ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮ ಶ್ರೇಯಾಂಕ: ಕರ್ನಾಟಕ ಮುಂಚೂಣಿ

Published 16 ಜನವರಿ 2024, 15:20 IST
Last Updated 16 ಜನವರಿ 2024, 15:20 IST
ಅಕ್ಷರ ಗಾತ್ರ

ನವದೆಹಲಿ : ನವೋದ್ಯಮಿಗಳಿಗೆ ಉತ್ತೇಜನ ನೀಡಿ ಪೂರಕ ವಾತಾವರಣ ಕಲ್ಪಿಸಿದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಕರ್ನಾಟಕವು ಸತತ ಎರಡನೇ ಬಾರಿಗೆ ‘ಅತ್ಯುತ್ತಮ ಸಾಧಕ’ ಶ್ರೇಯಕ್ಕೆ ಭಾಜನವಾಗಿದೆ.

ಗುಜರಾತ್‌, ಕೇರಳ, ತಮಿಳುನಾಡು ಹಾಗೂ ಹಿಮಾಚಲ ಪ್ರದೇಶ ಕೂಡ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಈ ವಿಭಾಗದಲ್ಲಿ ಗುಜರಾತ್‌ ಸತತ ನಾಲ್ಕನೇ ಬಾರಿ ಸ್ಥಾನ ಪಡೆದಿದೆ.

ಸ್ಟಾರ್ಟ್ಅಪ್‌ ಆರಂಭಿಸಲು ನವೋದ್ಯಮಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಆಧಾರದ ಮೇಲೆ ಈ ಶ್ರೇಯಾಂಕ ನಿಗದಿಪಡಿಸಲಾಗಿದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (ಡಿಪಿಐಐಟಿ) ಸಿದ್ಧಪಡಿಸಿರುವ ಈ ಪ್ರಕ್ರಿಯೆಯಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪಾಲ್ಗೊಂಡಿದ್ದವು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್ ಅವರು ‘ಸ್ಟಾರ್ಟ್ಅಪ್‌ ಶ್ರೇಯಾಂಕ 2022’ ಅನ್ನು ಮಂಗಳವಾರ ಬಿಡುಗಡೆಗೊಳಿಸಿದರು.

ಶ್ರೇಯಾಂಕ ನೀಡುವ ಉದ್ದೇಶದಿಂದ ‘ಅತ್ಯುತ್ತಮ ಸಾಧಕ’, ‘ಅಗ್ರಗಣ್ಯ ಸಾಧಕ’, ‘ನಾಯಕ’, ‘ನಾಯಕನಾಗಲು ಬಯಸುವವ’ ಹಾಗೂ ‘ಪ್ರವರ್ಧಮಾನಕ್ಕೆ ಬರುತ್ತಿರುವ ನವೋದ್ಯಮ ಪರಿಸರ’ ಎಂಬ ಶೀರ್ಷಿಕೆಯಡಿ ಐದು ವಿಭಾಗಗಳಾಗಿ ವರ್ಗೀಕರಿಸಲಾಗಿತ್ತು.

ಅಲ್ಲದೇ, ಒಂದು ಕೋಟಿ ಒಳಗಿರುವ ಜನಸಂಖ್ಯೆ ಹಾಗೂ ಅದಕ್ಕಿಂತ ಹೆಚ್ಚಿರುವ ಜನಸಂಖ್ಯೆ ಆಧಾರದ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ವಿಂಗಡಿಸಲಾಗಿತ್ತು ಎಂದು ಡಿಪಿಐಐಟಿ ತಿಳಿಸಿದೆ.

ಮಹಾರಾಷ್ಟ್ರ, ಒಡಿಶಾ, ಪಂಜಾಬ್‌, ರಾಜಸ್ಥಾನ, ತೆಲಂಗಾಣ, ಅರುಣಾಚಲ ಪ್ರದೇಶ ಮತ್ತು ಮೇಘಾಲಯ ‘ಅಗ್ರಗಣ್ಯ ಸಾಧಕ’ ಪಟ್ಟಿಯಲ್ಲಿವೆ. ಆಂಧ್ರಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ತ್ರಿಪುರ ‘ನಾಯಕ’ ಎಂದು ಪರಿಗಣಿತವಾಗಿವೆ.

‘ನಾಯಕನಾಗಲು ಬಯಸುವವ’ ಪಟ್ಟಿಯಲ್ಲಿ ಬಿಹಾರ್‌, ಹರಿಯಾಣ, ಅಂಡಮಾನ್ ಮತ್ತು ನಿಕೋಬಾರ್‌ ದ್ವೀಪ, ನ್ಯಾಗಾಲ್ಯಾಂಡ್‌ ಇದೆ.

ಛತ್ತೀಸಗಢ, ನವದೆಹಲಿ, ಜಮ್ಮು ಮತ್ತು ಕಾಶ್ಮೀರ, ಚಂಡೀಗಢ, ದಾದ್ರಾ ಮತ್ತು ನಗರ್‌ ಹವೇಲಿ, ದಮನ್‌ ಮತ್ತು ಡಿಯು, ಲಡಾಖ್‌, ಮಿಜೋರಾಂ, ಪುದುಚೇರಿ ಮತ್ತು ಸಿಕ್ಕಿಂ ‘ಪ್ರವರ್ಧಮಾನಕ್ಕೆ ಬರುತ್ತಿರುವ ನವೋದ್ಯಮ ಪರಿಸರ’ ವಿಭಾಗದ ಪಟ್ಟಿಯಲ್ಲಿವೆ.

ನವೋದ್ಯಮಿಗಳಿಗೆ ಸಾಂಸ್ಥಿಕ ಬೆಂಬಲ, ನಿಯಮ ಪಾಲನೆ ಸುಲಭಗೊಳಿಸುವಿಕೆ, ಆರ್ಥಿಕ ನೆರವು ಸೇರಿದಂತೆ 25 ಅಂಶಗಳ ಪಾಲನೆಯಲ್ಲಿ ರಾಜ್ಯಗಳು ಅನುಸರಿಸಿರುವ ಕ್ರಮಗಳ ಆಧಾರದ ಮೇಲೆ ಈ ಪಟ್ಟಿ ಸಿದ್ಧಪಡಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT