ಬುದ್ಧನ ಪ್ರತಿಮೆ ಸ್ಥಳಾಂತರ: ವಿ.ವಿ. ನಿರ್ಧಾರ

ಶುಕ್ರವಾರ, ಮೇ 24, 2019
33 °C
ಸರಸ್ವತಿಯ ಪ್ರತಿಮೆಯ ಜಾಗದಲ್ಲಿ ಸೋಮವಾರ ಪ್ರತಿಷ್ಠಾಪಿಸಿದ್ದ ಪ್ರತಿಮೆ

ಬುದ್ಧನ ಪ್ರತಿಮೆ ಸ್ಥಳಾಂತರ: ವಿ.ವಿ. ನಿರ್ಧಾರ

Published:
Updated:
Prajavani

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಕಚೇರಿಯ ಪ್ರವೇಶ ದ್ವಾರದಲ್ಲಿ ಸೋಮವಾರ ಪ್ರತಿಷ್ಠಾಪನೆ ಮಾಡಿರುವ ಗೌತಮ ಬುದ್ಧನ ಪ್ರತಿಮೆಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರು ನಿರ್ಧರಿಸಿದ್ದಾರೆ.

ಬುದ್ಧನ ಪ್ರತಿಮೆಯನ್ನು ಎಲ್ಲಿ ಪ್ರತಿಷ್ಠಾಪನೆ ಮಾಡಬೇಕು ಎಂಬ ಬಗ್ಗೆ ಸಿಂಡಿಕೇಟ್‌ ಇನ್ನೂ ತೀರ್ಮಾನ ಕೈಗೊಂಡಿಲ್ಲ. 

ಬುದ್ಧನ ಮೂರ್ತಿ ಪ್ರತಿಷ್ಠಾಪಿಸಿರುವ ಜಾಗದಲ್ಲಿ ಈ ಹಿಂದೆ ಸರಸ್ವತಿಯ ಪ್ರತಿಮೆ ಇತ್ತು. ಅದು ಸ್ವಲ್ಪ ಭಗ್ನಗೊಂಡಿದ್ದ ಆ ಮೂರ್ತಿಯ ಬದಲು ಹೊಸ ಪ್ರತಿಮೆ ಪ್ರತಿಷ್ಠಾಪಿಸುವ ಉದ್ದೇಶದಿಂದ ಕೆಲವು ದಿನಗಳ ಹಿಂದೆ ಅದನ್ನು ತೆರವುಗೊಳಿಸಲಾಗಿತ್ತು.

‘ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಸಿ.ಮೈಲಾರಪ್ಪ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಟಿ.ಎಸ್‌.ಮೂರ್ತಿ ಅವರು ವಿದ್ಯಾರ್ಥಿಗಳೊಂದಿಗೆ ಬಂದು ಬುದ್ಧನ ಮೂರ್ತಿ ತಂದು ಪ್ರತಿಷ್ಠಾಪಿಸಿರು ದೃಶ್ಯಗಳು ವಿಶ್ವವಿದ್ಯಾಲಯದ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅವರಿಬ್ಬರನ್ನೂ ಕರೆದು ವಿಚಾರಿಸಿದ್ದೇವೆ. ‘ವಿದ್ಯಾರ್ಥಿಗಳು ಕರೆದರು. ನಾವು ಹೋದೆವು, ಅಷ್ಟೇ’ ಎಂದು ಉತ್ತರ ನೀಡಿದ್ದಾರೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್‌  ‘ಪ್ರಜಾವಾಣಿ’ ಗೆ ತಿಳಿಸಿದರು.

‘ಬುದ್ಧನ ಪ್ರತಿಮೆ ನಿರ್ಮಾಣಕ್ಕೆ ಹಣಕಾಸು ನೆರವು ನೀಡಿದ್ದು ಯಾರು, ಅದನ್ನು ಎಲ್ಲಿಂದ ತರಿಸಲಾಗಿದೆ ಎಂದು ಇನ್ನೂ ಗೊತ್ತಾಗಿಲ್ಲ. ಪ್ರತಿಮೆ ಕೂರಿಸಲು ಅನುಮತಿಯನ್ನೂ ಪಡೆದಿರಲಿಲ್ಲ. ಈ ವಿವಾದದಿಂದ ಅನಗತ್ಯವಾಗಿ ಗೊಂದಲ ಸೃಷ್ಟಿಯಾಗುತ್ತಿದೆ’ ಎಂದರು. 

‘ಬುದ್ಧನ ಪ್ರತಿಮೆಯನ್ನು ಬೇರೆಡೆ ಪ್ರತಿಷ್ಠಾಪಿಸಲು ಪ್ರಶಸ್ತವಾದ ಜಾಗವನ್ನು ವಿಶ್ವವಿದ್ಯಾಲಯದ ಆವರಣದಲ್ಲಿಯೇ ಗುರುತಿಸಲು ಐವರು ಸಿಂಡಿಕೇಟ್‌ ಸದಸ್ಯರ ಸಮಿತಿಯನ್ನು ರಚಿಸಿದ್ದೇವೆ. ಆ ಸಮಿತಿ ಶಿಘ್ರವೇ ಈ ಬಗ್ಗೆ ನಿರ್ಧಾರ ತಳೆಯಲಿದ್ದು, ವಿವಾದವೂ ಸುಖಾಂತ್ಯ ಕಾಣಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಸರಸ್ವತಿಯ ಹೊಸ ಪ್ರತಿಮೆಯನ್ನು ತಯಾರಿಸಲು ನಾನೇ ₹ 1.80 ಲಕ್ಷ ನೀಡಿದ್ದೆ. ಬುದ್ಧನ ಮೂರ್ತಿಯನ್ನು ಬೇರೆ ಕಡೆ ಪ್ರತಿಷ್ಠಾಪಿಸಿದ ಬಳಿಕ, ಸರಸ್ವತಿಯ ಹೊಸ ವಿಗ್ರಹವನ್ನು ಆಡಳಿತ ಕಚೇರಿಯ ಪ್ರವೇಶ ದ್ವಾರದ ಬಳಿಯೇ ಪ್ರತಿಷ್ಠಾಪಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಬುದ್ಧನ ಕೂರಿಸಿದ್ದು ನಾವೇ: ವಿದ್ಯಾರ್ಥಿ ಒಕ್ಕೂಟ
ಗೌತಮ ಬುದ್ಧನ ಮೂರ್ತಿಯನ್ನು ‘ನಾವೇ ಪ್ರತಿಷ್ಠಾಪಿಸಿದ್ದೇವೆ’ ಎಂದು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

‘ಬುದ್ಧನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ವಿಶ್ವವಿದ್ಯಾಲಯದ ಬ್ರಾಹ್ಮಣೇತರ ವಿದ್ಯಾರ್ಥಿಗಳೆಲ್ಲರೂ ಕೈಜೋಡಿಸಿದ್ದಾರೆ. ಬೋಧಕೇತರ ಸಿಬ್ಬಂದಿ ಮಾತ್ರ ವಿರೋಧಿಸುತ್ತಿದ್ದಾರೆ’ ಎಂದು ಒಕ್ಕೂಟದ ಅಧ್ಯಕ್ಷ ಎಚ್‌.ಡಿ.ಮುತ್ತುರಾಜು ತಿಳಿಸಿದರು.

‘ಬುದ್ಧನ ಪ್ರತಿಮೆ ಪ್ರತಿಷ್ಠಾಪಿಸುವ ಕುರಿತು ಕುಲಪತಿಗೆ ಮೂರು ತಿಂಗಳುಗಳಿಂದ ಮನವಿ ಮಾಡಿಕೊಳ್ಳುತ್ತಿದ್ದೆವು. ಅವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಜಾಗವೂ ಖಾಲಿ ಇತ್ತು. ಇದೇ ಸೂಕ್ತ ಸಂದರ್ಭವೆಂದು ಪ್ರತಿಮೆ ತಂದು ಕೂರಿಸಿದ್ದೇವೆ’ ಎಂದರು.

ಬುದ್ಧನ ಪ್ರತಿಮೆ ಸ್ಥಾಪಿಸುವ ಮುನ್ನ ಕುಲಪತಿಯಿಂದ ಅನುಮತಿ ಪಡೆಯಬೇಕಿತ್ತಲ್ಲವೇ ಎಂಬ ಪ್ರಶ್ನೆಗೆ, ‘ಅವನಿಂದೇನು ಅನುಮತಿ ಪಡೆಯುವುದು. ಸರಸ್ವತಿಯ ಹಳೆ ಪ್ರತಿಮೆ ತೆಗೆದು, ಹೊಸದನ್ನು ಕೂರಿಸಲು ಅವನು ಸಿಂಡಿಕೇಟ್‌ನಲ್ಲಿ ಅನುಮತಿ ಪಡೆದಿದ್ದಾನೆಯೇ’ ಎಂದು ಏಕವಚನದಲ್ಲಿಯೇ ಪ್ರತಿಕ್ರಿಯಿಸಿದರು.

‘ಬೇಕಾದರೆ, ಸರಸ್ವತಿಯ ಪ್ರತಿಮೆಯನ್ನು ಆಡಳಿತ ಕಚೇರಿಯ ಮೊದಲ ಮಹಡಿಯಲ್ಲಿ ಸ್ಥಾಪಿಸಲಿ’ ಎಂದರು.

‘₹ 3 ಲಕ್ಷ ವೆಚ್ಚದಲ್ಲಿ ಬುದ್ಧನ ಪ್ರತಿಮೆಯನ್ನು ತಯಾರಿಸಿದ್ದೇವೆ. ಇದಕ್ಕೆಂದು ಕೆಲವು ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ₹ 20 ಸಾವಿರದವರೆಗೂ ದೇಣಿಗೆ ನೀಡಿದ್ದಾರೆ’ ಎಂದರು.

‘ಹಳೆಯ ಸರಸ್ವತಿಯ ಪ್ರತಿಮೆ ಪ್ರತಿಷ್ಠಾಪನೆ ಆಗಿದ್ದು ಎಚ್‌.ನರಸಿಂಹಯ್ಯ ಅವರು ಕುಲಪತಿಯಾಗಿದ್ದ ಅವಧಿಯಲ್ಲಿ ಅಲ್ಲ. ಡಿ.ಎಂ.ನಂಜುಂಡಪ್ಪ ಕುಲಪತಿಯಾಗಿದ್ದಾಗ (1987–1991)  ಪ್ರತಿಷ್ಠಾಪಿಸಲಾಗಿತ್ತು’ ಎಂದು ಒಕ್ಕೂಟವು ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !