ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಜೆಟ್‌ 2024–25 | ನವೋದ್ಯಮಕ್ಕೆ ಹೆಚ್ಚಿನ ಅನುದಾನ ನಿರೀಕ್ಷೆ

Published 9 ಜೂನ್ 2024, 13:00 IST
Last Updated 9 ಜೂನ್ 2024, 13:00 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಜುಲೈ ತಿಂಗಳಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಮಂಡಿಸಲಿರುವ 2024–25ನೇ ಆರ್ಥಿಕ ಸಾಲಿನ ಬಜೆಟ್‌ನಲ್ಲಿ ನವೋದ್ಯಮಗಳಿಗೆ (ಸ್ಟಾರ್ಟ್ಅಪ್‌) ಹೆಚ್ಚಿನ ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

2021ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರವು ಸ್ಟಾರ್ಟ್ಅಪ್‌ ಇಂಡಿಯಾ ಸೀಡ್‌ ಫಂಡ್‌ ಸ್ಕೀಮ್‌ (ಎಸ್‌ಐಎಸ್‌ಎಫ್‌ಎಸ್‌) ಯೋಜನೆ ರೂಪಿಸಿತ್ತು. ನವೋದ್ಯಮಗಳು ಮಾರುಕಟ್ಟೆ ಪ್ರವೇಶಿಸಲು ಅನುವಾಗುವಂತೆ ₹50 ಲಕ್ಷದವರೆಗೆ ಈ ಯೋಜನೆಯಡಿ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಇದಕ್ಕಾಗಿ ₹945 ಕೋಟಿ ಮೀಸಲಿಟ್ಟಿದ್ದು, 2025ಕ್ಕೆ ಯೋಜನೆಯು ಮುಕ್ತಾಯಗೊಳ್ಳಲಿದೆ. ಹಾಗಾಗಿ, ಸಚಿವಾಲಯವು ಹೆಚ್ಚಿನ ಅನುದಾನ ಕೋರಿ ಮತ್ತೆ ಪ್ರಸ್ತಾವ ಸಲ್ಲಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ನವೋದ್ಯಮಗಳಿಗೆ ಈ ಯೋಜನೆಯಡಿ ಹಣ ಹಂಚಿಕೆಯಾಗಲಿದೆ. ಆರಂಭಿಕ ಹಂತದಲ್ಲಿ ನವೋದ್ಯಮಿಗಳಿಗೆ ಉದ್ಯಮದ ಸ್ಥಾಪಿಸಲು ಇದರಿಂದ ನೆರವಾಗಲಿದೆ.  

ಪ್ರಸ್ತುತ ದೇಶದಲ್ಲಿ 1.17 ಲಕ್ಷ ನೋಂದಾಯಿತ ನವೋದ್ಯಮಗಳಿವೆ. ಸರ್ಕಾರದ ನಿಯಮಾವಳಿ ಅನ್ವಯ ಆದಾಯ ತೆರಿಗೆ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯುತ್ತಿವೆ. 12.42 ಲಕ್ಷ ನೇರ ಉದ್ಯೋಗಾವಕಾಶ ಕಲ್ಪಿಸಿವೆ. 

ಅಲ್ಲದೆ, ಡೀ‍ಪ್‌ ಟೆಕ್‌ ನವೋದ್ಯಮಗಳಿಗೆ ಪೂರಕವಾದ ನೀತಿ ರೂಪಿಸಲು ಸಚಿವಾಲಯವು ನಿರ್ಧರಿಸಿದೆ. 

ದೇಶದಲ್ಲಿ ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡುವ ಮೂಲಕ ಆರ್ಥಿಕತೆ ಬೆಳವಣಿಗೆಯನ್ನು ಮತ್ತಷ್ಟು ಸದೃಢಗೊಳಿಸುವುದೇ ಈ ನೀತಿಯ ಆಶಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT