ಸಾಧನೆಗೆ ಅಂಧತ್ವ ಅಡ್ಡಿಯಲ್ಲ

7

ಸಾಧನೆಗೆ ಅಂಧತ್ವ ಅಡ್ಡಿಯಲ್ಲ

Published:
Updated:
Prajavani

ಪಾಲ್‌ಮುದ್ದಾ. ಇವರು ಬಸವನಗುಡಿ ಕೆನರಾ ಬ್ಯಾಂಕಿನ ವಲಯ ವ್ಯವಸ್ಥಾಪಕ. ಜನ್ಮತಃ ಅಂಧರು. ಆದರೆ ಮೇರು ಸಾಧಕ. ಶಿಕ್ಷಣ, ಉದ್ಯೋಗ, ಹುದ್ದೆ ಎಲ್ಲವನ್ನು ಎಲ್ಲ ಸಾಮಾನ್ಯರಂತೆ ಇವರೂ ಗಳಿಸಿದ್ದಾರೆ. ಅಂಧತ್ವ ಮೀರಿ ಸಾಧನೆ ಸಾಧ್ಯ ಎಂದು ನಿರೂಪಿಸಿದ್ದಾರೆ. ಅದರಾಚೆಗೂ ಒಟ್ಟು ಮಾನವೀಯ ಅಭಿವೃದ್ಧಿಗೆ ಕೊಡುಗೆ ನೀಡಿ ತಾವು ಯಾರಿಗೂ ಕಡಿಮಿ ಇಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಅವರು ನಮ್ಮ ನಡುವಿನ ಬೆಳಕಿನಂತಲ್ಲವೇ..

ಅಂಗಾಂಗ ವೈಕಲ್ಯ ದೇಹದ ಅಂಗಾಂಗಳಿಗೇ ಹೊರತು ಮನಸ್ಸಿಗಲ್ಲ ಎನ್ನುವುದನ್ನು ಇವರು ಬಲವಾಗಿ ನಂಬಿದ್ದಾರೆ. ಹುಟ್ಟಿದಂದಿನಿಂದ ಲೋಕವನ್ನೇ ನೋಡಲಾಗದ ಸ್ಥಿತಿಯಿಂದಾಗಿ ಅವರ ಬದುಕು ಸಾಕಷ್ಟು ಕಷ್ಟಗಳಿಂದಲೇ ಕೂಡಿತ್ತು. ಅಂಧ ಮಗು ಎಂಬ ಕಾರಣಕ್ಕೆ ಅವರ ಪೋಷಕರೇ ದೂರ ಮಾಡಿದ್ದರು. ಹಾಗಾಗಿ ಪಾಲ್‌ಮುದ್ದಾ ಅವರಿಗೆ ಪೋಷಕರು ಯಾರು ಎಂಬುದೇ ಗೊತ್ತಿಲ್ಲ!

ಪೋಷಕರಿಂದ ತಿರಸ್ಕರಿಸಲ್ಪಟ್ಟ ಇವರನ್ನು ಪುಟ್ಟ ಮಗುವಿರುವಾಗಲೇ ಯಾರೋ ಒಬ್ಬರು ಮೈಸೂರಿನ ‘ಡಿವೈನ್‌ ಲೈಟ್‌’ ಅಂಧರ ಸಂಸ್ಥೆಗೆ ಸೇರಿಸಿದ್ದರು. ಈ ಶಾಲೆಯಲ್ಲಿ ಬ್ರೈಲ್‌ ಲಿಪಿ, ಚಲನವಲನ ಮತ್ತು ಇಂಗ್ಲಿಷ್‌ ಭಾಷೆಯನ್ನು ಕಲಿತರು. ಅಷ್ಟೇ ಅಲ್ಲ, ಬಿ.ಎ, ಎಂ.ಎ, ಎಂಬಿಎ ಪದವೀಧರರಾಗಿ ಪಿಎಚ್‌.ಡಿ ಪದವಿಯನ್ನು ಪಡೆದು ತಮ್ಮ ಪ್ರತಿಭೆಯನ್ನು ಮೆರೆದರು.

1980ರ ದಶಕದಲ್ಲಿ ಅಂಗವಿಕಲಿರಿಗೆಂದು ಪ್ರಾರಂಭವಾದ ಇಂಟಿಗ್ರೇಟೆಡ್ (ಎಲ್ಲರೊಂದಿಗೆ ಬೆರೆತು) ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳಲ್ಲಿ ಅವರೂ ಒಬ್ಬರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದ ದೃಷ್ಟಿದೋಷವಿರುವ ಮೊದಲ ವ್ಯಕ್ತಿ ಎಂಬ ಹಿರಿಮೆಯೂ ಅವರಿಗಿದೆ.

ಸಮಾಜ ಸೇವಕ ಜೇಮ್ಸ್‌ ಡ್ಯಾನಿಯಲ್‌ ಎನ್ನುವವರು ಪಾಲ್‌ ಮುದ್ದಾ ಅವರ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದಾರೆ. ‘ಓದಲು ನನಗೆ ತುಂಬಾ ಆಸಕ್ತಿ ಇದ್ದರೂ ಸಹಕಾರ ನೀಡುವವರು ಕಡಿಮೆಯಿದ್ದರು. ಕಾಲೇಜುಗಳಲ್ಲಿ ನನಗೆ ಪ್ರವೇಶ ಸಿಗುತ್ತಿರಲಿಲ್ಲ. ಒಂದೊಂದು ರೂಪಾಯಿಗೂ ಕಷ್ಟ ಪಟ್ಟಿದ್ದೇನೆ. ಈಗಿರುವ ಸೌಕರ್ಯಗಳು ಅಥವಾ ಸಿ.ಡಿ, ಆನ್‌ಲೈನ್‌ ವ್ಯವಸ್ಥೆ ನಾನು ಓದುವಾಗ ಇರಲಿಲ್ಲ. ಕ್ಯಾಸೆಟ್‌ಗಳಲ್ಲಿ ರೆಕಾರ್ಡ್‌ ಮಾಡಿಕೊಂಡು ಓದಬೇಕಾಗಿತ್ತು. ಹೀಗೆ ಸಾವಿರಾರು ಕ್ಯಾಸೆಟ್‌ಗಳು ಸಂಗ್ರಹವಾಗಿದ್ದು, ಅದನ್ನು ನನ್ನಂತೆ ಓದುತ್ತಿದ್ದವರಿಗೆ ನೀಡಿದ್ದೇನೆ’ ಎಂದು ಅವರು ತಾನು ನಡೆದು ಬಂದ ದಾರಿಯನ್ನು ಸ್ಮರಿಸುತ್ತಾರೆ. 

ಹಲವು ಕಷ್ಟಗಳನ್ನು ದಾಟಿ ಅವರು ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದಾರೆ. ತಮ್ಮಂತೆ ದೃಷ್ಟಿ ದೋಷದಿಂದ ಬಳಲುತ್ತಿರುವವರಿಗೆ ಆಸರೆಯಾಗಿ ಅವರೊಳಗಿನ ಅನನ್ಯ ಪ್ರತಿಭೆಗಳಿಗೆ ವೇದಿಕೆಯನ್ನೂ ಒದಗಿಸಿದ್ದಾರೆ. ಸ್ನೇಹದೀಪ ಅಂಧರ ಚಾರಿಟಬಲ್‌ ಟ್ರಸ್ಟ್‌ ಅನ್ನು ಸ್ಥಾಪಿಸಿದ್ದಾರೆ. ದೃಷ್ಟಿ ದೋಷದ ಸಮಸ್ಯೆ ಎದುರಿಸುತ್ತಿರುವ ಹಲವರಿಗೆ ಸಂಸ್ಥೆಯ ಮೂಲಕ ಬೆಳಕಾಗಿದ್ದಾರೆ. ಸಮರ್ಥನಂ ಸಂಸ್ಥೆ ನಡೆಸಿಕೊಡುವ ವಿಶೇಷ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದಾರೆ.

ಅಂಗವೈಕಲ್ಯದ ನಡುವೆಯೂ ಅತ್ಯುತ್ತಮ ಕೆಲಸ ನಿರ್ವಹಿಸಿದ್ದಕ್ಕಾಗಿ 2004ರಲ್ಲಿ ‘ಬೆಸ್ಟ್‌ ಫಿಸಿಕಲಿ ಚಾಲೆಂಜ್ಡ್‌ ಎಂಪ್ಲಾಯ್‌’ ಎನ್ನುವ ಪ್ರಶಸ್ತಿಯನ್ನು ಆಗಿನ ರಾಷ್ಟ್ರಪತಿ ಡಾ. ಎ.ಪಿ.ಜಿ ಅಬ್ದುಲ್‌ ಕಲಾಂ ಅವರಿಂದ ಸ್ವೀಕರಿಸಿದ್ದಾರೆ.

ತಮ್ಮ ಸಂಸ್ಥೆಯ ಮೂಲಕ ಅವರು 27 ಬಾರಿ ರಕ್ತದಾನ ಮಾಡಿದ್ದಾರೆ. ಅವರ ಸಮಾಜಸೇವೆಗೆ 2002ರಲ್ಲಿ ಅತ್ಯುತ್ತಮ ಸಮಾಜ ಸೇವಕ ರಾಜ್ಯಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದಿವೆ. ಅವರ ಮಾನವೀಯ ಸೇವೆಯನ್ನು ಪರಿಗಣಿಸಿ 2017ರಲ್ಲಿ ಸಿಂಗಪುರದ ಕಾಮನ್‌ವೆಲ್ತ್‌ ವೊಕೇಷನ್‌ ಯೂನಿವರ್ಸಿಟಿ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ.

ಇವರಿಗೆ ಮುದ್ದಾದ ಮಕ್ಕಳು. ಮಗಳು ಸಂಕಮ್‌ ಎಂಜಿನಿಯರಿಂಗ್‌ ಓದುತ್ತಿದ್ದರೆ, ಮಗ ತರುಣ್‌ ಪಿಯುಸಿ ಓದುತ್ತಿದ್ದಾರೆ. ಹೀಗೆ ಅವರದು ಸುಖೀ ಬದುಕು. ಅಷ್ಟೇ ಸಾರ್ಥಕತೆಯಿಂದ ಕೂಡಿದ್ದು.

ಅವರ ಸ್ನೇಹದೀಪ ಸಂಸ್ಥೆಗೆ ಆಸರೆಯ ಅವಶ್ಯಕತೆ ಇದೆ. ಈಗಿರುವ ಕಟ್ಟಡವನ್ನು ಖಾಲಿ ಮಾಡಬೇಕಿದ್ದು, ಬಿಡಿಎ ನೀಡಿರುವ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ ಎನ್ನುತ್ತಾರೆ ಪಾಲ್‌ಮುದ್ದಾ. ನೆರವಿನ ಹಂಬಲದವರು ಅವರನ್ನು ಸಂಪರ್ಕಿಸಬಹುದು. ದೂರವಾಣಿ 080–25801069, ಮೊಬೈಲ್‌: 9449021997

ಅಂಧರ ಬಾಳಲ್ಲಿ ಬೆಳಕು

1999ರಲ್ಲಿ ಪ್ರಾರಂಭವಾದ ಸ್ನೇಹದೀಪ ಸಂಸ್ಥೆಯ ಮೂಲಕ ನೂರಾರು ಅಂಧರ ಬದುಕಿನಲ್ಲಿ ಬೆಳಕು ಮೂಡಿದೆ. ಈ ಸಂಸ್ಥೆಯನ್ನು ಪಾಲ್‌ ಮುದ್ದಾ, ಜಿ.ಕೆ. ಮೋಹನ್‌ ಹಾಗೂ ಬಿ.ಜಿ ಶ್ರೀಮಾನ್‌ ನಾರಯಣ ಅವರು ಸ್ಥಾಪಿಸಿದ್ದಾರೆ. ಈ ಸಂಸ್ಥೆ ಅಂಧರು, ಶ್ರವಣದೋಷ ಸಮಸ್ಯೆ ಇರುವವರು ಮತ್ತು ಅಂಗವಿಕಲ ಮಕ್ಕಳ ಏಳಿಗೆ‌ಗಾಗಿ ಶ್ರಮಿಸುತ್ತಿದೆ. ಇಂಗ್ಲಿಷ್‌, ಕಂಪ್ಯೂಟರ್‌ ತರಬೇತಿ, ಔದ್ಯೋಗಿಕ ಕೌಶಲಗಳನ್ನು ಕಲಿಸುತ್ತಿದೆ. ಇಲ್ಲಿ ತರಬೇತಿ ಪಡೆದ ಸಾವಿರಾರೂ ಅಂಧರು ತಮ್ಮದೇ ಆದ ಸುಂದರವಾದ ಬದುಕು ಸೃಷ್ಟಿಸಿಕೊಂಡಿದ್ದಾರೆ.   

ಈ ಸಂಸ್ಥೆಯಲ್ಲಿ ಈಗ 120 ಅಂಧ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಊಟ, ವಸತಿ, ಶಿಕ್ಷಣ ಮತ್ತು ಕೌಶಲ ತರಬೇತಿಯನ್ನು ಇಲ್ಲಿ ನೀಡಲಾಗುತ್ತಿದೆ. 2016ರರಲ್ಲಿ ರಾಣಿಬೆನ್ನೂರಿನಲ್ಲಿಯೂ ಶಾಖೆಯನ್ನು ಈ ಸಂಸ್ಥೆ ಪ್ರಾರಂಭಿಸಿದೆ.

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !