ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುಯಲ್ ಫಂಡ್ ಹೂಡಿಕೆ: ಭಯ ಬೇಡ

Published 20 ಮೇ 2024, 0:30 IST
Last Updated 20 ಮೇ 2024, 0:30 IST
ಅಕ್ಷರ ಗಾತ್ರ

‘ಮ್ಯೂಚುಯಲ್ ಫಂಡ್ ಸಹಿ ಹೈ’ ಅನ್ನೋ ಅಭಿಯಾನ ದೊಡ್ಡ ಪ್ರಮಾಣದಲ್ಲಿ ಮ್ಯೂಚುಯಲ್ ಫಂಡ್ (ಎಂ.ಎಫ್‌) ಹೂಡಿಕೆ ಬಗ್ಗೆಜಾಗೃತಿ ಮೂಡಿಸುವಲ್ಲಿ ನೆರವಾಗಿದೆ. ಆದರೆಈಗಲೂ ಜನಸಾಮಾನ್ಯರು ಮ್ಯೂಚುಯಲ್ ಫಂಡ್ ಹೂಡಿಕೆ ಸುರಕ್ಷಿತವೇ? ಷೇರು ಮಾರುಕಟ್ಟೆಗಿಂತ ಇಲ್ಲಿ ರಿಸ್ಕ್ ಕಡಿಮೆ ಇರುವುದೇ? ಎಸ್‌ಐಪಿ ಹೂಡಿಕೆ ಶುರು ಮಾಡಬಹುದೇ? ನಿಶ್ಚಿತ ಠೇವಣಿಗಿಂತ(ಎಫ್‌ಡಿ) ಹೆಚ್ಚಿನ ಲಾಭ ಸಿಗುವುದೇ? ಎಂಬಿತ್ಯಾದಿಪ್ರಶ್ನೆಗಳನ್ನು ಕೇಳುತ್ತಾರೆ. ಅಂತಹ ಗೊಂದಲವನ್ನು ನಿವಾರಿಸುವ ಪ್ರಯತ್ನ ಈ ಲೇಖನದಲ್ಲಿದೆ.

ಮ್ಯೂಚುಯಲ್ ಫಂಡ್‌ನಲ್ಲಿ ವೃತ್ತಿಪರ ಫಂಡ್ ಮ್ಯಾನೇಜರ್ ನೆರವು:

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ನೀವೇ ಅರಿತು ಹೂಡಿಕೆ ಮಾಡಬೇಕಾಗುತ್ತದೆ. ಯಾವ ಷೇರು ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎನ್ನುವ ನಿರ್ಧಾರ ಮಾಡಬೇಕಾಗುತ್ತದೆ. ಆದರೆ ಮ್ಯೂಚುಯಲ್ ಫಂಡ್ ಹೂಡಿಕೆ ಮಾಡುವವರಿಗೆ ವೃತ್ತಿಪರ ಫಂಡ್ ಮ್ಯಾನೇಜರ್‌ನ ನೆರವು ಸಿಗುತ್ತದೆ. ನಿರ್ದಿಷ್ಟ ಮ್ಯೂಚುಯಲ್ ಫಂಡ್ ಆಯ್ಕೆ ಮಾಡಿ ನಿಯಮಿತವಾಗಿ ನಿರ್ದಿಷ್ಟ ಮೊತ್ತವನ್ನು ಎಸ್‌ಐಪಿಯಲ್ಲಿ ಹೂಡಿಕೆ ಮಾಡುತ್ತಾ ಹೋದರೆ ಸಾಕು, ಆ ಹಣವನ್ನು ಯಾವ ಷೇರುಗಳ ಮೇಲೆ ಹೂಡಿಕೆ ಮಾಡಬೇಕು ಎನ್ನುವ ತೀರ್ಮಾನವನ್ನು ಫಂಡ್ ಮ್ಯಾನೇಜರ್ ತೆಗೆದುಕೊಳ್ಳುತ್ತಾರೆ. ಫಂಡ್ ಮ್ಯಾನೇಜರ್‌ಗಳು ಷೇರು ಹೂಡಿಕೆಗೆ ಬೇಕಾದ ಪರಿಣತಿ ಹೊಂದಿದ್ದು ಅದಕ್ಕೆ ಪೂರಕವಾದ ಅಧ್ಯಯನ ಮಾಡಿರುತ್ತಾರೆ. ಹಾಗಾಗಿ ಷೇರು ಮಾರುಕಟ್ಟೆಗೆ ಹೋಲಿಕೆ ಮಾಡಿ ನೋಡಿದರೆ ಇಲ್ಲಿ ರಿಸ್ಕ್ ಕಡಿಮೆ ಇರುತ್ತದೆ.

ಹತ್ತಾರು ಕಂಪನಿಗಳ ಮೇಲೆ ನಿಮ್ಮ ಮೊತ್ತ ಹೂಡಿಕೆ:

ಷೇರುಗಳನ್ನು ನೇರವಾಗಿ ಖರೀದಿಸು ವಾಗ ಕೆಲ ಕಂಪನಿಗಳ ಷೇರುಗಳನ್ನು ಮಾತ್ರ ಕೊಳ್ಳಲು ಸಾಧ್ಯ. ಆದರೆ ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದಾಗ ನಿಮ್ಮ ಹಣ ಹತ್ತಾರು ಕಂಪನಿಗಳ ಮೇಲೆ ಹೂಡಿಕೆಯಾಗುತ್ತದೆ. ಉದಾಹರಣೆಗೆ ಐಸಿಐಸಿಐ ಪ್ರೂಡೆನ್ಶಿಯಲ್ ಬ್ಲೂಚಿಪ್ ಫಂಡ್‌ನಲ್ಲಿ ಒಟ್ಟು ₹54,904 ಕೋಟಿ ಹೂಡಿಕೆಯಾಗಿದೆ. ಈ ಮೊತ್ತವನ್ನು ಫಂಡ್ ಮ್ಯಾನೇಜರ್ ಒಟ್ಟು 69 ಕಂಪನಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಅಂದರೆ ನೀವು ₹5 ಸಾವಿರ, ₹10 ಸಾವಿರ ಹೂಡಿಕೆ ಮಾಡಿದರೆ ಆ ಮೊತ್ತ ಫಂಡ್ ಮ್ಯಾನೇಜರ್ ನಿಗದಿ ಮಾಡಿರುವ 69 ಕಂಪನಿಗಳ ಮೇಲೆ ಹೂಡಿಕೆಯಾಗುತ್ತದೆ. ಹೀಗೆ ಹತ್ತಾರು ಕಂಪನಿಗಳ ಮೇಲೆ ಹೂಡಿಕೆಯಾದಾಗ ರಿಸ್ಕ್ ಕಡಿಮೆ ಇರುತ್ತದೆ. ಇದೇ ಮಾದರಿಯಲ್ಲಿ ಮ್ಯೂಚುಯಲ್ ಫಂಡ್‌ಗಳು ಹೂಡಿಕೆದಾರರ ಹಣವನ್ನು ಬೇರೆ ಬೇರೆ ಕಂಪನಿಗಳಲ್ಲಿ ತೊಡಗಿಸಿ ಹೂಡಿಕೆ ವೈವಿಧ್ಯ ಕಾಯ್ದುಕೊಳ್ಳುತ್ತವೆ. 

ಎಫ್‌ಡಿಗಿಂತ ಜಾಸ್ತಿ ಲಾಭ ಸಿಗುವುದೇ?:

ಮ್ಯೂಚುಯಲ್ ಫಂಡ್ ಹೂಡಿಕೆಗಳು ಹಣದುಬ್ಬರ (ಬೆಲೆ ಏರಿಕೆ) ಮೀರಿ ಲಾಭ ತಂದುಕೊಡುತ್ತವೆ. ವಾರ್ಷಿಕ ಸರಾಸರಿ ಶೇ 12ರಿಂದ ಶೇ 13ರಷ್ಟು ಲಾಭಾಂಶವನ್ನು ಮ್ಯೂಚುಯಲ್ ಫಂಡ್‌ಗಳಿಂದ ನಿರೀಕ್ಷೆ ಮಾಡಬಹುದು. ಎಫ್‌ಡಿ ಹೂಡಿಕೆಯಲ್ಲಿ ಹೆಚ್ಚೆಂದರೆ ಶೇ8ರಷ್ಟು ಬಡ್ಡಿ ಲಾಭ ಸಿಗಬಹುದು. ಬೆಲೆ ಏರಿಕೆ ಪ್ರಮಾಣವೇ ಶೇ 7ರ ಆಸುಪಾಸಿನಲ್ಲಿರುವಾಗ ಎಫ್‌ಡಿ ಹೂಡಿಕೆಯಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಹಾಗಾಗಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮ್ಯೂಚುಯಲ್ ಫಂಡ್‌ಗಳ ಬಗ್ಗೆ ಅರಿತು ಎಸ್‌ಐಪಿ ಮೂಲಕ ಹೂಡಿಕೆ ಮಾಡಲು ಮುಂದಾಗುವುದು ಒಳ್ಳೆಯ ನಿರ್ಧಾರವಾಗುತ್ತದೆ.

ಅನಿಶ್ಚಿತತೆ ನಡುವೆಯೂ ಜಿಗಿದ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಮತ್ತೆ ಗಳಿಕೆಯ ಲಯಕ್ಕೆ ಬಂದಿವೆ. ಮೇ 17ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಪುಟಿದೆದ್ದಿವೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರಿಂದ ಖರೀದಿ ಉತ್ಸಾಹ, ಅಮೆರಿಕ ಫೆಡರಲ್ ಬ್ಯಾಂಕ್ ಈ ವರ್ಷದ ದ್ವಿತೀಯಾರ್ಧದಲ್ಲಿ ಬಡ್ಡಿ ದರ ತಗ್ಗಿಸಬಹುದು ಎಂಬ ನಿರೀಕ್ಷೆ, ಕೇಂದ್ರದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ರಚನೆ ಆಗಬಹುದೆಂಬ ವಿಶ್ವಾಸ, ತ್ರೈಮಾಸಿಕ ಫಲಿತಾಂಶಗಳಲ್ಲಿ ಮಿಶ್ರಫಲ, ಸಕಾರಾತ್ಮಕ ಮುಂಗಾರು ಸಾಧ್ಯತೆ ಸೇರಿ ಹಲವು ಅಂಶ ಸೂಚ್ಯಂಕಗಳ ಜಿಗಿತಕ್ಕೆ ಅನುವು ಮಾಡಿಕೊಟ್ಟಿವೆ. 73,917 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.7ರಷ್ಟು ಹೆಚ್ಚಳ ದಾಖಲಿಸಿದ್ದರೆ, 22,466 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.9ರಷ್ಟು ಹೆಚ್ಚಳ ಕಂಡಿದೆ.

ವಲಯವಾರು ಸೂಚ್ಯಂಕಗಳನ್ನು ನೋಡಿದಾಗ ಎಫ್‌ಎಂಜಿಸಿ ಹೊರತುಪಡಿಸಿ ಎಲ್ಲವೂ ಹೆಚ್ಚಳ ದಾಖಲಿಸಿವೆ. ನಿಫ್ಟಿ ಎಫ್ಎಂಸಿಜಿ ಸೂಚ್ಯಂಕ ಮಾತ್ರ ಶೇ 0.44 ರಷ್ಟು ಕುಸಿದಿದೆ. ನಿಫ್ಟಿ ರಿಯಲ್ ಎಸ್ಟೇಟ್ ಶೇ 6.33, ಮೆಟಲ್ ಶೇ 6.28, ಎನರ್ಜಿ ಶೇ 3.09, ಅನಿಲ ಮತ್ತು ತೈಲ ಶೇ 2.65, ಮಾಧ್ಯಮ ಶೇ 2.28, ಫಾರ್ಮಾ ಶೇ 2.01, ಆಟೊ ಶೇ 1.81, ಫೈನಾನ್ಸ್ ಶೇ 1.81, ಬ್ಯಾಂಕ್
ಶೇ 1.47, ಐಟಿ ಶೇ 1.37 ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 0.57 ರಷ್ಟು ಗಳಿಸಿಕೊಂಡಿವೆ.

ಹೆಚ್ಚಳ - ಇಳಿಕೆ:

ನಿಫ್ಟಿ ಸೂಚ್ಯಂಕದಲ್ಲಿ ಮಹೀಂದ್ರ ಅಂಡ್ ಮಹೀಂದ್ರ ಭಾರಿ ಜಿಗಿತ ಕಂಡು ಶೇ 14.67ರಷ್ಟು ಗಳಿಸಿಕೊಂಡಿದೆ. ಅದಾನಿ ಎಂಟರ್ ಪ್ರೈಸಸ್ ಶೇ 9.25, ಜೆಎಸ್‌ಡಬ್ಲ್ಯು ಸ್ಟೀಲ್ ಶೇ 6.27, ಎಲ್ ಆ್ಯಂಡ್‌ ಟಿ ಶೇ 5.53, ಅದಾನಿ ಪೋರ್ಟ್ಸ್ ಶೇ 5.5, ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 4.74, ಕೋಲ್ ಇಂಡಿಯಾ ಶೇ 4.66, ಸಿಪ್ಲಾ ಶೇ 4.47 ಮತ್ತು ಹೀರೋ ಮೋಟೋ ಕಾರ್ಪ್ ಶೇ 4.38ರಷ್ಟು ಜಿಗಿದಿವೆ. ಮತ್ತೊಂದೆಡೆ ಟಾಟಾ ಮೋಟರ್ಸ್ ಶೇ 9.66 ರಷ್ಟು ಕುಸಿದಿದೆ. ನೆಸ್ಲೆ ಇಂಡಿಯಾ ಶೇ 3.41, ಬಜಾಜ್ ಆಟೊ ಶೇ 2.27, ಡಾ ರೆಡ್ಡೀಸ್ ಲ್ಯಾಬ್ಸ್ ಶೇ 1.94, ಹಿಂದೂಸ್ತಾನ್ ಯೂನಿಲಿವರ್ ಶೇ 1.6, ಟಿಸಿಎಸ್ ಶೇ 1.59, ಮಾರುತಿ ಸುಜುಕಿ ಶೇ 0.44 ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 0.06 ರಷ್ಟು ಇಳಿಕೆಯಾಗಿವೆ.

ಮುನ್ನೋಟ:

ಷೇರುಪೇಟೆಯಲ್ಲಿ ಚುನಾವಣೆ ಫಲಿತಾಂಶದವರೆಗೂ ಅನಿಶ್ಚಿತ ವಾತಾವರಣ ಮುಂದುವರಿಯಲಿದೆ. ಐಟಿಸಿ, ಪೇಜ್ ಇಂಡಸ್ಟ್ರೀಸ್, ಫಿನೋಲೆಕ್ಸ್ ಕೇಬಲ್ಸ್, ಭಾರತ್ ಎಲೆಕ್ಟ್ರಾನಿಕ್ಸ್, ಕರ್ನಾಟಕ ಬ್ಯಾಂಕ್, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಬಿಎಚ್ಇಎಲ್, ಐಆರ್‌ಎಫ್‌ಸಿ, ಒಎನ್‌ಜಿಸಿ, ಎನ್‌ಎಂಡಿಸಿ ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಸಾಧನೆ ವರದಿ ಪ್ರಕಟಿಸಲಿವೆ.

ಮೇ 18ರ ವಹಿವಾಟು:

ಮೇ 18ರಂದು ನಡೆದ ವಿಶೇಷ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ದಾಖಲಿಸಿವೆ. 74,005 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇ 0.12ರಷ್ಟು ಏರಿಕೆ ಕಂಡಿದ್ದರೆ, 22,502 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ0.16ರಷ್ಟು ಪಡೆದುಕೊಂಡಿದೆ.

(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT