ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ನೌಕರರ ನೆರವಿಗೆ ಧಾವಿಸಿದ ಕಂಪನಿಗಳು

Last Updated 16 ಮೇ 2021, 19:08 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್‌ ಸಾಂಕ್ರಾಮಿಕಕ್ಕೆ ಬಲಿಯಾದ ತಮ್ಮ ನೌಕರರ ಕುಟುಂಬದ ಸದಸ್ಯರಿಗೆ ಭಾರತದ ಹಲವು ಕಂಪನಿಗಳು ನೆರವಿನ ಹಸ್ತ ಚಾಚಿವೆ.

ಬೋರೊಸಿಲ್‌ ಕಂಪನಿಯ ನಾಲ್ವರು ನೌಕರರು ಕೋವಿಡ್‌ ಕಾರಣದಿಂದಾಗಿ ಮೃತಪಟ್ಟರು. ಅವರ ಕುಟುಂಬದ ಸದಸ್ಯರಿಗೆ ನೌಕರರ ಎರಡು ವರ್ಷಗಳ ಸಂಬಳವನ್ನು ಪರಿಹಾರ ರೂಪದಲ್ಲಿ ಕೊಡುವುದಾಗಿ ಕಂಪನಿಯು ಈ ತಿಂಗಳ ಆರಂಭದಲ್ಲಿ ಘೋಷಿಸಿತು. ಈಗ ಈ ಬಗೆಯ ಸಹಾಯವನ್ನು ಇನ್ನೂ ಹಲವು ಕಂಪನಿಗಳು ಘೋಷಿಸಿವೆ.

‘ಮೃತ ನೌಕರರ ಮಕ್ಕಳ ಪದವಿವರೆಗಿನ ಶಿಕ್ಷಣದ ವೆಚ್ಚಗಳನ್ನು ಭರಿಸಲಾಗುವುದು’ ಎಂದೂ ಬೋರೊಸಿಲ್‌ ಕಂಪನಿ ಪ್ರಕಟಿಸಿದೆ. ಸನ್‌ ಫಾರ್ಮಾ, ಬಜಾಜ್ ಆಟೊ, ಟಿವಿಎಸ್‌ ಮೋಟರ್‌ ಕಂಪನಿಗಳು ಕೂಡ ಇಂತಹ ನೆರವು ಪ್ರಕಟಿಸಿವೆ.

ಕೋವಿಡ್‌ ಕಾರಣದಿಂದಾಗಿ ಮೃತಪಟ್ಟ ನೌಕರರ ಕುಟುಂಬಕ್ಕೆ ಆ ನೌಕರರ ಎರಡು ವರ್ಷಗಳ ವೇತನದ ಮೊತ್ತ, ಮೃತ ನೌಕರರ ಮಕ್ಕಳ ಶಿಕ್ಷಣಕ್ಕೆ ನೆರವು ಹಾಗೂ ಕುಟುಂಬದ ಸದಸ್ಯರಿಗೆ ವೈದ್ಯಕೀಯ ವಿಮೆಯ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ಬಜಾಜ್ ಆಟೊ ಹೇಳಿದೆ. ರಿಯಲ್ ಎಸ್ಟೇಟ್ ವಲಯದ ಪ್ರಮುಖ ಕಂಪನಿಯಾದ ಲೋಧಾ ಸಮೂಹ, ಸಾಂಕ್ರಾಮಿಕದಿಂದಾಗಿ ಮೃತರಾಗುವ ನೌಕರರ ಕುಟುಂಬಕ್ಕೆ ಅವರ 12 ತಿಂಗಳ ವೇತನದ ಮೊತ್ತವನ್ನು ಪರಿಹಾರ ರೂಪದಲ್ಲಿ ನೀಡುವುದಾಗಿ ಹೇಳಿದೆ.

ನವೀಕರಿಸಬಹುದಾದ ಇಂಧನ ವಲಯದ ‘ರಿನೀವ್‌ ಪವರ್’ ಕಂಪನಿಯ ನೌಕರರೊಬ್ಬರು ಕೋವಿಡ್‌ ಕಾರಣದಿಂದಾಗಿ ಮೃತಪಟ್ಟಿದ್ದಾರೆ. ಅವರ ಕುಟುಂಬದ ಸದಸ್ಯರಿಗೆ ಕಂಪನಿಯು ಮೂರು ತಿಂಗಳ ವೇತನದ ಮೊತ್ತ, ಎರಡು ವರ್ಷಗಳ ವೇತನದ ಶೇಕಡ 50ರಷ್ಟು ಮೊತ್ತವನ್ನು ಪರಿಹಾರ ರೂಪದಲ್ಲಿ ನೀಡುತ್ತಿದೆ. ಹಾಗೆಯೇ, ಶಿಕ್ಷಣ ಮತ್ತು ವೈದ್ಯಕೀಯ ವಿಮಾ ನೆರವನ್ನೂ ನೀಡಲಿದೆ.

ಐಟಿಸಿ ಕಂಪನಿಯು ತನ್ನ ನೌಕರರು ಕೋರೊನಾ ಸೋಂಕಿಗೆ ತುತ್ತಾದಲ್ಲಿ, ಅವರ ವೈದ್ಯಕೀಯ ವೆಚ್ಚಗಳನ್ನು ತಾನೇ ಭರಿಸುತ್ತಿದೆ. ಅಲ್ಲದೆ, ನೌಕರರ ಕುಟುಂಬದ ಸದಸ್ಯರಿಗೆ ಸೋಂಕು ತಗುಲಿದಲ್ಲಿ, ಅವರಿಗೆ ಕಂಪನಿಯ ವೈದ್ಯಕೀಯ ವಿಮಾ ಸೌಲಭ್ಯ ಅನ್ವಯವಾಗದಿದ್ದಲ್ಲಿ, ಅವರ ಚಿಕಿತ್ಸಾ ವೆಚ್ಚಕ್ಕೆ ಸಾಲದ ವ್ಯವಸ್ಥೆ ಕಲ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT