ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕರಿಸಬಹುದಾದ ಇಂಧನ ಕ್ಷೇತ್ರದ ವಿಸ್ತರಣೆ: ₹2.3ಲಕ್ಷ ಕೋಟಿ ಹೂಡಿಕೆ– ಅದಾನಿ ಸಮೂಹ

ನವೀಕರಿಸಬಹುದಾದ ಇಂಧನ ಕ್ಷೇತ್ರ ವಿಸ್ತರಣೆಗೆ ಅದಾನಿ ನಿರ್ಧಾರ
Published 7 ಏಪ್ರಿಲ್ 2024, 14:13 IST
Last Updated 7 ಏಪ್ರಿಲ್ 2024, 14:13 IST
ಅಕ್ಷರ ಗಾತ್ರ

ಅಹಮದಾಬಾದ್‌: ದೇಶದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದ ವಿಸ್ತರಣೆ ಹಾಗೂ ತನ್ನ ಒಡೆತನದ ಸೌರ, ಪವನ ವಿದ್ಯುತ್‌ ಘಟಕಗಳ ಸಾಮರ್ಥ್ಯ ಹೆಚ್ಚಿಸಲು ಅದಾನಿ ಸಮೂಹ ನಿರ್ಧರಿಸಿದೆ.

ಈ ಉದ್ದೇಶಕ್ಕಾಗಿ ಮುಂದಿನ ಏಳು ವರ್ಷಗಳವರೆಗೆ ಒಟ್ಟು ₹2.3 ಲಕ್ಷ ಕೋಟಿ ಬಂಡವಾಳ ಹೂಡಲು ತೀರ್ಮಾನಿಸಿದೆ. ತನ್ನ ವ್ಯಾಪಾರದ ನೆಲೆಯ ವೃದ್ಧಿಗೆ ಒತ್ತು ನೀಡುವುದೇ ಇದರ ಹಿಂದಿರುವ ಮೂಲ ಉದ್ದೇಶವಾಗಿದೆ ಎಂದು ಹೇಳಲಾಗಿದೆ.

ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌, ದೇಶದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಕಂಪನಿಯಾಗಿದೆ. ಗುಜರಾತ್‌ನ ಕಛ್‌ ಪ್ರದೇಶದಲ್ಲಿರುವ ಖಾವ್ಡಾದಲ್ಲಿ ಸೌರ ಮತ್ತು ಪವನ ವಿದ್ಯುತ್‌ ಘಟಕಗಳನ್ನು ಹೊಂದಿದೆ. ಸದ್ಯ ಇಲ್ಲಿ 2 ಗೀಗಾವಾಟ್‌ ವಿದ್ಯುತ್‌ ಉತ್ಪಾದಿಸುತ್ತಿದ್ದು, ಇದನ್ನು 30 ಗೀಗಾವಾಟ್‌ ಸಾಮರ್ಥ್ಯಕ್ಕೆ ಹೆಚ್ಚಿಸಲು ತೀರ್ಮಾನಿಸಿದೆ. ಇದಕ್ಕಾಗಿ ₹1.5 ಲಕ್ಷ ಕೋಟಿ ಹೂಡಿಕೆಗೆ ನಿರ್ಧರಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಅಲ್ಲದೆ, ದೇಶದ ಬೇರೆ ಸ್ಥಳದಲ್ಲಿ ₹50 ಸಾವಿರ ಕೋಟಿ ಬಂಡವಾಳ ಹೂಡಿಕೆಯೊಂದಿಗೆ 6ರಿಂದ 7 ಗೀಗಾವಾಟ್‌ ಸಾಮರ್ಥ್ಯದ ಘಟಕ ಸ್ಥಾಪಿಸಲು ಮುಂದಾಗಿದೆ ಎಂದು ಹೇಳಿವೆ.

ಅದಾನಿ ನ್ಯೂ ಇಂಡಸ್ಟ್ರೀಸ್‌ ಲಿಮಿಟೆಡ್‌ (ಎಎನ್‌ಐಎಲ್‌), ಅದಾನಿ ಎಂಟರ್‌ಪ್ರೈಸಸ್‌ಗೆ (ಎಜಿಇಎಲ್‌) ಸೇರಿದ ಘಟಕವಾಗಿದೆ. ಇದು ಗುಜರಾತ್‌ನ ಮುಂದ್ರಾದಲ್ಲಿ ಸೌರ ಫಲಕಗಳು ಹಾಗೂ ವಿಂಡ್‌ ಟರ್ಬೈನ್‌ಗಳನ್ನು ತಯಾರಿಸುತ್ತಿದೆ. ಇದರ ಸಾಮರ್ಥ್ಯ ವಿಸ್ತರಿಸಲು ₹30 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

‘ಸದ್ಯ ಖಾವ್ಡಾದಲ್ಲಿರುವ ನವೀಕರಿಸಬಹುದಾದ ಇಂಧನ ಉತ್ಪಾದನಾ ಘಟಕದಲ್ಲಿ ಮೊದಲ ಹಂತದಲ್ಲಿ 2 ಸಾವಿರ ಮೆಗಾವಾಟ್‌ ಇಂಧನ ಉತ್ಪಾದನೆ ಆರಂಭಿಸಲಾಗಿದೆ. ಮುಂದಿನ ವರ್ಷದ ಮಾರ್ಚ್‌ ಅಂತ್ಯದೊಳಗೆ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಾಗುವುದು’ ಎಂದು ಎಜಿಇಎಲ್‌ನ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಎಸ್. ಜೈನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT