ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಷ್ಯಾ ತೈಲ ಖರೀದಿ ನಿಲ್ಲದು’: ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್‌ ಸಿಂಗ್ ಪುರಿ

Last Updated 8 ಅಕ್ಟೋಬರ್ 2022, 19:22 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸುವಂತೆ ನಮಗೆ ಯಾವುದೇ ದೇಶವೂ ಕೇಳಿಲ್ಲ. ಯಾವುದೇ ದೇಶದಿಂದ ಬೇಕಿದ್ದರೂ ಕಚ್ಚಾ ತೈಲ ಖರೀದಿಸುವುದನ್ನು ಭಾರತ ಮುಂದುವರಿಸಲಿದೆ’ ಎಂದು ಪೆಟ್ರೋಲಿಯಂ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಹೇಳಿದರು.

ಶುದ್ಧ ಇಂಧನದ ಕುರಿತು ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಅಮೆರಿಕಕ್ಕೆ ಬಂದಿರುವ ಅವರು, ‘ಕೈಗೆಟಕುವ ದರದಲ್ಲಿ ಇಂಧನವನ್ನು ಗ್ರಾಹಕರಿಗೆ ನೀಡುವುದು ಸರ್ಕಾರದ ನೈತಿಕ ಕರ್ತವ್ಯ’ ಎಂದು ಹೇಳಿದರು.

ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುತ್ತಿರುವ ದೇಶಗಳ ಸಾಲಿನಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನ ಪಡೆದುಕೊಂಡಿದೆ. ರಷ್ಯಾವು ಉಕ್ರೇನ್‌ ಮೇಲೆ ದಾಳಿ ಆರಂಭಿಸಿದ ಬಳಿಕ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಜೊತೆಗೆ ವ್ಯಾಪಾರ ನಡೆಸುವುದನ್ನು ನಿಲ್ಲಿಸಿವೆ. ಹೀಗಾಗಿ ರಷ್ಯಾವು ರಿಯಾಯಿತಿ ದರದಲ್ಲಿ ಭಾರತಕ್ಕೆ ತೈಲ ಪೂರೈಕೆ ಮಾಡುತ್ತಿದೆ.

‘ನವೆಂಬರ್‌ನಿಂದ ದಿನಕ್ಕೆ 20 ಲಕ್ಷ ಬ್ಯಾರಲ್‌ನಷ್ಟು ಉತ್ಪಾದನೆ ಕಡಿತ ಮಾಡಲು ಒಪೆಕ್‌+ ನಿರ್ಧರಿಸಿವೆ. ಇದರಿಂದ ಆಗಲಿರುವ ಸಮಸ್ಯೆಯನ್ನು ತಗ್ಗಿಸುವ ವಿಶ್ವಾಸ ಇದೆ ಎಂದು ಸಚಿವ ಪುರಿ ತಿಳಿಸಿದ್ದಾರೆ.

ಅಮೆರಿಕದ ಇಂಧನ ಕಾರ್ಯದರ್ಶಿ ಜೆನ್ನಿಫರ್‌ ಗ್ರಾನ್ಹೋಮ್ ಅವರೊಂದಿಗಿನ ದ್ವಿಪಕ್ಷೀಯ ಸಭೆಯ ಬಳಿಕ ಮಾತನಾಡಿದ ಅವರು, ‘ನಿಮ್ಮ ನೀತಿಗಳ ಬಗ್ಗೆ ನಿಮಗೆ ಸ್ಪಷ್ಟತೆ ಇದ್ದರೆ, ಅಂದರೆ, ಇಂಧನ ಸುರಕ್ಷತೆ ಮತ್ತು ಇಂಧನ ಲಭ್ಯತೆಯ ಬಗ್ಗೆ ನಂಬಿಕೆ ಇದ್ದರೆ ಯಾವುದೇ ಮೂಲಗಳಿಂದ ಬೇಕಿದ್ದರೂ ನೀವು ಖರೀದಿ ಮಾಡುತ್ತೀರಿ’ ಎಂದು ಹೇಳಿದ್ದಾರೆ.

ರಷ್ಯಾದ ತೈಲ ಖರೀದಿಸುತ್ತಿರುವುದನ್ನು ಭಾರತ ಸರ್ಕಾರವು ಸಮರ್ಥಿಸಿಕೊಂಡಿದೆ. ಎಲ್ಲಿ ಅಗ್ಗದ ದರಕ್ಕೆ ತೈಲ ಸಿಗುವುದೋ ಅಲ್ಲಿಂದ ಖರೀದಿಸುವುದಾಗಿ ಹೇಳಿದೆ.

ತೈಲ ಉತ್ಪಾದನೆ ಕಡಿತಕ್ಕೆ ಮಾರುಕಟ್ಟೆಯು ಈಗಾಗಲೇ ಸಿದ್ಧತೆ ನಡೆಸುತ್ತಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡುವ ತೈಲದಲ್ಲಿ ಭಾರಿ ಪ್ರಮಾಣದಲ್ಲಿ ಕೊರತೆ ಎದುರಾದಲ್ಲಿ ಆಗ ಬೆಲೆ ಏರಿಕೆ ಆಗಲಿದೆ. ಅದರಿಂದಾಗಿ ಆರ್ಥಿಕ ಹಿಂಜರಿತದ ಸ್ಥಿತಿಯು ಇನ್ನಷ್ಟು ತೀವ್ರಗೊಳ್ಳಲಿದ್ದು, ಬೇಡಿಕೆ ಕುಸಿತಕ್ಕೆ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT