ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲೂಬೆರ್ರಿ, ಟರ್ಕಿ ಮೇಲಿನ ಆಮದು ಸುಂಕ ಕಡಿತ; ಉದ್ದದ ಹತ್ತಿಗೆ ತೆರಿಗೆ ವಿನಾಯಿತಿ

Published 20 ಫೆಬ್ರುವರಿ 2024, 14:56 IST
Last Updated 20 ಫೆಬ್ರುವರಿ 2024, 14:56 IST
ಅಕ್ಷರ ಗಾತ್ರ

ನವದೆಹಲಿ: ಅಧಿಕ ಉದ್ದನೆಯ ಎಳೆಯುಳ್ಳ ಹತ್ತಿ ಮೇಲಿನ ಆಮದು ಸುಂಕ ಸಂಪೂರ್ಣ ಕಡಿತ ಹಾಗೂ ನಿರ್ದಿಷ್ಟ ತಳಿಯ ಬ್ಲೂಬೆರ್ರಿ, ಕ್ರೇನ್‌ಬೆರ್ರಿ ಮತ್ತು ಫ್ರೋಜನ್ ಟರ್ಕಿ ಕೋಳಿಮಾಂಸ ಆಮದು ಮೇಲಿನ ಸುಂಕವನ್ನು ಕಡಿತಗೊಳಿಸಿ ಕೇಂದ್ರ ಸರ್ಕಾರ ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ಕೇಂದ್ರ ಹಣಕಾಸು ಸಚಿವಾಲಯವು ಈ ನಿರ್ಧಾರ ಕೈಗೊಂಡಿದ್ದು, ಬೆರ್ರಿಗಳ ಮೇಲಿನ ಆಮದು ಸುಂಕವನ್ನು ಶೇ 30ರಿಂದ ಕೆಲವು ಪ್ರಕರಣಗಳಲ್ಲಿ ಶೇ 10ರಷ್ಟು ಹಾಗೂ ಇನ್ನೂ ಕೆಲವು ಪ್ರಕರಣಗಳಲ್ಲಿ ಶೇ 5ರಷ್ಟು ತಗ್ಗಿಸಲಾಗಿದೆ. ಜತೆಗೆ ಆಮದು ಮಾಡಿಕೊಳ್ಳುವ ಟರ್ಕಿ ಕೋಳಿ ಮಾಂಸದ ಮೇಲಿನ ತೆರಿಗೆಯನ್ನೂ ಶೇ 30ರಿಂದ ಶೇ 5ಕ್ಕೆ ಇಳಿಸಲಾಗಿದೆ.

ಭಾರತ ಮತ್ತು ಅಮೆರಿಕ ನಡುವಿನ ಪರಸ್ಪರ ಒಡಂಬಡಿಕೆಯ ಅನ್ವಯ ಶೀಥಲೀಕರಿಸಿದ ಟರ್ಕಿ ಕೋಳಿ ಮಾಂಸ, ನಿರ್ದಿಷ್ಟ ಕ್ರೇನ್‌ಬೆರ್ರಿ ಹಾಗೂ ಬ್ಲೂಬೆರ್ರಿ ಹಾಗೂ ಇತರ ಸಂಸ್ಕರಿಸಿದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವಂತೆ ವಾಣಿಜ್ಯ ಇಲಾಖೆಯ ಶಿಫಾರಸಿನಂತೆ ಕ್ರಮ ಕೈಗೊಳ್ಳಲಾಗಿದೆ.

‘ಅಮೆರಿಕ ಹಾಗೂ ಭಾರತ ನಡುವಿನ ಹಿಂದಿನ ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಜಿ20 ರಾಷ್ಟ್ರಗಳ ನಾಯಕರ ಶೃಂಗದಲ್ಲಿ ಭಾರತ ಹಾಗೂ ಅಮೆರಿಕ ನಡುವೆ ಕೆಲ ಒಡಂಬಡಿಕೆಗಳು ಆಗಿದ್ದವು. ಇದರ ಅನ್ವಯ ಕೆಲ ವಸ್ತುಗಳ ಆಮದು ಮೇಲಿನ ಸುಂಕವನ್ನು ತಗ್ಗಿಸಲಾಗಿದೆ’ ಎಂದು ನಾಂಗಿಯಾ ಆಂಡ್ರೆಸನ್ ಇಂಡಿಯಾದ ಪರೋಕ್ಷ ತೆರಿಗೆ ವಿಭಾಗದ ಸಹ ನಿರ್ದೇಶಕಿ ಖುಷ್ಬೂ ತ್ರಿವೇದಿ ತಿಳಿಸಿದ್ದಾರೆ.

‘ಭಾರತದಲ್ಲಿ ಉತ್ಪಾದನೆಯಾಗದ ಈ ವಿಶೇಷ ಉತ್ಪನ್ನಗಳ ಮೇಲಿನ ಆಮದು ಸುಂಕ ಕಡಿತಗೊಳಿಸಿದ್ದರಿಂದ ಭಾರತದ ಮಾರುಕಟ್ಟೆಗೆ ಅಮೆರಿಕದ ಪ್ರವೇಶಕ್ಕೆ ಹೆಚ್ಚು ನೆರವಾಗಲಿದೆ. ಜತೆಗೆ ಭಾರತದಲ್ಲೂ ಈ ಉತ್ಪನ್ನಗಳ ಬೆಲೆ ಇಳಿಕೆಯಿಂದ ದೇಶದ ಜನರಿಗೂ ಸುಲಭವಾಗಿ ಈ ಉತ್ಪನ್ನಗಳು ಸಿಗಲಿವೆ. ಇದು ವಿಶ್ವ ಆರ್ಥಿಕ ಒಪ್ಪಂದದ ಅಡಿಯಲ್ಲಿ ಇತರ ದೇಶಗಳ ಕೃಷಿಗೂ ನೆರವಾಗಲಿದೆ’ ಎಂದು ತಿಳಿಸಿದರು.

‘ಇದರೊಂದಿಗೆ 32 ಮಿ.ಮೀ. ಉದ್ದದ ಸಂಸ್ಕರಿಸದ ಹತ್ತಿ ಮೇಲಿನ ಆಮದು ಸುಂಕವನ್ನು ರದ್ದುಗೊಳಿಸಲಾಗಿದೆ. ಕೈಗಾರಿಕೆಗಳ ಪ್ರತಿಕ್ರಿಯೆಗಳನ್ನು ಪಡೆದ ನಂತರವೇ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಹತ್ತಿ ಕ್ಷೇತ್ರದಲ್ಲಿರುವವರಿಗೆ ಇದರಿಂದ ಸಾಕಷ್ಟು ಲಾಭವಾಗಲಿದೆ’ ಎಂದು ತ್ರಿವೇದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT