಂಗ್ ಪ್ರವಾಸ ಎಲ್ಲ ಟೂರ್‌ಗಿಂತ ತುಸು ವಿಭಿನ್ನ ಅನುಭವ ನೀಡುತ್ತದೆ. ಹೊಸ ಜಾಗಗಳು, ಹೊಸ ಜನರು ಪರಿಚಯವಾಗುತ್ತಾರೆ. ಹೊಸ ಹೊಸ ಸ್ನೇಹಿತರೂ ಸಿಗುತ್ತಾರೆ. ಪ್ರವಾಸದ ನಂತರ ತುಂಬಾ ರಿಫ್ರೆಷ್‌ ಆಗಿಬಿಡುತ್ತೇವೆ. ವರ್ಷದಲ್ಲಿ ಒಮ್ಮೆಯಾದರೂ ಇಂಥ ಪ್ರವಾಸ ಮಾಡಲೇಬೇಕು !

ಇವೆಲ್ಲ ನಿಮ್ಮೊಂದಿಗಿರಲಿ

ಬೈಕ್‌ ರೈಡ್‌ಗೆ ಹೊರಡುವಾಗ ಜತೆಯಲ್ಲಿ ಭಾವಚಿತ್ರ ಸಹಿತ ಗುರುತಿನ ಪತ್ರಗಳ ನಕಲು ಪ್ರತಿಗಳಿರಲಿ. ಬೆಚ್ಚಗಿನ ಉಡುಪುಗಳು (ಥರ್ಮಲ್ ಮತ್ತು ವುಲ್ಲನ್ ಸ್ವಟರ್‌, ಟೋಪಿ, ಕೈಗವಸು), ಡ್ರೈ ಫ್ರೂಟ್ಸ್, ಚಾಕೊಲೆಟ್ಸ್‌, ವಾಟರ್ ಬಾಟಲ್‌, ಟಾರ್ಚ್‌ ಜತೆಗೆ, ಮೊಬೈಲ್‌ ಪೋನ್‌ಗೆ ಬಿಎಸ್‌ಎನ್‌ಎಲ್‌ ಸಿಮ್ ಇದ್ದರೆ ಒಳ್ಳೆಯದು.

ಸ್ವಲ್ಪ ಟಿಪ್ಸ್‌

ಏಜೆನ್ಸಿಯಲ್ಲಿ ನೀವೇ ಬೈಕ್‌ ಆಯ್ಕೆ ಮಾಡಿಕೊಳ್ಳಿ. ಪ್ರತಿ ದಿನ ಪೆಟ್ರೋಲ್‌ ಚೆಕ್ ಮಾಡಿಕೊಳ್ಳಿ. ಎಮರ್ಜೆನ್ಸಿಗಾಗಿ ವಾಹನದಲ್ಲಿ ಪೆಟ್ರೋಲ್ ಇಟ್ಟುಕೊಳ್ಳಬೇಕು.

ಗೇರ್‌ ಹತೋಟಿಯಲ್ಲೇ ಬೈಕ್‌ ವೇಗ ನಿಯಂತ್ರಣದಲ್ಲಿರಬೇಕು.

ಕಣಿವೆಗಳಲ್ಲಿ ಭೂ ಕುಸಿತದ ಸಾಧ್ಯತೆ ಹೆಚ್ಚು. ಹಾಗಾಗಿ ಬೈಕ್‌ ಓಡಿಸುವಾಗ ರಸ್ತೆ, ಅಕ್ಕ–ಪಕ್ಕದಲ್ಲಿರುವ ಬೆಟ್ಟ ಗುಡ್ಡಗಳನ್ನು ಗಮನಿಸಬೇಕು. 

ಬೈಕ್‌ ಪಯಣದಲ್ಲಿ ವೇಗಕ್ಕಿಂತ ಜಾಗ್ರತೆ ಮುಖ್ಯ. ಏಕೆಂದರೆ ರಸ್ತೆಗಳು ಉತ್ತಮವಾಗಿರುವುದಿಲ್ಲ. ಹಾಗಾಗಿ ಸುತ್ತಮುತ್ತಲಿನ ಸೌಂದರ್ಯ ನೋಡುತ್ತಾ ನಿಧಾನವಾಗಿ ಚಲಿಸಬೇಕು.

ಸ್ಪಿತಿ ಎಲ್ಲಿದೆ ?

ಹಿಮಾಲಯದಲ್ಲೇ ಅತ್ಯಂತ ಶೀತ ಪ್ರದೇಶ (cold desert)ಸ್ಪಿತಿ ನದಿ ಕಣಿವೆ. ಇದು ಹಿಮಾಚಲ ಪ್ರದೇಶದ ಈಶಾನ್ಯ ಭಾಗದಲ್ಲಿದೆ. ಸ್ಪಿತಿ ಎಂದರೆ ‘ದಿ ಮಿಡಲ್ ಲ್ಯಾಂಡ್’ ಅಥವಾ ‘ಮಧ್ಯದಲ್ಲಿರುವ ಪ್ರದೇಶ’ ಎಂದು ಅರ್ಥ. ಇದು ಟಿಬೆಟ್‌ ಹಾಗೂ ಭಾರತದ ನಡುವಿರುವ ಜಾಗ. ಇಲ್ಲಿ ಸ್ಪಿತಿ ಎಂಬ ನದಿ ಹರಿಯುತ್ತದೆ. ಇದು ಸಮುದ್ರಮಟ್ಟದಿಂದ 12500 ಅಡಿ ಎತ್ತರದಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.