ವಸಡಿನಲ್ಲಿ ರಕ್ತವೇ? ನಿರ್ಲಕ್ಷ್ಯ ಬೇಡ!

7

ವಸಡಿನಲ್ಲಿ ರಕ್ತವೇ? ನಿರ್ಲಕ್ಷ್ಯ ಬೇಡ!

Published:
Updated:
Prajavani

ಕೆಲವರಿಗೆ ಹಲ್ಲುಜ್ಜುವಾಗ ಉಗುಳಿದರೆ ಅದು ಕೆಂಪಾಗಿರುತ್ತದೆ. ಊಟ ಮಾಡುವಾಗ, ಹಣ್ಣು ತಿನ್ನುವಾಗ ಅಥವಾ ವಸಡನ್ನು ಮುಟ್ಟಿದರೆ ಅಲ್ಲಿ ರಕ್ತ ಬರುತ್ತದೆ. ಬಾಯಿಯೊಳಗೆ ರಕ್ತದ ವಾಸನೆ ಅಥವಾ ಬಾಯಿಯೆಲ್ಲಾ ಉಪ್ಪು ತಿಂದಂತೆ ಭಾಸವಾಗುತ್ತದೆ. ತಿಂದ ಆಹಾರ ಹಲ್ಲಿನ ಮಧ್ಯೆ ಸಿಕ್ಕಿ ಹಾಕಿಕೊಳ್ಳುತ್ತದೆ. ಅದನ್ನು ತೆಗೆಯುವಾಗಲೂ ರಕ್ತ ಒಸರುತ್ತದೆ.

ಈ ರೀತಿಯ ಲಕ್ಷಣಗಳ್ಯಾವುವಾದರೂ ನಿಮಗೆ ಇದ್ದಲ್ಲಿ ನೀವು ವಸಡಿನಲ್ಲಿ ರಕ್ತ ಬರುವಿಕೆ (ಬ್ಲೀಡಿಂಗ್ ಗಮ್ಸ್) ಸಮಸ್ಯೆ ಅಥವಾ ಜಿಂಜಿವೈಟಿಸ್‍ನಿಂದ ನರಳುತ್ತಿದ್ದೀರಿ. ಇದು ನಮ್ಮ ಭಾರತೀಯರಲ್ಲಿ ಬಹು ಸಾಮಾನ್ಯ.

ಜಿಂಜಿವೈಟಿಸ್ ಅಂದರೇನು?

ವಸಡುಗಳು ಕೆಂಪಾಗಿ ಊದಿಕೊಳ್ಳುವುದು ಈ ಕಾಯಿಲೆಯ ಮೊದಲ ಹಂತ ಹಾಗೂ ಈ ಹಂತದಲ್ಲಿ ವಾಸಿ ಮಾಡುವುದು ಸಹಾ ಸುಲಭವೇ. ನೇರವಾಗಿ ಹೇಳಬೇಕೆಂದರೆ ಮೃದುವಾದ, ಜಿಗುಟಾದ, ಬಣ್ಣವಿಲ್ಲದ ಬ್ಯಾಕ್ಟೀರಿಯಾದ ಪದರವೊಂದು ಹಲ್ಲು ಮತ್ತು ವಸಡುಗಳ ಮೇಲೆ ಮೂಡುತ್ತದೆ. ಹಲ್ಲುಗಳನ್ನು ಬ್ರಷ್ ಮತ್ತು ದಾರದಿಂದ ಸರಿಯಾಗಿ ಶುಚಿಪಡಿಸಿಕೊಳ್ಳದಿದ್ದಲ್ಲಿ ಅದು ವಿಷವಾಗಿ ಪರಿಣಮಿಸಿ ವಸಡಿನ ಕಣಗಳ ಒಳಗೆ ಹೋಗುತ್ತದೆ. ಕಾಯಿಲೆಯ ಲಕ್ಷಣಗಳು ಕಡಿಮೆಯಿದ್ದಾಗ ಚಿಕಿತ್ಸೆ ಪಡೆದರೆ, ಹಲ್ಲು ಮತ್ತು ಅದನ್ನು ಹಿಡಿದಿಟ್ಟುಕೊಂಡಿರುವ ವಸಡು ಅಷ್ಟಾಗಿ ಘಾಸಿಗೊಳ್ಳುವುದಿಲ್ಲ. ಆದರೆ ಅದನ್ನು ಹಾಗೆಯೇ ಬಿಟ್ಟಾಗ ನಿಮ್ಮ ಹಲ್ಲು ಮತ್ತು ವಸಡುಗಳಿಗೆ ಶಾಶ್ವತವಾಗಿ ತೊಂದರೆಯಾಗಬಹುದು.

ವಸಡಿನ ತೊಂದರೆ ಎಂದರೇನು?

1ವಸಡಿನ ತೊಂದರೆಯ ಮೊದಲ ಹಂತದಲ್ಲಿ ಅದನ್ನು ಜಿಂಜಿವೈಟಿಸ್ ಅನ್ನುತ್ತಾರೆ. ಈ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ತೀವ್ರವಾಗಿ ಬಿಡುತ್ತದೆ.

2ಜೊಲ್ಲು, ಆಹಾರ ಮತ್ತು ಬ್ಯಾಕ್ಟೀರಿಯಾದ ಅಂಶಗಳು ಗಟ್ಟಿಯಾಗಿ ಗಾರೆಗಟ್ಟುತ್ತವೆ. ಪರಿಣಾಮ ವಸಡು ಕೆಂಪಗೆ ಮೃದುವಾಗಿ ಬಿಡುತ್ತದೆ.

3ಈ ಗಾರೆಗಟ್ಟುವಿಕೆ ವಸಡಿನ ಅಂಚಿನಲ್ಲಿರುತ್ತದೆ. ಅದನ್ನು ಹಾಗೆಯೇ ಬಿಟ್ಟರೆ ಅದು ಮತ್ತೂ ಗಟ್ಟಿಯಾಗಿ ದಂತ ವೈದ್ಯರಿಂದ ಮಾತ್ರ ತೆಗೆಯಲು ಸಾಧ್ಯ.

4ವಸಡಿನ ತೊಂದರೆ ಬಹಳ ತೀವ್ರವಾದಾಗ ಘಾಸಿಯಾಗುವ ಸಾಧ್ಯತೆ ಹೆಚ್ಚು. ಆಗಿರುವ ಅನಾಹುತಕ್ಕೆ ಏನೂ ಮಾಡಲಾಗದು ಆದರೆ ಬರದಂತೆ ಎಚ್ಚರಿಕೆ ವಹಿಸಬಹುದು.

ಲಕ್ಷಣಗಳು

ಕೆಂಪಗೆ ಊದಿ ಸೂಕ್ಷ್ಮವಾಗಿಬಿಡುವ ವಸಡು. ನೀವು ಬ್ರಷ್ ಮಾಡಿದಾಗ ರಕ್ತ ಒಸರುತ್ತದೆ. ಮತ್ತೊಂದು ಲಕ್ಷಣವೆಂದರೆ ವಸಡು ಹಲ್ಲಿನಿಂದ ಬೇರ್ಪಡುತ್ತಾ ಹೋಗಿ ನಿಮ್ಮ ಹಲ್ಲು ಉದ್ದವಾಗಿ, ಜಾರಿದಂತೆ ಭಾಸವಾಗುತ್ತದೆ. ಹಲ್ಲು ಮತ್ತು ವಸಡಿನ ನಡುವೆ ಬಿರುಕುಂಟಾಗಿ, ಅಲ್ಲಿ ನೀವು ತಿಂದ ಆಹಾರ ಕಣಗಳು ಸೇರಿಕೊಳ್ಳುತ್ತವೆ. ತೊಂದರೆ ತೀವ್ರವಾಗಿಲ್ಲದಿದ್ದರೂ ಕೆಲವರಲ್ಲಿ ಬಾಯಿಯಲ್ಲಿ ದುರ್ಗಂಧ ಉಂಟಾಗುತ್ತದೆ ಹಾಗೂ ರುಚಿ ಕೆಡುತ್ತದೆ. ನೀವು ಹಲ್ಲುಗಳನ್ನು ಕಚ್ಚಿ ಹಿಡಿದಾಗ ಹಲ್ಲು ಕೂಡುವ ಬಗೆಯಲ್ಲಿ ಬದಲಾವಣೆ, ಅಲ್ಲದೆ ಹಲ್ಲು ಮತ್ತು ವಸಡಿನ ಮಧ್ಯೆ ಕೀವು ಸುರಿಯುತ್ತದೆ. ಹಲ್ಲುಗಳು ಸರಿದು ಸಡಿಲವಾಗುತ್ತವೆ. ಕಚ್ಚಿದಾಗ ಸಮತೋಲನ ತಪ್ಪುತ್ತದೆ.

ಕಾರಣಗಳು

ಸರಿಯಾಗಿ ಹಲ್ಲುಗಳನ್ನು ಶುಚಿಪಡಿಸದಿರುವುದು- ಅಂದರೆ ಹಲ್ಲುಗಳ ಮಧ್ಯೆ ಉಳಿದ ಆಹಾರವನ್ನು ತೆಗೆಯದೆ ಹಾಗೆಯೇ ಬಿಟ್ಟು ಅದು ಗಟ್ಟಿಯಾಗಿ ಗಾರೆಗಟ್ಟಿಕೊಳ್ಳುವುದೇ ಇದರ ಮುಖ್ಯ ಕಾರಣವಾದರೂ ಸತ್ವಯುತ ಆಹಾರದ ಕೊರತೆ, ಅನಾರೋಗ್ಯ, ಬಸಿರು ಮತ್ತು ಹಾರ್ಮೋನುಗಳ ಏರುಪೇರು ಮತ್ತು ಸಿಹಿಮೂತ್ರ ಕಾಯಿಲೆಯೂ ಇದಕ್ಕೆ ಕಾರಣವಾಗಬಲ್ಲದು.

ಪರಿಣಾಮಗಳು

ಹಲ್ಲುಗಳು ಮಧ್ಯೆ ಸಂದುಗಳು ಕಾಣಿಸಿಕೊಳ್ಳುತ್ತವೆ. ಹಲ್ಲು ಅದರ ಸ್ಥಳದಿಂದ ದೂರ ಸರಿಯುತ್ತದೆ. ವಸಡು ಕೆಳಗಿಳಿಯುತ್ತದೆ. ಆಗ ಹಲ್ಲು ಮತ್ತು ವಸಡಿನ ಮಧ್ಯೆ ಅಂತರವುಂಟಾಗುತ್ತದೆ. ಮೊದಲು ಹಲ್ಲು ಝುಮ್ಮೆನ್ನಲು ಪ್ರಾರಂಭವಾಗಿ ಕ್ರಮೇಣ ಅಲ್ಲಾಡುತ್ತದೆ. ವಸಡು ಕೆಂಪಾಗಿ ಊದಿದಂತೆ ಕಾಣಿಸುತ್ತದೆ.

ತಡೆಯುವ ಬಗೆ ಹೇಗೆ?

ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಹಲ್ಲುಜ್ಜಿಕೊಳ್ಳುವುದು, ನಾರಿನಂಶವಿರುವ ಆಹಾರದ ಸೇವನೆ, ಸತ್ವಯುತ ಆಹಾರದ ಸೇವನೆ ಮಾಡುವುದೇ ಅಲ್ಲದೆ ಬಸುರಿ ಹೆಂಗಸರು, ಸಿಹಿಮೂತ್ರ ಕಾಯಿಲೆ ಇರುವವರು ವಿಶೇಷವಾದ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು.

ದೇಹದ ಬೇರೆಲ್ಲಾ ಅಂಗಗಳಲ್ಲಿ ಸಮಸ್ಯೆಯಾದ ತಕ್ಷಣವೇ ನೋವು ಕಾಣಿಸಿಕೊಳ್ಳುವಂತೆ ವಸಡಿನ ತೊಂದರೆಯಲ್ಲಿ ತಕ್ಷಣಕ್ಕೆ ನೋವು ಕಾಣಿಸಿಕೊಳ್ಳುವುದಿಲ್ಲ, ಪರಿಸ್ಥಿತಿ ಹದ್ದು ಮೀರಿದಾಗಲೇ ನೋವು, ತೊಂದರೆ ಕಾಣಿಸಿಕೊಳ್ಳುವುದು. ಆದ್ದರಿಂದ ನೋವು ಬರುವವರೆಗೂ ಕಾಯುವುದು ಸರಿಯಲ್ಲ.

ವಸಡಿನ ಎಲ್ಲಾ ಕಡೆಗಳಲ್ಲಿ ಸೋಂಕು ಹರಡಿದ ನಂತರ ಚಿಕಿತ್ಸೆಯ ತೀವ್ರತೆ ಹೆಚ್ಚು. ಖರ್ಚು ಹೆಚ್ಚಾಗುತ್ತದೆ ಹಾಗೂ ಹೆಚ್ಚು ಬಾರಿ ವೈದ್ಯರ ಹತ್ತಿರ ಹೋಗಬೇಕಾಗುತ್ತದೆ. ಆದ್ದರಿಂದ ಸಮಸ್ಯೆ ತೀವ್ರವಾಗುವ ಮುನ್ನ ಚಿಕಿತ್ಸೆ ಪಡೆಯುವುದು ಒಳ್ಳೆಯದು.

ಅನೇಕ ಬಾರಿ ಬರಿಯ ಹಲ್ಲು ಮತ್ತು ವಸಡುಗಳನ್ನು ಶುದ್ಧ ಮಾಡುವುದರಿಂದ ಸಮಸ್ಯೆ ನಿವಾರಿಸಬಹುದು. ಉದಾಸೀನ ಮಾಡಿದಾಗ ಶಸ್ತ್ರ ಚಿಕಿತ್ಸೆ (ಫ್ಲಾಪ್‌ ಸರ್ಜರಿ, ಬೋನ್ ಗ್ರಾಫ್ಟಿಂಗ್) ಮಾಡಬಹುದು.

ಚಿಕಿತ್ಸೆಯ ನಂತರ.. 

1ಸರಿಯಾದ ರೀತಿಯಲ್ಲಿ ಹಲ್ಲನ್ನು ಉಜ್ಜಿಕೊಳ್ಳಬೇಕು. ನೀವು ಎಷ್ಟು ಹೊತ್ತು ಉಜ್ಜಿಕೊಳ್ಳುತ್ತೀರಿ ಎನ್ನುವುದಕ್ಕಿಂತ ಯಾವ ರೀತಿ ಎನ್ನುವುದು ಮುಖ್ಯ.

2ಆಹಾರ ಸೇವನೆ ನಂತರ ಹಲ್ಲನ್ನು ಶುಚಿಪಡಿಸಿಕೊಳ್ಳಬೇಕು.

3ಬಳಸಬೇಕಾದ ಬ್ರಷ್ ಮತ್ತು ಟೂತ್ ಪೇಸ್ಟ್ ಬಗ್ಗೆ ವೈದ್ಯರ ಸಲಹೆ ಪಡೆಯಿರಿ.

4ದಾರದಿಂದ (ಡೆಂಟಲ್ ಫ್ಲಾಸ್) ಹಲ್ಲುಗಳನ್ನು ಶುಚಿಪಡಿಸಿಕೊಳ್ಳಿ.

ಈ ಎಲ್ಲವನ್ನೂ ನಿಮ್ಮ ದಂತವೈದ್ಯರಿಂದ ಕೇಳಿ ಗಮನ ಕೊಡಿ. ಆಗ ನಿಮ್ಮ ಎಲ್ಲಾ ಹಲ್ಲುಗಳನ್ನು ನಿಮ್ಮ ಬಾಯಿಯಲ್ಲೇ ಉಳಿಸಿಕೊಳ್ಳಬಹುದು. 

ಬರಹ ಇಷ್ಟವಾಯಿತೆ?

 • 5

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !