ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಚ್‌ಎಫ್‌ಎಲ್‌: ಭಾರಿ ವಂಚನೆ

₹ 31 ಸಾವಿರ ಕೋಟಿ ಹಗಲು ದರೋಡೆ: ಕೋಬ್ರಾಪೋಸ್ಟ್ ವರದಿ
Last Updated 29 ಜನವರಿ 2019, 19:03 IST
ಅಕ್ಷರ ಗಾತ್ರ

ನವದೆಹಲಿ: ಗೃಹ ಹಣಕಾಸು ಸಂಸ್ಥೆಯಾಗಿರುವ ದಿವಾನ್‌ ಹೌಸಿಂಗ್ ಫೈನಾನ್ಸ್‌ ಲಿಮಿಟೆಡ್‌ನ (ಡಿಎಚ್‌ಎಫ್‌ಎಲ್‌) ಪ್ರವರ್ತಕರು ₹ 31 ಸಾವಿರ ಕೋಟಿಗಳಷ್ಟು ಭಾರಿ ವಂಚನೆ ಎಸಗಿದ್ದಾರೆ ಎಂದು ತನಿಖಾ ಪತ್ರಿಕೋದ್ಯಮಕ್ಕೆ ಹೆಸರುವಾಸಿಯಾಗಿರುವ ಅಂತರ್ಜಾಲ ಸುದ್ದಿ ತಾಣ ಕೋಬ್ರಾಪೋಸ್ಟ್‌ ವರದಿ ಮಾಡಿದೆ.

ಡಿಎಚ್‌ಎಫ್‌ಎಲ್‌ನ ಮೂಲ ಪ್ರವರ್ತಕರು ಮತ್ತು ಅವರಿಗೆ ಸೇರಿದ ಕಂಪನಿಗಳು ಸಾರ್ವಜನಿಕರಿಗೆ ಸೇರಿದ ಇಷ್ಟು ದೊಡ್ಡ ಮೊತ್ತವನ್ನು ಹಗಲು ದರೋಡೆ ನಡೆಸಿದ್ದಾರೆ. ದೇಶ– ವಿದೇಶಗಳಲ್ಲಿ ಷೇರು, ಖಾಸಗಿ ಆಸ್ತಿ ಖರೀದಿಗೆ ಬಳಸಲಾಗಿದೆ. ದೇಶದ ಅತಿದೊಡ್ಡ ಬ್ಯಾಂಕಿಂಗ್ ಹಗರಣ ಇದಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ಕಂಪನಿ ಕಾಯ್ದೆ ನಿಯಮಗಳನ್ನು ಸಮರ್ಪಕವಾಗಿ ಪಾಲಿಸದ ಸಂಶಯಾಸ್ಪದ (ಷೆಲ್‌) ಕಂಪನಿಗಳಿಗೆ ಭಾರಿ ಪ್ರಮಾಣದಲ್ಲಿ ಸಾಲ ವಿತರಿಸುವ ಮೂಲಕ ಈ ವಂಚನೆ ಎಸಗಲಾಗಿದೆ. ಕಂಪನಿಯ ಪ್ರವರ್ತಕರಾದ ಕಪಿಲ್‌ ವಧಾವನ್‌, ಅರುಣಾ ವಧಾವನ್‌ ಮತ್ತು ಧೀರಜ್‌ ವಧಾವನ್‌ ಅವರು ಈ ವಂಚನೆ ಎಸಗಿದ್ದಾರೆ.

ಷೇರುಬೆಲೆ ಕುಸಿತ: ಈ ಸುದ್ದಿ ಪ್ರಕಟವಾದ ಬೆನ್ನಲ್ಲೇ ಮುಂಬೈ ಷೇರುಪೇಟೆಯ ಮಂಗಳವಾರದ ವಹಿವಾಟಿನಲ್ಲಿ ಸಂಸ್ಥೆಯ ಷೇರು ಬೆಲೆ ಶೇ 8.01ರಷ್ಟು ಕುಸಿತ ಕಂಡು ₹ 170.05ಕ್ಕೆ ಇಳಿಯಿತು.

ಷೆಲ್‌ ಕಂಪನಿಗಳಿಗೆ ಅನುಮಾನಾಸ್ಪದ ರೀತಿಯಲ್ಲಿ ಸಾಲ ಮಂಜೂರು ಮಾಡಿರುವುದು ಮರುಪಾವತಿಯಾಗುವ ಸಾಧ್ಯತೆ ಇಲ್ಲ. ಇಂತಹ ಕಂಪನಿಗಳ ನಿರ್ದೇಶಕರು ಯಾವುದೇ ಸಂಪತ್ತನ್ನು ಹೊಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬಿಜೆಪಿಗೆ ದೇಣಿಗೆ: ಬಿಜೆಪಿಗೆ ₹ 20 ಕೋಟಿ ದೇಣಿಗೆ ನೀಡಲಾಗಿದೆ ಎಂದೂ ವರದಿಯಲ್ಲಿ ಆರೋಪಿಸಲಾಗಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (₹ 11 ಸಾವಿರ ಕೋಟಿ) ಮತ್ತು ಬ್ಯಾಂಕ್‌ ಆಫ್‌ ಬರೋಡಾ ₹ 4 ಸಾವಿರ ಕೋಟಿಗಳ ಸಾಲವನ್ನು ಸಂಸ್ಥೆಗೆ ಸಾಲ ಮಂಜೂರು ಮಾಡಿವೆ. ಈ ಹಣ ಮರಳಿ ಬರುವ ಸಾಧ್ಯತೆ ಕ್ಷೀಣವಾಗಿದೆ ಎಂದೂ ವರದಿಯಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ.

ಜನರಿಂದ ಠೇವಣಿ ಸಂಗ್ರಹಿಸುವ ‘ಡಿಎಚ್‌ಎಫ್‌ಸಿ’ಯ ಪ್ರಧಾನ ಕಚೇರಿ ಮುಂಬೈನಲ್ಲಿ ಇದೆ. ದೇಶದ ಪ್ರಮುಖ ನಗರಗಳಲ್ಲಿ ಅದರ ಕಚೇರಿಗಳಿವೆ. ಕೈಗೆಟುಕುವ ಬೆಲೆಗೆ ಮನೆ ಖರೀದಿಸಲು ಹಣಕಾಸಿನ ನೆರವು ಒದಗಿಸುತ್ತಿದೆ.

‘ದುರುದ್ದೇಶದ ಆರೋಪ’

ಸಂಸ್ಥೆಯ ಹೆಸರಿಗೆ ಮಸಿ ಬಳಿಯುವ ದುರುದ್ದೇಶದಿಂದಲೇ ಕೋಬ್ರಾಪೋಸ್ಟ್‌ ಇಂತಹ ಆರೋಪ ಮಾಡಿದೆ. ಇದರಿಂದ ಸಂಸ್ಥೆಯ ವರ್ಚಸ್ಸಿಗೆ ಧಕ್ಕೆಯಾಗಿದೆ. ಸಂಸ್ಥೆಯನ್ನು ಅಸ್ಥಿರಗೊಳಿಸುವ ಯತ್ನ ಇದಾಗಿದೆ. ಯಾವುದೇ ತಪ್ಪು ಎಸಗಿಲ್ಲ. ಆರೋಪಗಳನ್ನು ತಾತ್ವಿಕ ಅಂತ್ಯಕ್ಕೆ ಕೊಂಡೊಯ್ಯುವ ಯಾವುದೇ ಬಗೆಯ ಪರಿಶೀಲನೆಗೆ ಒಳಪಡಲು ಸಂಸ್ಥೆ ಸಿದ್ಧವಿದೆ.

ಸಂಸ್ಥೆಯು ನ್ಯಾಷನಲ್‌ ಹೌಸಿಂಗ್‌ ಫೈನಾನ್ಸ್‌ ಮತ್ತು ಷೇರು ನಿಯಂತ್ರಣ ಮಂಡಳಿಯ (ಸೆಬಿ) ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ‘ಡಿಎಚ್‌ಎಫ್‌ಎಲ್‌’ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದೆ.

ಎಲ್ಲ ನಿಯಂತ್ರಣ ಕ್ರಮಗಳನ್ನು ಚಾಚೂತಪ್ಪದೆ ಪಾಲಿಸಿಕೊಂಡು ಬರಲಾಗುತ್ತಿದೆ. ಪಾರದರ್ಶಕ ರೀತಿಯಲ್ಲಿ ವಹಿವಾಟು ನಡೆಸಲಾಗುತ್ತಿದೆ. ಸಂಸ್ಥೆಯ ಹಣಕಾಸು ಪರಿಸ್ಥಿತಿಯನ್ನು ಷೇರುಪೇಟೆಗೆ ಸಲ್ಲಿಸಲಾಗಿದೆ.

ತನಿಖೆಗೆ ಸಿನ್ಹಾ ಒತ್ತಾಯ: ₹ 31 ಸಾವಿರ ಕೋಟಿಗಳಷ್ಟು ಸಾಲವನ್ನು ಪರಭಾರೆ ಮಾಡಲಾಗಿದೆ ಎನ್ನುವ ಆರೋಪಗಳ ಕುರಿತು ತನಿಖೆ ನಡೆಯಬೇಕು ಎಂದು ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ ಒತ್ತಾಯಿಸಿದ್ದಾರೆ.

ರಾಜಕೀಯ ದೇಣಿಗೆಯೂ ಸೇರಿದಂತೆ ಭಾರಿ ಮೊತ್ತದ ಪರಭಾರೆ ಕುರಿತು ತನಿಖೆಗೆ ಆದೇಶಿಸದಿದ್ದರೆ ಸರ್ಕಾರದ ಉದ್ದೇಶದ ಬಗ್ಗೆ ಅನುಮಾನ ಬರುತ್ತದೆ ಎಂದು ಹೇಳಿದ್ದಾರೆ.

**

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿನ ಅನೇಕರು ಈ ಹಗರಣದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ.

–ಪ್ರಶಾಂತ್‌ ಭೂಷಣ್‌, ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT