ಶುಕ್ರವಾರ, ನವೆಂಬರ್ 22, 2019
20 °C

ಎಫ್‌ಪಿಐ ಒಳಹರಿವಿನ ನಿರೀಕ್ಷೆ

Published:
Updated:

ನವದೆಹಲಿ: ಕಾರ್ಪೊರೇಟ್‌ ತೆರಿಗೆ ಕಡಿತ, ಸರ್ಚಾರ್ಜ್‌ ಹೆಚ್ಚಳ ಕೈಬಿಟ್ಟಿರುವುದರಿಂದ ದೇಶದ ಬಂಡವಾಳ ಮಾರುಕಟ್ಟೆಗೆ ವಿದೇಶಿ ಬಂಡವಾಳ ಹರಿದುಬರುವ ನಿರೀಕ್ಷೆ ವ್ಯಕ್ತವಾಗಿದೆ.

‘ಹೂಡಿಕೆ ಹೆಚ್ಚಾಗಲಿದ್ದು, ಕಾರ್ಪೊರೇಟ್‌ ಗಳಿಕೆಯಲ್ಲಿ ಏರಿಕೆ ಕಂಡುಬರಲಿದೆ. ಕಾರ್ಪೊರೇಟ್‌ ವಲಯಕ್ಕೆ ಆಗುವ ಪ್ರಯೋಜನ
ವನ್ನು ಗ್ರಾಹಕರಿಗೆ ವರ್ಗಾಯಿಸಿದರೆ ಕುಸಿದಿರುವ ಖರೀದಿ ಸಾಮರ್ಥ್ಯ ತುಸು ಚೇತರಿಸಿಕೊಳ್ಳಲಿದೆ’ ಎಂದು ಐಸಿಐಸಿಐ ಸೆಕ್ಯುರಿಟೀಸ್‌ನ ಸಿಇಒ ವಿಜಯ್ ಸಿ. ಅವರು ಅಭಿಪ್ರಾಯಪಟ್ಟಿದ್ದಾರೆ.

ಬಜೆಟ್‌ನಲ್ಲಿ ಹೆಚ್ಚುವರಿ ಸರ್ಚಾರ್ಜ್‌ ಘೋಷಣೆ ಮಾಡಿದ ಬಳಿಕ ಎಫ್‌ಪಿಐ ಹೊರಹರಿವು ಹೆಚ್ಚಾಗಿತ್ತು. ಆದರೆ ಇದೀಗ ಘೋಷಣೆಯಾಗಿರುವ ಹೊಸ ನಿರ್ಧಾರಗಳಿಂದಾಗಿ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ. 

‘ಆತಂಕ ಪಡುವ ಅಗತ್ಯ ಇಲ್ಲ. ಸುಧಾರಣಾ ಕ್ರಮಗಳು ಹೂಡಿಕೆಯನ್ನು ಹೆಚ್ಚಿಸಲಿವೆ. ಕಾರ್ಪೊರೇಟ್‌ ಲಾಭದಲ್ಲಿ ಏರಿಕೆಯಾಗಲಿದ್ದು, ಪ್ರಗತಿಗೆ ಪೂರಕವಾಗಲಿದೆ. ಎಫ್‌ಪಿಐ ಮತ್ತೆ ಹೂಡಿಕೆಗೆ ಮುಂದಾಗಬೇಕು’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವೀಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದ್ದಾರೆ.

ಅಮೆರಿಕ–ಚೀನಾದ ವಾಣಿಜ್ಯ ಸಮರ ಬಗೆಹರಿಯುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ಇದರ ಜತೆಗೆ ಆರ್ಥಿಕತೆಯ ಚೇತರಿಕೆಗೆ ಸರ್ಕಾರ ಉತ್ತೇಜನಾ ಕೊಡುಗೆಗಳನ್ನೂ ಘೋಷಿಸುತ್ತಿದೆ. ಹೀಗಾಗಿ ಒಳಹರಿವು ಆರಂಭವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಹೊರಹರಿವು: ದೇಶದ ಬಂಡವಾಳ ಮಾರುಕಟ್ಟೆಯಿಂದ ಸೆಪ್ಟೆಂಬರ್‌ 3 ರಿಂದ 20 ರವರೆಗೆ ₹ 4,193 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ಹೂಡಿಕೆದಾರರು ₹5,578 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೆ, ₹1,385 ಕೋಟಿ ಮೌಲ್ಯದ ಸಾಲಪತ್ರಗಳನ್ನು ಖರೀದಿಸಿದ್ದಾರೆ. ಇದರಿಂದ ಒಟ್ಟಾರೆ ಹೊರಹರಿವು ₹ 4,193 ಕೋಟಿಗಳಷ್ಟಾಗಿದೆ.

ಪ್ರತಿಕ್ರಿಯಿಸಿ (+)