ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಾಲ, ಗೃಹ ನಿರ್ಮಾಣ ಸಾಲ ಈ ವ್ಯತ್ಯಾಸಗಳ ಅರಿವಿದೆಯೇ?

Last Updated 12 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

‘ಗೃ ಹ ಸಾಲ’ದ ಬಗ್ಗೆ ಎಲ್ಲರೂ ಕೇಳಿಯೇ ಇರುತ್ತೀರಿ. ಆದರೆ ಮನೆ ನವೀಕರಣ, ವಿಸ್ತರಣೆ ಅಥವಾ ನಿರ್ಮಾಣ ಸಾಲದ (Home loan and home extension/ renovation/construction loans) ಬಗ್ಗೆ ಗೊತ್ತೇ?

ಈ ಪ್ರಶ್ನೆಯನ್ನು ಕೇಳಿನೋಡಿ, ‘ಎರಡೂ ಒಂದೇ ಅಲ್ಲವೇ’ ಎಂಬ ಉತ್ತರ ಹಲವರಿಂದ ಬರಬಹುದು. ಯಾಕೆಂದರೆ ಈ ಎರಡೂ ಸಾಲಗಳ ವ್ಯತ್ಯಾಸ ಏನೆಂಬುದು ಅನೇಕರಿಗೆ ತಿಳಿದಿಲ್ಲ. ಅಷ್ಟೇ ಏಕೆ. ಗೃಹ ನಿರ್ಮಾಣ, ನವೀಕರಣ ಅಥವಾ ವಿಸ್ತರಣಾ ಸಾಲ ಎಂಬ ಸಾಲ ಸೌಲಭ್ಯ ಇದೆ ಎಂಬುದೇ ಅನೇಕರಿಗೆ ತಿಳಿದಿರಲಾರದು. ಅದಕ್ಕಾಗಿಯೇ ಹಲವರು ತಮ್ಮ ಮನೆಯನ್ನು ದುರಸ್ತಿ ಮಾಡಲು ಅಥವಾ ವಿಸ್ತರಿಸಲು ವೈಯಕ್ತಿಕ ಸಾಲದ ಮೊರೆ ಹೋಗುತ್ತಾರೆ. ಗೃಹ ಸಾಲ ಮತ್ತು ಗೃಹ ನಿರ್ಮಾಣ ಸಾಲದ ನಡುವಣ ವ್ಯತ್ಯಾಸವೇನು ಎಂಬುದನ್ನು ಪ್ರತಿಯೊಬ್ಬರೂ ತಿಳಿಯುವುದು ಇಂದಿನ ಅಗತ್ಯವಾಗಿದೆ.

ಗೃಹ ನಿರ್ಮಾಣ ಅಥವಾ ದುರಸ್ತಿ ಸಾಲವೆಂದರೆ ಈಗಾಗಲೇ ಇರುವ ಮನೆಯನ್ನು ರಿಪೇರಿ ಮಾಡಿಸಲು ಅಥವಾ ಅದನ್ನು ವಿಸ್ತರಿಸಲು ನೀಡುವ ಸಾಲ. ಇಂಥ ಸಾಲ ನೀಡಿಕೆಗೆ ಇರುವ ಕೆಲವು ನಿಯಮಾವಳಿಗಳು ಸಹ ಗೃಹ ಸಾಲದ ನಿಯಮಾವಳಿಯಂತೆಯೇ ಇರುತ್ತವೆ. ನಾವು ಯಾವ ಸಾಲವನ್ನು ಪಡೆಯಬೇಕು ಎಂದು ತಿಳಿಯಲು ಈ ಎರಡೂ ಸಾಲಗಳ ನಡುವಣ ವ್ಯತ್ಯಾಸವನ್ನು ತಿಳಿಯುವುದು ಅಗತ್ಯ.

ಸಾಲದ ಮೌಲ್ಯ
ಗೃಹ ಸಾಲ ಎಂಬುದು ನಾವು ಖರೀದಿಸುವ ಮನೆ ಅಥವಾ ಸೊತ್ತಿನ ಒಟ್ಟು ಮೌಲ್ಯವನ್ನು ಆಧರಿಸಿರುತ್ತದೆ. ಈ ಮೌಲ್ಯವನ್ನು ಮನೆ ನಿರ್ಮಾಣ ಸಂಸ್ಥೆಯವರು ಅಥವಾ ಮಾರಾಟಗಾರರು ನಿರ್ಧರಿಸಿರುತ್ತಾರೆ. ಆದರೆ ಗೃಹ ನವೀಕರಣ ಅಥವಾ ವಿಸ್ತರಣಾ ಸಾಲವು ಈ ಕೆಲಸಕ್ಕೆ ಒದಗುವ ಒಟ್ಟು ವೆಚ್ಚವನ್ನು ಆಧರಿಸಿರುತ್ತದೆ. ಈ ವೆಚ್ಚದ ಪ್ರಮಾಣವನ್ನು ಪ್ರಮಾಣೀಕೃತ ಸಿವಿಲ್‌ ಎಂಜಿನಿಯರ್‌ ಮೂಲಕ ಪಡೆಯಬೇಕಾಗುತ್ತದೆ.

ಸಾಲ ಪಡೆಯಲು ಅರ್ಹತೆ
ಹಣಕಾಸು ಸಂಸ್ಥೆಯೊಂದು ಗೃಹ ಸಾಲವನ್ನಾಗಲೀ ಗೃಹ ನವೀಕರಣ ಸಾಲವನ್ನಾಗಲೀ ನೀಡುವಾಗ ಸಾಲ ಪಡೆಯುವ ವ್ಯಕ್ತಿಯ ಹಿನ್ನೆಲೆಯನ್ನು ನೋಡಿಯೇ ಸಾಲ ಮಂಜೂರು ಮಾಡುತ್ತದೆ. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿರುವ ದಾಖಲೆ ಇದ್ದರೆ ಅಥವಾ ಮರುಪಾವತಿ ಮಾಡಬಲ್ಲರೆಂಬ ವಿಶ್ವಾಸ ಮೂಡಿದರೆ ಮಾತ್ರ ಸಾಲ ನೀಡುತ್ತವೆ. ಆದಾಯದ ದಾಖಲೆ, ಒಳ್ಳೆಯ ಕ್ರೆಡಿಟ್‌ ಸ್ಕೋರ್‌ ಮುಂತಾದವು ಇಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಸಾಲಗಾರರು ಖರೀದಿಸುವ ಆಸ್ತಿಯ (ಮನೆಯ) ಮೌಲ್ಯ ಮತ್ತು ಸಾಲ ಪಡೆಯುವವರ ಮಾಸಿಕ ಆದಾಯಗಳನ್ನು ತಾಳೆ ಮಾಡಿ, ತಜ್ಞರು ಮರುಪಾವತಿಯ ಸಾಮರ್ಥ್ಯವನ್ನು ನಿರ್ಧರಿಸುತ್ತಾರೆ. ಅದರ ಆಧಾರದಲ್ಲಿ ಸಾಲ ಮಂಜೂರಾಗುತ್ತದೆ.

ಮರುಪಾವತಿ ಅವಧಿ ಎಷ್ಟು?
ಮನೆ ಸಾಲವಾಗಲಿ, ಮನೆ ನಿರ್ಮಾಣ ಸಾಲವಾಗಲಿ ಮರುಪಾವತಿಯ ಅವಧಿ ಮಾತ್ರ ದೀರ್ಘವಾಗಿರುತ್ತದೆ. ಸಾಲಗಾರರ ವಯಸ್ಸಿನ ಆಧಾರದಲ್ಲಿ 15 ರಿಂದ 20 ವರ್ಷದವರೆಗಿನ ಮರುಪಾವತಿ ಅವಧಿ ನೀಡಲಾಗುತ್ತದೆ.

ಸಾಲ ಕೊಡುವವರು ಯಾರು?
ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್‌ ಅಥವಾ ಆರ್‌ಬಿಐಯ ನಿಯಂತ್ರಣದಲ್ಲಿರುವ (ಕ್ರಮವಾಗಿ) ಗೃಹ ಸಾಲ ಸಂಸ್ಥೆ ಅಥವಾ ರಾಷ್ಟ್ರೀಕೃತ ಬ್ಯಾಂಕ್‌ಗಳು ಈ ಸಾಲಗಳನ್ನು ನೀಡುತ್ತವೆ.

ಭದ್ರತೆ ಏನು?
ಯಾವ ಮನೆಯನ್ನು ಖರೀದಿಸಲಾಗುತ್ತದೋ ಅಥವಾ ನವೀಕರಿಸಲಾಗುವುದೋ ಆ ಮನೆಯ ಆಧಾರದಲ್ಲೇ ಸಾಲವನ್ನು ಮಂಜೂರು ಮಾಡಲಾಗುತ್ತದೆ. ಪ್ರಮಾಣೀಕೃತ ಸಿವಿಲ್‌ ಎಂಜಿನಿಯರ್‌ ಆ ಮನೆ ಅಥವಾ ಸೊತ್ತಿನ ಮೌಲ್ಯ ಮಾಪನವನ್ನು ಮಾಡುತ್ತಾರೆ. ಅದರ ಆಧಾರದಲ್ಲಿ ಸಾಲದ ಪ್ರಮಾಣ ನಿರ್ಧಾರವಾಗುತ್ತದೆ. ಎರಡೂ ಸಾಲಗಳ ಬಡ್ಡಿ ದರ ಸುಮಾರಾಗಿ ಒಂದೇ ಆಗಿರುತ್ತದೆ.

ಹಣ ಬಿಡುಗಡೆ ಹೇಗೆ
ಮಂಜೂರಾದ ಮಾತ್ರಕ್ಕೆ ಪೂರ್ತಿ ಹಣವನ್ನು ಒಂದೇ ಬಾರಿಗೆ ಬಿಡುಗಡೆ ಮಾಡಲಾಗುವುದಿಲ್ಲ. ಈಗಾಗಲೇ ಸಿದ್ಧವಾಗಿರುವ ಮನೆಯಾಗಿದ್ದರೆ ಅದನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಪೂರ್ತಿ ಮೊತ್ತವನ್ನು ಮನೆ ಮಾರಾಟ ಮಾಡುವವರಿಗೆ ನೇರವಾಗಿ ನೀಡಲಾಗುತ್ತದೆ. ಒಂದು ವೇಳೆ ಸಾಲಗಾರರು ನಿರ್ಮಾಣ ಹಂತದಲ್ಲಿರುವ ಮನೆಯನ್ನು ಖರೀದಿಸಲು ಬಯಸಿದರೆ, ಆ ಮನೆಯ ನಿರ್ಮಾಣ ಯಾವ ಹಂತದಲ್ಲಿದೆ ಎಂಬುದರ ಆಧಾರದಲ್ಲಿ ಹಂತ ಹಂತವಾಗಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಮನೆ ನವೀಕರಣ ಅಥವಾ ವಿಸ್ತರಣೆಯ ಸಾಲ ಪಡೆಯುವುದಾದರೆ, ಕಾಮಗಾರಿಯ ಪ್ರಗತಿಯ ಆಧಾರದಲ್ಲಿ ಹಂತ ಹಂತವಾಗಿ ಹಣವನ್ನು ಸಾಲ ಪಡೆಯುವ ವ್ಯಕ್ತಿಗೆ ನೇರವಾಗಿ ನೀಡಲಾಗುತ್ತದೆ.

ಆಯ್ಕೆ ಹೇಗೆ?
ಗೃಹ ಸಾಲ ಎಂದರೆ ಹೊಸದಾಗಿ ನೀವು ಖರೀದಿಸುವ ಆಸ್ತಿಗಾಗಿ ಪಡೆಯುವ ಸಾಲ. ಆದರೆ ಗೃಹ ನವೀಕರಣ ಅಥವಾ ವಿಸ್ತರಣಾ ಸಾಲ ಹಾಗಲ್ಲ. ಈಗಾಗಲೇ ನಿಮ್ಮ ಹೆಸರಿನಲ್ಲಿರುವ ಆಸ್ತಿಯ ನವೀಕರಣ ಅಥವಾ ವಿಸ್ತರಣೆಗಾಗಿ ಪಡೆಯುವ ಸಾಲ. ಆದ್ದರಿಂದ ನಿಮ್ಮ ಅಗತ್ಯವೇನು ಎಂಬುದನ್ನು ತಿಳಿದು ಸರಿಯಾದ ಸಾಲವನ್ನು ಆಯ್ಕೆ ಮಾಡಿಕೊಳ್ಳಬೇಕು.

ಯಾವ ಸಾಲ ಪಡೆಯಬೇಕು ಎಂಬುದನ್ನು ನಿರ್ಧರಿಸಿದ ಬಳಿಕ, ಸಾಲಕ್ಕೆ ಎಷ್ಟು ಬಡ್ಡಿ ವಿಧಿಸಲಾಗುತ್ತದೆ, ಮರುಪಾವತಿಯ ಅವಧಿ ಎಷ್ಟು, ಸಂಸ್ಥೆ ಎಷ್ಟು ಶುಲ್ಕ ವಿಧಿಸುತ್ತದೆ, ಒಟ್ಟು ವೆಚ್ಚದ ಎಷ್ಟರಷ್ಟು ಪ್ರಮಾಣದ ಸಾಲವನ್ನು ಮಂಜೂರು ಮಾಡಲಾಗುತ್ತಿದೆ, ಯಾವುದಾದರೂ ಸರ್ಕಾರಿ ಯೋಜನೆಯಡಿ (ಪಿಎಂಎವೈ ಅಥವಾ ಸಿಎಲ್‌ಎಸ್‌ಎಸ್‌) ಸಬ್ಸಿಡಿ ಅನ್ವಯವಾಗುತ್ತದೆಯೇ, ಅವಧಿಗೂ ಮೊದಲೇ ಸಾಲವನ್ನು ಭಾಗಶಃ ಅಥವಾ ಪೂರ್ತಿಯಾಗಿ ಮರುಪಾವತಿ ಮಾಡಿದರೆ ಅದಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆಯೇ ಎಂಬ ಅಂಶಗಳತ್ತ ಗಮನಹರಿಸಿ, ಸೂಕ್ತವೆನಿಸಿದ ಸಂಸ್ಥೆ ಅಥವಾ ಬ್ಯಾಂಕ್‌ನಿಂದ ಸಾಲ ಪಡೆಯಬಹುದು.

(ಲೇಖಕ: ಆಧಾರ್‌ ಸಂಸ್ಥೆಯ ಮುಖ್ಯ ವಹಿವಾಟು ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT