ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ ತ್ರೈಮಾಸಿಕದಲ್ಲಿ ತಗ್ಗಿದ ಎಫ್‌ಡಿಐ

Published 27 ಆಗಸ್ಟ್ 2023, 15:48 IST
Last Updated 27 ಆಗಸ್ಟ್ 2023, 15:48 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಪ್ರಿಲ್‌–ಜೂನ್‌ ಅವಧಿಯಲ್ಲಿ ಭಾರತಕ್ಕೆ ವಿದೇಶಿ ನೇರ ಬಂಡವಾಳದ (ಎಫ್‌ಡಿಐ) ಹರಿವು ಶೇಕಡ 34ರಷ್ಟು ಕಡಿಮೆ ಆಗಿದೆ. ಈ ಅವಧಿಯಲ್ಲಿ ಆಗಿರುವ ಎಫ್‌ಡಿಐ ಮೊತ್ತ 10.94 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ₹90 ಸಾವಿರ ಕೋಟಿ).

ಕಂಪ್ಯೂಟರ್‌ ಯಂತ್ರಾಂಶ ಹಾಗೂ ತಂತ್ರಾಂಶ, ದೂರಸಂಪರ್ಕ, ಆಟೊಮೊಬೈಲ್‌ ಮತ್ತು ಫಾರ್ಮಾ ವಲಯಗಳಲ್ಲಿ ಹೂಡಿಕೆ ಕಡಿಮೆ ಆಗಿರುವುದು ಇದಕ್ಕೆ ಕಾರಣ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ 16.58 ಬಿಲಿಯನ್ ಡಾಲರ್ (₹ 1.36 ಲಕ್ಷ ಕೋಟಿ) ಎಫ್‌ಡಿಐ ಭಾರತಕ್ಕೆ ಬಂದಿತ್ತು. ಈ ವರ್ಷದ ಜನವರಿ–ಮಾರ್ಚ್‌ ಅವಧಿಯಲ್ಲಿ ಕೂಡ ಎಫ್‌ಡಿಐ ಪ್ರಮಾಣವು ಶೇ 40.55ರಷ್ಟು ತಗ್ಗಿತ್ತು ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಅಂಕಿ–ಅಂಶಗಳು ಹೇಳುತ್ತವೆ.

ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಸಿಂಗಪುರ, ಮಾರಿಷಸ್, ಅಮೆರಿಕ, ಬ್ರಿಟನ್ ಮತ್ತು ಯುಎಇ ಸೇರಿದಂತೆ ಪ್ರಮುಖ ದೇಶಗಳಿಂದ ಬರುವ ಎಫ್‌ಡಿಐ ಹರಿವು ಕಡಿಮೆ ಆಗಿದೆ. ಆದರೆ ನೆದರ್ಲೆಂಡ್ಸ್‌, ಜಪಾನ್ ಮತ್ತು ಜರ್ಮನಿಯಿಂದ ಬರುವ ಎಫ್‌ಡಿಐ ಹೆಚ್ಚಾಗಿದೆ.

ಎಫ್‌ಡಿಐ ಆಕರ್ಷಿಸುವುದರಲ್ಲಿ ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರವು ಜೂನ್ ತ್ರೈಮಾಸಿಕದಲ್ಲಿ 4.46 ಬಿಲಿಯನ್ ಅಮೆರಿಕನ್ ಡಾಲರ್ (₹36 ಸಾವಿರ ಕೋಟಿ) ಎಫ್‌ಡಿಐ ಪಡೆದುಕೊಂಡಿದೆ. ಇದು ಕೂಡ ಹಿಂದಿನ ವರ್ಷದ ಇದೇ ಅವಧಿಯಲ್ಲಿನ ಹೂಡಿಕೆಗೆ ಹೋಲಿಸಿದರೆ ಕಡಿಮೆ.

ಜಾಗತಿಕವಾಗಿ ಬಡ್ಡಿ ದರ ಹೆಚ್ಚಾಗುತ್ತಿರುವುದು ಹಾಗೂ ಜಾಗತಿಕ ಬಿಕ್ಕಟ್ಟುಗಳು ಎಫ್‌ಡಿಐ ಹರಿವಿನ ಮೇಲೆ ಪ್ರಭಾವ ಬೀರಬಹುದು ಎಂದು ಡಿಪಿಐಐಟಿ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಮೇ ತಿಂಗಳಲ್ಲಿ ಹೇಳಿದ್ದರು.

ರಾಜ್ಯದಲ್ಲೂ ಹೂಡಿಕೆ ಇಳಿಕೆ

ಕರ್ನಾಟಕ ಆಕರ್ಷಿಸಿದ ವಿದೇಶಿ ನೇರ ಬಂಡವಾಳ ಹೂಡಿಕೆಯು 1.46 ಬಿಲಿಯನ್ ಡಾಲರ್‌ಗೆ (₹12 ಸಾವಿರ ಕೋಟಿ) ತಗ್ಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕರ್ನಾಟಕವು 2.8 ಬಿಲಿಯನ್ ಡಾಲರ್ (₹23 ಸಾವಿರ ಕೋಟಿ) ಎಫ್‌ಡಿಐ ಆಕರ್ಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT