ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಹಾರ ಉದ್ಯಮ: ರಶೀದಿ ಮೇಲೆ ಪರವಾನಗಿ ಸಂಖ್ಯೆ ಕಡ್ಡಾಯ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಆದೇಶ
Last Updated 10 ಜೂನ್ 2021, 21:53 IST
ಅಕ್ಷರ ಗಾತ್ರ

ನವದೆಹಲಿ: ಆಹಾರ ಉದ್ಯಮದಲ್ಲಿರುವವರು ನಗದು ರಶೀದಿ ಅಥವಾ ಖರೀದಿ ಪಟ್ಟಿಯಲ್ಲಿ ಎಫ್‌ಎಸ್‌ಎಸ್‌ಎಐ ಪರವಾನಗಿ ಅಥವಾ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಆದೇಶ ಹೊರಡಿಸಿದೆ. ಈ ನಿಯಮ ಇದೇ ಅಕ್ಟೋಬರ್‌ 1ರಿಂದ ಜಾರಿಗೆ ಬರಲಿದೆ.

ನಿರ್ದಿಷ್ಟ ಮಾಹಿತಿಗಳ ಕೊರತೆಯಿಂದ ಆಹಾರ ಕಲಬೆರಕೆಗೆ ಸಂಬಂಧಿಸಿದ ಹಲವಾರು ದೂರುಗಳನ್ನು ಬಗೆಹರಿಸಲಾಗುವುದಿಲ್ಲ. ಹೊಸ ನಿಯಮದಿಂದಾಗಿ ಗ್ರಾಹಕರು ನಿರ್ದಿಷ್ಟ ಆಹಾರ ಉದ್ಯಮದ ಮೇಲೆ ಅದರ ಎಫ್‌ಎಸ್‌ಎಸ್‌ಎಐ ಸಂಖ್ಯೆ ಬಳಸಿ ಆನ್‌ಲೈನ್‌ನಲ್ಲಿ ದೂರು ದಾಖಲಿಸಬಹುದು ಎಂದು ಎಫ್‌ಎಸ್‌ಎಸ್‌ಎ ತಿಳಿಸಿದೆ.

ಹೊಸ ನಿಯಮದ ಕುರಿತು ಉದ್ಯಮಗಳಿಗೆ ಮಾಹಿತಿ ನೀಡಿ ಎಂದು ಪರವಾನಗಿ ಮತ್ತು ನೋಂದಣಿ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಲಾಗಿದೆ. ಎಲ್ಲಾ ಆಹಾರ ಉದ್ಯಮಗಳು ಅ.2ರಿಂದ ಹೊಸ ನಿಯಮವನ್ನು ಪಾಲಿಸುವಂತೆ ನೋಡಿಕೊಳ್ಳಲು ಎಫ್‌ಎಸ್‌ಎಸ್‌ಎಐ ಆದೇಶದಲ್ಲಿ ಸೂಚಿಸಲಾಗಿದೆ.

14 ಅಂಕಿಗಳಎಫ್‌ಎಸ್‌ಎಸ್‌ಎಐ ಸಂಖ್ಯೆಯು ಗ್ರಾಹಕರಿಗೆ ನೀಡುವ ರಶೀದಿಗಳಲ್ಲಿ ಸ್ಪಷ್ಟವಾಗಿ ನಮೂದು ಆಗಿರುವುದಿಲ್ಲ. ಗ್ರಾಹಕರಿಗೆ ಎಫ್‌ಎಸ್‌ಎಸ್‌ಎಐ ಸಂಖ್ಯೆ ದೊರಕದೇ ಹೋದಲ್ಲಿ, ಅವರಿಂದ ಸ್ಪಷ್ಟವಾದ ದೂರನ್ನು ನಿರೀಕ್ಷಿಸುವುದು ಸರಿಯಲ್ಲ. ಎಷ್ಟೋ ಬಾರಿ ನಿಯಂತ್ರಕರಿಗೇ ದೂರಿನ ಮೂಲ ಕಂಡುಹಿಡಿದು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ನಿರ್ದಿಷ್ಟ ಸಂಕೇತವಿಲ್ಲದೇ ದತ್ತಾಂಶಕೋಶ ರಚಿಸಲು ಸಾಧ್ಯವಿಲ್ಲ. ಆಹಾರ ಸುರಕ್ಷತೆ ವಿಚಾರದಲ್ಲಿ ಎಫ್‌ಎಸ್‌ಎಸ್‌ಎಐ ಸಂಖ್ಯೆ ಒಂದು ವಿಶಿಷ್ಟ ಸಂಕೇತವಾಗಿದೆಎಂದು ಪ್ರಾಧಿಕಾರ ಹೇಳಿದೆ.

ಸದ್ಯ ಆಹಾರ ಪೊಟ್ಟಣಗಳ ಮೇಲೆ ಎಫ್‌ಎಸ್‌ಎಸ್‌ಎಐ ಸಂಖ್ಯೆಯನ್ನು ಕಡ್ಡಾಯ ಮಾಡಲಾಗಿದೆ. ಆದರೆ ರೆಸ್ಟೊರೆಂಟ್‌ಗಳು, ಸಿಹಿತಿನಿಸು ಅಂಗಡಿಗಳು, ಚಿಲ್ಲರೆ ಅಂಗಡಿಗಳು ಮತ್ತು ಕೇಟರಿಂಗ್‌ನವರನ್ನು ಈ ನಿಯಮದ ಅಡಿ ತರುವುದು ಸವಾಲಾಗಿದೆ. ‘ಆಹಾರ ಸುರಕ್ಷತೆಯ ಪ್ರದರ್ಶನ ಫಲಕ’ಗಳನ್ನು ರೆಸ್ಟೊರೆಂಟ್‌ಗಳ ಪ್ರಮುಖ ಸ್ಥಳಗಳಲ್ಲಿ ಇರಿಸುವುದನ್ನು ಕಡ್ಡಾಯಗೊಳಿಸಲು ಪರವಾನಗಿ ಮತ್ತು ನೋಂದಣಿ ನಿಯಮಗಳಿಗೆ ತಿದ್ದುಪಡಿ ತರಲಾಗುವುದು ಎಂದು ಎಫ್‌ಎಸ್‌ಎಸ್‌ಎಐ ಹೇಳಿದೆ.

ಪೊಟ್ಟಣಗಳಲ್ಲಿ ಮಾರುವ ಆಹಾರಕ್ಕೆ ಅದರ ಉತ್ಪಾದಕರೇ ಎಫ್‌ಎಸ್‌ಎಸ್‌ಎಐ ಸಂಖ್ಯೆಯನ್ನು ಅಚ್ಚು ಮಾಡಿರುತ್ತಾರೆ. ಅಂಥ ಆಹಾರ ಉತ್ಪನ್ನಗಳು ಉತ್ಪಾದಕರಿಂದ ಗ್ರಾಹಕರಿಗೆ ತಲುಪಿದ ಜಾಡನ್ನು ಪತ್ತೆ ಮಾಡಬಹುದು. ಖರೀದಿ ಸಂಖ್ಯೆಯಿಂದಲೂ ಆಹಾರ ಉತ್ಪಾದಕರ ಜಾಡು ಪತ್ತೆ ಮಾಡುವುದು ಸುಲಭ ಎಂದುಎಫ್‌ಎಸ್‌ಎಸ್‌ಎಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT