ನಾಲ್ವರು ಆಶಾ ಕಾರ್ಯಕರ್ತೆಯರು ಅಸ್ವಸ್ಥ

7
2ನೇ ದಿನದ ಮುಷ್ಕರ: ಅಂಗನವಾಡಿ, ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ನಾಲ್ವರು ಆಶಾ ಕಾರ್ಯಕರ್ತೆಯರು ಅಸ್ವಸ್ಥ

Published:
Updated:
Prajavani

ಚಾಮರಾಜನಗರ: ರಾಷ್ಟ್ರದ ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರದ 2ನೇ ದಿನವಾದ ಬುಧವಾರವೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಯಿತು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ್ದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಆಶಾ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

ಅಸ್ವಸ್ಥಗೊಂಡ ‌ಕಾರ್ಯಕರ್ತರು: ಪ್ರತಿಭಟನೆಯ ವೇಳೆ ನಾಲ್ವರು ಆಶಾ ಕಾರ್ಯಕರ್ತೆಯರು ಅಸ್ವಸ್ಥಗೊಂಡರು. ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಗುಂಡ್ಲುಪೇಟೆ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ ಬಿಸಿಯೂಟ ಸಹಾಯಕಿ ಗೌರಮ್ಮ, ಚಾಮರಾಜನಗರದ ಅಂಗನವಾಡಿ ಸಹಾಯಕಿ ಪದ್ಮಾ, ಸಂತೇಮರಹಳ್ಳಿ ಆಶಾ ಕಾರ್ಯಕರ್ತೆ ಸುಶೀಲಾ, ಚಂದಕವಾಡಿ ಆಶಾ ಕಾರ್ಯಕರ್ತೆ ಲಕ್ಷ್ಮಿ ಅಸ್ವಸ್ಥಗೊಂಡವರು.

‘43 ವರ್ಷಗಳಿಂದ ಗೌರವ ಧನದಡಿ ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮನ್ನು ಕಾಯಂ ನೌಕರರನ್ನಾಗಿ ನೇಮಕ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಐಸಿಡಿಎಸ್‌ ಯೋಜನೆಗೆ ಅನುದಾನ ಕಡಿತ ಮಾಡಿರುವುದು ಸರಿಯಲ್ಲ. ಕನಿಷ್ಠ ₹18 ಸಾವಿರ ವೇತನ ಜಾರಿ ಮಾಡಬೇಕು’ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

‘ಸರ್ಕಾರ ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಾಡಬಾರದು. ಕಾರ್ಮಿಕ ವಿರೋಧಿ ನೀತಿಗಳ ತಿದ್ದುಪಡಿಗೆ ಬಲಾಢ್ಯರ ಒತ್ತಡಕ್ಕೆ ಸರ್ಕಾರ ಮಣೆ ಹಾಕಬಾರದು. ಎಲ್ಲ ಕಾರ್ಮಿಕರಿಗೂ ಸಾರ್ವತ್ರಿಕ ಹಾಗೂ ಸಾಮಾಜಿಕ ರಕ್ಷಣೆ ನೀಡಬೇಕು. ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

ವಿದ್ಯುತ್‌ ಕಾರ್ಮಿಕರು, ಅಂಚೆ ನೌಕರರ ಪ್ರತಿಭಟನೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ವಿದ್ಯುತ್‌ ಕಾರ್ಮಿಕರ ಫೆಡರೇಷನ್‌ ಜಿಲ್ಲಾಡಳಿತ ಭವನದ ಮುಂಭಾಗ ಹಾಗೂ ಅಂಚೆ ಇಲಾಖೆಯ ನೌಕರರ ಸಂಘಗಳು, ಜಂಟಿ ಕ್ರಿಯಾ ಸಮಿತಿಯ ನೌಕರರು ತಮ್ಮ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಕರ್ನಾಟಕ ಅಂಗನವಾಡಿ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಸುಜಾತಾ, ಕಾರ್ಯದರ್ಶಿ ಎ.ನಾಗಮಣಿ, ಖಜಾಂಚಿ ಜೆ.ಭಾಗ್ಯಾ, ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಜೆ.ಸುರೇಶ್, ಸೆಸ್ಕ್‌ ಹೊರಗುತ್ತಿಗೆ ವಿದ್ಯುತ್‌ ಕಾರ್ಮಿಕ ಪ್ರಧಾನ ಕಾರ್ಯದರ್ಶಿ ಆರ್.ಜನಾರ್ದನ್‌, ಎ.ಶಿವಕುಮಾರ್, ಬಿ.ಮನುಕುಮಾರ್‌ ಭಾಗವಹಿಸಿದ್ದರು.

ಅಂಚೆ ಕಚೇರಿ ಬಂದ್‌, ಬ್ಯಾಂಕ್‌ಗಳಲ್ಲಿ ವಹಿವಾಟು

ಸಾರ್ವತ್ರಿಕ ಮುಷ್ಕರದ 2ನೇ ದಿನ ಬುಧವಾರ ಜಿಲ್ಲೆಯ ಬಹುತೇಕ ಎಲ್ಲ ಬ್ಯಾಂಕ್‌ಗಳು ಕಾರ್ಯನಿರ್ವಹಿಸಿದವು. ಆದರೆ, ಅಂಚೆ ಕಚೇರಿಗಳು ತೆರೆದಿರಲಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರು ಸಂಕಷ್ಟ ಅನುಭವಿಸುವಂತಾಯಿತು.

ವಿದ್ಯಾರ್ಥಿಗಳ ಪರದಾಟ: ತಾಲ್ಲೂಕಿನ ಯಣಗುಂಬ, ಯಾನಗಹಳ್ಳಿ, ಅರಕಲವಾಡಿ, ಲಿಂಗನಪುರ ಗ್ರಾಮದಿಂದ ಚಾಮರಾಜನಗರಕ್ಕೆ ಬೆಳಿಗ್ಗೆ 6.30ರಿಂದ 10 ಗಂಟೆಯವರೆಗೆ ಖಾಸಗಿ ಬಸ್‌ಗಳ ಸಂಚಾರ ಇರಲಿಲ್ಲ. ಇದರಿಂದ ಶಾಲಾ ಕಾಲೇಜುಗಳಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು ಪರದಾಡುವಂತಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !