ಸೋಮವಾರ, ನವೆಂಬರ್ 18, 2019
25 °C
ಮಂಡಳಿಗೆ ದೂರು

ವರಮಾನ ಹೆಚ್ಚಳಕ್ಕೆ ನೀತಿಬಾಹಿರ ವಿಧಾನ ಬಳಕೆ: ಇನ್ಫಿ ಸಿಇಒ ವಿರುದ್ಧ ಆರೋಪ

Published:
Updated:
Prajavani

ಬೆಂಗಳೂರು: ಅಲ್ಪಾವಧಿಯಲ್ಲಿ ವರಮಾನ ಮತ್ತು ಲಾಭ ಹೆಚ್ಚಿಸಿಕೊಳ್ಳಲು ಕಂಪನಿಯ ಉನ್ನತಾಧಿಕಾರಿಗಳು ನೀತಿ ಬಾಹಿರ ವಿಧಾನ ಅನುಸರಿಸಿದ್ದಾರೆ ಎಂದು ಇನ್ಫೊಸಿಸ್‌ನ ಉದ್ಯೋಗಿಗಳು ಎಂದು ಹೇಳಿಕೊಂಡಿರುವ ಅನಾಮಧೇಯ ಗುಂಪೊಂದು ಆರೋಪಿಸಿದೆ.

ಕಂಪನಿಯ ಸಿಇಒ ಸಲಿಲ್‌ ಪಾರೇಖ್‌ ಮತ್ತು ಸಿಎಫ್‌ಒ ನಿಲಂಜನ್‌ ರಾಯ್‌ ಅವರು ಇಂತಹ ನ್ಯಾಯಬಾಹಿರ ವಿಧಾನಗಳ ಮೂಲಕ ವರಮಾನ ಹೆಚ್ಚಿಸಿಕೊಳ್ಳುವ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಈ ಗುಂಪು ನಿರ್ದೇಶಕ ಮಂಡಳಿಗೆ ಪತ್ರ ಬರೆದಿದೆ.

‘ನಿಮ್ಮೆಲ್ಲರ ಬಗ್ಗೆ ನಮ್ಮಲ್ಲಿ ಗೌರವ ಭಾವನೆ ಇದೆ. ಇತ್ತೀಚಿನ ಕೆಲ ತ್ರೈಮಾಸಿಕಗಳಲ್ಲಿ ಇವರಿಬ್ಬರೂ ನಿಯಮ ಬಾಹಿರ ನೀತಿ ಅನುಸರಿಸುತ್ತಿದ್ದಾರೆ. ಇದನ್ನು ಮಂಡಳಿಯ ಗಮನಕ್ಕೆ ತರಲು ನಾವು ಬಯಸುತ್ತೇವೆ’ ಎಂದು  ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತಮ್ಮನ್ನು ‘ನೈತಿಕ ಉದ್ಯೋಗಿಗಳು’ ಎಂದು ಕರೆಯಿಸಿಕೊಂಡಿರುವ ಈ ಅನಾಮಧೇಯರು, ‘ನೀತಿ ಬಾಹಿರ  ವಿಧಾನ ಅನುಸರಿಸಿರುವ ಬಗ್ಗೆ ತಮ್ಮ ಬಳಿ ಇ–ಮೇಲ್‌ ಮತ್ತು ಧ್ವನಿ ಸುರುಳಿ ದಾಖಲೆಗಳಿವೆ. ತನಿಖೆ ವೇಳೆ ಈ ಮಾಹಿತಿಯನ್ನು ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ. ಈ ಸಂಬಂಧ ನಿರ್ದೇಶಕ ಮಂಡಳಿಯು ತಕ್ಷಣ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ’ ಎಂದು ಹೇಳಿಕೊಂಡಿದ್ದಾರೆ.

ಲೆಕ್ಕಪತ್ರ ಸಮಿತಿ ಪರಿಶೀಲನೆಗೆ: ಕಂಪನಿಯ ನಿಯಮಗಳ ಅನುಸಾರ, ಅನಾಮಧೇಯರ ದೂರನ್ನು ಲೆಕ್ಕಪತ್ರ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿದೆ. ದೂರಿಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಇನ್ಫೊಸಿಸ್‌ ಹೇಳಿದೆ.

ಕಳೆದ ಎರಡು ತ್ರೈಮಾಸಿಕಗಳಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಹೇಳಿಕೆ ನೀಡಲಾಗಿದೆ ಮತ್ತು ಲೆಕ್ಕಪತ್ರಗಳಲ್ಲಿ ಅಕ್ರಮ ಎಸಗಲಾಗಿದೆ ಎಂದು ಅಕ್ರಮಗಳನ್ನು ಬಯಲಿಗೆ ಎಳೆಯುವವರ ರಕ್ಷಣೆಗೆ ಅಮೆರಿಕದಲ್ಲಿ ಇರುವ ಕಚೇರಿಯ ಗಮನಕ್ಕೂ ತರಲಾಗಿದೆ.

ಸೂಕ್ಷ್ಮ ಮಾಹಿತಿಯನ್ನು ಲೆಕ್ಕತಪಾಸಿಗರು ಮತ್ತು ನಿರ್ದೇಶಕ ಮಂಡಳಿಯಿಂದ ಮುಚ್ಚಿಡಲಾಗಿದೆ. ದೊಡ್ಡ ಮೊತ್ತದ ಒಪ್ಪಂದಗಳಲ್ಲಿ ಅಕ್ರಮ ಎಸಗಲಾಗಿದೆ. ದೊಡ್ಡ ಒಪ್ಪಂದಗಳಿಗೆ ಸಂಬಂಧಿಸಿದ ವಿಷಯಗಳನ್ನು ಮಂಡಳಿಯ ಗಮನಕ್ಕೆ ತರದಂತೆ ಸಿಎಫ್‌ಒ ತಮ್ಮನ್ನು ನಿರ್ಬಂಧಿಸಿದ್ದಾರೆ ಎಂದೂ ಈ ಗುಂಪು ಆಪಾದಿಸಿದೆ.

‘ಇಂತಹ ಸಂಗತಿಗಳನ್ನು ನಿರ್ದೇಶಕ ಮಂಡಳಿಯಲ್ಲಿನ ಯಾರೊಬ್ಬರೂ ಅರ್ಥೈಸಿಕೊಳ್ಳುವುದಿಲ್ಲ. ಷೇರು ಬೆಲೆ ಏರುತ್ತಲೇ ಇರುವವರೆಗೆ ಅವರೆಲ್ಲ ಖುಷಿಯಲ್ಲಿ ಇರುತ್ತಾರೆ’ ಎಂದು ಸಿಇಒ ನಮಗೆಲ್ಲ ಹೇಳಿದ್ದರು ಎಂದೂ ‘ನೈತಿಕ ಸಿಬ್ಬಂದಿ’ ಆರೋಪಿಸಿದ್ದಾರೆ.

ಹಿಂದಿನ ಆರೋಪಗಳು

ಕಾರ್ಪೊರೇಟ್‌ ಆಡಳಿತ ನಿಯಮಗಳನ್ನು ಪರಿಪಾಲಿಸುವಲ್ಲಿನ ವೈಫಲ್ಯಗಳಿಗೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆ ಕಂಪನಿಯ ಹಿಂದಿನ ಸಿಇಒ ವಿಶಾಲ್‌ ಸಿಕ್ಕಾ ವಿರುದ್ಧ ಸಹ ಸ್ಥಾಪಕ ಎನ್‌. ಆರ್‌. ನಾರಾಯಣ ಮೂರ್ತಿ ಅವರು ತೀವ್ರ ಸ್ವರೂಪದ ಭಿನ್ನಾಭಿಪ್ರಾಯ ಹೊಂದಿದ್ದರು.

ಆಡಳಿತಾತ್ಮಕ ನಿಯಮಗಳನ್ನು ಸಮರ್ಪಕವಾಗಿ ಪಾಲನೆ ಮಾಡದಿರುವುದರ ಬಗ್ಗೆ ಈ ಹಿಂದೆಯೂ ಕಂಪನಿ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು.

ಕಂಪನಿಯ ಸಹ ಸ್ಥಾಪಕರು ಮತ್ತು ಹಿಂದಿನ ಆಡಳಿತ ಮಂಡಳಿ ಮಧ್ಯೆ ಆಡಳಿತಾತ್ಮಕ ನಿಯಮ ಪಾಲನೆಯ ವೈಫಲ್ಯಗಳಿಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳು ಬೀದಿಗೆ ಬಂದಿದ್ದವು.

ಅಮೆರಿಕದಲ್ಲಿ ಷೇರು ಕುಸಿತ

ಲಾಭ ಹೆಚ್ಚಿಸಲು ಕಂಪನಿಯ ಉನ್ನತಾಧಿಕಾರಿಗಳು ನೀತಿ ಬಾಹಿರ ವಿಧಾನ ಅನುಸರಿಸಿರುವ ಬಗ್ಗೆ ನಿರ್ದೇಶಕ ಮಂಡಳಿಗೆ ದೂರುಗಳು ಸಲ್ಲಿಕೆಯಾಗಿರುವ ಸುದ್ದಿ ಪ್ರಕಟಗೊಂಡ ಬೆನ್ನಲ್ಲೇ, ಅಮೆರಿಕದ ಷೇರುಪೇಟೆಗಳಲ್ಲಿ ಕಂಪನಿಯ ಷೇರು ಬೆಲೆಯು (ಎಡಿಆರ್‌), ಪೇಟೆ ಆರಂಭಗೊಳ್ಳುವ ಮುಂಚಿನ ವಹಿವಾಟಿನಲ್ಲಿ (ಪ್ರಿ ಮಾರ್ಕೆಟ್‌ ಟ್ರೇಡಿಂಗ್‌) ಶೇ 15.7ರಷ್ಟು ಕುಸಿತ ಕಂಡಿತ್ತು.

ನ್ಯೂಯಾರ್ಕ್‌ ಷೇರುಪೇಟೆಯಲ್ಲಿ ಪ್ರತಿ ಷೇರಿಗೆ 8.91 ಡಾಲರ್‌ನಂತೆ(₹ 631.71) ವಹಿವಾಟು ಕಂಡಿತು. ಮಹಾರಾಷ್ಟ್ರದಲ್ಲಿನ ಚುನಾವಣೆ ಕಾರಣಕ್ಕೆ ಮುಂಬೈ ಷೇರುಪೇಟೆಗೆ ಸೋಮವಾರ ಬಿಡುವು ನೀಡಲಾಗಿತ್ತು.

ಪ್ರತಿಕ್ರಿಯಿಸಿ (+)