ರತ್ನಾಪುರ ಬಳಿ ಸೇತುವೆ ಕುಸಿತ; ಬೆಳಗಾವಿ–ವಿಜಯಪುರ ಜಿಲ್ಲೆಯ ಸಂಪರ್ಕ ಕಡಿತ

7
ಜಿಲ್ಲಾಡಳಿತದಿಂದ ಪರ್ಯಾಯ ಮಾರ್ಗ

ರತ್ನಾಪುರ ಬಳಿ ಸೇತುವೆ ಕುಸಿತ; ಬೆಳಗಾವಿ–ವಿಜಯಪುರ ಜಿಲ್ಲೆಯ ಸಂಪರ್ಕ ಕಡಿತ

Published:
Updated:
Deccan Herald

ತಿಕೋಟಾ: ತಾಲ್ಲೂಕಿನ ರತ್ನಾಪುರ ಗ್ರಾಮದ ಬಳಿ ಪಾತರಗಿತ್ತಿ ಹಳ್ಳಕ್ಕೆ 2002ರಲ್ಲಿ ನಿರ್ಮಿಸಿದ್ದ ಸೇತುವೆ ಸೋಮವಾರ ಮಧ್ಯಾಹ್ನ ಕುಸಿದು ಬಿದ್ದಿದ್ದು, ವಿಜಯಪುರ ಜಿಲ್ಲೆಯಿಂದ ಅಥಣಿ ಮಾರ್ಗವಾಗಿ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿದು ಹೋಗಿದೆ.

‘ಸೋಮವಾರ ಮಧ್ಯಾಹ್ನ 1.30ರ ವೇಳೆಗೆ ಈ ಮಾರ್ಗದಲ್ಲಿ ಲಾರಿ ಹಾಯ್ದು ಹೋಯಿತು. ಈ ಸಂದರ್ಭ ಅಡವಿ ವಸತಿಯ ಮಹಿಳೆಯೊಬ್ಬರು ಸೇತುವೆ ಮೇಲೆ ಇದ್ದರು. ಕ್ಷಣಾರ್ಧದಲ್ಲೇ ಸೇತುವೆ ಕುಸಿದು ಬಿತ್ತು. ಯಾರಿಗೂ ಯಾವ ಅಪಾಯಗಳು ಆಗಿಲ್ಲ’ ಎಂದು ಪ್ರತ್ಯಕ್ಷದರ್ಶಿ ಅಂಕುಶ ಪರಸಪ್ಪ ಕುಟೇ ‘ಪ್ರಜಾವಾಣಿ’ಗೆ ತಿಳಿಸಿದರು.

16 ವರ್ಷಗಳ ಹಿಂದಷ್ಟೇ ಈ ಸೇತುವೆ ನಿರ್ಮಿಸಲಾಗಿತ್ತು. ಅತ್ಯಂತ ಕಡಿಮೆ ಅವಧಿಯಲ್ಲಿ ಸೇತುವೆ ಕುಸಿದು ಬಿದ್ದಿರುವುದಕ್ಕೆ ಸ್ಥಳೀಯರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಲೋಕೋಪಯೋಗಿ ಇಲಾಖೆ, ಗುತ್ತಿಗೆದಾರರಿಗೆ ಹಿಡಿಶಾಪ ಹಾಕುವ ದೃಶ್ಯ ಸೇತುವೆ ಬಳಿ ಗೋಚರಿಸಿತು.

ಸೇತುವೆ ಕುಸಿತದಿಂದ ಎರಡು ಜಿಲ್ಲೆಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಪರ್ಯಾಯ ಮಾರ್ಗ ರಚಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದು, ಸಂಬಂಧಿಸಿದ ಅಧಿಕಾರಿಗಳು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದ ಚಿತ್ರಣ ಕಂಡು ಬಂತು.

ಸೇತುವೆ ಕುಸಿತದಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳದಲ್ಲಿದ್ದ ತಿಕೋಟಾ ಪೊಲೀಸರು ರತ್ನಾಪುರ ಗ್ರಾಮದಿಂದ ತಿಕೋಟಾ ಮಾರ್ಗವಾಗಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ವರದಿ ಪಡೆದು ಕ್ರಮ

‘16 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ಕುಸಿದಿದೆ. ಇದೀಗ ಮಳೆಯೂ ಬಂದಿಲ್ಲ. ಹಳ್ಳದಲ್ಲಿ ನೆರೆಯೂ ಬಂದಿಲ್ಲ. ಕಳಪೆ ಕಾಮಗಾರಿ ಅಥವಾ ವಿನ್ಯಾಸದ ದೋಷದಿಂದ ಕುಸಿದು ಬಿದ್ದಿರಬಹುದು. ಈ ಬಗ್ಗೆ ವರದಿ ಪಡೆದು, ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರನ್ನು ವಿಚಾರಣೆಗೊಳಪಡಿಸಲಾಗುವುದು. ಒಂದು ವೇಳೆ ತಪ್ಪು ಕಂಡು ಬಂದರೆ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಬಿ.ಶೆಟ್ಟೆಣ್ಣವರ ತಿಳಿಸಿದರು.

‘ಈಗಾಗಲೇ ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆ ಕಲ್ಪಿಸಲಾಗಿದೆ. ಈ ಜಾಗದಲ್ಲಿ ಹೊಸದಾಗಿ ಸೇತುವೆ ನಿರ್ಮಿಸಲು ಕನಿಷ್ಠ 6 ತಿಂಗಳಾದರೂ ಬೇಕಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !