ಶನಿವಾರ, ಡಿಸೆಂಬರ್ 7, 2019
21 °C

ವಿಜಯಪುರದ ಕಪ್ಪು ತಾಜ್‌

Published:
Updated:

ಬಹಳ ದಿನಗಳಿಂದ ಉತ್ತರಕರ್ನಾಟಕದ ಕಡೆ ಹೋಗಬೇಕೆಂದು ಅನಿಸುತ್ತಿತ್ತು. ಅದೇ ವೇಳೆಗೆ ವಿಜಯಪುರದಿಂದ ಗೆಳೆಯನ ಮದುವೆಗೆ ಕರೆ ಬಂತು. ನಾಲ್ವರು ಗೆಳೆಯರು ಸೇರಿ ಹೊರಟೆವು.

ಮದುವೆ ಮುಗಿಸಿ ಮಾರನೆಯ ದಿನ ವಿಜಯಪುರದ ಪ್ರಸಿದ್ಧ ಸ್ಥಳಗಳನ್ನು ವೀಕ್ಷಿಸುವ ಸಲುವಾಗಿ ಪಟ್ಟಿ ಮಾಡಿ ಹೊರಟಾಗ, ಮೊದಲು ತಲುಪಿದ್ದು ‘ಇಬ್ರಾಹಿಂ ರೋಜಾ’ಕ್ಕೆ.

ಇಬ್ರಾಹಿಂ ರೋಜಾ ಎದುರು ಬಂದು ಇಳಿದ ತಕ್ಷಣ ಅಲ್ಲಿನ ಅದ್ಭುತ ವಾಸ್ತುಶಿಲ್ಪವನ್ನು ಕಂಡು ಬೆರಗಾದೆವು. ಆಹಾ! ಅಂತಹ ಸ್ಥಳವನ್ನು ನೋಡಲು ಎರಡೂ ಕಣ್ಣುಗಳು ಸಾಲವು.

‘ಗೋವಿಂದಾಯ ನಮಃ’ ಸಿನಿಮಾದ ‘ಪ್ಯಾರ್‍ಗೆ ಆಗ್ಬುಟ್ಟೈತೆ, ನಮ್ದುಕ್ಕೆ ಪ್ಯಾರ್‍ಗೆ ಆಗ್ಬುಟ್ಟೈತೆ’ ಗೀತೆಯನ್ನು ಇಲ್ಲೇ ಚಿತ್ರೀಕರಿಸಲಾಗಿದೆ. ಈ ರೋಜಾವನ್ನು ‘ಕಪ್ಪು ತಾಜ್’ ಎಂತಲೂ ಕರೆಯುತ್ತಾರೆ.

ಇಂಥ ಕಪ್ಪು ತಾಜ್ ಮುಂದೆ ಪಕ್ಷಿಗಳ ಕಲರವ, ಸುಂದರ ಹಸಿರು ಉದ್ಯಾನ, ಹೂವಿನ ಗಿಡಗಳು, ಅದರಲ್ಲಿ ಆಟವಾಡುತ್ತಿರುವ ಮಕ್ಕಳು ಎಲ್ಲವನ್ನೂ ಕಂಡು ಮನಸ್ಸಿಗೆ ಹಿತವಾಯಿತು.

ವಿಜಯಪುರದಲ್ಲಿ ಅನೇಕ ಶತಮಾನಗಳ ಇತಿಹಾಸವಿರುವ ಅದೆಷ್ಟೋ ಸ್ಮಾರಕಗಳಿವೆ. ಆದರೆ ಈ ಇಬ್ರಾಹಿಂ ರೋಜಾ ಮಾತ್ರ ಪ್ರವಾಸಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಆ ಕಾಲದ ಅರಸರ ಪ್ರೀತಿಯ ಸಂಕೇತವಾಗಿರುವ ಇದು ಈಗಿನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಕಪ್ಪು ತಾಜ್‍ನ ಇತಿಹಾಸ

ಈ ಇಬ್ರಾಹಿಂ ರೋಜಾದ ಇತಿಹಾಸ ಅಚ್ಚರಿಯಾಗಿದೆ. ಎರಡನೇ ಇಬ್ರಾಹಿಂ ಆದಿಲ್‍ಶಾಹಿ ತನ್ನ ಪ್ರೀತಿಯ ಮಡದಿ ತಾಜ್ ಸುಲ್ತಾನ್‍ಳಿಗಾಗಿ ಇದನ್ನು ನಿರ್ಮಿಸಿದ್ದನು(1580-1626). ಆದರೆ ಸ್ಮಾರಕ ಅರ್ಧದಲ್ಲಿದ್ದಾಗಲೇ ಅರಸ ಕೊನೆಯುಸಿರೆಳೆಯುತ್ತಾನೆ. ತನ್ನ ಮೇಲಿದ್ದ ಅಪಾರ ಪ್ರೇಮದಿಂದ ಅರಸ ನಿರ್ಮಿಸುತ್ತಿದ್ದ ‘ರೋಜಾ’ (ರಾಜ ಪರಿವಾರದ ಸಮಾಧಿ ಸ್ಥಳಕ್ಕೆ ರೋಜಾ ಎನ್ನುವರು) ನಿರ್ಮಾಣವನ್ನು ವಾಸ್ತುಶಿಲ್ಪಿ ಮಲ್ಲಿಕ್ ಸಂದಲ್ ಮಾರ್ಗದರ್ಶನದಲ್ಲಿ ರಾಣಿತಾಜ್ ಸುಲ್ತಾನಳೇ ಮುತುವರ್ಜಿವಹಿಸಿ ಪೂರ್ಣಗೊಳಿಸುತ್ತಾಳೆ.

‘ತಾಜ್‍ರೋಜಾ’ ಆಗಬೇಕಿದ್ದ ಸ್ಮಾರಕ ‘ಇಬ್ರಾಹಿಂ ರೋಜಾ’ ಆಯಿತು (ಎರಡನೇ ಇಬ್ರಾಹಿಂ ಆದಿಲ್‍ಶಾಹಿ ಮತ್ತು ತಾಜ್ ಸುಲ್ತಾನಳ ಸಮಾಧಿಯೂ ಇಲ್ಲಿದೆ). ಇದೇ ಮುಂದೆ ವಿಶ್ವಪ್ರಸಿದ್ಧ ತಾಜ್‍ಮಹಲ್ ನಿರ್ಮಾಣಕ್ಕೆ ಸ್ಫೂರ್ತಿಯಾಯಿತಂತೆ.

ಈ ಕಪ್ಪು ತಾಜ್‍ ಇಬ್ರಾಹಿಂ ರೋಜಾ ಸೂಕ್ಷ್ಮ ಹಾಗೂ ಕಲಾತ್ಮಕ ಕುಸುರಿಯಿಂದ ಅಲಂಕೃತವಾಗಿದೆ. ದೃಢಗಾರೆಯಿಂದ ಆಧಾರ ರಹಿತವಾಗಿ ನಿರ್ಮಿಸಿದ ಅಚ್ಚರಿಯ ಮೇಲ್ಛಾವಣಿ ಇದೆ. ಅದರಲ್ಲಿ ಅದ್ಭುತ ಎನ್ನಿಸುವಂತಹ ವಾಸ್ತು ಶಿಲ್ಪಿಗಳಿವೆ. ಅಮೋಘ ಕಲ್ಪನೆಯಲ್ಲಿ ಮೂಡಿ ಬಂದಿರುವ ತಾಂತ್ರಿಕ ನೈಪುಣ್ಯ ಹಾಗೂ ಅಸಾಮಾನ್ಯ ಪ್ರತೀಕ. ಇಬ್ರಾಹಿಂ ರೋಜಾದಲ್ಲಿ ಗಾಳಿ ಬೆಳಕಿನ ಸಂಯೋಜನೆ ಅಭೂತಪೂರ್ವವಾಗಿದೆ. ಪರ್ಷಿಯನ್ ಭಾಷೆಯಲ್ಲಿ ಕುರಾನ್‍ನ ಪ್ರಮುಖ ಸಾಲುಗಳನ್ನು ಸ್ಮಾರಕದ ಮೇಲೆ ಬರೆಯಲಾಗಿದೆ. ಇಲ್ಲಿಂದ ನೆಲಮಾಳಿಗೆ ಮೂಲಕ ಗೋಲಗುಮ್ಮಟ, ಸಂಗೀತ ಮಹಲ್ ಸೇರಿದಂತೆ ರಾಜರ ಪರಿವಾರವಿದ್ದಂತಹ ಪ್ರಮುಖ ಸ್ಥಳಗಳಿಗೆ ಸಂಪರ್ಕ ರಸ್ತೆಯಿತ್ತು ಎಂದು ಹೇಳಲಾಗುತ್ತಿದೆ.

ವೈರಿಗಳು ದಾಳಿ ಮಾಡಿದಾಗ ರಾಜ ಪರಿವಾರ ಸೇರಿದಂತೆ ಪ್ರಮುಖರು ಇದೇ ಮಾರ್ಗದಲ್ಲಿ ತಪ್ಪಿಸಿಕೊಳ್ಳಲು ಈ ನೆಲಮಾಳಿಗೆ ನಿರ್ಮಿಸಲಾಗಿತ್ತಂತೆ. ರೋಜಾದ ಬಾಗಿಲುಗಳಲ್ಲಿರುವ ನೆಲಮಾಳಿಗೆಯ ರಸ್ತೆಯ ನಕ್ಷೆಯನ್ನು ಇಂದಿಗೂ ಕಾಣಬಹುದು. ಆದರೆ ನೆಲಮಾಳಿಗೆ ರಸ್ತೆ ಅಸ್ತವ್ಯಸ್ತಗೊಂಡಿದೆ. ಒಂದೇ ಶಿಲೆಯಲ್ಲಿ ಕಟ್ಟಿರುವ ರೋಜಾ ತನ್ನುದ್ದಳತೆಯ ಸಮರೂಪತೆಗೆ ಹೆಸರಾಗಿದೆ. ಇದರ ಶಿಲ್ಪಿಯ ಗೋರಿಯೂ ಇಲ್ಲಿಯೇ ಇದೆ.

ಇಂತಹ ಪ್ರೀತಿಯ ದ್ಯೋತಕವೆನಿಸಿರುವ, ಪ್ರೇಮಿಗಳಿಗೆ ನೆಚ್ಚಿನ ಸ್ಥಳವಾಗಿರುವ ಇಬ್ರಾಹಿಂ ರೋಜಾವನ್ನು ನೋಡುತ್ತಾ ಅಲ್ಲಿಯೇ ಇದ್ದುಬಿಡಬೇಕೆನಿಸಿತ್ತು. ಆದರೆ ವಿಧಿಯಿಲ್ಲದೆ ಅಲ್ಲಿಂದ ಹೊರಟು ವಿಜಯಪುರದ ಇತರೆ ಸ್ಥಳಗಳಾದ ಬಾರಾಕಮಾನ್, ಪ್ರಸಿದ್ಧ ಗೋಲಗುಮ್ಮಟ, ಶಿವಗಿರಿಯ ಶಿವನ ದರ್ಶನ ಮಾಡಿಕೊಂಡು ರಾತ್ರಿ ಊಟವನ್ನು ಮುಗಿಸಿ ರಾತ್ರಿ 10.30ಕ್ಕೆ ಅಲ್ಲಿಂದ ಬಸ್‍ನಲ್ಲಿ ವಾಪಸ್ ತಮಕೂರಿನತ್ತ ಪ್ರಯಾಣಿಸಿದೆವು. ಆಯಾಸದಿಂದ ಪ್ರಯಾಣದಲ್ಲಿ ಬೇಗನೇ ಎಲ್ಲರೂ ನಿದ್ರಾದೇವಿಗೆ ಶರಣಾದರು.

ನಿದ್ದೆಯ ಕನಸಿನಲ್ಲಿ ಪ್ರೇಮಿಗಳ ಪ್ಯಾರ್‍ಗೆ ವೇದಿಕೆಯಂತಿರುವ ಇಬ್ರಾಹಿಂ ರೋಜಾ ಮಾತ್ರ ಕಪ್ಪು ತಾಜ್ ಎಂಬ ಅನ್ವರ್ಥ ಹೆಸರಿನೊಂದಿಗೆ ಕಾಡುತ್ತಲೇ ಇತ್ತು. ಅದೇ ಕನವರಿಕೆಯಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದ ಎಲ್ಲರಿಗೂ ಎಚ್ಚರವಾಗಿದ್ದು ತುಮಕೂರಿಗೆ ಬಂದಾಗ ಮಾತ್ರ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು