ಚಿನ್ನದ ಬಾಂಡ್‌ ದರ ನಿಗದಿ: ಸೋಮವಾರದಿಂದ 5 ದಿನಗಳವರೆಗೆ ಖರೀದಿಗೆ ಲಭ್ಯ

7

ಚಿನ್ನದ ಬಾಂಡ್‌ ದರ ನಿಗದಿ: ಸೋಮವಾರದಿಂದ 5 ದಿನಗಳವರೆಗೆ ಖರೀದಿಗೆ ಲಭ್ಯ

Published:
Updated:

ನವದೆಹಲಿ: ಸೋಮವಾರದಿಂದ ಖರೀದಿಗೆ ಲಭ್ಯ ಇರುವ ಚಿನ್ನದ ಬಾಂಡ್‌ಗಳ (ಎಸ್‌ಜಿಬಿ) ಬೆಲೆಯನ್ನು ಕೇಂದ್ರ ಸರ್ಕಾರವು ಪ್ರತಿ ಗ್ರಾಂಗೆ ₹ 3,146ರಂತೆ ನಿಗದಿಪಡಿಸಿದೆ.

ಆನ್‌ಲೈನ್‌ನಲ್ಲಿ ಖರೀದಿಸುವವರು ಮತ್ತು ನಗದುರಹಿತ (ಡಿಜಿಟಲ್‌) ರೂಪದಲ್ಲಿ ಪಾವತಿಸುವವರಿಗೆ ಬಾಂಡ್‌ನ ನೀಡಿಕೆ ಬೆಲೆಯಲ್ಲಿ ಪ್ರತಿ ಗ್ರಾಂಗೆ ₹ 50ರಂತೆ ಕಡಿತ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಧರಿಸಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಈ ಹೂಡಿಕೆದಾರರಿಗೆ ಪ್ರತಿ ಗ್ರಾಂ ಚಿನ್ನದ ಬೆಲೆ ₹ 3,096ರಂತೆ ಇರಲಿದೆ.

ಮುಂದಿನ ವರ್ಷದ ಫೆಬ್ರುವರಿವರೆಗೆ ಪ್ರತಿ ತಿಂಗಳೂ ಚಿನ್ನದ ಬಾಂಡ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಬ್ಯಾಂಕ್‌ಗಳು, ಆಯ್ದ ಅಂಚೆ ಕಚೇರಿಗಳು, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎಸ್‌ಎಚ್‌ಸಿಐಎಲ್), ರಾಷ್ಟ್ರೀಯ  ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳಲ್ಲಿ ಈ ಬಾಂಡ್‌ಗಳನ್ನು ಮಾರಾಟ ಮಾಡಲಾಗುವುದು.

ಮೊದಲ ಕಂತಿನಲ್ಲಿ ಇದೇ 15ರಿಂದ 19ರವರೆಗೆ ಬಾಂಡ್‌ಗಳನ್ನು ಖರೀದಿಸಬಹುದು. ಈ ತಿಂಗಳ 23ರಂದು ಬಾಂಡ್‌ಗಳನ್ನು ವಿತರಿ
ಸಲಾಗುವುದು.

ಭೌತಿಕ ರೂಪದಲ್ಲಿ ನಿಷ್ಪ್ರಯೋಜಕವಾಗಿರುವ ಚಿನ್ನವನ್ನು ಚಲಾವಣೆಗೆ ತರುವ ಮತ್ತು ಜನರ ಉಳಿತಾಯ ಮನೋಭಾವ ಬದಲಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2015ರಲ್ಲಿ ಚಿನ್ನದ ಬಾಂಡ್‌ ಯೋಜನೆ ಜಾರಿಗೆ ತಂದಿತ್ತು.

ಜನರು ತಮ್ಮ ಉಳಿತಾಯದ ಹಣವನ್ನು ಕೇವಲ ಚಿನ್ನ ಖರೀದಿಗೆ ಬಳಸದೇ, ಹಣಕಾಸಿನ ಇತರ ಮೂಲಗಳಲ್ಲಿ ತೊಡಗಿಸುವಂತೆ ಪ್ರೇರಣೆ ನೀಡುವ ಮೂಲಕ ಅವರ ಉಳಿತಾಯ ಪ್ರವೃತ್ತಿಯಲ್ಲಿ ಆಮೂಲಾಗ್ರ ಬದಲಾವಣೆ ತರುವುದು ಸರ್ಕಾರದ ಉದ್ದೇಶವಾಗಿದೆ.

ಯೋಜನೆ ವಿವರ: ಈ ಯೋಜನೆಯಡಿ ಬಾಂಡ್‌ಗಳನ್ನು ಒಂದು ಗ್ರಾಂ ಚಿನ್ನದ ರೂಪದಲ್ಲಿ ನೀಡಲಾಗುವುದು.

ಹೂಡಿಕೆ ಮಿತಿ ಕನಿಷ್ಠ 1 ಗ್ರಾಂ  ಒಂದು ಹಣಕಾಸು ವರ್ಷದಲ್ಲಿ ವ್ಯಕ್ತಿಯೊಬ್ಬ ಗರಿಷ್ಠ 4 ಕೆ.ಜಿ. ಮತ್ತು ಟ್ರಸ್ಟ್‌ಗಳಿಗೆ 20 ಕೆ.ಜಿವರೆಗೆ ಖರೀದಿ ಮಿತಿ ನಿಗದಿಪಡಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !