ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಸ್ಥಿರತೆ ಕಾಣದ ಹಣದುಬ್ಬರ: ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ
ಸ್ಥಿರತೆ ಕಾಣದ ಹಣದುಬ್ಬರ: ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ
Published 27 ಡಿಸೆಂಬರ್ 2023, 23:45 IST
Last Updated 27 ಡಿಸೆಂಬರ್ 2023, 23:45 IST
ಅಕ್ಷರ ಗಾತ್ರ
ಈ ವರ್ಷ ಗ್ರಾಹಕರ ದರ ಸೂಚ್ಯಂಕ (ಸಿಪಿಸಿ) ಆಧಾರಿತ ಚಿಲ್ಲರೆ ಹಣದುಬ್ಬರವು ಸ್ಥಿರತೆ ಕಾಯ್ದುಕೊಳ್ಳಲಿಲ್ಲ. ಜನವರಿ ತಿಂಗಳ ಆರಂಭದಿಂದಲೂ ಗ್ರಾಹಕರ ದಿನಬಳಕೆಯ ಪಟ್ಟಿಯ‌ಲ್ಲಿರುವ ಸರಕುಗಳ ದರ ಹೆಚ್ಚಳವಾಯಿತು. ವರ್ಷ ಮುಗಿಯುವ ಹಂತದಲ್ಲಿಯೂ ದಿನಕ್ಕೊಂದು ಹೊಸ ಸರಕು ಈ ಪಟ್ಟಿಗೆ ಸೇರ್ಪಡೆಯಾಗುತ್ತಿದೆ.

ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ 6.52ರಷ್ಟು ಗರಿಷ್ಠ ಮಟ್ಟದಲ್ಲಿ ದಾಖಲಾಯಿತು. ಫೆಬ್ರುವರಿಯಲ್ಲಿ ಶೇ 6.44ಕ್ಕೆ ಇಳಿಯಿತು. ಮಾರ್ಚ್‌ನಲ್ಲಿ ಶೇ 5.66ರಷ್ಟು ದಾಖಲಾದ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 4.70ರಷ್ಟಕ್ಕೆ ಇಳಿಯಿತು. ಮೇ ತಿಂಗಳಿನಲ್ಲಿ ಶೇ 4.25, ಜೂನ್‌ನಲ್ಲಿ ಶೇ 4.81ರಷ್ಟು ದಾಖಲಾಯಿತು. ಜುಲೈನಲ್ಲಿ ಶೇ 7.44ರಷ್ಟಕ್ಕೆ ಜಿಗಿದು ಗ್ರಾಹಕರಿಗೆ ದರ ಏರಿಕೆಯ ಬಿಸಿ ಮುಟ್ಟಿಸಿತು. 

ಆಗಸ್ಟ್‌ನಲ್ಲಿ ಶೇ 6.83ರಷ್ಟಕ್ಕೆ ಇಳಿದರೂ ಗ್ರಾಹಕರು ಆಹಾರ ಪದಾರ್ಥಗಳ ದರ ಏರಿಕೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಸೆಪ್ಟೆಂಬರ್‌ನಲ್ಲಿ ಶೇ 5.02ಕ್ಕೆ ಇಳಿದ ಹಣದುಬ್ಬರವು, ಅಕ್ಟೋಬರ್‌ನಲ್ಲಿ ಶೇ 4.87ರಷ್ಟು ದಾಖಲಾಗುವ ಮೂಲಕ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಯಿತು. ಆದರೆ, ನವೆಂಬರ್‌ನಲ್ಲಿ ಶೇ 5.55ರಷ್ಟು ದಾಖಲಾಗಿದೆ.  

ದೇಶದಲ್ಲಿ ಈ ಬಾರಿ ಮುಂಗಾರು ಹಂಗಾಮಿನ ಕೊರತೆ ತಲೆದೋರಿದೆ. ಬರ ಪರಿಸ್ಥಿತಿಯಿಂದಾಗಿ ಆಹಾರದ ಉತ್ಪಾದನೆಯೂ ಕುಸಿದಿದೆ. ಹಾಗಾಗಿ, ಡಿಸೆಂಬರ್‌ನಲ್ಲಿಯೂ ಚಿಲ್ಲರೆ ಹಣದುಬ್ಬರ ಏರಿಕೆಯಾಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿದೆ.  

ಸಗಟು ಹಣದುಬ್ಬರವೂ ಏರಿಕೆ

ದೇಶದಲ್ಲಿ ಮಾರ್ಚ್‌ ತಿಂಗಳಿನಿಂದ ಅಕ್ಟೋಬರ್‌ವರೆಗೆ ಸಗಟು ಹಣದುಬ್ಬರವು ಶೂನ್ಯಕ್ಕಿಂತ ಕಡಿಮೆ ಇತ್ತು. ನವೆಂಬರ್‌ನಲ್ಲಿ ಶೇ 0.26ಕ್ಕೆ ಏರಿಕೆಯಾಯಿತು. ಆಹಾರ ಪದಾರ್ಥಗಳು, ಖನಿಜಗಳು, ಯಂತ್ರಗಳು ಮತ್ತು ಉಪಕರಣಗಳು, ಕಂಪ್ಯೂಟರ್‌ಗಳು, ಎಲೆಕ್ಟ್ರಾನಿಕ್ಸ್ ಮತ್ತು ಆಪ್ಟಿಕಲ್‌ ಉತ್ಪನ್ನಗಳು, ಮೋಟಾರು ವಾಹನಗಳು ಸೇರಿದಂತೆ ಸಾರಿಗೆ ಉಪಕರಣಗಳ ಬೆಲೆ ಏರಿಕೆ ಇದಕ್ಕೆ ಕಾರಣವಾಯಿತು.  

ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವೂ (ಸಿಎಫ್‌ಪಿಐ) ಏರಿಕೆಯಾಗಿದೆ. ಜುಲೈನಲ್ಲಿ ಶೇ 11.51ರಷ್ಟು ಇದ್ದಿದ್ದು, ಅಕ್ಟೋಬರ್‌ನಲ್ಲಿ ಶೇ 6.61ಕ್ಕೆ ಇಳಿಕೆಯಾಗಿತ್ತು. ನವೆಂಬರ್‌ನಲ್ಲಿ ಮತ್ತೆ ಶೇ 8.70ಕ್ಕೆ ತಲುಪಿದೆ.

ಬದಲಾಗದ ರೆಪೊ ದರ

ಫೆಬ್ರುವರಿ 8ರಂದು ನಡೆದ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೊ ದರವನ್ನು ಶೇ 6.50ಕ್ಕೆ ಹೆಚ್ಚಿಸಲಾಗಿತ್ತು. ಡಿಸೆಂಬರ್‌ 8ರಂದು ನಡೆದ ಸಭೆಯಲ್ಲೂ ಇದು ಇಳಿಕೆಯಾಗಲಿಲ್ಲ. ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದು ಇದು //ಐದನೇ// ಬಾರಿಯಾಗಿದೆ. ಹಣದುಬ್ಬರ ತಗ್ಗಿಸಲು ಈ ನಿಲುವು ಅನಿವಾರ್ಯ ಎಂದು ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ. ಆದರೆ, ಗೃಹ ಸಾಲದ ಇಎಂಐ ಇಳಿಕೆಯ ನಿರೀಕ್ಷೆಯಲ್ಲಿದ್ದ ಗೃಹ ಸಾಲಗಾರರು ನಿರಾಶೆ ಅನುಭವಿಸುವಂತಾಯಿತು. 

ಹಣದುಬ್ಬರದ ಸ್ಥಿರತೆ ಕಷ್ಟಕರ

ಬಿಗಿಯಾದ ಹಣಕಾಸು ನೀತಿ ಹಾಗೂ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡರೂ ದೇಶದಲ್ಲಿ ಹಣದುಬ್ಬರವನ್ನು ಶೇ 4ಕ್ಕೆ ಸ್ಥಿರಗೊಳಿಸುವುದು ಕಷ್ಟಸಾಧ್ಯ. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 5.4ರಲ್ಲಿಯೇ ಮುಂದುವರಿಯಲಿದೆ ಎಂದು ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಆರ್‌ಬಿಐ ವರದಿ ಹೇಳಿದೆ.

ತಲ್ಲಣ ಸೃಷ್ಟಿಸಿದ ಟೊಮೆಟೊ ದರ

ಮೇ ತಿಂಗಳಿನಲ್ಲಿ ಟೊಮೆಟೊ ಧಾರಣೆ ಏರಿಕೆಯ ಹಾದಿ ಹಿಡಿಯಿತು. ಜುಲೈ ತಿಂಗಳ ಮಧ್ಯದ ವೇಳೆಗೆ ಒಂದು ಕೆ.ಜಿ ದರ ₹̄200ಕ್ಕೆ ಏರಿಕೆಯಾಗಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿತು. ಕೋಲಾರದ ಮಾರುಕಟ್ಟೆಯಲ್ಲಿ 15 ಕೆ.ಜಿ ತೂಕದ ಟೊಮೆಟೊ ಬಾಕ್ಸ್‌ನ ಸಗಟು ದರ ₹2,200ಕ್ಕೆ ಮುಟ್ಟಿ ದಾಖಲೆ ಬರೆಯಿತು. ಸೆಪ್ಟೆಂಬರ್‌ 6ಕ್ಕೆ ಒಂದು ಬಾಕ್ಸ್‌ ಟೊಮೆಟೊ ಸಗಟು ದರವು ₹100ರಿಂದ ₹150ಕ್ಕೆ ಇಳಿಯಿತು. ಇದೇ ತಿಂಗಳ ಅಂತ್ಯದಲ್ಲಿ ಚಿಲ್ಲರೆ ಮಾರಾಟ ದರ ₹10ರಿಂದ ₹8ಕ್ಕೆ ಕುಸಿಯಿತು.

ಕಣ್ಣೀರು ತರಿಸಿದ ಈರುಳ್ಳಿ

ದೇಶದಲ್ಲಿ ಉತ್ಪಾದನೆ ಕುಸಿತದಿಂದಾಗಿ ಅಕ್ಟೋಬರ್‌ ಕೊನೆಯ ವಾರದಲ್ಲಿ ಈರುಳ್ಳಿ ಧಾರಣೆ ಏರಿಕೆಯಾಯಿತು. ದೆಹಲಿಯಲ್ಲಿ ಒಂದು ಕೆ.ಜಿ ಈರುಳ್ಳಿ ಬೆಲೆ ₹80 ದಾಟಿತು. ಕೊನೆಗೆ, ಡಿಸೆಂಬರ್‌ 8ರಂದು ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರವು, 2024ರ ಮಾರ್ಚ್‌ 31ರವರೆಗೆ ಈರುಳ್ಳಿ ರಫ್ತು ನಿಷೇಧಿಸಿ ಆದೇಶ ಹೊರಡಿಸಿತು. 

ಬೆಳ್ಳುಳ್ಳಿ ಬೆಲೆಯೂ ದುಬಾರಿ

ಡಿಸೆಂಬರ್‌ ಎರಡನೇ ವಾರದಲ್ಲಿ ಬೆಳ್ಳುಳ್ಳಿ ಬೆಲೆ ಏರಿಕೆ ಕಂಡಿತು. ನಾಟಿ ಬೆಳ್ಳುಳ್ಳಿ ಒಂದು ಕೆ.ಜಿ ₹400ರ ವರೆಗೆ ಮಾರಾಟವಾದರೆ, ಹೈಬ್ರಿಡ್‌ ಬೆಳ್ಳುಳ್ಳಿ ದರ ₹300 ದಾಟಿತು. ವರ್ಷಾಂತ್ಯದಲ್ಲಿ ಗ್ರಾಹಕರು ತೊಂದರೆಗೆ ಸಿಲುಕುವಂತಾಯಿತು.

ಗೌತಮ್‌ ಅದಾನಿ
ಗೌತಮ್‌ ಅದಾನಿ
ಶಕ್ತಿಕಾಂತ ದಾಸ್‌
ಶಕ್ತಿಕಾಂತ ದಾಸ್‌
......
......
ಈರುಳ್ಳಿ....
ಈರುಳ್ಳಿ....
ಏರ್‌ ಇಂಡಿಯಾ 
ಏರ್‌ ಇಂಡಿಯಾ 

ಹಿಂಡನ್‌ಬರ್ಗ್‌ ವರದಿ ಸೃಷ್ಟಿಸಿದ ವಿವಾದ

ಅದಾನಿ ಸಮೂಹದ ಪಾಲಿಗೆ ಜನವರಿ 24 ಮರೆಯಲಾಗದ ದಿನ. ಅಂದು ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಕಂಪನಿ ‘ಹಿಂಡನ್‌ಬರ್ಗ್‌ ರಿಸರ್ಚ್‌’ ಬಿಡುಗಡೆಗೊಳಿಸಿದ ವರದಿಯು ಭಾರತೀಯ ಷೇರುಪೇಟೆ ಹಾಗೂ ಕಾರ್ಪೊರೇಟ್‌ ವಲಯದಲ್ಲಿ ತಲ್ಲಣ ಸೃಷ್ಟಿಸಿತು. ವಾಸ್ತವಿಕ ಬೆಲೆಗಿಂತ ಶೇ 80ರಷ್ಟು ಹೆಚ್ಚು ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ. ಷೇರುಪೇಟೆಯಲ್ಲಿ ಆ ಸಮೂಹ ನಡೆಸಿರುವ ಅವ್ಯವಹಾರವೇ ಇದಕ್ಕೆ ಕಾರಣ ಎನ್ನುವುದು 32 ಸಾವಿರ ಪದಗಳಿದ್ದ ಈ ವರದಿಯ ಸಾರವಾಗಿತ್ತು.  ಈ ವರದಿಯಿಂದಾಗಿ ಹೂಡಿಕೆದಾರರ ಸಂಪತ್ತಿನಲ್ಲಿ ₹11.8 ಲಕ್ಷ ಕೋಟಿ ಕರಗಿತು. ಅದಾನಿ ಕಂಪನಿಗಳ ಷೇರು ಮೌಲ್ಯವು ₹8 ಲಕ್ಷ ಕೋಟಿಯಷ್ಟು ನಷ್ಟಕ್ಕೀಡಾಯಿತು. ಅದಾನಿಗೆ ಸಾಲ ನೀಡಿದ್ದ ಬ್ಯಾಂಕ್‌ಗಳ ಷೇರು ಮೌಲ್ಯವೂ ಕುಸಿಯಿತು.   ಮತ್ತೆ ಅದಾನಿ ಸಮೂಹವು ಸರಿಯಾದ ಹಳಿಗೆ ಮರಳಲು ಡಿಸೆಂಬರ್‌ 5ರವರೆಗೂ ಕಾಯಬೇಕಾಯಿತು. ಶ್ರೀಲಂಕಾದ ಕೊಲಂಬೊ ಬಂದರಿನಲ್ಲಿ ಕಂಟೇನರ್‌ ಟರ್ಮಿನಲ್‌ ನಿರ್ಮಿಸಲು ಅದಾನಿ ಪೋರ್ಟ್‌ ಎಸ್‌ಇಝಡ್‌ ಮುಂದಾಗಿತ್ತು. ಈ ಯೋಜನೆಗಾಗಿ ಅಮೆರಿಕದ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್‌ ಫೈನಾನ್ಸ್‌ ಕಾರ್ಪೋರೇಷನ್‌ನಿಂದ (ಡಿಎಫ್‌ಸಿ) ಸಾಲದ ನೆರವು ಕೋರಿತ್ತು. ಹಿಂಡನ್‌ಬರ್ಗ್‌ ವರದಿ ಪರಿಶೀಲಿಸಿದ್ದ ಈ ಸಾಲದಾತ ಸಂಸ್ಥೆಯು ಅದೊಂದು ‘ಆಧಾರರಹಿತ’ ವರದಿ ಎಂದಿದ್ದು ಅದಾನಿ ಸಮೂಹದ ಪಾಲಿಗೆ ವರದಾನವಾಯಿತು. ವರ್ಷಾಂತ್ಯಕ್ಕೆ ಅದಾನಿ ಕಂಪನಿಯ ಷೇರುಗಳು  ಚೇತರಿಕೆಯ ಹಾದಿಗೆ ಮರಳಿವೆ.

ಪ್ರಮುಖ ಒಪ್ಪಂದ ಮತ್ತು ಖರೀದಿ

  • ಫೆಬ್ರುವರಿ ತಿಂಗಳ ಮೊದಲ ವಾರದಲ್ಲಿ ಅಂಬುಜಾ ಸಿಮೆಂಟ್‌ ಮತ್ತು ಅಸೋಸಿಯೇಟೆಡ್‌ ಸಿಮೆಂಟ್‌ ಕಂಪನಿಯಲ್ಲಿ (ಎಸಿಸಿ) ಅತಿಹೆಚ್ಚಿನ ಷೇರು ಖರೀದಿ ಸಂಬಂಧ ಅದಾನಿ ಸಮೂಹ ಮತ್ತು ಹೋಲಿಮ್ಸ್‌ ಗ್ರೂಪ್‌ ನಡುವೆ ಒಪ್ಪಂದ ಏರ್ಪಟ್ಟಿತು. ಸುಮಾರು ₹85 ಸಾವಿರ ಕೋಟಿ ಮೊತ್ತದ ಈ ಒಪ್ಪಂದ ಪ್ರಕ್ರಿಯೆಯು ಸೆಪ್ಟೆಂಬರ್‌ 16ರಂದು ಪೂರ್ಣಗೊಂಡಿತು. 

  • ಫೆಬ್ರುವರಿ 10ರಂದು ಸೊನಾಟಾ ಫೈನಾನ್ಸ್‌ ಪ್ರೈವೆಟ್‌ ಲಿಮಿಟೆಡ್‌ನ ಶೇ 100ರಷ್ಟು ಪಾಲನ್ನು ₹537 ಕೋಟಿಗೆ ಖರೀದಿಸುವುದಾಗಿ ಕೋಟಕ್‌ ಮಹೀಂದ್ರಾ ಬ್ಯಾಂಕ್‌  ಘೋಷಿಸಿತ್ತು. ಅಕ್ಟೋಬರ್‌ 20ರಂದು ಭಾರತೀಯ ರಿಸರ್ವ್‌ ಬಾಂಕ್‌ ಇದಕ್ಕೆ ಹಸಿರು ನಿಶಾನೆ ನೀಡಿತು 

  • ಫೆಬ್ರುವರಿ 15ರಂದು ಟಾಟಾ ಗ್ರೂಪ್‌ ಒಡೆತನದ ಏರ್‌ ಇಂಡಿಯಾವು ಫ್ರಾನ್ಸ್‌ನ ಏರ್‌ಬಸ್‌ ಕಂಪನಿಯಿಂದ 250 ವಿಮಾನ ಹಾಗೂ ಅಮೆರಿಕದ ಬೋಯಿಂಗ್‌ ಕಂಪನಿಯಿಂದ 220 ವಿಮಾನಗಳ ಖರೀದಿಗೆ ಒಪ್ಪಂದ ಘೋಷಿಸಿತು. ಇದು ಜಾಗತಿಕ ವಿಮಾನಯಾನ ಕ್ಷೇತ್ರದಲ್ಲಿನ ಅತಿದೊಡ್ಡ ವಿಮಾನ ಖರೀದಿ ಒಪ್ಪಂದ ಎಂದು ಹೇಳಲಾಗಿದೆ. ಇದರ ಒಟ್ಟು ಮೊತ್ತ ₹6.40 ಲಕ್ಷ ಕೋಟಿ 

  • ಜುಲೈ 10ರಂದು ಒಎಲ್‌ಎಕ್ಸ್‌ ಆಟೋಸ್‌ ಬ್ರ್ಯಾಂಡ್‌ನಡಿ ಹಳೆಯ ಕಾರುಗಳ ಮಾರಾಟದ ಸೇವೆ ನೀಡುವ ಸೊಬೆಕ್‌ ಆಟೊ ಇಂಡಿಯಾವನ್ನು ಮುಂಬೈ ಮೂಲದ ಕಾರ್‌ ಟ್ರೇಕ್‌ ಟೆಕ್‌ ಒಟ್ಟು ₹537.43 ಕೋಟಿಗೆ ಖರೀದಿಸಿತು

  • ಮೇ 17ರಂದು ಪಿವಿಆರ್‌ ಮತ್ತು ಐನಾಕ್ಸ್‌ ಕಂಪನಿಗಳು ವಿಲೀನವನ್ನು ಘೋಷಿಸಿದವು. ಕೋವಿಡ್‌  ಕಾಲಘಟ್ಟದಲ್ಲಿ ಭಾರತದ ಸಿನಿಮಾ ಪ್ರದರ್ಶನ ವಲಯ ಬಿಕ್ಕಟ್ಟು ಎದುರಿಸಿತ್ತು. ಒಟಿಟಿ ವೇದಿಕೆಗಳ ಬೆಳವಣಿಗೆಯಿಂದಾಗಿ ತೊಂದರೆಗೆ ಸಿಲುಕಿದ್ದ ಎರಡೂ ಕಂಪನಿಗಳು ಈ ವಿಲೀನಕ್ಕೆ ಅಂಕಿತ ಹಾಕಿದವು. ಐನಾಕ್ಸ್‌ ಆಸ್ತಿ ಮೌಲ್ಯ ಸುಮಾರು ₹3784 ಕೋಟಿ ಇದ್ದರೆ ಪಿವಿಆರ್‌ ₹7450 ಕೋಟಿ ಮೌಲ್ಯ ಹೊಂದಿದೆ

  • ಬಾಲಿವುಡ್‌ ನಟಿ ಆಲಿಯಾ ಭಟ್‌ ಸ್ಥಾಪಿಸಿದ ಸಿದ್ಧಉಡುಪುಗಳ ಕಂಪನಿಯಾದ ‘ಎಡ್-ಎ-ಮಮ್ಮಾ’ ಜತೆಗೆ ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ ಕಂಪನಿಯು (ಆರ್‌ಆರ್‌ವಿಎಲ್‌) ಸೆಪ್ಟೆಂಬರ್‌ 6ರಂದು ಜಂಟಿ ಉದ್ಯಮಕ್ಕೆ ಸಹಿ ಹಾಕಿತು. ಶೇ 51ರಷ್ಟು ಷೇರುಗಳನ್ನು  ರಿಲಯನ್ಸ್‌ ಖರೀದಿಸಿದೆ. ‘ಎಡ್‌ ಎ ಮಮ್ಮಾ’ ಕಂಪನಿಯು 2ರಿಂದ 12 ವರ್ಷ ವಯಸ್ಸಿನವರ ಉಡುಪುಗಳನ್ನು ಸಿದ್ಧಪಡಿಸುತ್ತದೆ

  • ಡಿಸೆಂಬರ್‌ 17ರಂದು ಅದಾನಿ ಸಮೂಹದ ಅಂಗಸಂಸ್ಥೆಯಾದ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್‌ ಕಂಪನಿಯು ಸುದ್ದಿಸಂ‌ಸ್ಥೆಯಾದ ಐಎಎನ್‌ಎಸ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ನಲ್ಲಿ ಶೇ 50.50ರಷ್ಟು ಷೇರುಗಳ ಮೇಲೆ ಒಡೆತನ ಸ್ಥಾಪಿಸಿತು 

ಲಾಭ ತಂದುಕೊಟ್ಟ ಷೇರುಪೇಟೆ   

ಜನವರಿ 2ರಂದು 61000 ಅಂಶ ದಾಟುವ ಮೂಲಕ ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್ಇ) ಸೆನ್ಸೆಕ್ಸ್‌ ಶುಭಾರಂಭ ಮಾಡಿತು. ಡಿಸೆಂಬರ್‌ 15ರಂದು 71000 ಅಂಶಗಳನ್ನು ದಾಟಿ ಸಾರ್ವಕಾಲಿಕ ದಾಖಲೆ ಬರೆಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಕೂಡ ಈ ವರ್ಷ 21000 ಅಂಶ ದಾಟಿದೆ. ಪ್ರಸಕ್ತ ವರ್ಷದಲ್ಲಿ ಷೇರು ಮಾರುಕಟ್ಟೆಯು ಹೂಡಿಕೆದಾರರ ಪಾಲಿಗೆ ಒಳ್ಳೆಯ ಫಲ ನೀಡಿದೆ. ಲಾರ್ಜ್‌ ಕ್ಯಾಪ್‌ಕ್ಕಿಂತ ಸ್ಮಾಲ್‌ ಕ್ಯಾಪ್‌ ಮತ್ತು ಮಿಡ್‌ ಕ್ಯಾಪ್‌ ಷೇರುಗಳು ಹೆಚ್ಚು ಲಾಭ ತಂದುಕೊಟ್ಟಿವೆ. ನಿಫ್ಟಿಯು ಹೂಡಿಕೆದಾರರಿಗೆ ಶೇ 17ರಷ್ಟು ಲಾಭ ತಂದುಕೊಟ್ಟಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಸಂಪತ್ತು ವೃದ್ಧಿಯಲ್ಲಿ ಮ್ಯೂಚುವಲ್ ಫಂಡ್‌ಗಳು ಅತಿದೊಡ್ಡ ಚಾಲನಾ ಶಕ್ತಿಯಾಗಿವೆ. ವ್ಯವಸ್ಥಿತ ಹೂಡಿಕೆ ಯೋಜನೆಯಡಿ (ಎಸ್‌ಐಪಿ) ಹೂಡಿಕೆ ಏರುಗತಿಯಲ್ಲಿದೆ. ಜನವರಿಯಿಂದ ನವೆಂಬರ್‌ವರೆಗೆ ₹1.66 ಲಕ್ಷ ಕೋಟಿ ಹೂಡಿಕೆಯಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ₹1.5 ಲಕ್ಷ ಕೋಟಿ ಹೂಡಿಕೆಯಾಗಿತ್ತು.

ಮಿನುಗಿದ ಬಂಗಾರ: ಚಿನಿವಾರ ಪೇಟೆಯ ಅಂಕಿ–ಅಂಶದ ಪ್ರಕಾರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಚಿನ್ನವು ಶೇ 13ರಷ್ಟು ವರಮಾನ ತಂದುಕೊಟ್ಟರೆ ಬೆಳ್ಳಿಯು ಶೇ 5ರಷ್ಟು ಲಾಭ ತಂದು ಕೊಟ್ಟಿದೆ. 

ರೂಪಾಯಿ ಸ್ಥಿರತೆ: ರೂಪಾಯಿ ಮೌಲ್ಯದ ಸ್ಥಿರತೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ಆಕ್ಷೇಪಿಸಿತು. ಈ ಆರೋಪವನ್ನು ಆರ್‌ಬಿಐ ತಳ್ಳಿಹಾಕಿತು. ಈ ವರ್ಷ ರೂಪಾಯಿ ಮೌಲ್ಯ ಸ್ಥಿರತೆ ಕಾಯ್ದುಕೊಂಡಿದ್ದು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT