ಶನಿವಾರ, ನವೆಂಬರ್ 23, 2019
18 °C
ಬಂಟ ಸಮುದಾಯದ ಹೋಟೆಲಿಗರ ‘ಬಂಟರಾತಿಥ್ಯ’ ಪ್ರಥಮ ಸಮ್ಮಿಲನ ಕಾರ್ಯಕ್ರಮ

‘ಹೋಟೆಲ್ ಉದ್ಯಮದಿಂದ ಉದ್ಯೋಗ ಸೃಷ್ಟಿ’

Published:
Updated:
Prajavani

ಬೆಂಗಳೂರು: ‘ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಹೋಟೆಲ್ ಉದ್ಯಮ ಸಹಕಾರಿಯಾಗಿದೆ. ಹಸಿದವರ ಹೊಟ್ಟೆ ತುಂಬಿಸುವ ಹೋಟೆಲ್ ಉದ್ಯಮಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು. 

ಬೆಂಗಳೂರು ಬಂಟರ ಹೋಟೆಲ್ ಮಾಲೀಕರ ಸಂಘ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಬಂಟರಾತಿಥ್ಯ’ ಬಂಟ ಹೋಟೆಲಿಗರ ಪ್ರಥಮ ಸಮ್ಮಿಲನದಲ್ಲಿ ಮಾತನಾಡಿದರು. 

‘ಹೋಟೆಲ್ ಉದ್ಯಮದಲ್ಲಿ ಬಂಟರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಬೈ, ಬೆಂಗಳೂರಿನಂತಹ ನಗರಗಳಲ್ಲಿ ಇದೇ ಉದ್ಯಮದ ಮೂಲಕ ಛಾಪು ಮೂಡಿಸಿದ್ದಾರೆ. ವಿದೇಶದಲ್ಲಿ ಸಹ ಹೋಟೆಲ್ ಆರಂಭಿಸಿ, ಯಶಸ್ಸು ಸಾಧಿಸಿದ್ದಾರೆ’ ಎಂದರು.

‘ಬಂಟ ಸಮುದಾಯದವರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದು, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶ್ರಮಿಸುತ್ತಿದ್ದಾರೆ. ಶಿಕ್ಷಣ, ವೈದ್ಯಕೀಯ, ಉದ್ದಿಮೆ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ’ ಎಂದರು. 

ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಮಾತನಾಡಿ, ‘ಬಂಟ ಸಮುದಾಯದ ಜನತೆ ವಿವಿಧ ಕಾರಣದಿಂದ ಊರು ಬಿಟ್ಟು ಬಂದರೂ ಸಂಬಂಧದ ಕೊಂಡಿಯನ್ನು ಕಳಚಿಕೊಳ್ಳಲಿಲ್ಲ. ಹೋದ ಕಡೆಯಲೆಲ್ಲ ತಮ್ಮ ಸಂಸ್ಕೃತಿಯನ್ನು ಪ್ರಸಾರ ಮಾಡುತ್ತಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಾಜ್ಯ ವಿಶ್ವಭೂಪಟದಲ್ಲಿ ರಾರಾಜಿಸಲು ಹೋಟೆಲ್ ಉದ್ಯಮಿಗಳ ಸಹಕಾರ ಅಗತ್ಯ’ ಎಂದು ತಿಳಿಸಿದರು.

*
ಆತಿಥ್ಯದ ಕಲೆಯನ್ನು ಬಂಟರು ಕರಗತ ಮಾಡಿಕೊಂಡಿದ್ದರಿಂದ ಹೋಟೆಲ್ ಉದ್ಯಮದಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ. ಬಂಟರ ಸಮಸ್ಯೆಗಳಿಗೆ ಸ್ಪಂದಿಸುವೆ.
-ಡಾ.ಸಿ. ಅಶ್ವತ್ಥನಾರಾಯಣ, ಡಿಸಿಎಂ

ಪ್ರತಿಕ್ರಿಯಿಸಿ (+)