ಗುರುವಾರ , ಜುಲೈ 29, 2021
25 °C

ಸ್ವಿಸ್‌ ಬ್ಯಾಂಕ್‌ನಲ್ಲಿ ಠೇವಣಿ: ಮಾಹಿತಿ ಕೇಳಿದ ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯರು ಸ್ವಿಸ್‌ ಬ್ಯಾಂಕ್‌ನಲ್ಲಿ ಹೊಂದಿರುವ ಠೇವಣಿಗಳ ಕುರಿತು ಮಾಹಿತಿ ನೀಡುವಂತೆ ಭಾರತ ಸರ್ಕಾರವು ಬ್ಯಾಂಕ್‌ನ ಅಧಿಕಾರಿಗಳನ್ನು ಕೇಳಿದೆ.

ವ್ಯಕ್ತಿಗಳು ಮತ್ತು ಸಂಸ್ಥೆಗಳು 2020ರಲ್ಲಿ ಇಟ್ಟಿರುವ ಮೊತ್ತದಲ್ಲಿ ಆಗಿರುವ ಬದಲಾವಣೆಗಳಿಗೆ ಸಂಭವನೀಯ ಕಾರಣಗಳನ್ನು ನೀಡುವಂತೆ ಕೇಂದ್ರ ಹಣಕಾಸು ಸಚಿವಾಲಯ ಕೇಳಿದೆ. ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ನೇರವಾಗಿ ಠೇವಣಿ ಇಡುತ್ತಿರುವ ಪ್ರಮಾಣವು 2019ರಿಂದ ಇಳಿಕೆ ಕಾಣುತ್ತಿದೆ ಎಂದಷ್ಟೇ ಸಚಿವಾಲಯ ಹೇಳಿದೆ. ಆದರೆ ಎಷ್ಟು ಮೊತ್ತ ಎನ್ನುವ ಮಾಹಿತಿ ನೀಡಿಲ್ಲ.

‘ಭಾರತದವರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಹಣದ ಮೊತ್ತವು 2020ರಲ್ಲಿ ₹ 20,706 ಕೋಟಿಗೆ ಏರಿಕೆ ಕಂಡಿದೆ. ಬೇರೆ ಬೇರೆ ಹಣಕಾಸು ಉತ್ಪನ್ನಗಳ ಮೂಲಕ ಭಾರತದ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಸ್ವಿಸ್ ಬ್ಯಾಂಕ್‌ಗಳಲ್ಲಿ ಇಷ್ಟು ಮೊತ್ತವನ್ನು ಇರಿಸಲಾಗಿದೆ. 13 ವರ್ಷಗಳಲ್ಲಿನ ಅತಿಹೆಚ್ಚಿನ ಮೊತ್ತ ಇದಾಗಿದೆ’ ಎಂದು ಸ್ವಿಸ್‌ ಬ್ಯಾಂಕ್‌ ಮಾಹಿತಿಯನ್ನು ಆಧರಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಬ್ಯಾಂಕ್‌ನಿಂದ ಮಾಹಿತಿ
ಕೇಳಿದೆ.

ಭಾರತೀಯ ಕಂಪನಿಗಳ ಹೆಚ್ಚುತ್ತಿರುವ ವ್ಯಾಪಾರ ವಹಿವಾಟು, ಭಾರತದಲ್ಲಿ ನೆಲೆಗೊಂಡಿರುವ ಸ್ವಿಸ್ ಬ್ಯಾಂಕ್ ಶಾಖೆಗಳ ವ್ಯವಹಾರ ಹಾಗೂ ಸ್ವಿಸ್ ಮತ್ತು ಭಾರತೀಯ ಬ್ಯಾಂಕುಗಳ ನಡುವಿನ ಅಂತರ-ಬ್ಯಾಂಕ್ ವಹಿವಾಟಿನ ಹೆಚ್ಚಳ ಸೇರಿದಂತೆ ಇನ್ನೂ ಹಲವು ಕಾರಣಗಳಿಂದಾಗಿ ಠೇವಣಿಯಲ್ಲಿ ಹೆಚ್ಚಳ ಆಗಿರುವ ಸಾಧ್ಯತೆಯೂ ಇದೆ ಎಂದು ಸಚಿವಾಲಯ ಹೇಳಿದೆ.

ಭಾರತೀಯರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇರಿಸಿದ್ದಾರೆ ಎನ್ನಲಾದ ‘ಕಪ್ಪುಹಣ’ಕ್ಕೆ ಸಂಬಂಧಿಸಿದ ವಿವರ ಇದಲ್ಲ. ಬೇರೆ ದೇಶದ ಕಂಪನಿಗಳ ಹೆಸರಿನಲ್ಲಿ ಭಾರತೀಯರು, ಎನ್‌ಆರ್‌ಐಗಳು ಅಥವಾ ಇತರರು ಹೊಂದಿರಬಹುದಾದ ಹಣವನ್ನೂ ಇದು ಒಳಗೊಂಡಿಲ್ಲ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು