ಸೋಮವಾರ, ಮಾರ್ಚ್ 30, 2020
19 °C
ಕೊರೊನಾ ಸಾಂಕ್ರಾಮಿಕವಾಗಿ ಹಬ್ಬುವ ಭೀತಿ

ಜಾಗತಿಕ ಆರ್ಥಿಕತೆಯಲ್ಲಿ ಹಿಂಜರಿಕೆ?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ಚೀನಾದಲ್ಲಿನ ಕೊರೊನಾ ವೈರಸ್‌ ಸಾಂಕ್ರಾಮಿಕ ಪಿಡುಗಾಗಿ ಇತರ ದೇಶಗಳಿಗೂ ಹಬ್ಬಿದರೆ ಜಾಗತಿಕ ಆರ್ಥಿಕತೆಯಲ್ಲಿ ಹಿಂಜರಿಕೆ ಕಾಣುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

‘ಕೋವಿಡ್‌–19’ ವೈರಸ್‌ ಹಾವಳಿಯು ಈಗಾಗಲೇ ಚೀನಾದ ಆರ್ಥಿಕತೆಗೆ ಭಾರಿ ಹೊಡೆತ ನೀಡಿದೆ. ಅದು ಈಗ ಜಾಗತಿಕ ಆರ್ಥಿಕತೆಯನ್ನೂ ವ್ಯಾಪಿಸುವ ಭೀತಿ ಕಂಡು ಬರುತ್ತಿದೆ ಎಂದು ಅಮೆರಿಕದ ಹಣಕಾಸು ವಿಶ್ಲೇಷಣಾ ಸಂಸ್ಥೆ ಮೂಡೀಸ್‌ನ ಮುಖ್ಯ ಆರ್ಥಿಕತಜ್ಞ ಮಾರ್ಕ್‌ ಜಂಡಿ ಹೇಳಿದ್ದಾರೆ.

‘ಕೋವಿಡ್‌–19’ ಜಾಗತಿಕ ಆರ್ಥಿಕತೆಯನ್ನು ಹಲವಾರು ಬಗೆಗಳಲ್ಲಿ ಬಾಧಿಸಲಿದೆ. ಈಗಾಗಲೇ ಉದ್ದಿಮೆ ವಹಿವಾಟು ಉದ್ದೇಶದ ಚೀನಾ ಪ್ರವಾಸಗಳಿಗೆ ತಡೆ ಬಿದ್ದಿದೆ. ಇದರಿಂದ ಅಲ್ಲಿನ ಪ್ರವಾಸೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಜಾಗತಿಕ ವಿಮಾನಯಾನ ಸಂಸ್ಥೆಗಳು ಚೀನಾ ಯಾನ ರದ್ದುಪಡಿಸಿವೆ. ವಿಲಾಸಿ ಪ್ರವಾಸಿ ನೌಕೆಗಳು ಏಷ್ಯಾ – ಪೆಸಿಫಿಕ್‌ ಮಾರ್ಗದಲ್ಲಿನ ಪಯಣ ಕೈಬಿಟ್ಟಿವೆ. ಇದು ಅಮೆರಿಕವೂ ಸೇರಿದಂತೆ ವಿವಿಧ ದೇಶಗಳಲ್ಲಿನ ಪ್ರವಾಸೋದ್ಯಮಕ್ಕೆ ಹೊಡೆತ ನೀಡಲಿದೆ. ಪ್ರತಿ ವರ್ಷ ಲಕ್ಷಾಂತರ ಚೀನಿ ಪ್ರವಾಸಿಗರು ಯುರೋಪ್‌ ಮತ್ತು ಅಮೆರಿಕೆಗೆ ಭೇಟಿ ನೀಡುತ್ತಾರೆ. ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಚೀನಾದ ಸರಕು ತಯಾರಿಸುವ ಉದ್ದಿಮೆಗಳ ಪೂರೈಕೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳ ವಹಿವಾಟಿಗೂ ಧಕ್ಕೆ ಒದಗಲಿದೆ. ಚೀನವು ತೈಲ, ತಾಮ್ರ, ಸೋಯಾಬೀನ್‌ ಖರೀದಿಯಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಬೇಡಿಕೆ ಗಮನಾರ್ಹವಾಗಿ ಕುಸಿದಿರುವುದರಿಂದ ಬೆಲೆಗಳು ಅ‌ಗ್ಗವಾಗಲಿವೆ.

ಜಾಗತಿಕ ಆರ್ಥಿಕತೆಗೆ ಬೆದರಿಕೆ

ಕೋವಿಡ್‌–19 ಹಾವಳಿ, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ನಡುವಣ ವಾಣಿಜ್ಯ ಸಮರ ಮತ್ತು ಅಮೆರಿಕ – ಇರಾನ್‌ ಸಂಘರ್ಷವು ಜಾಗತಿಕ ಆರ್ಥಿಕತೆಗೆ ಬೆದರಿಕೆ  ಒಡ್ಡಿವೆ ಎಂದು ‘ದಿ ಇಕನಾಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌’ ಹೊರಡಿಸಿರುವ ಶ್ವೇತಪತ್ರದಲ್ಲಿ ತಿಳಿಸಲಾಗಿದೆ. 2020ರಲ್ಲಿ ಜಾಗತಿಕ ಆರ್ಥಿಕ ವೃದ್ಧಿ ದರ ಶೇ 2.9ರಷ್ಟಾಗಲಿದೆ ಎಂದು ಅಂದಾಜಿಸಲಾಗಿದ್ದು ಇದು ದಶಕದಲ್ಲಿನ ಅತಿ ಕಡಿಮೆ ಮಟ್ಟದ್ದಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು