‘ಹಾಸ್ಯ ಸಾಹಿತ್ಯ ರಚನೆಯತ್ತ ಯುವಕರು ಮುಂದಾಗಲಿ’

7

‘ಹಾಸ್ಯ ಸಾಹಿತ್ಯ ರಚನೆಯತ್ತ ಯುವಕರು ಮುಂದಾಗಲಿ’

Published:
Updated:
ನಗರದ ಕಾವ್ಯಕಲಾ ಪ್ರಕಾಶನ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಗಕರ್ಮಿ ಡಾ.ನ.ರತ್ನ (ಎಡದಿಂದ 4ನೇಯವರು) ಅವರು ‘‌ಅಲ್ಪ ಸ್ವಲ್ಪ ವುಡ್‌ಹೌಸ್ ಮತ್ತು ಇತರ ಕಥೆಗಳು’ ಪುಸ್ತಕ ಬಿಡುಗಡೆ ಮಾಡಿ ಲೇಖಕ ಡಾ.ಪಾಲಹಳ್ಳಿ ವಿಶ್ವನಾಥ್ ಅವರಿಗೆ ಹಸ್ತಾಂತರಿಸಿದರು. ಚಿತ್ರದಲ್ಲಿ (ಎಡದಿಂದ) ಲೇಖಕ ಡಾ. ತೋಂಟದಾರ್ಯ ಸಂಪಿಗೆ, ಲೇಖಕರಾದ ಡಾ.ಆರ್.ಪೂರ್ಣಿಮಾ ಹಾಗೂ ಎಸ್.ದಿವಾಕರ್ ಇದ್ದಾರೆ –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಸಾಹಿತ್ಯದ ಕೊರಗು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಯುವ ಬರಹಗಾರರು ಈ ಕೊರಗನ್ನು ನೀಗಿಸಲು ಮುಂದಾಗಬೇಕು’ ಎಂದು ಲೇಖಕಿ ಆರ್.ಪೂರ್ಣಿಮಾ ಹೇಳಿದರು.

ನಗರದ ಕಾವ್ಯಕಲಾ ಪ್ರಕಾಶನ ಮತ್ತು ಮಲ್ಲಮ್ಮ ಪಟೇಲ್ ನಾರಸೀಗೌಡ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಪಾಲಹಳ್ಳಿ ವಿಶ್ವನಾಥ್ ವಿರಚಿತ ‘ಅಲ್ಪ ಸ್ವಲ್ಪ ವುಡ್‌ಹೌಸ್‌ ಮತ್ತು ಇತರ ಕತೆಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಳೆದ 6 ವರ್ಷಗಳಿಂದ ಹಾಸ್ಯ ಲೇಖನಗಳ್ನು ಬರೆಯುವವರ ಸಂಖ್ಯೆ ಕ್ಷೀಣಿಸಿದೆ. ಫೇಸ್‌ಬುಕ್‌ನಲ್ಲಿ ಸಿಗುವ ಹಾಸ್ಯದ ಮೋಡಿಗೆ ಸಿಲುಕಿರುವ ಯುವ ಜನತೆ ನಿಜವಾದ ಹಾಸ್ಯ ಸಾಹಿತ್ಯವನ್ನು ಅರಿತುಕೊಂಡು, ಹಾಸ್ಯ ಸಾಹಿತ್ಯ ರಚನೆಯತ್ತ ಪ್ರೇರೇಪಿತರಾಗಬೇಕು. ವಿಜ್ಞಾನಿಗಳು ಹಾಸ್ಯ ಸಾಹಿತ್ಯ ರಚನೆಯತ್ತ ಒಲವು ತೋರುತ್ತಿರುವುದು ಹೆಮ್ಮೆಯ ವಿಚಾರ. ಹಾಸ್ಯ ಇಡೀ ಸಮಾಜದ ಬದುಕನ್ನು ವಿಶ್ಲೇಷಣೆಯನ್ನು ಮಾಡುವಂಥದ್ದು’ ಎಂದು ಹೇಳಿದರು.

‘ಲೇಖಕ ಡಾ.ಪಾಲಹಳ್ಳಿ ವಿಶ್ವನಾಥ್ ರಾಜಕೀಯ ಹಾಗೂ ಸಾಮಾಜಿಕ ವಿಡಂಬನೆಯನ್ನು ತಮ್ಮ ಕೃತಿಯಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾರೆ. ತಮ್ಮ ಇಳೆ ವಯಸ್ಸಿನಲ್ಲೂ ಹಾಸ್ಯದತ್ತ ಒಲವನ್ನು ಉಳಿಸಿಕೊಂಡಿರುವುದು ಇತರರಿಗೂ ಮಾದರಿಯಾಗಿದೆ’ ಎಂದರು.

‘ಪಾಲಹಳ್ಳಿ ವಿಶ್ವನಾಥ್ ತಮ್ಮ ಅವರ ಕೃತಿ 17 ಕಥಾ ಪ್ರಕಾರಗಳನ್ನು ಒಳಗೊಂಡಿದ್ದು, 34ಕ್ಕೂ ಹೆಚ್ಚು ಕತೆಗಳನ್ನು ಹೊಂದಿದೆ. ಕಥೆ ಓದುವಾಗ ಅಲ್ಲಿನ ವ್ಯಾಖ್ಯಾನಗಳನ್ನು ಗಮನದಲ್ಲಿಟ್ಟುಕೊಂಡರೆ, ರಂಜಿತ ಸನ್ನಿವೇಶಗಳು ಉತ್ಸಾಹದಾಯಕವಾಗಿರುತ್ತವೆ’ ಎಂದು ಲೇಖಕ ಡಾ.ತೋಂಟದಾರ್ಯ ಸಂಪಿಗೆ ತಿಳಿಸಿದರು‌.

ವಿಮರ್ಶಕ ಎಸ್.ದಿವಾಕರ್ ಮಾತನಾಡಿ, ‘ಹಾಸ್ಯ ಸಾಹಿತ್ಯದ ವಿಶ್ಲೇಷಣೆ ಅಸಾಧ್ಯ. ಅದು ಗಾಂಭೀರ್ಯದ ತಳಹದಿಯ, ವಾಸ್ತವ ಆಧರಿತವಾಗಿರುವುದರಿಂದ ವಿಶ್ಲೇಷಣೆ ಅಸಾಧ್ಯವಾಗುತ್ತದೆ. ವ್ಯಂಗ್ಯ ಚಿತ್ರ ಸಾಮಾಜಿಕ ವಿಮರ್ಶೆಯ ಆಯಾಮವಾಗಿದ್ದು, ಸಾಕಷ್ಟು ಪರ್ಯಾಯಗಳನ್ನು ಒಳಗೊಂಡಿರುತ್ತದೆ. ಹಾಸ್ಯ ಸಾಹಿತ್ಯದ ಓದುಗುರು ಇಲ್ಲ ಎಂಬ ಕಾರಣಕ್ಕೆ ಪ್ರಕಾಶಕರು ಮುದ್ರಣಕ್ಕೆ ಮುಂದಾಗುತ್ತಿಲ್ಲ. ಬೆರಳೆಣಿಕೆಯಷ್ಟು ಲೇಖಕರ ಬರಹಗಳಿಗೆ ಮಾತ್ರ ಮುದ್ರಣ ಭಾಗ್ಯ ಸಿಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ’ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !