ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ವರ್ಷದ ಹಿಂದಿನ ಮಟ್ಟಕ್ಕೆ ಇಳಿದ ಸೆನ್ಸೆಕ್ಸ್

ಐದು ದಿನಗಳಲ್ಲಿ ₹ 15 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು
Last Updated 16 ಜೂನ್ 2022, 14:33 IST
ಅಕ್ಷರ ಗಾತ್ರ

ಮುಂಬೈ: ಸತತ ಐದನೆಯ ದಿನವೂ ಕುಸಿತ ಕಂಡಿರುವ ದೇಶದ ಷೇರುಪೇಟೆ ಸೂಚ್ಯಂಕಗಳು, ಒಂದು ವರ್ಷದ ಹಿಂದಿನ ಮಟ್ಟ ತಲುಪಿವೆ. ಅಮೆರಿಕದ ಫೆಡರಲ್‌ ರಿಸರ್ವ್‌, ಬಡ್ಡಿ ದರವನ್ನು ಶೇಕಡ 0.75ರಷ್ಟು ಹೆಚ್ಚಿಸಿದ ನಂತರದಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯಿತು, ಇದು ದೇಶದ ಷೇರುಪೇಟೆಗಳ ಮೇಲೆಯೂ ಪರಿಣಾಮ ಬೀರಿತು.

1994ರ ನಂತರದ ಅತಿಹೆಚ್ಚಿನ ಪ್ರಮಾಣದ ಬಡ್ಡಿ ಹೆಚ್ಚಳ ಮಾಡಿರುವ ಫೆಡರಲ್ ರಿಸರ್ವ್‌, ಇನ್ನಷ್ಟು ಬಿಗಿಯಾದ ಹಣಕಾಸಿನ ನೀತಿ ಅನುಸರಿಸುವ ಸುಳಿವು ನೀಡಿದೆ. ಅಮೆರಿಕದ ಆರ್ಥಿಕ ಬೆಳವಣಿಗೆ ಪ್ರಮಾಣ ಕಡಿಮೆ ಆಗುವ ಅಂದಾಜು ಮಾಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,045 ಅಂಶ ಕುಸಿದು 51,495 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಇದು ಒಂದು ವರ್ಷದ ಕನಿಷ್ಠ ಮಟ್ಟ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 331 ಅಂಶ ಕುಸಿದು, 15,360 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ಗುರುವಾರದ ವಹಿವಾಟಿನಲ್ಲಿ ಹೂಡಿಕೆದಾರರು ₹ 5.54 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ಐದು ದಿನಗಳ ಅವಧಿಯಲ್ಲಿ ₹ 15.74 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ‘ಈಗಿನ ಪರಿಸ್ಥಿತಿಯಲ್ಲಿ, ಹಣದುಬ್ಬರದ ಪರಿಣಾಮ ಕಡಿಮೆ ಇರುವ ಹಣಕಾಸು ಮತ್ತು ಸೇವಾ ವಲಯದ ಷೇರುಗಳು ಹೆಚ್ಚು ಸುರಕ್ಷಿತ. ಅಲ್ಲದೆ, ಐ.ಟಿ., ಫಾರ್ಮಾ ಮತ್ತು ದೂರಸಂಪರ್ಕ ವಲಯದ ಷೇರುಗಳನ್ನೂ ದೀರ್ಘಾವಧಿಗೆ ಪರಿಗಣಿಸಬಹುದು’ ಎಂದು ಜಿಯೋಜಿತ್ ಫೈನಾನ್ಶಿಯಸ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಫೆಡರಲ್‌ ರಿಸರ್ವ್‌ ಮತ್ತು ಆರ್‌ಬಿಐ ಹಣಕಾಸು ನೀತಿಯನ್ನು ಬಿಗಿಗೊಳಿಸಿರುವುದರಿಂದ, ತೈಲ ಬೆಲೆ ಜಾಸ್ತಿಯಾಗುತ್ತಿರುವುದರಿಂದ ಷೇರುಪೇಟೆಗಳಲ್ಲಿ ಗಳಿಕೆಯ ಓಟ ಶುರುವಾಗುವುದು ಕಷ್ಟ ಎಂದು ಮೆಹ್ತಾ ಈಕ್ವಿಟಿಸ್‌ನ ಸಂಶೋಧನಾ ಉಪಾಧ್ಯಕ್ಷ ಪ್ರಶಾಂತ್ ತಾಪ್ಸೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT