ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಪ್ರಮಾಣ ಕುಸಿತ

ಸೋಮವಾರ, ಮಾರ್ಚ್ 18, 2019
31 °C

ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಪ್ರಮಾಣ ಕುಸಿತ

Published:
Updated:

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದ ಇದುವರೆಗಿನ ಅವಧಿಯಲ್ಲಿ ದೇಶಿ ಮ್ಯೂಚುವಲ್‌ ಫಂಡ್‌ನಲ್ಲಿನ (ಎಂಎಫ್‌) ನಿವ್ವಳ ಹೂಡಿಕೆ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿ 6 ವರ್ಷಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ದೇಶಿ ಷೇರುಪೇಟೆಯಲ್ಲಿನ ತೀವ್ರ ಸ್ವರೂಪದ ಏರಿಳಿತದ ಕಾರಣಕ್ಕೆ ಹೂಡಿಕೆ ಪ್ರಮಾಣ ಕಡಿಮೆಯಾಗಿರುವುದು ಮ್ಯೂಚುವಲ್‌ ಫಂಡ್‌ಗಳ ಸಂಘದ (ಎಎಂಎಫ್‌ಐ) ಬಳಿ ಇರುವ ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದು ಬರುತ್ತದೆ.

2018–19ರಲ್ಲಿ ಇದುವರೆಗಿನ ಹೂಡಿಕೆ ಪ್ರಮಾಣವು ₹1.32 ಲಕ್ಷ ಕೋಟಿಗಳಷ್ಟಿದೆ. 2017–18ರ ಫೆಬ್ರುವರಿ ತಿಂಗಳವರೆಗಿನ ಅವಧಿಯಲ್ಲಿ ಈ ಪ್ರಮಾಣವು ₹ 3.22 ಲಕ್ಷ ಕೋಟಿಗಳಷ್ಟಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷದ ಕುಸಿತದ ಪ್ರಮಾಣವು ಶೇ 59.1ರಷ್ಟಿದೆ.

ಸತತ ಎರಡನೆ ವರ್ಷವೂ ಹೂಡಿಕೆ ಪ್ರಮಾಣ ಕುಸಿತ ದಾಖಲಿಸಿದೆ. 2015–16ರಲ್ಲಿನ ₹ 3.92 ಲಕ್ಷ ಕೋಟಿಗೆ ಹೋಲಿಸಿದರೆ, 2017–18ರ 11 ತಿಂಗಳಲ್ಲಿನ ಹೂಡಿಕೆ ಹರಿವು ಶೇ 18.9ರಷ್ಟು ಕಡಿಮೆಯಾಗಿದೆ. 2011–12ರಲ್ಲಿನ ಹೂಡಿಕೆ ಪ್ರಮಾಣವು ಅತಿ ಕಡಿಮೆ ಎನ್ನಬಹುದಾದ ₹ 61,742 ಕೋಟಿಗಳಷ್ಟಿತ್ತು.

‘ಮ್ಯೂಚುವಲ್‌ ಫಂಡ್‌ಗಳಲ್ಲಿನ ಹೂಡಿಕೆಯಿಂದ ಬರುವ ಲಾಭದ ಪ್ರಮಾಣವು ಕಡಿಮೆ ಇರುವುದು ಮತ್ತು ಹೆಚ್ಚು ನಷ್ಟದ ಸಾಧ್ಯತೆ ಕಾರಣಕ್ಕೆ ಎಂಎಫ್‌ಗಳಲ್ಲಿನ ಹೂಡಿಕೆ ಪ್ರಮಾಣ ತೀವ್ರವಾಗಿ ಕುಸಿತ ಕಾಣುತ್ತಿದೆ’ ಎಂದು ಷೇರು ಸಲಹಾ ಸಂಸ್ಥೆ ಮೋತಿಲಾಲ್‌ ಓಸ್ವಾಲ್‌ನ ಉಪಾಧ್ಯಕ್ಷ ರಾಹುಲ್‌ ಶಾ ಹೇಳಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಮುಂಚೂಣಿಯಲ್ಲಿ ಇರುವ 25 ನಿಧಿಗಳ ಪೈಕಿ ಕೇವಲ ನಾಲ್ಕು ಮ್ಯೂಚುವಲ್‌ ಫಂಡ್‌ಗಳು ಮಾತ್ರ ತಮ್ಮ ನಿವ್ವಳ ಸಂಪತ್ತು ಮೌಲ್ಯದಲ್ಲಿ (ಎನ್‌ಎವಿ) ಸಕಾರಾತ್ಮಕ ಬೆಳವಣಿಗೆ ದಾಖಲಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !