ನವದೆಹಲಿ: ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ (ಸಿಡಿಇಎಲ್) ವಿರುದ್ಧ ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆ ಆರಂಭಿಸಲು, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಬೆಂಗಳೂರು ಶಾಖೆಯು ಅನುಮತಿ ನೀಡಿದೆ.
₹228.45 ಕೋಟಿ ಬಾಕಿ ಪಾವತಿಗೆ ಸಂಬಂಧಿಸಿದಂತೆ ಐಡಿಬಿಐ ಟ್ರಸ್ಟಿಶಿಪ್ ಸರ್ವಿಸಸ್ ಲಿಮಿಟೆಡ್ ಆಗಸ್ಟ್ 8ರಂದು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿರುವ ನ್ಯಾಯಮಂಡಳಿಯು, ಕಾಫಿ ಡೇ ಕಂಪನಿಯ ಕಾರ್ಯಾಚರಣೆಗೆ ಮಧ್ಯಂತರ ನಿರ್ಣಯ ಅಧಿಕಾರಿಯನ್ನು ನೇಮಿಸಿದೆ.
ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್, ರೆಸಾರ್ಟ್ ಹಾಗೂ ಸಲಹಾ ಸೇವಾ ಸಂಸ್ಥೆಗಳನ್ನು ಹೊಂದಿದೆ. ರೈತರಿಂದ ಕಾಫಿ ಬೀಜಗಳ ಸಂಗ್ರಹ ಮತ್ತು ಮಾರಾಟದಲ್ಲಿಯೂ ತೊಡಗಿಸಿಕೊಂಡಿತ್ತು.
ಕಂಪನಿಯು ಮಾರ್ಪಡಿಸಲಾಗದ ಡಿಬೆಂಚರ್‌ಗಳ (ಎನ್‌ಸಿಡಿ) ಮೂಲಕ ಬಂಡವಾಳ ಸಂಗ್ರಹಿಸಿದೆ. 2019ರ ಮಾರ್ಚ್ ವರೆಗೆ ಒಂದು ಸಾವಿರ ಎನ್‌ಸಿಡಿಗಳಿಗೆ ₹100 ಕೋಟಿ ಬಡ್ಡಿ ಪಾವತಿಸಿದೆ.
ಐಡಿಬಿಐ ಟ್ರಸ್ಟಿಶಿಪ್ ಸರ್ವಿಸಸ್ ಲಿಮಿಟೆಡ್ ಅನ್ನು ಡಿಬೆಂಚರ್‌ಗಳ ಟ್ರಸ್ಟಿಯನ್ನಾಗಿ ನೇಮಿಸಿಕೊಂಡಿತ್ತು. 2019ರ ಸೆಪ್ಟೆಂಬರ್‌ನಿಂದ 2020ರ ಜೂನ್‌ವರೆಗೆ ಬಡ್ಡಿ ಪಾವತಿಸಿಲ್ಲ ಎಂದು ಹೇಳಲಾಗಿದೆ.
ಈ ಸಂಬಂಧ 2020ರ ಜುಲೈ 28ರಂದು ಕಾಫಿ ಡೇ ಕಂಪನಿಗೆ, ಡಿಬೆಂಚರ್ ಟ್ರಸ್ಟಿಯು ನೋಟಿಸ್ ನೀಡಿತ್ತು. ಬಳಿಕ ನ್ಯಾಯಮಂಡಳಿಯ ಮೊರೆ ಹೋಗಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸಿಡಿಇಎಲ್, ಡೆಬೆಂಚರ್ ಟ್ರಸ್ಟಿ ಒಪ್ಪಂದ ಮತ್ತು ಡಿಬೆಂಚರ್ ಟ್ರಸ್ಟ್ ಡೀಡ್ ಪ್ರಕಾರ ಅದಕ್ಕೆ ಈ ಅಧಿಕಾರವಿಲ್ಲ ಎಂದು ಹೇಳಿತ್ತು.
2023ರ ಜುಲೈ 20ರಂದು ₹94 ಕೋಟಿ ಬಾಕಿ ಪಾವತಿ ವಿಳಂಬಕ್ಕೆ ಸಂಬಂಧಿಸಿದಂತೆ ಇಂಡಸ್ ಇಂಡ್ ಬ್ಯಾಂಕ್ ಕೂಡ ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆಗೆ ಕೋರಿ ಎನ್‌ಸಿಎಲ್‌ಟಿಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಅದೇ ವರ್ಷದ ಆಗಸ್ಟ್ 11ರಂದು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ತಡೆ ನೀಡಿತ್ತು.